ಮಂಗಳವಾರ, ಜೂನ್ 15, 2021
26 °C

ವಾಹನ ದಟ್ಟಣೆಗೆ ತಾತ್ಕಾಲಿಕ ಮುಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಹನ ದಟ್ಟಣೆಗೆ ತಾತ್ಕಾಲಿಕ ಮುಕ್ತಿ

ಬೆಂಗಳೂರು: ಅರಮನೆ ಮೈದಾನದ ಪ್ರವೇಶ ದ್ವಾರದಲ್ಲಿ ವಾಹನಗಳ ನಿರ್ಗಮನವನ್ನು ನಿಷೇಧಿಸಿರುವುದರಿಂದ ಆ ರಸ್ತೆಯಲ್ಲಿ ಉಂಟಾಗುತ್ತಿದ್ದ ವಾಹನ ದಟ್ಟಣೆಗೆ ತಾತ್ಕಾಲಿಕ ಮುಕ್ತಿ ದೊರೆತಿದೆ.ಅರಮನೆ ಮೈದಾನದ ಆವರಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಿಗೆ ಭಾಗವಹಿಸುತ್ತಿದ್ದ ಸಾರ್ವಜನಿಕರು ಮೊದಲಿನಂತೆ ಮೈದಾನದ ಮುಖ್ಯ ಪ್ರವೇಶ ದ್ವಾರದಿಂದಲೇ ಹಿಂತಿರುಗುವಂತಿಲ್ಲ. ಕಾರಣ, ಮೈದಾನದ ಮುಖ್ಯ ಪ್ರವೇಶ ದ್ವಾರದಿಂದ ವಾಹನಗಳ ನಿರ್ಗಮನವನ್ನು ನಿಷೇಧಿಸಿ ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದು. ಈ ನಿಯಮ ಇದೇ 15ರಿಂದ ಜಾರಿಯಾಗಿದೆ.ಇನ್ನೂ ಮುಂದೆ ಮೈದಾನ ಪ್ರವೇಶಿಸುವ ವಾಹನಗಳು, ಆವರಣದ ಒಳಗಿನಿಂದಲೇ ಸಾಗಿ, ಜೆ.ಸಿ.ನಗರ ಸಮೀಪದ ಫನ್‌ವರ್ಲ್ಡ್‌ನ ಪಕ್ಕದಲ್ಲಿರುವ ಮಣ್ಣಿನ ರಸ್ತೆಯಿಂದ ಜಯಮಹಲ್ ರಸ್ತೆಯನ್ನು ತಲುಪಿ ಮುಂದೆ ಸಾಗಬೇಕು. ಈ ಹೊಸ ನಿಯಮದಿಂದ ಬಳ್ಳಾರಿ ರಸ್ತೆಯಲ್ಲಿ ವಾಹನ ಸಂಚಾರ ಮಾಡುವುದೆಂದರೆ ವಾಹನ ದಟ್ಟಣೆ ಇರುತ್ತದೆ ಎಂದು ಮೂಗು ಮುರಿಯುತ್ತಿದ್ದ ಸವಾರರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

 

`ಅರಮನೆ ಮೈದಾನದ ರಸ್ತೆಯಲ್ಲಿ ಪ್ರತಿ ನಿಮಿಷಕ್ಕೆ 100ಕ್ಕೂ ಹೆಚ್ಚು ವಾಹನಗಳು ಸಂಚಾರ ಮಾಡುತ್ತವೆ. ಬೆಳಿಗ್ಗೆ ಹಾಗೂ ಸಂಜೆ ವೇಳೆ ವಾಹನ ದಟ್ಟಣೆ ಇನ್ನೂ ಹೆಚ್ಚಾಗಿರುತ್ತದೆ. ಇದೇ ವೇಳೆ ಮೈದಾನದ ಪ್ರವೇಶ ದ್ವಾರದಿಂದಲೇ ವಾಹನಗಳು ನಿರ್ಗಮನವಾಗುತ್ತಿದ್ದು, ಸಂಚಾರ ದಟ್ಟಣೆಯಿಂದ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದವು. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ~ ಎಂದು ಕೇಂದ್ರ ಸಂಚಾರ ವಿಭಾಗದ ಎಸಿಪಿ ಎಂ.ಜಿ.ಸುಬ್ರಹ್ಮಣ್ಯ ಅವರು ತಿಳಿಸಿದರು.ಅರಮನೆ ಮೈದಾನದಲ್ಲಿ 14 ವೇದಿಕೆಗಳಿದ್ದು ವಿವಿಧ ಕಾರ್ಯಕ್ರಮಗಳು, ಬೃಹತ್ ಸಮಾವೇಶಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಮೈದಾನಕ್ಕೆ ಒಂಬತ್ತು ದ್ವಾರಗಳಿದ್ದು, ಪ್ರತಿ ದ್ವಾರದಲ್ಲಿ ವಾಹನಗಳು ಬಂದು ಹೋಗುತ್ತಿದ್ದವು. ಇದರಿಂದ ಮುಖ್ಯ ರಸ್ತೆಯಲ್ಲೂ ಸಂಚಾರ ದಟ್ಟಣೆ ಉಂಟಾಗಿ, ವಿಮಾನ ನಿಲ್ದಾಣದಿಂದ ಮೈದಾನದ ರಸ್ತೆಯವಾರೆಗೂ ವಾಹನಗಳೂ ಸಾಲುಗಟ್ಟಿ ನಿಲ್ಲುತ್ತಿದ್ದವು. ಇದರಿಂದ ವಾಹನ ಸವಾರರು ಹಾಗೂ ಸಂಚಾರ ಪೊಲೀಸರು ಪರದಾಡುವ ಪರಿಸ್ಥಿತಿ ಇರುತ್ತಿತ್ತು ಎಂದು ಹೇಳಿದರು.ಸಂಚಾರ ದಟ್ಟಣೆ ನಿಯಂತ್ರಣವಾಗಲಿದೆ:  ಈ ನಿಯಮ ಬಂದು ಇನ್ನೂ ಒಂದು ವಾರವಾಗಿರುವುದರಿಂದ ಪರಿಣಾಮ ಗೊತ್ತಾಗಿಲ್ಲ. ಅಲ್ಲದೇ ಕೆಲ ದಿನಗಳಿಂದ ಅರಮನೆ ಮೈದಾನದಲ್ಲಿ ಬೃಹತ್ ಕಾರ್ಯಕ್ರಮಗಳು ನಡೆದಿಲ್ಲ. ವಾಹನ ದಟ್ಟಣೆ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದ್ದು ಅದು ಯಶಸ್ವಿಯಾಗಲಿದೆ ಎಂಬ ಭರವಸೆ ಇದೆ ಎಂದು ಎಸಿಪಿ ಸುಬ್ರಮಣ್ಯ ಹೇಳಿದರು.ವ್ಯವಸ್ಥಿತ ನಿರ್ಗಮನವಿಲ್ಲ: `ಮೈದಾನದ ಒಳಗೆ ಪ್ರವೇಶಿಸಿದ ವಾಹನಗಳು ಜಯಮಹಲ್ ರಸ್ತೆಯಿಂದ ಹೊರಗೆ ಸಾಗಬೇಕು. ಆದರೆ, ಅಲ್ಲಿ ವ್ಯವಸ್ಥಿತವಾದ ದಾರಿಯಿಲ್ಲ, ಬೀದಿ ದೀಪಗಳಿಲ್ಲ. ಅಲ್ಲದೇ, ಅದು ನಿರ್ಜನ ಪ್ರದೇಶವಾಗಿರುವುದರಿಂದ ಅಲ್ಲಿಂದ ಓಡಾಡಲು ಭಯವಾಗುತ್ತದೆ. ಈ ಹಿಂದೆ ಮೈದಾನದಲ್ಲಿ ವೇದಿಕೆ ಸಿದ್ದಪಡಿಸುತ್ತಿದ್ದ ಕೆಲಸಗಾರನೊಬ್ಬ ಆ ರಸ್ತೆಯಲ್ಲಿ ಹೋಗುವಾಗ, ದುಷ್ಕರ್ಮಿಗಳಿಬ್ಬರು ಅವನನ್ನು ಬೆದರಿಸಿ ಹಣ ದೋಚಿದ್ದರು~ ಎಂದು ಕಾರ್ಯಕ್ರಮ ಸಂಘಟನಕಾರರೊಬ್ಬರು ತಿಳಿಸಿದರು.`ಈ ಬದಲಾವಣೆಯಿಂದ ರಾತ್ರಿಯ ವೇಳೆಯ ಸಂಚಾರಕ್ಕೆ ತೊಂದರೆಯಾಗುತ್ತದೆ. ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬರುವ ಹೆಣ್ಣು ಮಕ್ಕಳು ಒಂಟಿಯಾಗಿ ಈ ಮಾರ್ಗದಲ್ಲಿ ಸಂಚರಿಸುವುದು ಕಷ್ಟವಾಗಲಿದೆ. ಬೀದಿ ದೀಪಗಳಾಗಲಿ, ದಾರಿ ಎಲ್ಲಿದೆ ಎಂದು ತಿಳಿಸಲು ಸೂಚನಾ ಫಲಕಗಳಾಗಲಿ ಇಲ್ಲ. ಮೊದಲು ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿ ಆನಂತರ ಮಾರ್ಗ ಬದಲಾವಣೆಗೆ ಸಂಚಾರಿ ಪೊಲೀಸರು ಮುಂದಾಗಬೇಕಿತ್ತು~ ಎಂದು ವೇದಿಕೆ ನಿರ್ಮಾಣ ಮಾಡುತ್ತಿದ್ದ ವ್ಯಕ್ತಿ ಅಭಿಪ್ರಾಯಪಟ್ಟರು.`ದೊಡ್ಡದಾದ ಅರಮನೆ ಮೈದಾನಕ್ಕೆ ಒಂಬತ್ತು ಕಡೆಗಳಿಂದ ಪ್ರವೇಶ ದ್ವಾರವಿದ್ದೂ, ಒಂದೆರಡು ಕಡೆ ನಿರ್ಗಮನ ದಾರಿಗಳಿರುವುದರಿಂದ ತುಂಬಾ ಅನನುಕೂಲವಾಗಿದೆ. ಈ ಬದಲಾವಣೆಯಿಂದ ಸಾರ್ವಜನಿಕರಿಗೆ ಆಗುವ ತೊಂದರೆಯ ಬಗ್ಗೆ ಗಮನ ಹರಿಸದೇ ಮಾರ್ಗ ಬದಲಿಸಿರುವುದು ಸರಿಯಲ್ಲ. ಅರಮನೆ ಮೈದಾನಕ್ಕೆ ಹೋಗುವ ವಾಹನಗಳು ನಂತರ ಜಯಮಹಲ್ ರಸ್ತೆಯ ಮೂಲಕ ಹೊರ ಹೋಗುವುದು ದುಸ್ಸಾಹಸವಾಗಿದೆ. ಸಂಚಾರಿ ಪೊಲೀಸರು ಬದಲಾವಣೆಯನ್ನು ಮತ್ತೊಮ್ಮೆ ಪರಿಶೀಲಿಸಬೇಕು~ ಎಂದು ಈಜಿಪುರದ ನಿವಾಸಿ ಜಯಕುಮಾರ್ ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.