ಶುಕ್ರವಾರ, ಏಪ್ರಿಲ್ 16, 2021
31 °C

ವಿಗ್ರಹ ಮಾರಾಟ- ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪುರಾತನ ಕಾಲದ ಪಂಚಲೋಹದ ವಿಗ್ರಹಗಳನ್ನು ಕಳವು ಮಾಡಿ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಮೂರು ಮಂದಿಯನ್ನು ಬಂಧಿಸಿರುವ ರಾಮಮೂರ್ತಿನಗರ ಪೊಲೀಸರು ಸುಮಾರು 40 ಲಕ್ಷ ರೂಪಾಯಿ ಮೌಲ್ಯದ ವಿಗ್ರಹವೊಂದನ್ನು ವಶಪಡಿಸಿಕೊಂಡಿದ್ದಾರೆ. ಹೊಸಕೋಟೆ ತಾಲ್ಲೂಕಿನ ರವಿ (38),         ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕೆ.ವಿ.   ಶ್ರೀನಿವಾಸರೆಡ್ಡಿ (41) ಮತ್ತು ನೂರ್‌ಸಾಬ್ ಶೇಖ್ (60) ಬಂಧಿತರು.ಆರೋಪಿಗಳು ಚಿಂತಾಮಣಿ ಪೊಲೀಸ್ ಠಾಣೆ ವ್ಯಾಪ್ತಿಯ ತಪತೇಶ್ವರ ದೇವಸ್ಥಾನದಲ್ಲಿದ್ದ ಪಂಚಲೋಹದ ಈಶ್ವರನ ವಿಗ್ರಹವನ್ನು ಕಳವು ಮಾಡಿದ್ದರು. ಆ ವಿಗ್ರಹವನ್ನು ನಗರದ ಮಹದೇವಪುರ ವರ್ತುಲ ರಸ್ತೆಯ ಕಲ್ಯಾಣ ಮಂಟಪವೊಂದರ ಬಳಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದು ಅವರೆಲ್ಲರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ವಿಗ್ರಹ ಸುಮಾರು ನೂರು ವರ್ಷಗಳಷ್ಟು ಹಳೆಯದು.ಸರಗಳವು: ಮನೆಯ ಮುಂದೆ ನಿಂತಿದ್ದ  ಮಹಿಳೆಯೊಬ್ಬರ ಚಿನ್ನದ ಸರವನ್ನು ದುಷ್ಕರ್ಮಿಗಳು   ಕಿತ್ತುಕೊಂಡು ಪರಾರಿಯಾದ ಘಟನೆ ಭಾರತಿನಗರದ ನಾಲಾ ರಸ್ತೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಈ ಸಂಬಂಧ ಸುಭಾಷಿಣಿ ಎಂಬುವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಅವರು ರಾತ್ರಿ 8 ಗಂಟೆ ಸುಮಾರಿಗೆ ಮಗುವಿಗೆ ಊಟ ಮಾಡಿಸುತ್ತಾ ಮನೆಯ ಕಾಂಪೌಂಡ್ ಬಳಿ ನಿಂತಿದ್ದ ಸಂದರ್ಭದಲ್ಲಿ ಇಬ್ಬರು ಕಿಡಿಗೇಡಿಗಳು ಬೈಕ್‌ನಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ. ಸರದ ಮೌಲ್ಯ ಸುಮಾರು 60 ಸಾವಿರ ರೂಪಾಯಿ ಎಂದು ಪೊಲೀಸರು ಹೇಳಿದ್ದಾರೆ. ಭಾರತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು:
ಮನೆಯೊಂದರ ಬಾಗಿಲು ಮುರಿದು  ಒಳ ನುಗ್ಗಿದ ದುಷ್ಕರ್ಮಿಗಳು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಒಂದು ಲಕ್ಷ ನಗದು ಕಳವು ಮಾಡಿದ ಘಟನೆ ಮಹಾಲಕ್ಷ್ಮಿಲೇಔಟ್‌ನ ಸರಸ್ವತಿಪುರದಲ್ಲಿ ಶುಕ್ರವಾರ ನಡೆದಿದೆ.ಸರಸ್ವತಿಪುರ ಆರನೇ ಅಡ್ಡರಸ್ತೆ ನಿವಾಸಿ ತಿಮ್ಮಪ್ಪ ಎಂಬುವರ ಮನೆಯಲ್ಲಿ ಕಳವು ನಡೆದಿದೆ. ಅವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸದಸ್ಯರ ಜತೆ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ಮನೆಗೆ ನುಗ್ಗಿ ಹಣ ಮತ್ತು ಆಭರಣಗಳನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಮಹಾಲಕ್ಷಿಲೇಔಟ್  ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.