ಸೋಮವಾರ, ನವೆಂಬರ್ 29, 2021
20 °C

ವಿಚ್ಛೇದನ ಕಾನೂನು : ಈಗ ಮಹಿಳಾ ಸ್ನೇಹಿ

ಅಂಜಲಿ ರಾಮಣ್ಣ Updated:

ಅಕ್ಷರ ಗಾತ್ರ : | |

ಮಹಿಳೆಯರ ಹಕ್ಕುಗಳನ್ನು ಕಾನೂನಿನ ಮೂಲಕ ರಕ್ಷಿಸುವ ವಿಷಯ ಚರ್ಚೆಗೆ ಬಂದಾಗಲೆಲ್ಲ, ದೇಶದ ಆರ್ಥಿಕ ಅಸ್ಥಿರತೆಯೂ ಮಾಡದಷ್ಟು ಸುದ್ದಿಯನ್ನು ಅದು ಮಾಡಿಬಿಡುತ್ತದೆ. `ಕಾನೂನುಗಳು ಎಂದಿಗೂ ಮಹಿಳಾ ಪಕ್ಷಪಾತಿ' ಎನ್ನುವ ಮಿಥ್ಯಾರೋಪಗಳೂ ಈ ಸಂದರ್ಭದಲ್ಲಿ ಜೋರಾಗಿಯೇ ವ್ಯಕ್ತವಾಗುತ್ತವೆ. ಹೀಗೆಲ್ಲಾ ಗುಲ್ಲು ಎಬ್ಬಿಸುವಾಗ, ಶೋಷಿತರ ಪರವಾಗಿ ದನಿ ಎತ್ತುವವರಿಗಿಂತ ಮತ್ತು ಶೋಷಣೆಯನ್ನು ವಿರೋಧಿಸುವವರಿಗಿಂತ, ಕಾನೂನುಗಳ ನಿಜವಾದ ಅವಶ್ಯಕತೆ ಇರುವುದು ಶೋಷಿತರಿಗೆ ಎನ್ನುವುದನ್ನು ಮರೆತಂತೆ ನಾಗರಿಕ ಸಮಾಜ ವರ್ತಿಸತೊಡಗುತ್ತದೆ.ಹೀಗೆ ಪ್ರಸ್ತುತ ಒಂದು ವರ್ಗದ ಕೆಂಗಣ್ಣಿಗೆ ಗುರಿಯಾಗಿರುವುದು `ವಿವಾಹ ಕಾನೂನುಗಳ ತಿದ್ದುಪಡಿ ಕಾಯ್ದೆ- 2013'. ನಮ್ಮಲ್ಲಿ ಈಗಾಗಲೇ ಜಾರಿಯಲ್ಲಿರುವ `ಹಿಂದೂ ವಿವಾಹ ಕಾನೂನು- 1955' ಮತ್ತು `ವಿಶೇಷ ವಿವಾಹ ಕಾನೂನು- 1954'ನ್ನು ಕೂಲಂಕಷ ವಿಚಾರಣೆಗೆ ಒಳಪಡಿಸಿದ ನಂತರ, ಇದೀಗ ಅವುಗಳಿಗೆ ಗಮನಾರ್ಹ ತಿದ್ದುಪಡಿಗಳನ್ನು ತರಲಾಗಿದೆ. ಹೆಂಡತಿ ಅಥವಾ ಪತ್ನಿ ಎನ್ನುವ ಹಕ್ಕನ್ನು ಮೊತ್ತಮೊದಲ ಬಾರಿಗೆ ಗುರುತಿಸಿದ ಕಾನೂನು ಇದಾಗಿದೆ.ಪ್ರಚೋದಿಸಿದ ಪ್ರಕರಣ

ಈ ಹೊಸ ತಿದ್ದುಪಡಿ ಕಾಯ್ದೆಗೆ ಪ್ರಚೋದನೆ ನೀಡಿದ ಪ್ರಕರಣ ಹೀಗಿದೆ:

ಹಿಂದೂ ವಿವಾಹ ಕಾಯ್ದೆ- 1955ರ ಸೆಕ್ಷನ್ 13ಬಿ ಪ್ರಕಾರ, ಪರಸ್ಪರ ಒಪ್ಪಿಗೆಯ (ಮ್ಯೂಚುವಲ್ ಕನ್ಸೆಂಟ್) ವಿಚ್ಛೇದನ ಪಡೆಯಲು ಇಬ್ಬರ ಒಪ್ಪಿಗೆಯೂ ಬೇಕಾಗುತ್ತದೆ. ಆದರೆ ಸ್ಮೃತಿ ಶಿಂಧೆ ಎನ್ನುವವರು ಈ ಬಗ್ಗೆ ಕೆಲವು ಪ್ರಶ್ನೆಗಳನ್ನು ಎತ್ತಿದ್ದರು. ಹೀಗೆ ಪರಸ್ಪರ ಒಪ್ಪಿಗೆಯ ಮೇರೆಗೆ ನ್ಯಾಯಾಲಯಕ್ಕೆ ಅರ್ಜಿ ಹಾಕಿಕೊಂಡಿದ್ದರೂ ನಂತರ ಒಬ್ಬರು ಒಪ್ಪಿಗೆಯನ್ನು ಹಿಂತೆಗೆದುಕೊಂಡು ಬಿಟ್ಟರೆ ಅಥವಾ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ವಿಚ್ಛೇದನವನ್ನು ಕೊಡದೇ ಇರುವುದು ಎಷ್ಟು ಸೂಕ್ತ? ಅಸಹನೀಯ ಪರಿಸ್ಥಿತಿಯಲ್ಲೂ ಕಾನೂನು ಇದೊಂದೇ ಕಾರಣಕ್ಕೆ ಆಕೆಯನ್ನು ಮದುವೆಯ ಪರಿಧಿಯೊಳಗೆ ಮುಂದುವರಿಯುವಂತೆ ಒತ್ತಡ ಹೇರುವುದು ನ್ಯಾಯವೇ ಎಂದು ಅವರು ನ್ಯಾಯಾಲಯವನ್ನು ಕೇಳಿದ್ದರು.ಇಂತಹ ಪ್ರಶ್ನೆಗಳಿಗೆ, ಸದ್ಯ ಜಾರಿಯಲ್ಲಿದ್ದ ಕಾನೂನಿನಲ್ಲಿ ಉತ್ತರ ಸಿಗುವುದು ಸಾಧ್ಯವಿರಲಿಲ್ಲ. ಹೀಗಾಗಿ ನ್ಯಾಯಾಲಯವು, ಈ ಕುರಿತು ನಿರ್ದೇಶನ ನೀಡುವಂತೆ ಶಾಸಕಾಂಗವನ್ನು ಕೋರಿತ್ತು. ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ, ಗಂಡ ತನ್ನ ಒಪ್ಪಿಗೆಯನ್ನು ಹಿಂತೆಗೆದುಕೊಂಡರೆ ಅದರಿಂದ ಹೆಂಡತಿಯ ಮೂಲಭೂತ ಹಕ್ಕನ್ನು ಕಿತ್ತುಕೊಂಡಂತೆ ಆಗುತ್ತದೆಯೇ ಎನ್ನುವ ವಿಚಾರದ ಬಗ್ಗೆ ಹೆಚ್ಚಿನ ಸ್ಪಷ್ಟನೆಯನ್ನು ಕೇಳಿತ್ತು. ಇದನ್ನೇ ಮೂಲವಾಗಿ ಇಟ್ಟುಕೊಂಡ ಶಾಸಕಾಂಗವು, ವಿವಾಹ ಕಾನೂನುಗಳಿಗೆ ಅವಶ್ಯಕ ತಿದ್ದುಪಡಿಗಳನ್ನು ತರಲು ಮುಂದಾಯಿತು. ಇದರ ಪರಿಣಾಮವಾಗಿ, 2010ರಲ್ಲಿ ವಿವಾಹ ಕಾನೂನುಗಳಿಗೆ ತಿದ್ದುಪಡಿ ಕರಡು ಮಸೂದೆಯನ್ನು ಪ್ರಸ್ತುತ ಪಡಿಸಲಾಯಿತು.ತಿದ್ದುಪಡಿಯಲ್ಲಿ ಏನಿದೆ?

ತಿದ್ದುಪಡಿಯ ಮೂಲಕ ಹಿಂದೂ ವಿವಾಹ ಕಾಯ್ದೆ- 1955ರ 13ನೇ ಸೆಕ್ಷನ್‌ಗೆ ಹಾಗೂ ವಿಶೇಷ ವಿವಾಹ ಕಾನೂನು- 1954ಕ್ಕೆ ಒಂದಷ್ಟು ಉಪ ಸೆಕ್ಷನ್‌ಗಳನ್ನು ಸೇರಿಸಲಾಗಿದೆ. ಮೊದಲು ಜಾರಿಯಲ್ಲಿದ್ದ ಯಾವುದೇ ಕಾನೂನಿನಲ್ಲಿ, ಮದುವೆ ಮುರಿದು ಬಿದ್ದಿದೆ ಅಥವಾ ಅಸಹನೀಯ ಎನಿಸುತ್ತಿದೆ ಅಥವಾ ಅದೊಂದು ನಿಷ್ಕ್ರಿಯ ಮದುವೆ ಎನ್ನುವ ಕಾರಣಗಳ ಮೇಲೆ ವಿಚ್ಛೇದನ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ಆದರೆ ಈಗ, ಸರಿಪಡಿಸಲು ಆಗದಂತಹ ಕಾರಣಗಳಿಂದ ಮುರಿದುಬಿದ್ದ ಮದುವೆ (irretrievable breakdown)  ಎಂಬ ಕಾರಣಕ್ಕೆ ವಿಚ್ಛೇದನ ನೀಡುವಂತೆ ಪುರುಷನಾಗಲೀ, ಮಹಿಳೆಯಾಗಲೀ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಇಂತಹ ಅರ್ಜಿ ಸಲ್ಲಿಸುವ ದಿನಕ್ಕೆ ಕನಿಷ್ಠ ಮೂರು ವರ್ಷಗಳ ಕಾಲದಿಂದ ಅವರಿಬ್ಬರೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸ ಇದ್ದಿರಬಾರದು.ವಿವರವಾದ ಪ್ರಕ್ರಿಯೆಯ ನಂತರ ಇಂತಹ ಕಾರಣ ಸರಿ ಎಂದು ಕಂಡುಬಂದಲ್ಲಿ ನ್ಯಾಯಾಲಯವು ವಿಚ್ಛೇದನ ನೀಡಬಹುದಾಗಿದೆ. ಆದರೆ, ಈ ರೀತಿ ವಿಚ್ಛೇದನ ನೀಡಿದರೆ ಮಹಿಳೆ ಮತ್ತು ಮಕ್ಕಳು ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ ಎಂದಾದರೆ, ಮಹಿಳೆಯು ಇಂತಹ ವಿಚ್ಛೇದನವನ್ನು ವಿರೋಧಿಸುವ ಹಕ್ಕು ಹೊಂದಿರುತ್ತಾಳೆ. ಹಾಗೆಯೇ ಪುರುಷನು ವಿಚ್ಛೇದನಕ್ಕಾಗಿ ಹಾಕಿಕೊಂಡಿರುವ ಅರ್ಜಿಯನ್ನು ಪರಿಗಣಿಸುವಾಗ, ಆತನು ಹೆಂಡತಿ ಮತ್ತು ಮಕ್ಕಳಿಗೆ ಆರ್ಥಿಕ ಸುಭದ್ರತೆ ಒದಗಿಸಿದ್ದಾನೆಯೇ ಎಂಬುದನ್ನು ನ್ಯಾಯಾಲಯ ತೀಕ್ಷ್ಣವಾಗಿ ಪರಿಶೀಲಿಸಬೇಕಾಗುತ್ತದೆ.ನುಣುಚಿಕೊಳ್ಳುವ ಚತುರರು

ಧರ್ಮೇಶ್ ಭಾಯ್ ದೇಸಾಯಿ ಎನ್ನುವವರು ವಿಚ್ಛೇದನಕ್ಕೆ ಅರ್ಜಿ ಹಾಕಿಕೊಂಡಿದ್ದರು. ಅವರ ಪತ್ನಿ ಹೇತಲ್ ಬೇನ್ ತಮಗೆ ಮತ್ತು ಮಗಳಿಗಾಗಿ ಆರ್ಥಿಕ ಬೆಂಬಲ ಕೋರಿ ಸಲ್ಲಿಸಿದ್ದ ಅರ್ಜಿಗೆ ಉತ್ತರವಾಗಿ ದೇಸಾಯಿ ತಮಗೆ ಹಣಕಾಸಿನ ಹಿನ್ನೆಲೆಯಾಗಲೀ, ಸಂಪಾದನೆಯಾಗಲೀ ಇಲ್ಲ ಎಂದು ದಾಖಲೆಗಳ ಮೂಲಕ ನ್ಯಾಯಾಲಯದ ದಾರಿ ತಪ್ಪಿಸುತ್ತಲೇ ಬಂದಿದ್ದರು. ಆದರೆ, ಗುಜರಾತ್ ಹೈಕೋರ್ಟ್ ಈ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಆತ ಅಹಮದಾಬಾದಿನಲ್ಲಿ ಎರಡು ಅತಿ ದೊಡ್ಡ ವ್ಯಾಪಾರಿ ಮಳಿಗೆಗಳ ಮಾಲೀಕ ಆಗಿದ್ದುದು ಮತ್ತು ಲಕ್ಷಾಂತರ ರೂಪಾಯಿ ಬೆಲೆಬಾಳುವ ವಿದೇಶಿ ಕಾರಿನ ಒಡೆಯ ಆಗಿದ್ದುದು ಪತ್ತೆಯಾಗಿತ್ತು. ಇದೇ ರೀತಿ, ನ್ಯಾಯಾಲಯಗಳ ಕದ ತಟ್ಟುವ ಶೇ 90ರಷ್ಟು ವಿಚ್ಛೇದನ ಪ್ರಕರಣಗಳಲ್ಲಿ ಪುರುಷರು ತಮ್ಮ ಆದಾಯದ ಬಗ್ಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಕುಟುಂಬಕ್ಕೆ ಆರ್ಥಿಕ ಬೆಂಬಲ ಒದಗಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅಂಶ ತಿಳಿದುಬಂದಿದೆ.

ದೃಢಪಡಿಸಿದ ಸಮೀಕ್ಷೆ

`ವಿಚ್ಛೇದಿತ ಮಹಿಳೆಯರ ಆರ್ಥಿಕ ಸ್ಥಿತಿಗತಿ' ಎನ್ನುವ ವಿಷಯದ ಬಗ್ಗೆ ದೆಹಲಿಯ `ಎಕನಾಮಿಕ್ ರಿಸರ್ಚ್ ಫೌಂಡೇಷನ್' ನಡೆಸಿದ ಸಮೀಕ್ಷೆಯ ಪ್ರಕಾರ, ಶೇಕಡಾ 74ರಷ್ಟು ವಿಚ್ಛೇದಿತ ಮಹಿಳೆಯರು ಹೊರಗಿನ ದುಡಿಮೆ ಇಲ್ಲದ ಪೂರ್ಣಾವಧಿ ಗೃಹಿಣಿಯರು. ಶೇಕಡಾ 31ರಷ್ಟು ಮಂದಿ ಮದುವೆಯ ಮೊದಲು ಉತ್ತಮ ಉದ್ಯೋಗದಲ್ಲಿ ಇದ್ದರೂ, ನಂತರ ಗಂಡನ ಇಚ್ಛೆಯ ಮೇರೆಗೆ ಕೆಲಸ ಬಿಟ್ಟವರು.ಶೇಕಡಾ 69ರಷ್ಟು ಮಹಿಳೆಯರು ಮನೆಯಿಂದ ಹೊರ ಬರುವಾಗ ತಮ್ಮ ಒಡವೆಗಳನ್ನಾಗಲೀ, ಸಂಬಂಧಪಟ್ಟ ಇತರ ಜೀವನಾಧಾರಿತ ವಸ್ತುಗಳನ್ನಾಗಲೀ ಜೊತೆಗೆ ತರದೆ, ಬರಿಗೈಯಲ್ಲಿ ಬಂದವರು.ಶೇಕಡಾ 75ರಷ್ಟು ವಿಚ್ಛೇದಿತ ಮಹಿಳೆಯರು ತವರು ಮನೆಗೆ ಹಿಂದಿರುಗಿ ಹೆತ್ತವರು ಅಥವಾ ಒಡಹುಟ್ಟಿದವರ ಮೇಲೆ ಆರ್ಥಿಕವಾಗಿ ಅವಲಂಬಿತರಾಗಿರುತ್ತಾರೆ. ಉದ್ಯೋಗಸ್ಥ ವಿಚ್ಛೇದಿತ ಮಹಿಳೆಯರಲ್ಲಿ ಶೇಕಡಾ 88ರಷ್ಟು ಮಹಿಳೆಯರು ಹಿಂದೆ ಗಂಡನ ಕುಟುಂಬದ ನಿತ್ಯ ಅವಶ್ಯಕತೆಗಳು ಹಾಗೂ ಗೃಹೋಪಯೋಗಿ ವಸ್ತುಗಳನ್ನು ತಾವೇ ಖರೀದಿ ಮಾಡಿದವರಾಗಿರುತ್ತಾರೆ. ವಿಪರ್ಯಾಸ ಎಂದರೆ ಶೇಕಡಾ 88 ವಿಚ್ಛೇದಿತ ಪುರುಷರ ಜೀವನ ಶೈಲಿಯಲ್ಲಿ ಮಾತ್ರ ವಿಚ್ಛೇದನದ ನಂತರವೂ ಯಾವುದೇ ಬದಲಾವಣೆ ಆಗುವುದಿಲ್ಲ ಎನ್ನುವುದನ್ನು ಸಮೀಕ್ಷೆ ಪತ್ತೆ ಹಚ್ಚಿದೆ.ಇಂತಹ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಹೆಂಗಸರ ಆಸ್ತಿ ಹಕ್ಕುಗಳಿಗೂ ತಿದ್ದುಪಡಿ ತರಲಾಗಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇ 50ರಷ್ಟು ಮಹಿಳೆಯರು ಇದ್ದರೂ ಶೇ 2ರಷ್ಟು ಮಹಿಳೆಯರು ಮಾತ್ರ ಆಸ್ತಿಯ ಒಡೆಯರಾಗಿರುತ್ತಾರೆ. ಹೊಸ ತಿದ್ದುಪಡಿ ಕಾಯ್ದೆಯ ಪ್ರಕಾರ, ವಿಚ್ಛೇದನಕ್ಕೆ ಒಳಗಾಗುವ ಮಹಿಳೆಗೆ ವಿಚ್ಛೇದನ ನೀಡಲಿರುವ ಗಂಡನ ಸ್ವಯಾರ್ಜಿತ ಸ್ಥಿರಾಸ್ತಿ ಮತ್ತು ಚರಾಸ್ತಿ ಎರಡರಲ್ಲೂ ಪಾಲು ಇರುತ್ತದೆ. ಆದರೆ ಎಷ್ಟು ಪ್ರಮಾಣದ ಪಾಲು ಎನ್ನುವುದನ್ನು ನ್ಯಾಯಾಲಯದ ವಿವೇಚನೆಗೆ ಬಿಡಲಾಗಿದೆ. ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಮಾತ್ರ ಮಹಿಳೆಗೆ ಪಾಲು ಬರುವುದಿಲ್ಲ.ಜೀವನಾಂಶದ ಪ್ರಮಾಣ ಮತ್ತು ಆಸ್ತಿಯಲ್ಲಿನ ಪಾಲಿನ ಬಗ್ಗೆ ನಿರ್ಧಾರ ಮಾಡುವಾಗ ನ್ಯಾಯಾಲಯವು ಗಂಡನಿಗೆ ಇರಬಹುದಾದ ಪಿತ್ರಾರ್ಜಿತ ಆಸ್ತಿಯ ಮೌಲ್ಯವನ್ನೂ ಪರಿಗಣಿಸಬೇಕಾಗುತ್ತದೆ. ಈಗಾಗಲೇ ಕೌಟುಂಬಿಕ ದೌರ್ಜನ್ಯ ತಡೆ ಕಾನೂನಿನಲ್ಲಿ ಮಹಿಳೆಯು ಮದುವೆಯ ಅವಧಿಯಲ್ಲಿ ವಾಸ ಮಾಡುತ್ತಿರುವ ಮನೆಯಲ್ಲೇ ತನ್ನ ವಾಸವನ್ನು ಮುಂದುವರಿಸಬಹುದಾದ ಹಕ್ಕನ್ನು ಹೊಂದಿರುತ್ತಾಳೆ  ಎನ್ನುವುದನ್ನು ಇಲ್ಲಿ ಗಮನಿಸಬೇಕು. ಈ ತಿದ್ದುಪಡಿ ಕಾನೂನು ಮಹಿಳೆಯ ಹಕ್ಕುಗಳ ಸಂರಕ್ಷಣೆಯ ಬಗ್ಗೆ ಮಾತ್ರವಲ್ಲ, ಅವಳ ಜೀವನದ ಗುಣಮಟ್ಟದಲ್ಲಿನ ಸುಧಾರಣೆಯ ಉದ್ದೇಶವನ್ನೂ ಹೊಂದಿದೆ.

ಪುರುಷರ ಅಳಲು

ಇಂತಹ ತಿದ್ದುಪಡಿಗಳಿಂದ ಅನುಕೂಲಕ್ಕಿಂತ ಅಪಾಯವೇ ಹೆಚ್ಚಾಗಿದೆ ಎಂದು ಪುರುಷ ಸಂಘಟನೆಗಳು ಹೇಳುತ್ತಿವೆ. ಇದೊಂದು ಮಹಿಳಾ ಪಕ್ಷಪಾತಿಯಾದ ಕಾನೂನಾಗಿದ್ದು, ಇದರಿಂದ ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ಹೆಸರಿನಲ್ಲಿ ಮಹಿಳೆಯರು ಪುರುಷರನ್ನು ಪೀಡಿಸುವುದು ಹೆಚ್ಚಾಗಲಿದೆ ಎಂಬುದು ಅವರ ಕೂಗು.ಆಸ್ತಿಗಾಗಿ ಮತ್ತು ದ್ವೇಷಕ್ಕಾಗಿ ವಿಚ್ಛೇದನಗಳು ಹೆಚ್ಚಲಿವೆ. ಈ ತಿದ್ದುಪಡಿ ಪುರುಷನನ್ನು ಭಿಕಾರಿ ಆಗಿಸಲಿದೆ. ಲಿಂಗ ಅಸಮಾನತೆ ಇರುವ ಈ ತಿದ್ದುಪಡಿಗಳು ಅಸಾಂವಿಧಾನಾತ್ಮಕ ಎಂಬ ಅಳಲೂ ಕೇಳಿಬರುತ್ತಿದೆ. ಈ ಕಾನೂನು ಕರಡು ಮಸೂದೆಯಾಗಿ ಸರ್ಕಾರದ ಮುಂದೆ ಇದ್ದಾಗ, ಪುರುಷ ಹಕ್ಕುಗಳ ಸಂರಕ್ಷಣಾ ವೇದಿಕೆಯು ಇಂತಹ ಹಲವಾರು ಮನವಿಗಳನ್ನು ಸರ್ಕಾರಕ್ಕೆ ಮಾಡಿಕೊಂಡಿತ್ತು. ಆದರೆ ದೇಶದ ಮಹಿಳೆಯರ ಪರಿಸ್ಥಿತಿಯನ್ನು ಗಣನೀಯವಾಗಿ ಮತ್ತು ಸೂಕ್ಷ್ಮವಾಗಿ ಪರಿಶೀಲಿಸಿದರೆ ಇಂತಹ ಯಾವುದೇ ತೊಂದರೆಗಳು ತಿದ್ದುಪಡಿ ಕಾನೂನಿನಿಂದ ಆಗುವುದಿಲ್ಲ ಎನ್ನುವುದು ಸರ್ಕಾರಕ್ಕೆ ಮನದಟ್ಟಾಗಿದೆ. ಕೌಟುಂಬಿಕ ದೌರ್ಜನ್ಯ ತಡೆ ಕಾನೂನಿನ ಅಡಿ ಅಥವಾ ವರದಕ್ಷಿಣೆ ನಿಷೇಧ ಕಾನೂನಿನ ಅಡಿ ಅಥವಾ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಅಡಿ ಪ್ರಕರಣಗಳನ್ನು ದಾಖಲಿಸಿದ್ದರೆ, ಅದು ಕ್ರಿಮಿನಲ್ ಮೊಕದ್ದಮೆ ಆಗುತ್ತದೆ. ಹೀಗಾಗಿ ವಿಚ್ಛೇದನ ಪ್ರಕರಣಕ್ಕೂ ಅದಕ್ಕೂ ಸಂಬಂಧ ಇರುವುದಿಲ್ಲ. ಇಂತಹ ತಿದ್ದುಪಡಿಗಳಿಂದ ಅನ್ಯ ಧರ್ಮದ ಮಹಿಳೆಯರಿಗೆ ಯಾವುದೇ ಪ್ರಯೋಜನ ಇಲ್ಲ ಎನ್ನುವ ಕಾರಣ ನೀಡಿ ಇದನ್ನು ವಿರೋಧಿಸುವವರು ಗಮನಿಸಬೇಕಾದ ಅಂಶವೆಂದರೆ, ಹಿಂದೂ ವಿವಾಹ ಕಾನೂನಿಗೆ ಒಳಪಡದ ವಿವಾಹಿತರು ತಮ್ಮ ಮದುವೆಯನ್ನು ವಿಶೇಷ ವಿವಾಹ ಕಾನೂನಿನ ಅಡಿ ನೋಂದಾಯಿಸಿಕೊಂಡು ಈ ತಿದ್ದುಪಡಿಗಳ ಪ್ರಯೋಜನ ಪಡೆಯಬಹುದಾಗಿದೆ.ನಾವು ಒಂದು ವರ್ಗದ ಆಲೋಚನೆ,   ಅಭಿರುಚಿ ಹಾಗೂ ಒಂದು ಭೌಗೋಳಿಕ ಹಿನ್ನೆಲೆಯ ಜೀವನ ಶೈಲಿಯನ್ನು ಮಾತ್ರ ಗಣನೆಗೆ ತೆಗೆದುಕೊಂಡು ಯಾವುದೇ ಕಾನೂನನ್ನು ವಿರೋಧಿಸುವುದು ತಪ್ಪಾಗುತ್ತದೆ. ಎಂತಹ ವಿರೋಧಕ್ಕೂ ಒಂದು ಸಮಗ್ರ ದೃಷ್ಟಿಕೋನ ಇದ್ದರೆ ಮಾತ್ರ ಅದು ಸಮಾಜಮುಖಿ ಆಗಿರುತ್ತದೆ.  ಹೀಗಾಗಿ ಸೂಕ್ಷ್ಮವಾಗಿ ಗಮನಿಸಿದಾಗ ಇದೊಂದು ಲಿಂಗ ಸಮಾನತೆಯುಳ್ಳ ಕಾನೂನಾಗಿಯೇ ನಮಗೆ ಕಾಣುತ್ತದೆ.ರಾಷ್ಟ್ರೀಯ ಕಾನೂನು ಸಮಿತಿಯು 1978ರಲ್ಲೇ ತನ್ನ 71ನೇ ವರದಿಯಲ್ಲಿ ಸರಿಪಡಿಸಲು ಆಗದಂತಹ ಕಾರಣಗಳಿಂದ ಮುರಿದುಬಿದ್ದ ಮದುವೆ (irretrievable breakdown) ಎನ್ನುವುದನ್ನು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಬಹುದಾದ ಕಾರಣಗಳಲ್ಲಿ ಒಂದು ಎಂದು ಪರಿಗಣಿಸಲು ಸೂಚಿಸಿತ್ತು. ಆದರೆ 1981ರಲ್ಲಿ ಲೋಕಸಭೆಯಲ್ಲಿ ಈ ಚರ್ಚೆಗೆ ಒಮ್ಮತ ಮೂಡಿರಲಿಲ್ಲ. ಮತ್ತೊಮ್ಮೆ 2009ರಲ್ಲಿ ರಾಷ್ಟ್ರೀಯ ಕಾನೂನು ಸಮಿತಿಯು ಇಂಥದ್ದೇ ಶಿಫಾರಸು ಮಾಡಿತ್ತು.ಈ ತಿದ್ದುಪಡಿ ಆಗುವವರೆಗೂ ಈ ಬಗೆಯ ಕಾರಣವನ್ನು ಮನ್ನಿಸಲು ಆಗದೇ ಇದ್ದರೂ ಸುಪ್ರೀಂಕೋರ್ಟ್ ಮತ್ತು ಹಲವು ಹೈಕೋರ್ಟ್‌ಗಳು ಕೆಲವು ಅಪರೂಪ ಎನ್ನಿಸಿಕೊಳ್ಳುವ ಪ್ರಕರಣಗಳಾದ ಜೋರ್ಡನ್ ವರ್ಸಸ್ ಎಸ್.ಎಸ್.ಚೋಪ್ರ, ನವೀನ್ ಕೋಹ್ಲಿ ವರ್ಸಸ್ ನೀಲು ಕೋಹ್ಲಿ, ಚಂದ್ರಲೇಖ ತ್ರಿವೇದಿ ವರ್ಸಸ್ ಎಸ್.ಪಿ.ತ್ರಿವೇದಿ, ಸಂಘಮಿತ್ರ ಸಿಂಘ್ ವರ್ಸಸ್ ಕೈಲಾಶ್ ಸಿಂಘ್, ಸ್ಮಿತಾ ದಿಲೀಪ್ ರಾಣೆ ವರ್ಸಸ್ ದಿಲೀಪ್ ದತ್ತಾ ರಾಮ್‌ರಾಣೆ  ಪ್ರಕರಣಗಳಲ್ಲಿ `ಸರಿಪಡಿಸಲು ಆಗದಂತಹ ಕಾರಣಗಳಿಂದ ಮುರಿದುಬಿದ್ದ ಮದುವೆ' ಎನ್ನುವುದನ್ನು ಕಾರಣವಾಗಿ ಒಪ್ಪಿ ವಿಚ್ಛೇದನ ನೀಡಿದ ನಿದರ್ಶನಗಳು ಇವೆ.ಎರಡು ವರ್ಷಗಳ ವೈವಾಹಿಕ ಜೀವನದ ಬಳಿಕ ಗಂಡನ ಮನೆಯವರು ಮಧ್ಯ ರಾತ್ರಿಯಲ್ಲಿ ಹೊರದೂಡಿದಾಗ ವಂದನಾ ಷಾ ಬಳಿ ಇದ್ದದ್ದು ಕೇವಲ 750 ರೂಪಾಯಿ. ತನ್ನೆಲ್ಲ ಒಡವೆಗಳನ್ನೂ ಗಂಡನ ಮನೆಯಲ್ಲೇ ಬಿಟ್ಟು, ತೀರಿಹೋಗಿದ್ದ ತಂದೆ ತಾಯಿಯ ಬೀಗ ಹಾಕಿದ್ದ ಮನೆಯ ಮುಂದೆ ನಿಂತಾಗ ಆಕೆಗೆ ನೆನಪಾಗಿದ್ದು ಆ ಮನೆಯ ಬೀಗದ ಕೈ ಕೂಡ ಗಂಡನ ಮನೆಯಲ್ಲೇ ಇತ್ತು ಎಂಬುದು. ಮನೆಗೆಲಸದಾಕೆ ವಂದನಾರನ್ನು 7 ತಿಂಗಳು ಸಾಕಿದ್ದಳು.ನಂತರ ಮಾನಸಿಕ ಆಘಾತದಿಂದ ಹೊರಬಂದ ವಂದನಾ ವಿಚ್ಛೇದನ ಪ್ರಕ್ರಿಯೆಯಿಂದ ನೊಂದ ಮಹಿಳೆಯರಿಗಾಗಿಯೇ ಇರುವ ದೇಶದ ಪ್ರಪ್ರಥಮ ನಿಯತಕಾಲಿಕ `Ex Files'ನ ಸಂಪಾದಕಿ ಆಗಿದ್ದಾರೆ. ಇದು ಸಂಪ್ರದಾಯವಾದಿಗಳ ಕಣ್ಣಿನಲ್ಲಿ ಸಾಧನೆ ಅಲ್ಲದೇ ಇರಬಹುದು. ಆದರೆ ಈ ತಿದ್ದುಪಡಿ ಕಾನೂನು ಜಾರಿಗೆ ಬರದೇ ಇದ್ದರೆ, ಮಹಿಳೆಯರ ಸ್ಥಿತಿ ಎಷ್ಟು ಅಧೋಗತಿಗೆ ಇಳಿಯುತ್ತದೆ ಎನ್ನುವುದನ್ನು ಇಂತಹ ಪ್ರಕರಣಗಳು ತಿಳಿಸುತ್ತವೆ.`ಜೀವ ಬಂದಂತೆ ಸವಿ ಭಾವ ಬಂದಂತೆ, ಇನಿಯಾ ನೀ ಬಂದೆ ನನ್ನ ಬಾಳಿಗೆ' ಎನ್ನುವ ಕವಿವಾಣಿಯನ್ನು ನಿಜವೆಂದೇ ನಂಬಿ ಗಂಡಿನ ಬಾಳಲ್ಲಿ ಹಾಡಾಗಲು ಬರುವ ಹೆಣ್ಣಿಗೆ ಯಾವ ಕಾರಣಕ್ಕೇ ಆಗಲಿ ಮದುವೆ ಮುರಿದುಕೊಳ್ಳುವುದು, ಅದರಿಂದ ಹೊರ ನಡೆಯುವುದು ಅತೀವ ನೋವಿನ ಸಂಗತಿ. ಜೊತೆಯಲ್ಲೇ ಇದ್ದು ಅಪಶ್ರುತಿಯಿಂದ ಮಾನಸಿಕ ಹಾಗೂ ದೈಹಿಕವಾಗಿ ದುರ್ಬಲಳಾಗಿ ಯಾತನೆ ಅನುಭವಿಸುವುದಕ್ಕಿಂತ, ಭವಿಷ್ಯದ ಬಗ್ಗೆ ಭರವಸೆ ಇಡುವುದು ಹಿತಕಾರಿಯೇ. ಆದರೆ ಕಾರಣ ಏನೇ ಇದ್ದರೂ, ಮದುವೆಯಿಂದ ಹೊರಬರಬೇಕಾದ ಸಂದರ್ಭದಲ್ಲಿ ನಮ್ಮ ನಮ್ಮ ನಾಳೆಗಳನ್ನು ಸುಧಾರಿಸಿಕೊಳ್ಳುವುದರೆಡೆಗೆ ಗಮನವಿದ್ದರೆ ಸಾಕು. ದ್ವೇಷ, ಸಿಟ್ಟು, ಸೆಡವುಗಳು ಯಾಕೆ ಬೇಕು? ಹೀಗೆ ಯೋಚಿಸಿದಾಗ ಮಾತ್ರ ಯಾವ ಕಾನೂನೂ ದುರ್ಬಳಕೆ ಆಗದಂತೆ ನೋಡಿಕೊಳ್ಳಬಹುದು.ಸತ್ಯ ಕಥೆ 

ಚೆನ್ನೈನ ಲೇಖಕಿ ಜೂಡಿ ಬಾಲನ್ ತಮ್ಮ ಸತ್ಯ ಕಥೆಯನ್ನು ““Two Fates: The Story of My Divorce”ಎನ್ನುವ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ವಿವಾಹ ಕಾನೂನುಗಳಿಗೆ ಆಸ್ತಿ ಮತ್ತು ಜೀವನಾಂಶದ ದೆಸೆಯಿಂದ ತಿದ್ದುಪಡಿ ತರಲಾಗದೇ ಇದ್ದರೆ, ಮದುವೆಗೆ ಮೊದಲು ಎಷ್ಟೇ ಶ್ರೀಮಂತರಾಗಿದ್ದರೂ, ಮದುವೆಯ ಅವಧಿಯಲ್ಲಿ ಸಿರಿವಂತ ಜೀವನ ನಡೆಸಿದ್ದರೂ ವಿಚ್ಛೇದನದ ಬಳಿಕ ಮಹಿಳೆಯರ ಸ್ಥಿತಿ ದಯನೀಯ ಆಗುವುದನ್ನು ಅಂಕಿ-ಅಂಶ, ಸಾಕ್ಷ್ಯಾಧಾರಗಳ ಮೂಲಕ ಅವರು ನಿರೂಪಿಸಿದ್ದಾರೆ.ಮಕ್ಕಳು ಎಂದರೆ...

ಹೊಸ ತಿದ್ದುಪಡಿ ಕಾನೂನಿನಲ್ಲಿ ಮಕ್ಕಳು ಎಂದರೆ, 18 ವರ್ಷದ ಒಳಗಿನವರು (ಅಪ್ರಾಪ್ತ ವಯಸ್ಸಿನ). ಮದುವೆಯಾಗದೆ ಅಥವಾ ವಿಧವೆಯಾಗಿ ಆರ್ಥಿಕವಾಗಿ ಸ್ವತಂತ್ರರಾಗಿಲ್ಲದ ಹೆಣ್ಣು ಮಕ್ಕಳು ಹಾಗೂ ವಯಸ್ಸಿನ ಮಿತಿಯಿಲ್ಲದೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಅಂಗವಿಕಲರಾದ ಮಕ್ಕಳು ಎಂದು ಗುರುತಿಸಲಾಗಿದೆ.

ಜೈವಿಕ ಮಕ್ಕಳಿರಲಿ, ದತ್ತು ತೆಗೆದುಕೊಂಡ ಮಕ್ಕಳಾಗಿರಲಿ ಇಬ್ಬರಿಗೂ ಸಮಾನ ಹಕ್ಕು ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿರುವ ಮಕ್ಕಳಿಗೆ ತಂದೆ ಆರ್ಥಿಕ ಬೆಂಬಲವನ್ನು ಒದಗಿಸಲೇ ಬೇಕಾಗಿರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.