ಬುಧವಾರ, ಏಪ್ರಿಲ್ 14, 2021
24 °C

ವಿಜೃಂಭಣೆಯ ಮಹಾಕುಂಭಾಭಿಷೇಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿ.ನರಸೀಪುರ: 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುವ ಇಲ್ಲಿನ ಪುರಾತನ ಶ್ರೀಗುಂಜಾನರಸಿಂಹಸ್ವಾಮಿ ದೇವಾಲಯದ ಮಹಾಕುಂಭಾಭಿಷೇಕ ಬುಧವಾರ ವಿಜೃಂಭಣೆ ಯಿಂದ ನೆರವೇರಿತು. ಕಳೆದ ಮಾರ್ಚ್ 5 ರಿಂದ ಮಹಾ ಕುಂಭಾಭಿಷೇಕದ ಅಂಗವಾಗಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಹಾಕುಂಭಾಭಿಷೇಕದ ಕೊನೆಯ ದಿನವಾದ ಬುಧವಾರ ಪಂಚ ಕುಂಭಗಳನ್ನು ಸ್ಥಾಪಿಸಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾಂಪ್ರಾದಾಯಿಕ ಪೂಜೆ ಸಲ್ಲಿಸಲಾಯಿತು.ದೇವಾಲಯದ ಮುಂಭಾಗದಲ್ಲಿ ನಿರ್ಮಿಸಿರುವ ಹೋಮ ಯಾಗ ಶಾಲೆಯಲ್ಲಿ ಸ್ವಸ್ತಿಪುಣ್ಯಾಹ ವಾಚನ, ಕುಂಭಾರಾಧನೆ, ನಿತ್ಯ ಹೋಮ. ಪ್ರಧಾನ ಹೋಮ, ಜಯಾದಿ, ಇಂದ್ರಾದಿ, ಧಾತಾದಿ ಹೋಮಗಳು, ಮಹಾ ಪೂರ್ಣಾಹುತಿ, ಸದ್ಮ ಪ್ರದಕ್ಷಿಣೆ. ಮಹಾ ಕುಂಭಾತ್ ಜೀವ ಕಳಾಹನೆ, ಧ್ವಜಾರೋಹಣ, ದೇವತಾಹೋಮ,  ಮಹಾಮಂಗಳಾರತಿ ಬ್ರಹ್ಮರಾಷ್ಟ್ರಾರ್ಶಿವಾದ, ಫಲ ಮಂತ್ರಾಕ್ಷತೆ ಪೂಜಾ ಪುನಸ್ಕಾರಗಳು ನಡೆದವು.ಧಾರ್ಮಿಕ ದತ್ತಿ ಇಲಾಖೆಯ ಪಂಡಿತರಾದ ವಿದ್ವಾನ್ ಅಗರಂ ರಘುನಾಥಭಟ್ಟರ ನೇತೃತ್ವದಲ್ಲಿ ಶ್ರೀನಿಧಿ, ರಾಜಗೋಪಾಲ್ ಭಟ್, ಎಸ್.ರಾಮನಾಥ್, ಬಿಳಿಗಿರಿರಂಗನ ಬೆಟ್ಟದ ಗೋಪಾಲ ನರಸಿಂಹಸ್ವಾಮಿ, ತಿರುಪತಿ ತಿರುಮಲ  ದೇವಾಲಯದ ಜನಗಟ್ಟಿ ಲಕ್ಷ್ಮೀ ನರಸಿಂಹಚಾರ್ಯ ಸಹಯೋಗದಲ್ಲಿ ವಿಕೃತಿ ನಾಮ ಸಂವತ್ಸರದ ಪಾಲ್ಗುಣ ಶುಕ್ಲ ಪಂಚಮಿ ಅಶ್ವಿನಿ ನಕ್ಷತ್ರದ ಉದಯಾದಿ 12.10 ರಿಂದ 12.30 ಗಂಟೆ ಸಮಯದ ಶುಭ ಮುಹೂರ್ತದಲ್ಲಿ ಅಷ್ಟಬಂಧನ ಮಹಾಪ್ರೋಕ್ಷಣೆ ಮಹಾ ಕುಂಭಾಭಿಷೇಕ ಹಾಗೂ ವಿಶೇಷವಾಗಿ ಹೆಲಿಕಾಪ್ಟರ್‌ನಿಂದ ದೇವಾಲಯದ ರಾಜ ಗೋಪುರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಪಟ್ಟಣದ ಸೇರಿದಂತೆ ತಾಲ್ಲೂಕು, ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಭಕ್ತಾದಿಗಳು ಈ ಮಹಾಕುಂಭಾಭಿಷೇಕದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ರಾಜ್ಯದ ಹೊರ ದೇವಾಲಯಗಳಿಂದ ಆಗಮಿಸಿದ್ದ ಅರ್ಚಕರು ಇಲ್ಲಿ ಬಂದು ಪುಣ್ಯಾಹ ವಾಚನ, ವಾಸ್ತು, ಸರ್ವ ದೈವತ್ವ ಹೋಮಗಳು, ನಾರಸಿಂಹ ಮೂಲ ಮಂತ್ರ ಹೋಮ, ಮಹಾಸುದರ್ಶನ ಹೋಮ, ಸಂಜೆ ಮಹಾಶಾಂತಿ, ಮೂರ್ತಿ ಹೋಮ ಸೇರಿದಂತೆ ಇನ್ನಿತರ ಪೂಜಾ ಕಾರ್ಯಗಳನ್ನು ಈ ಮಹಾಭಿಷೇಕ ಉತ್ಸವದಲ್ಲಿ ಬುಧವಾರ ನೆರವೇರಿಸಿದ್ದರು. ಈ ದೇವಾಲಯದ ಜೀರ್ಣೋದ್ಧಾರದ ಪ್ರಮುಖ ರೂವಾರಿ ಅನಿವಾಸಿ ಭಾರತೀಯ ಡಾ.ಎನ್.ವಿ.ರಾಮಾನುಜಂ  ಅಯ್ಯಂಗಾರ್ ಹಾಗೂ ಅವರ ಕುಟುಂಬ ವರ್ಗ, ಅನೇಕ ಅಯ್ಯಂಗಾರ್ ಸಮುದಾಯದ ಬಂಧುಗಳು ಈ ಉತ್ಸವದಲ್ಲಿ ಪಾಲ್ಗೊಂಡರು. ಮಹಾಕುಂಭಾಭೀಷೇಕದ ಅಂಗವಾಗಿ ಪಟ್ಟಣದ ಅನೇಕ ಶಾಲೆಗಳಿಗೆ ರಜೆ ನೀಡಲಾಗಿತ್ತು. ಪಟ್ಟಣದ ಕೆಲವು  ಅಂಗಡಿಗಳನ್ನು ಬಂದ್ ಮಾಡಿ ಜನರು ಉತ್ಸವದಲ್ಲಿ ಪಾಲ್ಗೊಂಡರು.ಅಭಿಷೇಕದ ನಂತರ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅನುಮತಿ ನೀಡಲಾಯಿತು. ಪಟ್ಟಣದ ಜನರು ದೇವರ ದರ್ಶನಕ್ಕೆ ಸಾಲು ಸಾಲಾಗಿ ಸಾಗುತ್ತಿದ್ದರು. ಪಟ್ಟಣದಲ್ಲಿ ಹಬ್ಬದ ವಾತವರಣ ನಿರ್ಮಾಣವಾಗಿತ್ತು. ದೇವಾಲಯದ ಒಳಾವರಣ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿತ್ತು. ಶ್ರೀಮಹಾಲಕ್ಷ್ಮೀ ಸಮೇತ ಗುಂಜಾನರಸಿಂಹಸ್ವಾಮಿಯ ವಿಗ್ರಹಕ್ಕೆ ಚಿನ್ನಾಭರಣ ವಜ್ರಗಳಿಂದ ಅಲಂಕೃತಗೊಳಿಸಲಾಗಿತ್ತು.ಇದುವರೆವಿಗೂ ಸರ್ಕಾರ ಅಥವಾ ಜನಪ್ರತಿನಿಧಿಗಳು ಮಾಡಲಾಗದ ದೇವಾಲಯದ ಜೀರ್ಣೋದ್ದಾರವನ್ನು ತಿ.ನರಸೀಪುರ ಮೂಲದ ಅನಿವಾಸಿ ಭಾರತೀಯ ವೈದ್ಯ ಡಾ.ಎನ್.ವಿ. ರಾಮಾನುಜಂ ಅಯ್ಯಂಗಾರ್ ಹಾಗೂ ಅವರ ಕುಟುಂಬ ವರ್ಗ ದೈವ ಪ್ರೇರಣೆಯಿಂದ ತಮ್ಮ ಸ್ವಂತ ಖರ್ಚಿನಲ್ಲಿ 1.4 ಕೋಟಿ ರೂಪಾಯಿಗಿದ್ದ ಅಂದಾಜು ವೆಚ್ಚವನ್ನು 2.5 ಕೋಟಿ ರೂಪಾಯಿಯವರೆಗೆ ವಿಸ್ತರಿಸಿ ದೇವಾಲಯದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ ಪಡಿಸಿರುವುದನ್ನು ಕಂಡು ಜನರು ಡಾ.ರಾಮಾನುಜಂ ಅವರ ಕುಟುಂಬವನ್ನು ಅಪಾರವಾಗಿ ಅಭಿನಂದಿಸಿದರು.ಈ ಜೀರ್ಣೋದ್ಧಾರಕ್ಕೆ ಅನುಮತಿ ದೊರಕಿಸುವ ದಿಕ್ಕಿನಲ್ಲಿ ಶ್ರಮಿಸಿದ್ದ ಅಂದಿನ ಮೈಸೂರು ಜಿಲ್ಲಾಧಿಕಾರಿ ಪ್ರಸ್ತುತ  ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಸೆಲ್ವಕುಮಾರ್, ಪ್ರಾಚ್ಯವಸ್ತು ಇಲಾಖೆಯ ನಿರ್ದೇಶಕ  ಡಾ.ಆರ್.ಗೋಪಾಲ್, ಡಾ.ಜಿ.ಅಶ್ವಥ್ ನಾರಾಯಣ್, ತಹಶೀಲ್ದಾರ್ ವಿ.ಆರ್.ಶೈಲಜಾ, ಡಾ.ಎನ್.ಎಸ್.ಸುಂದರಾಜನ್, ಕಂತೆಕಟ್ಟೆ ಗೋಪಾಲಸ್ವಾಮಿ, ಪಟ್ಟಣದ ಎಲ್ಲಾ ಸಮುದಾಯಗಳ ಮುಖಂಡರು, ಸಾರ್ವಜನಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರು ಈ ಕುಂಭಾಭಿಷೇಕದಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.