ವಿಂಡೀಸ್ ಆಟಗಾರರ ಬಣ್ಣ ಬಯಲು!

7

ವಿಂಡೀಸ್ ಆಟಗಾರರ ಬಣ್ಣ ಬಯಲು!

Published:
Updated:
ವಿಂಡೀಸ್ ಆಟಗಾರರ ಬಣ್ಣ ಬಯಲು!

ಢಾಕಾ: ‘ಪಾಕಿಸ್ತಾನ ಕ್ರಿಕೆಟ್ ಆಟಗಾರರು ತಮ್ಮ ಭವಿಷ್ಯವನ್ನು ತಾವೇ ಬರೆದುಕೊಳ್ಳುತ್ತಾರೆ’ ಎಂಬ ಮಾತಿದೆ. ಆದರೆ ಚಂಚಲ ಮನಸ್ಸಿನ ಈ ಆಟಗಾರರು ಇನ್ನು ಎರಡು ಯಶಸ್ವಿ ಹೆಜ್ಜೆ ಇಟ್ಟರೆ ಸಾಕು ವಿಶ್ವ ಚಾಂಪಿಯನ್ನರು. ಈ ಪಾಕ್ ಆಟಗಾರರೇ ಹೀಗೆ...! ದೇಶದಲ್ಲಿ ನೆತ್ತರೂ ಹರಿಯುತ್ತಿರಬಹುದು, ತಂಡವನ್ನು ಸಾವಿರ ವಿವಾದಗಳು ಸುತ್ತು ವರಿದಿರಬಹುದು, ದೇಶದ ಕ್ರಿಕೆಟ್ ಸಮಸ್ಯೆಗಳ ಗೂಡಾಗಿರಬಹುದು. ಆದರೆ ಅಂಗಳಕ್ಕಿಳಿದರೆ ಈ ಆಟಗಾರರ ರೋಶ, ಆವೇಶವೇ ಬೇರೆ. ಅದು ಮತ್ತೊಮ್ಮೆ ಸಾಬೀತಾಯಿತು.ಕಿಕ್ಕಿರಿದು ತುಂಬಿದ್ದ ಶೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ಬುಧವಾರ ವೆಸ್ಟ್‌ಇಂಡೀಸ್ ತಂಡವನ್ನು ಭರ್ತಿ 10 ವಿಕೆಟ್‌ಗಳಿಂದ ಬಗ್ಗುಬಡಿದ ಪಾಕ್ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ತಂಡ ಗೆದ್ದ ರೀತಿ ಹಸಿದ ಹುಲಿಯೊಂದು ಜಿಂಕೆ ಮೇಲೆ ದಾಳಿ ಮಾಡಿದಂತೆ!  ‘ಬುಧವಾರ ಪಾಕಿಸ್ತಾನದಲ್ಲಿ ರಿಪಬ್ಲಿಕ್ ಡೇ. ಈ ಸಂಭ್ರಮಕ್ಕೆ ನಾವು ಗೆಲುವಿನ ಉಡುಗೊರೆ ನೀಡಿದ್ದೇವೆ’ ಎಂದ ನಾಯಕ ಶಾಹೀದ್ ಅಫ್ರಿದಿ ಮೊಗದ ತುಂಬಾ ಖುಷಿ. ಉಳಿದ ಆಟಗಾರರ ಸಡಗರ ಕೇಳಬೇಕೇ?ಆದರೆ ಬಹುಮುಖ್ಯ ಎನಿಸಿದ್ದ ಈ ಪಂದ್ಯದಲ್ಲಿ ಕೆರಿಬಿಯನ್ ನಾಡಿನ ಆಟಗಾರರ ಬಣ್ಣ ಸಂಪೂರ್ಣ ಬಯಲಾಯಿತು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಶೂನ್ಯ ಸಾಧನೆ.ಬ್ಯಾಟ್ಸ್‌ಮನ್‌ಗಳಂತೂ ಅಕ್ಷರಶಃ ಪೆರೇಡ್ ನಡೆಸಿದರು. ಈ ವಿಂಡೀಸ್ ತಂಡಕ್ಕೇನಾಗಿದೆ ಎಂದು ಆ ದೇಶದ ಅಭಿಮಾನಿಗಳು ಕಕ್ಕಾಬಿಕ್ಕಿಯಾಗಬೇಕು. ಅಂಥ ಕೆಟ್ಟ ಪ್ರದರ್ಶನವದು. ಆಡಲು ಕಣಕ್ಕಿಳಿಯುವ ಮೊದಲೇ ವಿಂಡೀಸ್ ಆಟಗಾರರ ಹಣೆಬರಹದಲ್ಲಿ ಸೋಲು ಎಂದು ಬರೆದಿತ್ತೇನೊ? ಕಾರಣ ಒಂದೊಮ್ಮೆ ವಿಶ್ವ ಕ್ರಿಕೆಟ್ ಆಳಿದ್ದ ಕೆರಿಬಿಯನ್ ನಾಡಿನ ತಂಡದ ಪರಿಸ್ಥಿತಿ ಅಷ್ಟೊಂದು ಚಿಂತಾಜನಕವಾಗಿತ್ತು.ಎರಡು ಬಾರಿಯ ಚಾಂಪಿಯನ್ನರು ಢಾಕಾದಲ್ಲಿ ತರಗೆಲೆಗಳಂತೆ ಉದುರಿ ಹೋದರು. ಹಾಗಾಗಿ ಇಡೀ ಪಂದ್ಯ ಒನ್‌ವೇ ಟ್ರಾಫಿಕ್! ಡೆರೆನ್ ಸ್ಯಾಮಿ ಬಳಗ ನೀಡಿದ 113 ರನ್‌ಗಳ ಗುರಿ ಪಾಕಿಸ್ತಾನ ತಂಡಕ್ಕೆ ಸ್ವಲ್ಪವೂ ಸವಾಲು ಎನಿಸಲಿಲ್ಲ. ಆರಂಭದಿಂದಲೇ ದಂಡೆತ್ತಿ ಹೋದ ಈ ತಂಡದ ಬ್ಯಾಟ್ಸ್‌ಮನ್‌ಗಳು ಕೇವಲ 20.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಗೆಲುವಿನ ಗೆರೆ ದಾಟಿದರು. ಕಮ್ರನ್ ಅಕ್ಮಲ್ ಹಾಗೂ ಮೊಹಮ್ಮದ್ ಹಫೀಜ್ ಅವರನ್ನು ನಿಯಂತ್ರಿಸುವ ಶಕ್ತಿಯೂ ವಿಂಡೀಸ್ ಬಳಿ ಇರಲಿಲ್ಲ!ಪಾಕ್ ಇಷ್ಟೊಂದು ಅದ್ಭುತ ಪ್ರದರ್ಶನ ನೀಡಬಹುದು ಎಂದು ವಿಶ್ವಕಪ್‌ಗೆ ಮುನ್ನ ಯಾರೂ ಊಹಿಸಿರಲಿಲ್ಲ. ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ತಂಡಗಳು ವಿಶ್ವಕಪ್ ಜಯಿಸುವ ಫೇವರಿಟ್ ಎಂದು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ದರು. ಆದರೆ ಪಾಕ್ ಆಡುತ್ತಿರುವ ಪರಿ ನೋಡಿದರೆ ಈ ತಂಡದವರೇ ಈಗ ಸ್ಪಷ್ಟ ಫೇವರಿಟ್! ‘ಈ ನಮ್ಮ ಗೆಲುವು ಪಾಕ್ ಜನತೆಗೆ ತುಂಬಾ ಖುಷಿ ನೀಡಿದೆ. ಬುಧವಾರ ಇಡೀ ದೇಶದಲ್ಲಿ ಎಲ್ಲೂ ವಿದ್ಯುತ್ ಕಡಿತಗೊಳಿಸಿರಲಿಲ್ಲ’ ಎಂದು ಈ ತಂಡದ ಕೋಚ್ ವಕಾರ್ ಯೂನಿಸ್ ಪಂದ್ಯದ ಬಳಿಕ ಹೇಳಿದರು. ಪಾಕಿಸ್ತಾನ ಸೆಮಿಫೈನಲ್ ತಲುಪುತ್ತಿರುವುದು ಇದು ಆರನೇ ಬಾರಿ. ಈ ಮೊದಲು 1979, 83, 87, 92 (ಚಾಂಪಿಯನ್) ಹಾಗೂ 99 (ರನ್ನರ್ ಅಪ್)ರಲ್ಲಿ ನಾಲ್ಕರ ಘಟ್ಟ ತಲುಪಿದ್ದರು. ಮಾರ್ಚ್ 30ರಂದು ಮೊಹಾಲಿಯಲ್ಲಿ ನಡೆಯಲಿರುವ ಈ ಬಾರಿಯ ಸೆಮಿಫೈನಲ್‌ನಲ್ಲಿ ಈ ತಂಡದವರು ಭಾರತ ಅಥವಾ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದಾರೆ. ಈ ಪಂದ್ಯದಲ್ಲಿ ಸ್ಪಿನ್ನರ್‌ಗಳು ತೋರಿದ ಅದ್ಭುತ ಪ್ರದರ್ಶನ ಈ ಗೆಲುವಿಗೆ ಮುಖ್ಯ ಕಾರಣ. 27.3 ಓವರ್ ಬೌಲ್ ಮಾಡಿದ ಅಫ್ರಿದಿ, ಅಜ್ಮಲ್ ಹಾಗೂ ಹಫೀಜ್ ಕೇವಲ 65 ರನ್ ನೀಡಿ 8 ವಿಕೆಟ್ ಪಡೆದಿದ್ದೇ ಅದಕ್ಕೊಂದು ನಿದರ್ಶನ.

 

ಅದರಲ್ಲೂ ಹಫೀಜ್ ಬೌಲಿಂಗ್ (10-3-16-2) ಅದ್ಭುತ. ಅಫ್ರಿದಿ 4 ವಿಕೆಟ್ ಕಬಳಿಸಿದರು. ಅವರು ಈ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ. ಇದುವರೆಗೆ ಒಟ್ಟು 21 ವಿಕೆಟ್ ಪಡೆದಿದ್ದಾರೆ. ಆದರೂ ಈ ಪಂದ್ಯದಲ್ಲಿ ಇದು ಪಾಕ್‌ನ ಅದ್ಭುತ ಪ್ರದರ್ಶನವೇನಲ್ಲ; ಬದಲಾಗಿ ವಿಂಡೀಸ್ ಆಟಗಾರರ ಕೆಟ್ಟ ಆಟ ಎನ್ನಬಹುದು. ಕಾರಣ ಯಾವುದೇ ಹಂತದಲ್ಲಿ ಕೂಡ ಸ್ಯಾಮಿ ಬಳಗದಿಂದ ಉತ್ತಮ ಆಟ ಮೂಡಿ ಬರಲಿಲ್ಲ.ಗುರಿ ಬೆನ್ನಟ್ಟಲು ಕಷ್ಟ ಎಂದು ಮೊದಲು ಬ್ಯಾಟಿಂಗ್‌ಗೆ ಮುಂದಾದ ಕೆರಿಬಿಯನ್ ಪಡೆ ಅಲ್ಲಿಯೇ ಮೊದಲು ಎಡವಿತು. ಇದು ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ! ಇದೇ ಪಿಚ್‌ನಲ್ಲಿ ತಮ್ಮ ಎದುರು ಮೊದಲು ಬ್ಯಾಟ್ ಮಾಡಿದ್ದ ಬಾಂಗ್ಲಾ 58 ರನ್‌ಗೆ ಆಲ್‌ಔಟ್ ಆಗಿತ್ತು. ಅದು ಗೊತ್ತಿದ್ದರೂ ವಿಂಡೀಸ್ ತಂಡದ ನಾಯಕ ಸ್ಯಾಮಿ ಮೊದಲು ಬ್ಯಾಟ್ ಮಾಡಲು ಮುಂದಾದರು.ಮೊಹಮ್ಮದ್ ಹಫೀಜ್ ಅವರ ಮೂರನೇ ಓವರ್‌ನಲ್ಲಿ ಎರಡು ವಿಕೆಟ್ ಪತನವಾದವು. ಅದಕ್ಕೂ ಮೊದಲು ಅಪಾಯಕಾರಿ ಗೇಲ್ ಅವರನ್ನು ಉಮರ್ ಗುಲ್ ಪೆವಿಲಿಯನ್‌ಗೆ ಕಳುಹಿಸಿದ್ದರು. ಈ ಹಂತದಲ್ಲಿ ಜೊತೆಗೂಡಿದ ಟೆಸ್ಟ್ ಪರಿಣತ ಆಟಗಾರರಾದ ರಮಾನರೇಶ್ ಸರವಣ ಹಾಗೂ ಎಸ್.ಚಂದ್ರಪಾಲ್ ಅಕ್ಷರಶಃ ‘ಟೆಸ್ಟ್ ಮ್ಯಾಚ್’ ಆಡಲು ಶುರುಮಾಡಿದರು! ಅದಕ್ಕೆ ಸಾಕ್ಷಿ ಈ ತಂಡ ಮೊದಲ 10 ಓವರ್‌ಗಳಲ್ಲಿ ಪೇರಿಸಿದ ರನ್ ಕೇವಲ 18. ರನ್‌ರೇಟ್ 1.77. ಕೇವಲ 16 ರನ್‌ಗಳಿಗೆ 3 ವಿಕೆಟ್ ಬಿದ್ದ ಕಾರಣ ರಕ್ಷಣಾತ್ಮಕ ಮೊರೆ ಹೋಗುವುದು ಅಗತ್ಯವಿತ್ತು. ಸರವಣ ಹಾಗೂ ಚಂದ್ರಪಾಲ್ ಅದಕ್ಕೆ ತಕ್ಕ ಆಟವಾಡಿದರು. 14 ರನ್ ಗಳಿಸಿದ್ದಾಗ ಸರವಣ ಒಂದು ಜೀವದಾನ ಪಡೆದಿದ್ದರು. ಇಲ್ಲದಿದ್ದರೆ ಈ ತಂಡದ ಸಮಸ್ಯೆ ಮತ್ತಷ್ಟು ದೊಡ್ಡದಾಗುತಿತ್ತು.ಚಂದ್ರಪಾಲ್ ಹಾಗೂ ಸರವಣ ನಾಲ್ಕನೇ ವಿಕೆಟ್‌ಗೆ 42 ರನ್ ಸೇರಿಸಿದರು. ಆದರೆ ಈ ಜೋಡಿ ಬೇರ್ಪಡುತ್ತಿದ್ದಂತೆ ಮತ್ತೆ 11 ರನ್‌ಗಳ ಅಂತರದಲ್ಲಿ 4 ವಿಕೆಟ್ ಪತನಗೊಂಡವು. ಆದರೆ ಚಂದ್ರಪಾಲ್ (ಔಟಾಗದೆ 44; 106 ಎಸೆತ) ತಂಡವನ್ನು ಮುಜುಗರದಿಂದ ಪಾರು ಮಾಡಿದರು. ಪರಿಣಾಮ 100 ರನ್‌ಗಳ ಗಡಿ ದಾಟಲು ಸಾಧ್ಯವಾಯಿತು. ಈ ತಂಡದವರು 1996ರ ವಿಶ್ವಕಪ್‌ನಲ್ಲಿ ಕೀನ್ಯಾ ಎದುರು ಕೇವಲ 93 ರನ್‌ಗಳಿಗೆ ಆಲ್‌ಔಟ್ ಆಗಿದ್ದರು.ವಿಂಡೀಸ್ ತಂಡದಲ್ಲಿ ಹೆಚ್ಚು ಮಂದಿ ಎಡಗೈ ಬ್ಯಾಟ್ಸ್‌ಮನ್‌ಗಳು ಇದ್ದಾರೆ ಎಂಬ ಕಾರಣ ನಾಯಕ ಅಫ್ರಿದಿ ಇಬ್ಬರು ಆಫ್ ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿದ್ದರು. ಅದರಲ್ಲಿ ಹಫೀಜ್ ಹಾಗೂ ಅಜ್ಮಲ್ ಯಶಸ್ವಿಯಾದರು. ಈ ತಂಡ 50 ರನ್‌ಗಳ ಗೆರೆ ದಾಟಿದ್ದು 21ನೇ ಓವರ್‌ನಲ್ಲಿ. ನೂರು ರನ್ ಬಂದಿದ್ದು 37ನೇ ಓವರ್‌ನಲ್ಲಿ. ಬ್ಯಾಟಿಂಗ್ ಎಷ್ಟೊಂದು ನಿಧಾನವಾಗಿತ್ತು ಎಂಬುದಕ್ಕೆ ಇದೇ ಸಾಕ್ಷಿ.ಸ್ಕೋರು ವಿವರ

ವೆಸ್ಟ್‌ಇಂಡೀಸ್ 43.3 ಓವರ್‌ಗಳಲ್ಲಿ 112

ಡೆವೋನ್ ಸ್ಮಿತ್ ಎಲ್‌ಬಿಡಬ್ಲ್ಯು ಬಿ ಮೊಹಮ್ಮದ್ ಹಫೀಜ್  07

ಕ್ರಿಸ್ ಗೇಲ್ ಸಿ ಶಾಹೀದ್ ಅಫ್ರಿದಿ ಬಿ ಉಮರ್ ಗುಲ್  08

ರಮಾನರೇಶ್ ಸರವಣ ಸಿ ಉಮರ್ ಅಕ್ಮಲ್ ಬಿ ಶಾಹೀದ್ ಅಫ್ರಿದಿ  24

ಡೆರೆನ್ ಬ್ರಾವೊ ಎಲ್‌ಬಿಡಬ್ಲ್ಯು ಬಿ ಮೊಹಮ್ಮದ್ ಹಫೀಜ್  00

ಎಸ್.ಚಂದ್ರಪಾಲ್ ಔಟಾಗದೆ  44

ಕಿರೋನ್ ಪೊಲಾರ್ಡ್ ಸಿ ಕಮ್ರನ್ ಅಕ್ಮಲ್ ಬಿ ಶಾಹೀದ್ ಅಫ್ರಿದಿ  01

ಡೆವೋನ್ ಥಾಮಸ್ ಎಲ್‌ಬಿಡಬ್ಲ್ಯು ಬಿ ಶಾಹೀದ್ ಅಫ್ರಿದಿ  00

ಡೆರೆನ್ ಸ್ಯಾಮಿ ಎಲ್‌ಬಿಡಬ್ಲ್ಯು ಬಿ ಸಯೀದ್ ಅಜ್ಮಲ್  01

ದೇವೇಂದ್ರ ಬಿಶೂ ಬಿ ಸಯೀದ್ ಅಜ್ಮಲ್  00

ಕೆಮರ್ ರೋಚ್ ಸಿ ಯೂನಿಸ್ ಖಾನ್ ಬಿ ಅಬ್ದುಲ್ ರಜಾಕ್  16

ರವಿ ರಾಮ್‌ಪಾಲ್ ಬಿ ಶಾಹೀದ್ ಅಫ್ರಿದಿ 00

ಇತರೆ (ಲೆಗ್‌ಬೈ-2, ವೈಡ್-7, ನೋಬಾಲ್-2)  11

ವಿಕೆಟ್ ಪತನ: 1-14 (ಗೇಲ್; 2.5); 2-16 (ಸ್ಮಿತ್; 5.1); 3-16 (ಬ್ರಾವೊ; 5.4); 4-58 (ಸರವಣ; 24.1); 5-69 (ಪೊಲಾರ್ಡ್; 26.4); 6-69 (ಥಾಮಸ್; 26.5); 7-71 (ಸ್ಯಾಮಿ; 27.2); 8-71 (ಬಿಶೂ; 27.5); 9-111 (ರೋಚ್; 42.2); 10-112 (ರಾಮ್‌ಪಾಲ್; 43.3).

ಬೌಲಿಂಗ್: ಉಮರ್ ಗುಲ್ 7-1-13-1,  ಮೊಹಮ್ಮದ್ ಹಫೀಜ್ 10-3-16-2 (ವೈಡ್-2), ವಹಾಬ್ ರಿಯಾಜ್ 6-0-29-0 (ನೋಬಾಲ್-1, ವೈಡ್-2), ಶಾಹೀದ್ ಅಫ್ರಿದಿ 9.3-1-30-4 (ವೈಡ್-1), ಸಯೀದ್ ಅಜ್ಮಲ್ 8-1-18-2 (ವೈಡ್-2), ಅಬ್ದುಲ್ ರಜಾಕ್ 3-1-4-1 (ವೈಡ್-1)ಪಾಕಿಸ್ತಾನ
20.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 113

ಕಮ್ರನ್ ಅಕ್ಮಲ್ ಔಟಾಗದೆ  47

ಮೊಹಮ್ಮದ್ ಹಫೀಜ್ ಔಟಾಗದೆ  61

ಇತರೆ (ಲೆಗ್‌ಬೈ-4, ವೈಡ್-1)  05

ಬೌಲಿಂಗ್: ಕೆಮರ್ ರೋಚ್ 5.5-0-39-0, ರವಿ ರಾಮ್‌ಪಾಲ್ 5-1-28-0 (ವೈಡ್-1), ದೇವೇಂದ್ರ ಬಿಶೂ 5-1-24-0, ಡೆರೆನ್ ಸ್ಯಾಮಿ 5-1-18-0

ಫಲಿತಾಂಶ: ಪಾಕಿಸ್ತಾನಕ್ಕೆ 10 ವಿಕೆಟ್ ಗೆಲುವು ಹಾಗೂ ಸೆಮಿಫೈನಲ್ ಪ್ರವೇಶ.

ಪಂದ್ಯ ಪುರುಷೋತ್ತಮ: ಮೊಹಮ್ಮದ್ ಹಫೀಜ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry