ಶುಕ್ರವಾರ, ಡಿಸೆಂಬರ್ 6, 2019
26 °C

ವಿಚಾರವಿಲ್ಲದ ಗೋಷ್ಠಿ; ಸಮಕಾಲೀನತೆ ಇಲ್ಲದ ಚಿಂತನೆ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಚಾರವಿಲ್ಲದ ಗೋಷ್ಠಿ; ಸಮಕಾಲೀನತೆ ಇಲ್ಲದ ಚಿಂತನೆ..!

ಬೆಂಗಳೂರು: 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಬಾರಿಯ ಸಾಹಿತ್ಯಿಕ ಗೋಷ್ಠಿಗಳಲ್ಲಿ ಎಷ್ಟರ ಮಟ್ಟಿಗೆ ಹೊಸತನವಿದೆ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ‘ಚರ್ವಿತ- ಚರ್ವಣ’ ಎನ್ನಿಸುವ ಅಂಶಗಳೇ ಬಹುತೇಕ ಇದ್ದು ಕನ್ನಡದ ಬೆಳವಣಿಗೆಗಳನ್ನು ಗಮನಿಸುವಲ್ಲಿ ಸಾಹಿತ್ಯ ಪರಿಷತ್ತು ಸಂಪೂರ್ಣ ಎಡವಿದೆ ಎನ್ನಲಾಗುತ್ತಿದೆ.ರಾಜಧಾನಿಯಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಾಳತ್ವವಿರುವುದರಿಂದ ಸಮ್ಮೇಳನದ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿರುತ್ತವೆ. ಎರಡೂ ಸಂಸ್ಥೆಗಳು ಸೃಜನಶೀಲವಾಗಿ ಸಮ್ಮೇಳನ ಸಂಘಟಿಸುತ್ತವೆ ಎಂಬ ಅಪಾರ ಉತ್ಸಾಹ ಇರುತ್ತದೆ. ಆದರೆ ಸಮ್ಮೇಳನದ ಹೃದಯ ಭಾಗ ಎಂದೇ ಪರಿಗಣಿಸಲಾಗಿರುವ ಗೋಷ್ಠಿಗಳಲ್ಲಿ ಹೊಸತನ ಇಲ್ಲದಿರುವುದು ಅನೇಕ ಸಾಹಿತ್ಯಾಭಿಮಾನಿಗಳಿಗೆ ನಿರಾಶೆ ತಂದಿದೆ.ವಿಶ್ವದ ಪ್ರಮುಖ ಐ.ಟಿ ಕೇಂದ್ರವಾದ ಬೆಂಗಳೂರಿನಲ್ಲೇ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದರೂ ಗೋಷ್ಠಿಗಳಲ್ಲಿ ಮಾಹಿತಿ ತಂತ್ರಜ್ಞಾನದ ಬಗ್ಗೆ ಸಣ್ಣ ಚರ್ಚೆಯೂ ನಡೆಯುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ಐಟಿ-ಬಿಟಿ ಮಂದಿ ಸಮ್ಮೇಳನಕ್ಕೆ ಆಗಮಿಸಬೇಕು ಎಂದು ಹುಯಿಲೆಬ್ಬಿಸುವ ಸಾಹಿತ್ಯ ಪರಿಷತ್ತು ಈ ಅಂಶವನ್ನು ಕಡೆಗಣಿಸಿರುವುದು ಏಕೆ ಎಂಬ ಪ್ರಶ್ನೆ ಎದ್ದಿದೆ.ಕಂಪ್ಯೂಟರ್ ಲೋಕ ಕನ್ನಡದ ಸಾಹಿತ್ಯ ಫಸಲು ಬೆಳೆಯಲು ಉತ್ತಮ ಕೊಡುಗೆ ನೀಡಿದ್ದರೂ ಅದನ್ನು ಕೂಡ ಸ್ಮರಿಸುವ ಗೋಜಿಗೆ ಸಮ್ಮೇಳನ ಹೋಗಿಲ್ಲ. ಬ್ಲಾಗ್‌ಗಳು, ವೆಬ್‌ಸೈಟ್‌ಗಳು ಕನ್ನಡ ಸಂಸ್ಕೃತಿಯ ಹರವನ್ನು ಹೆಚ್ಚಿಸಿದ್ದರೂ ಇವುಗಳ ಕೊಡುಗೆಯನ್ನೂ ಸಮ್ಮೇಳನ ಗಮನಿಸಿಲ್ಲ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನೇಕರು ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದರೂ ಅವರಾರನ್ನೂ ಒಳಗೊಳ್ಳುವ ಇಚ್ಛೆ ಬೆಂಗಳೂರು ಸಾಹಿತ್ಯ ಸಮ್ಮೇಳನಕ್ಕೆ ಇಲ್ಲ ಎಂಬ ಮಾತಿದೆ.ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಭ್ರಷ್ಟಾಚಾರ ದೊಡ್ಡ ಪಿಡುಗಾಗಿ ಪರಿಣಮಿಸಿದ್ದರೂ ಅದನ್ನು ಪ್ರಶ್ನಿಸುವ ಗಂಭೀರ ಯತ್ನವನ್ನು ಸಮ್ಮೇಳನ ಮಾಡಿಲ್ಲ. ಆತಂಕಗಳು ಹಾಗೂ ತಲ್ಲಣಗಳು ಎಂಬುದು ಕೇವಲ ಗೋಷ್ಠಿಯ ಶೀರ್ಷಿಕೆಗಳಲ್ಲಿದ್ದು ಸಮಕಾಲೀನ ಸಮಸ್ಯೆಗಳನ್ನು ಮರೆಯಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.‘ಜಾತೀಯತೆ, ಕೋಮುವಾದ, ಮಲ ಹೊರುವ ಪದ್ದತಿ, ನರಬಲಿಯಂತಹ ಘಟನೆಗಳು ರಾಜ್ಯವನ್ನು ಕಾಡುತ್ತಿದ್ದರೂ ಅವುಗಳ ಬಗ್ಗೆ ಸಮ್ಮೇಳನದಲ್ಲಿ ಪ್ರತ್ಯೇಕವಾಗಿ ಚರ್ಚೆ ನಡೆಯುತ್ತಿಲ್ಲ. ಈ ಮೂಲಕ ಆಳುವ ವರ್ಗವನ್ನು ಸಂತೃಪ್ತಿಗೊಳಿಸುವ ಜಾಣ್ಮೆಗೆ ಸಮ್ಮೇಳನ ರೂಪಿಸುವವರು ಮನಸೋತಿದ್ದಾರೆ’ ಎಂದು ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.ಆಧುನಿಕ ಸಾಹಿತ್ಯಕ್ಕೆ ಸಾಹಿತ್ಯಿಕ ಪತ್ರಿಕೆಗಳ ಕೊಡುಗೆ ಅಪಾರವಾಗಿದ್ದರೂ ಅದಕ್ಕಾಗಿ ಪ್ರತ್ಯೇಕ ಗೋಷ್ಠಿ ಏರ್ಪಾಡಾಗಿಲ್ಲ. ಪ್ರಮುಖ ಸಾಹಿತ್ಯಿಕ ಪತ್ರಿಕೆಗಳ ಸಂಪಾದಕರನ್ನು ಒಳಗೊಳ್ಳದೇ ಸಾಹಿತ್ಯ ಪತ್ರಿಕೆ ಕುರಿತು ಚರ್ಚೆ ನಡೆಯುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ.‘ಸಮ್ಮೇಳನಗಳಲ್ಲಿ ಸಾಹಿತ್ಯಿಕ ಪತ್ರಿಕೆಗಳ ಬಗ್ಗೆ ವಿವರವಾದ ಚರ್ಚೆ ನಡೆಸಬೇಕು ಎಂದು ಪರಿಷತ್ತಿಗೆ ಈ ಹಿಂದೆ ಪತ್ರ ಬರೆದು ಮನವಿ ಮಾಡಲಾಗಿತ್ತು. ಆದರೆ ಅವರು ಇದುವರೆಗೆ ಸ್ಪಂದಿಸಿಲ್ಲ. ಈಗ ನೆಪಮಾತ್ರಕ್ಕೆ ಗೋಷ್ಠಿಯೊಂದರಲ್ಲಿ ವಿಷಯವನ್ನು ಅಡಕಗೊಳಿಸಲಾಗಿದೆ’ ಎಂದು ಸಂಚಯ ಸಾಹಿತ್ಯ ಪತ್ರಿಕೆಯ ಸಂಪಾದಕ ಡಿ.ವಿ.ಪ್ರಹ್ಲಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಜಾಗತೀಕರಣ, ಉದಾರೀಕರಣದ ಪ್ರಭಾವದಿಂದ ನಾಡು ಬದಲಾಗಿರುವ ಸಂದರ್ಭದಲ್ಲಿ ಅದು ಸೂಕ್ಷ್ಮವಾಗಿ ಸಾಹಿತ್ಯದಲ್ಲಿಯೂ ಪ್ರತಿಬಿಂಬಿತವಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಶತಮಾನದ ಮೊದಲ ದಶಕ ಸಾಹಿತ್ಯಿಕ ನೆಲೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಆದರೆ ಹೊಸ ಶತಮಾನದ ಸಾಹಿತ್ಯದ ಕೊಡುಗೆಯನ್ನು ಸಮ್ಮೇಳನ ಗಮನಿಸಿಲ್ಲ ಎನ್ನಲಾಗುತ್ತಿದೆ.ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕನ್ನಡದ ಮೂಲಕ ಹೇಳುವ ಬಗೆ ಹೇಗೆ ಎಂಬ ಬಗ್ಗೆಯೂ ಒಂದು ಗೋಷ್ಠಿಯನ್ನು ಆಯೋಜಿಸಬೇಕಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಮಾಹಿತಿ ಸ್ಫೋಟದ ಇಂದಿನ ಯುಗದಲ್ಲಿ ಕನ್ನಡದ ಮೂಲಕ ವಿವಿಧ ಜ್ಞಾನಶಾಖೆಗಳ ಮಾಹಿತಿಯನ್ನು ಹೇಳುವುದು ಹೇಗೆ ಎಂಬ ಕುರಿತು ಗೋಷ್ಠಿಯೇ ಇಲ್ಲ ಎಂಬ ಕೊರಗು ಸಾಹಿತ್ಯಾಸಕ್ತರನ್ನು ಕಾಡುತ್ತಿದೆ.ತಮಿಳರು, ಮರಾಠಿಗರು ತೆಲುಗರು ಹೀಗೆ ಅನೇಕ ಭಾಷಿಕರು ಸೇರಿ ಬೆಂಗಳೂರು ನಗರ ರೂಪಿತವಾಗಿದ್ದರೂ ಅನ್ಯ ಭಾಷಿಕರ ಸಾಂಸ್ಕೃತಿಕ ಅನ್ಯೋನ್ಯತೆಯನ್ನು ಗುರುತಿಸುವಲ್ಲಿ ಸಮ್ಮೇಳನ ವಿಫಲವಾಗಿದೆ. ಕೆಂಪೇಗೌಡರ ಹೊರತಾಗಿ ಬೆಂಗಳೂರನ್ನು ಬಹುಬಗೆಯಲ್ಲಿ ಬೆಳೆಸಿದವರ ಬಗ್ಗೆ ಸಮ್ಮೇಳನದ ಗೋಷ್ಠಿಗಳಲ್ಲಿ ಯಾವುದೇ ಉಲ್ಲೇಖವಿಲ್ಲ.ವೇದಿಕೆ ಬಗ್ಗೆಯೂ ಅಪಸ್ವರ: ಸಮ್ಮೇಳನದ ವೇದಿಕೆಯ ಅಲಂಕಾರದ ಬಗ್ಗೆಯೂ ಸಾಹಿತ್ಯ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಬೆಂಗಳೂರಿನ ಅರಮನೆಗಳು, ಕೋಟೆಕೊತ್ತಲುಗಳನ್ನು ಬಿಂಬಿಸಲು ಮಾತ್ರ ವೇದಿಕೆ ಸೀಮಿತವಾಗಿದೆ. ಜನ ಸಮುದಾಯವನ್ನು ಪ್ರತಿಬಿಂಬಿಸುವಂತಹ ಕಲಾಕೃತಿಗಳನ್ನು ವೇದಿಕೆ ನಿರ್ಮಾಣ ಸಮಿತಿ ರೂಪಿಸಿಲ್ಲ ಎನ್ನುವ ಅಪಸ್ವರ ಸಾಹಿತ್ಯ ವಲಯದಲ್ಲಿ ಕೇಳಿಬರುತ್ತಿದೆ.

ಪ್ರತಿಕ್ರಿಯಿಸಿ (+)