ವಿಚಾರಣೆಗೆ ಹಾಜರಾಗಲು ಮೋದಿಗೆ ಸೂಚನೆ
ಚೆನ್ನೈ (ಪಿಟಿಐ): ಹಣಕಾಸಿನ ಅವ್ಯವಹಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಜಿ ಮುಖ್ಯಸ್ಥ ಲಲಿತ್ ಮೋದಿ ಹಾಗೂ ಇತರ ಆರು ಮಂದಿಗೆ ನೋಟಿಸ್ ಜಾರಿಗೊಳಿಸಿದೆ. ಮೋದಿ ಅಲ್ಲದೆ ಕುನಾಲ್ ದಾಸ್‌ಗುಪ್ತ, ವೇಣು ನಾಯರ್, ಆಂಡ್ರ್ಯೂ ಜಾರ್ಜಿಯೊ, ಸೀಮಸ್ ಒಬ್ರಿಯಾನ್, ಹರೀಶ್ ಕೃಷ್ಣಮಾಚಾರ್ ಮತ್ತು ಅಜಯ್ ವರ್ಮಾ ಅವರಿಗೆ ಜನವರಿ ಮೊದಲ ವಾರದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಸೂಚಿಸಿದ್ದಾರೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಎನ್. ಶ್ರೀನಿವಾಸನ್ ಅವರು ಮೋದಿ ಹಾಗೂ ಇತರರ ವಿರುದ್ದ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು. ಸುಮಾರು 470 ಕೋಟಿ ರೂ. ಮೊತ್ತದ ಅವ್ಯವಹಾರ ನಡೆಸಿದ ಆರೋಪವನ್ನು ಮೋದಿ ಎದುರಿಸುತ್ತಿದ್ದಾರೆ. ಐಪಿಎಲ್‌ನ ಮಾಧ್ಯಮ ಹಕ್ಕು ಹಾಗೂ ಇತರ ವಾಣಿಜ್ಯ ಹಕ್ಕುಗಳನ್ನು ನೀಡುವ ವೇಳೆ ಮೋದಿ ಅಕ್ರಮ ಎಸಗಿದ್ದಾರೆ ಎಂದು ಬಿಸಿಸಿಐ ತನ್ನ ದೂರಿನಲ್ಲಿ ತಿಳಿಸಿತ್ತು. ಶ್ರೀನಿವಾಸನ್ ನೀಡಿದ್ದ ದೂರಿನಂತೆ ಸಿಸಿಬಿ ಪೊಲೀಸರು ಅಕ್ಟೋಬರ್ ತಿಂಗಳಲ್ಲಿ ಮೋದಿ ವಿರುದ್ಧ ಪ್ರಕರಣ ದಾಖಲಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.