ಶನಿವಾರ, ಜೂನ್ 19, 2021
27 °C
ವಿಜಾಪುರಕ್ಕೆ ಕುಮಾರಸ್ವಾಮಿ ದಿಢೀರ್‌ ಭೇಟಿ

ವಿಜುಗೌಡರ ಮನವೊಲಿಕೆ: ದೇಶಮುಖ ಮನೆಗೆ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಜೆಡಿಎಸ್ ಮುಖಂಡ ಎಚ್‌.ಡಿ. ಕುಮಾರಸ್ವಾಮಿ ಭಾನುವಾರ ನಗರಕ್ಕೆ ದಿಢೀರ್‌ ಭೇಟಿ ನೀಡಿದರು. ಬಿಜೆಪಿ ಸೇರಲು ಮುಂದಾಗಿದ್ದ ಜೆಡಿಎಸ್‌ ಮುಖಂಡ ವಿಜುಗೌಡ ಪಾಟೀಲ ಅವರ ಮನವೊಲಿಸಿದರು.ವಿಜಾಪುರ ಲೋಕಸಭಾ ಕ್ಷೇತ್ರಕ್ಕೆ ತಮ್ಮ ಪಕ್ಷದಿಂದ ನಿವೃತ್ತ ಕೆಎಎಸ್‌ ಅಧಿಕಾರಿ ಚಿಕ್ಕವೆಂಕಟಪ್ಪ ಅವರನ್ನು ಕಣಕ್ಕಿಳಿಸುವ ಕುರಿತು ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಕುಮಾರಸ್ವಾಮಿ,  ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ ಅವರ ಮನೆಗೆ ಭೇಟಿ ನೀಡಿ ಪಕ್ಷಕ್ಕೆ ವಾಪಸ್ಸಾಗುವಂತೆ ಆಹ್ವಾನ ನೀಡಿದರು.ಮಧ್ಯಾಹ್ನ ನೇರವಾಗಿ ವಿಜುಗೌಡ ಪಾಟೀಲ ಅವರ ಸ್ಥಳೀಯ ನಿವಾಸಕ್ಕೆ ಆಗಮಿಸಿದ ಕುಮಾರಸ್ವಾಮಿ, ನೆರೆ ಜಿಲ್ಲೆಯ ಪ್ರಮುಖ ಮಠಾಧೀಶರ ಮಧ್ಯಸ್ಥಿಕೆಯಲ್ಲಿ ಈ ಸಭೆ ನಡೆಸಿ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು.ನಂತರ ವಿಜುಗೌಡರ ತೋಟದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡರು.

‘ಕಳೆದ ಚುನಾವಣೆಯಲ್ಲಿ ತಾವು ಪ್ರಚಾರಕ್ಕೆ ಬಂದಿದ್ದರೆ ನಾನು ಗೆಲ್ಲುತ್ತಿದ್ದೆ. ಉದ್ದೇಶಪೂರ್ವಕವಾಗಿಯೇ ಪ್ರಚಾರಕ್ಕೆ ಬರಲಿಲ್ಲ. ಹೀಗಾಗಿ ಜೆಡಿಎಸ್‌ ತೊರೆದು ಬಿಜೆಪಿ ಸೇರೋಣ ಎಂದು ಕ್ಷೇತ್ರದ ಕಾರ್ಯಕರ್ತರು ಒತ್ತಡ ತರುತ್ತಿದ್ದರು. ಆದರೂ ನಾನು ಜೆಡಿಎಸ್‌ ತೊರೆಯುವುದಾಗಿ ಎಲ್ಲಿಯೂ ಹೇಳಿಲ್ಲ’ ಎಂದು ವಿಜುಗೌಡ ಪಾಟೀಲ ಹೇಳಿದರು.‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ತಾಂತ್ರಿಕ ತೊಂದರೆಯಿಂದ ಬರಲಾಗಲಿಲ್ಲ. ಯಾವುದೇ ಒತ್ತಡದಿಂದ ನಾನು ಉದ್ದೇಶಪೂರ್ವಕವಾಗಿ ತಪ್ಪಿಸಿಲ್ಲ. ವಿಜುಗೌಡರನ್ನು ವಿಧಾನ ಪರಿಷತ್‌ಗೆ ನಾಮಕರಣ ಮಾಡಲಾಗುವುದು. ಇದರಲ್ಲಿ ಯಾವುದೇ ಸಂದೇಹ ಬೇಡ. ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ನೇತೃತ್ವವನ್ನೂ ಅವರಿಗೇ ವಹಿಸಲಾಗುವುದು’ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.‘58 ಸಾವಿರ ಮತ ನೀಡಿ ನನ್ನ ವೈಯಕ್ತಿಕ ಬೆಳವಣಿಗೆಗೆ ಕಾರಣರಾದ ಮತದಾರರ ಮನವಿಗೆ ನಾನು ತಲೆಬಾಗಲೇಬೇಕಾಗಿತ್ತು. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಲ್ಲಿ ನನಗೆ ಅತ್ಯಂತ ವಿಶ್ವಾಸವಿದೆ. ನಾನು ಜೆಡಿಎಸ್‌ ಬಿಡುವುದಿಲ್ಲ’ ಎಂದು ವಿಜುಗೌಡ ಸ್ಪಷ್ಟಪಡಿಸಿದರು.ಮುಖಂಡರಾದ ಶಿವನಗೌಡ ಪಾಟೀಲ, ಎಂ.ಆರ್. ಪಾಟೀಲ, ದಾನಪ್ಪ ಕಟ್ಟಿಮನಿ, ಸಿದ್ದು ಕಾಮತ, ಕೌಸರ ಶೇಖ್, ಎಂ.ಎ. ಕಾಲೇಭಾಗ, ದೇವಾನಂದ ಚವ್ಹಾಣ ಇತರರು ಸಭೆಯಲ್ಲಿದ್ದರು.ಆ ನಂತರ ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ ಅವರ ಮನೆಗೆ ತೆರಳಿದ ಕುಮಾರಸ್ವಾಮಿ, ಜೆಡಿಎಸ್‌ಗೆ ವಾಪಸ್ಸಾಗುವಂತೆ ಮನವಿ ಮಾಡಿದರು.‘ಕಳೆದ ಚುನಾವಣೆಯಲ್ಲಿ ಮುದ್ದೇಬಿಹಾಳದಿಂದ ನನಗೆ ಜೆಡಿಎಸ್‌ ಟಿಕೆಟ್‌ ನೀಡಲಿಲ್ಲ. ನೀವೆಲ್ಲ ಸೌಜನ್ಯಕ್ಕೂ ನನ್ನೊಂದಿಗೆ ಚರ್ಚಿಸಲಿಲ್ಲ. ಇದರಿಂದ ಮನನೊಂದು ನನ್ನ ಬೆಂಬಲಿಗರ ಒತ್ತಡದ ಕಾರಣ ಬೇರೆ ಪಕ್ಷದಿಂದ ಸ್ಪರ್ಧಿಸಬೇಕಾಯಿತು’ ಎಂದು ವಿಮಲಾಬಾಯಿ ಅಸಮಾ­ಧಾನ ವ್ಯಕ್ತಪಡಿಸಿದರು. ಆದರೆ, ಜೆಡಿಎಸ್‌ಗೆ ಮರಳುವ ಬಗ್ಗೆ ಅವರು ಯಾವುದೇ ಖಚಿತ ಮಾಹಿತಿ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.ಅಭ್ಯರ್ಥಿ ಆಕಾಂಕ್ಷಿ: ‘ವಿಜಾಪುರ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ ಚಿಕ್ಕವೆಂಕಟಪ್ಪ ಅವರೂ ಕುಮಾರಸ್ವಾಮಿ ಅವರ ಜೊತೆಗಿದ್ದರು. ವಿಜಾಪುರ ಮೀಸಲು ಕ್ಷೇತ್ರದ ಟಿಕೆಟ್‌ನ್ನು ಅವರಿಗೆ ನೀಡಲು ಕುಮಾರಸ್ವಾಮಿ ಚಿಂತನೆ ನಡೆಸಿರುವ ಸಾಧ್ಯತೆ ಇದೆ. ಕುಮಾರಸ್ವಾಮಿ ಅವರ ಈ ಭೇಟಿಯ ಸಮಯದಲ್ಲಿ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಮನಗೂಳಿ ಉಪಸ್ಥಿತರಿರಲಿಲ್ಲ’ ಎಂದು ಹೆಸರು ಬಹಿರಂಗ ಪಡಿಸಲು ಒಲ್ಲದ ಜೆಡಿಎಸ್‌ ಮುಖಂಡರೊಬ್ಬರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.