ಸೋಮವಾರ, ಜನವರಿ 20, 2020
20 °C

ವಾಹನಗಳ ಸುಗಮ ಸಂಚಾರಕ್ಕೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ನಗರದಲ್ಲಿ ವಾಹನಗಳ ಸಂಚಾರ ಸುಗಮಗೊಳಿಸುವ ಉದ್ದೇಶ­ದಿಂದ ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸುವು­ದಲ್ಲದೇ ಕಠಿಣ ಕ್ರಮ ತೆಗೆದುಕೊಳ್ಳಲು ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.ಹಗಲು ಹೊತ್ತಿನಲ್ಲಿ ಮಾತ್ರವಲ್ಲದೇ ರಾತ್ರಿ ವೇಳೆಯೂ ಕೂಡ ಕಾರ್ಯಾ­ಚರಣೆ ನಡೆಸುತ್ತಿರುವ ಪೊಲೀಸರು ವಾಹನಗಳ ಸಂಚಾರದ ಮೇಲೆ ನಿಗಾ ವಹಿಸುತ್ತಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಸರ್ಕಲ್‌ ಇನ್ಸ್‌ಪೆಕ್ಟರ್‌ ಬಾಲಾಜಿ ಸಿಂಗ್‌, ಗ್ರಾಮಾಂತರ ಪೊಲೀಸ್‌ ಠಾಣೆಯ ಎಸ್‌ಐ ನಯಾಜ್‌ ಬೇಗ್‌, ಸಂಚಾರ ಪೊಲೀಸ್‌ ಠಾಣೆಯ ಎಸ್ಐ ಮಂಜುನಾಥ್‌ ಕಾರ್ಯಾಚರಣೆ ನಡೆಸುತ್ತಿದ್ದಾರೆ.‘ಈಚಿನ ದಿನಗಳಲ್ಲಿ ವಾಹನ ಸಂಚಾರ ಹೆಚ್ಚಿದ್ದು, ನಿತ್ಯವೂ ಸಂಚಾರ ನಿಯಮಗಳು ಉಲ್ಲಂಘನೆಯಾಗುತ್ತಿವೆ. ಇವೆಲ್ಲದರ ಬಗ್ಗೆ ನಿಗಾ ವಹಿಸಲೆಂದೇ ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ. ನಿಯಮ ಉಲ್ಲಂಘನೆಯಾಗಿರುವುದು ಪತ್ತೆಯಾದ ಕೂಡಲೇ ತಪ್ಪಿತಸ್ಥರಿಗೆ ದಂಡ ವಿಧಿಸಲಾಗುತ್ತದೆ.

ವಾಹನಗಳ ರಭಸ ಚಾಲನೆ, ಸಿಗ್ನಲ್ ಉಲ್ಲಂಘನೆ ಮುಂತಾದ ಪ್ರಕರಣಗಳನ್ನು ದಾಖಲಿಸಿ­ಕೊಳ್ಳುತ್ತಿದ್ದೇವೆ. ದ್ವಿಚಕ್ರ ವಾಹನ ಸವಾರರೇ ಹೆಚ್ಚು ಸಂಚಾರ ನಿಯಮ ಉಲ್ಲಂಘಿಸುತ್ತಾರೆ’ ಎಂದು ಪೊಲೀಸ್‌ ಅಧಿ­ಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ಇದೆಲ್ಲದರ ನಡುವೆ ನಗರದ ಪ್ರಮುಖ ವೃತ್ತ­ಗಳಲ್ಲಿ ಸಿಗ್ನಲ್‌ ದೀಪಗಳ ಅಳವಡಿಕೆಗೆ ಆದ್ಯತೆ ನೀಡಲಾಗುತ್ತಿದೆ.

ಬಿ.ಬಿ.ರಸ್ತೆಯ ಶಿಡ್ಲಘಟ್ಟ ವೃತ್ತ, ಸರ್‌ ಎಂ.ವಿಶ್ವೇಶ್ವರಯ್ಯ ವೃತ್ತದಲ್ಲಿ ಸಿಗ್ನಲ್‌ ದೀಪಗಳನ್ನು ಅಳವಡಿಸಿರುವ ಪೊಲೀಸ್‌ ಇಲಾಖೆ ಈಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ವೃತ್ತ, ಮರಳುಸಿದ್ದೇಶ್ವರ ದೇವಾಲಯ ವೃತ್ತದಲ್ಲೂ ಸಿಗ್ನಲ್ ದೀಪ­ಗಳನ್ನು ಅಳ­ವಡಿಸಲು ಕ್ರಮ ಕೈಗೊಳ್ಳುತ್ತಿದೆ. ಇನ್ನೂ ಮೂರು ದಿನಗಳಲ್ಲಿ ಇಲ್ಲವೇ ವಾರದ ಅವಧಿಯಲ್ಲಿ ಸಿಗ್ನಲ್‌ ದೀಪ ಕಾರ್ಯಾ­ರಂಭಿ­ಸಲಿವೆ. ವೃತ್ತದ ನಾಲ್ಕು ದಿಕ್ಕುಗಳಲ್ಲಿ­ಯೂ ಸಿಗ್ನಲ್‌ ದೀಪಗಳನ್ನು ಅಳವಡಿ­ಸಲಾಗಿದ್ದು, ಅದಕ್ಕೆ ಸಿದ್ಧತೆ ಕೂಡ ಮಾಡಲಾಗಿದೆ.‘ಸಿಗ್ನಲ್ ದೀಪಗಳ ಅಳವಡಿಕೆಯಿಂದ ವಾಹನಗಳ ಸಂಚಾರ ವ್ಯವಸ್ಥೆಯಲ್ಲಿ ಕೆಲ ಸುಧಾರಣೆ ತರಲು ಸಾಧ್ಯವಾಗುತ್ತದೆ. ವೃತ್ತಗಳಲ್ಲಿ ನಿಯೋಜಿತಗೊಂಡಿರುವ ಸಂಚಾರ ಪೊಲೀಸರ ಮೇಲೆ ಹೆಚ್ಚಿನ ಹೊರೆ ಇರುವುದಿಲ್ಲ. ವಾಹನ ಸವಾರರು, ಚಾಲಕರು ಸಿಗ್ನಲ್‌ ದೀಪಗಳು ನೀಡುವ ಸೂಚನೆ ಮೇರೆಗೆ ಸಂಚಾರ ನಿಯಮ­ಗಳನ್ನು ಪಾಲಿಸಲೇ­ಬೇಕಾಗುತ್ತದೆ.

ನಗರದ ಎಂ.ಜಿ.ರಸ್ತೆಯ ಎರಡೂ ವೃತ್ತಗಳಲ್ಲಿ ಇದೇ ಮೊದಲ ಬಾರಿಗೆ ಸಿಗ್ನಲ್ ದೀಪಗಳನ್ನು ಅಳವಡಿಸ­ಲಾಗಿದ್ದು, ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ಬರುವ ನಿರೀಕ್ಷೆ­ಯಿದೆ’ ಎಂದು ಸಂಚಾರ ಪೊಲೀಸ್‌ ಸಿಬ್ಬಂದಿಯೊಬ್ಬರು ತಿಳಿಸಿದರು. ವಾಹನಗಳ ಸಂಚಾರ ಅವ್ಯವಸ್ಥೆ­ಗೊಂಡಿರುವ ಕುರಿತು ಡಿಸೆಂಬರ್‌ 9ರ ‘ಪ್ರಜಾವಾಣಿ’ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು.

ಪ್ರತಿಕ್ರಿಯಿಸಿ (+)