ಭಾನುವಾರ, ಜನವರಿ 26, 2020
28 °C
ವರದಕ್ಷಿಣೆ ಕಿರುಕುಳ ಆರೋಪ

ವಾಯುಪಡೆ ವಿಚಕ್ಷಣಾಧಿಕಾರಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವರದಕ್ಷಿಣೆ ಸಾವು ಪ್ರಕರಣ ಸಂಬಂಧ ಭಾರತೀಯ ವಾಯುಪಡೆಯ ವಿಚಕ್ಷಣಾಧಿಕಾರಿ ಪಂಕಜ್‌ ಕುಮಾರ್ (32) ಎಂಬುವರನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.ಪಂಕಜ್‌ ಅವರ ಪತ್ನಿ ತಮ್ಮಿ ಸಿಂಗ್ (28) ಅವರು ನಗರದ ಹೆಸರಘಟ್ಟ ರಸ್ತೆಯಲ್ಲಿನ ವಾಯುಪಡೆ ವಸತಿ ಸಮುಚ್ಚಯ­ದಲ್ಲಿ ಡಿ.4ರಂದು ನೇಣು ಹಾಕಿಕೊಂಡಿದ್ದರು.ಈ ಸಂಬಂಧ ವಾಯುಪಡೆ ಮುಖ್ಯ ಕಚೇರಿಯ ಹಿರಿಯ ಅಧಿಕಾರಿ ಆರ್‌.ಕೆ.ರೆಡ್ಡಿ ಅವರು ನೀಡಿದ ದೂರಿನನ್ವಯ ‘ಅಸ್ವಾಭಾವಿಕ ಸಾವು’ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆದರೆ, ಡಿ.6­ರಂದು ನಗರಕ್ಕೆ ಬಂದ ತಮ್ಮಿ ಅವರ ಅಣ್ಣ ರಾಕೇಶ್‌ ರೋಷನ್‌, ಪಂಕಜ್‌ ಮತ್ತು ಅವರ ಪೋಷಕರ ವಿರುದ್ಧ ವರದಕ್ಷಿಣೆ ಸಾವು ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಬಿಹಾರ ಮೂಲದ ಪಂಕಜ್‌, ಹೆಸರಘಟ್ಟ ರಸ್ತೆಯಲ್ಲಿರುವ ಭಾರತೀಯ ವಾಯುಪಡೆಯಲ್ಲಿ ವಿಚಕ್ಷಣಾಧಿಕಾರಿಯಾಗಿ­ದ್ದಾರೆ. 2004ರಲ್ಲಿ ತಮ್ಮಿಸಿಂಗ್‌ ಅವರನ್ನು ವಿವಾಹವಾಗಿದ್ದ ಅವರಿಗೆ ಪ್ರಾರ್ಥನಾ ಸಿಂಗ್‌ ಮತ್ತು ಓಂ ಸಿಂಗ್‌ ಎಂಬ ಇಬ್ಬರು ಮಕ್ಕಳಿದ್ದಾರೆ.‘ಡಿ.4ರ ನಸುಕಿನ ವೇಳೆ ದಂಪತಿ ನಡುವೆ ಜಗಳವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪಂಕಜ್‌ ಅವರು ಪತ್ನಿಯ ಕೆನ್ನೆಗೆ ಹೊಡೆದಿದ್ದರು. ಇದರಿಂದ ನೊಂದ ತಮ್ಮಿ, ಕೋಣೆಗೆ ತೆರಳಿ ನೇಣು ಹಾಕಿಕೊಂಡಿದ್ದರು.ತುಂಬಾ ಹೊತ್ತಾದರೂ ಪತ್ನಿ ಹೊರಗೆ ಬಾರದ ಕಾರಣ ಅನುಮಾನಗೊಂಡ ಪಂಕಜ್‌, ಬಾಗಿಲು ಮುರಿದು ಒಳಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಕೂಡಲೇ ಅವರನ್ನು ವಾಯುಪಡೆಯ ಆಸ್ಪತ್ರೆಗೆ ದಾಖಲಿಸಿದ ಅವರು, ಬಳಿಕ ವೈದ್ಯರ ಸಲಹೆ ಮೇರೆಗೆ ಸಪ್ತಗಿರಿ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಈ ವೇಳೆಗೆ ತಮ್ಮಿ ಕೊನೆಯುಸಿರೆಳೆದಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.‘ಪಂಕಜ್‌, ಅವರ ತಂದೆ ವಿನೋದ್‌ ಸಿಂಗ್‌ ಮತ್ತು ತಾಯಿ ಮಹಿಮಾ ದೇವಿ ಅವರು ತವರು ಮನೆಯಿಂದ ಹಣ ತರುವಂತೆ

ಮಗಳಿಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ, ಪಂಕಜ್‌ಗೆ ನೀಲಿ ಚಿತ್ರ (ಬ್ಲೂ ಫಿಲ್ಮ್‌) ನೋಡುವ ಚಟವಿತ್ತು. ಈ ವಿಚಾರವಾಗಿ ದಂಪತಿ ನಡುವೆ ಹಲವು ಬಾರಿ ಜಗಳವಾಗಿತ್ತು. ಈ ಎಲ್ಲ ಕಾರಣಗಳಿಂದ ನೊಂದು ಮಗಳು ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ತಮ್ಮಿ ಪೋಷಕರು ಆರೋಪಿಸಿದ್ದಾರೆ.ದೂರಿನ ಅನ್ವಯ ಪಂಕಜ್‌ನನ್ನು ಬಂಧಿಸಲಾಗಿದ್ದು, ಆತನ ಪೋಷಕರ ಪತ್ತೆ ಕಾರ್ಯ ನಡೆಯುತ್ತಿದೆ’ ಎಂದು ಪೀಣ್ಯ ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)