ಶನಿವಾರ, ಮೇ 15, 2021
22 °C

ವಿಡಂಬನೆಯ ಚಿತ್ರಗಳು

- ನೇಸರ Updated:

ಅಕ್ಷರ ಗಾತ್ರ : | |

ವಿಡಂಬನೆಯ ಚಿತ್ರಗಳು

ರಂಜಿಸುವುದೇ ಚಲನಚಿತ್ರ ಮಾಧ್ಯಮದ ಮೊದಲ ಆದ್ಯತೆ ಎನ್ನಿಸಿಕೊಂಡಿದ್ದರೂ ಅದಕ್ಕೆ ಹಲವು ಆಯಾಮಗಳಿವೆ. ದೇಹಭಾಷೆ, ಸಂಭಾಷಣೆಗಳ ಮೂಲಕ ಪ್ರೇಕ್ಷಕರಿಗೆ ತೆಳುಹಾಸ್ಯದ ಗುಳಿಗೆಗಳನ್ನು ಪರದೆಯ ಮೇಲೆ ನೀಡುತ್ತಾ ಬಂದಿರುವುದು ಭಾರತೀಯ ಚಲನಚಿತ್ರ ಚರಿತ್ರೆಯ ನೂರು ವರ್ಷಗಳಲ್ಲಿ ಬಹುತೇಕ ಚಿತ್ರಗಳಲ್ಲಿ ಕಾಣಬಹುದಾದ ಅಂಶ. ತಮಾಷೆಯ ಜೊತೆಯ ವಿಡಂಬನೆಯ ಸನ್ನಿವೇಶಗಳೂ ಚಲನ ಚಿತ್ರಗಳಲ್ಲಿ ಹಾದು ಹೋಗುವುದುಂಟು. ಕೆಲವು ಚಿತ್ರಗಳ ಒಟ್ಟಾರೆ ಉದ್ದೇಶವೂ ಪರಿಸ್ಥಿತಿಯನ್ನು, ವ್ಯಕ್ತಿಗಳನ್ನು ವಿಡಂಬನೆಗೆ ಗುರಿಪಡಿಸುವುದೂ ಆಗಿದೆ.ಜಗತ್ತಿನ ಮಹೋನ್ನತ ಕಲಾವಿದ ಚಾರ್ಲಿ ಚಾಪ್ಲಿನ್ ತಮ್ಮ ಬಹುತೇಕ ಚಲನಚಿತ್ರಗಳಲ್ಲಿ ಪ್ರೇಕ್ಷಕರನ್ನು ಕೇವಲ ನಗಿಸಿಲ್ಲ. ಅನೇಕ ವಿಚಾರಗಳ ಬಗ್ಗೆ ಯೋಚಿಸುವಂತೆ ಮಾಡುತ್ತಾರೆ. ಜೊತೆಗೆ ಜೀವ ವಿರೋಧಿ ನಡೆಗಳತ್ತ ವ್ಯಂಗ್ಯ ಬೀರುತ್ತಾರೆ. ನೋಡುಗನ ಮನದ ಕದ ತಟ್ಟುತ್ತಾರೆ.ಭಾರತೀಯ ಚಿತ್ರ ಭೂಮಿಯಲ್ಲಿಯೂ ವಾಸ್ತವ ಸ್ಥಿತಿಯನ್ನು ಪ್ರೇಕ್ಷಕರ ಮುಂದಿಡುವ, ತಪ್ಪು ನಿರ್ಧಾರಗಳನ್ನು ಅಣಕಿಸುವ ಹಲವಾರು ಚಿತ್ರಗಳು ತಯಾರಾಗಿವೆ. ಪ್ರಮುಖ ನಿರ್ದೇಶಕರ ಚಿತ್ರಗಳಲ್ಲಿ ಇಂತಹ ಹತ್ತಾರು ಸನ್ನಿವೇಶಗಳು ಬಿಂಬಿತವಾಗಿವೆ.

ಪರಶುರಾಮ್ ಎಂಬ ಗುಪ್ತನಾಮದಿಂದ ರಾಜಶೇಖರ ಬಸು ರಚಿಸಿದ ವಿಡಂಬನಾ ಕೃತಿಯನ್ನು ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಅವರು `ಪರಶ್ ಪಥರ್' ಹೆಸರಿನಲ್ಲಿ ಚಿತ್ರವಾಗಿಸಿದರು. ಚಿತ್ರ ಮಾಧ್ಯಮಕ್ಕೆ ಈ ವಿಡಂಬನಾ ಕೃತಿಯನ್ನು ಅಳವಡಿಸುವುದು ತುಂಬಾ ತ್ರಾಸದಾಯಕವಾಗಿದ್ದರೂ ಅದನ್ನು ಸಮರ್ಥವಾಗಿ ಹಿಡಿದಿಡುವ ಮೂಲಕ ಸತ್ಯಜಿತ್ ರೇ ಹೊಸದೊಂದು ಹಾದಿಯಲ್ಲಿ ನಡೆದರು.ಸಾಮಾಜಿಕ ಓರೆಕೋರೆಗಳನ್ನು ತಮ್ಮ ಅನೇಕ ಚಿತ್ರಗಳಲ್ಲಿ ಬಿಂಬಿಸಿದ ರೇ ಮೂಢನಂಬಿಕೆಗಳ ವಿರುದ್ಧವೂ ದನಿ ಎತ್ತಿದರು. ಅವರ `ಮಹಾಪುರುಷ್' ಇದಕ್ಕೊಂದು ನಿದರ್ಶನ. ತಮ್ಮ ತಾತ ಉಪೇಂದ್ರ ಕಿಶೋರ್ ಅವರ ಗೂಫೆ ಗಾನೆ, ಭಾಫ ಬಾನೆ ಕೃತಿಯನ್ನು ರೇ ಚಿತ್ರವನ್ನಾಗಿ ಸಿದ್ಧಗೊಳಿಸುವಾಗ ದೇವಾನು ದೇವತೆ ರಾಕ್ಷಸರ ನಡುವೆ ಸನ್ನಿವೇಶಗಳಲ್ಲಿ ಯುದ್ಧ ವಿರೋಧಿ ಅಂಶಗಳನ್ನು ವಿಶಾಲಾರ್ಥದಲ್ಲಿ ನಿರೂಪಿಸಿದ್ದಾರೆ.

ಸುತ್ತಣ ನಡೆಯುವ ಆಗುಹೋಗುಗಳನ್ನು ಪಾತ್ರಧಾರಿಗಳ ಮೂಲಕ ವಿಡಂಬಿಸುವ ರೇ ಸತ್ಯದ ಪದರುಗಳನ್ನು ತೆಗೆದಿರಿಸಿದ್ದಾರೆ. ಮಹಾಯುದ್ಧಗಳನ್ನು ವಿರೋಧಿಸುವ ಒಳನೋಟಗಳನ್ನು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ ರೇ.

ಮಾನವೀಯತೆ ನೆಲಗಟ್ಟಿನ ಮೇಲೆ ರೇ ತಮ್ಮ ಚಿತ್ರಗಳಲ್ಲಿ ಅರ್ಥಗರ್ಭಿತ ವಿಡಂಬನೆಗಳನ್ನು ಅಳವಡಿಸಿದರೆ ಇನ್ನೊಬ್ಬ ಪ್ರಸಿದ್ಧ ಚಿತ್ರ ನಿರ್ದೇಶಕ ಮೃಣಾಲ್‌ಸೇನ್ ರಾಜಕೀಯ ಸಿದ್ಧಾಂತದ ತಳಹದಿಯಲ್ಲಿ ತಯಾರಿಸಿದ ಚಿತ್ರಗಳಲ್ಲಿ ಅಂತರ್ಗತ ವಿಡಂಬನೆಯನ್ನು ಬಿಂಬಿಸಿದ್ದಾರೆ.ಹಾಸ್ಯ ವಿಪರ್ಯಾಸಗಳ ಸುತ್ತ ಸೇನ್ ಕಟ್ಟಿದ `ಭುವನ್ ಶೋಮ್' ಮಾನವೀಯ ಸಂಬಂಧಗಳನ್ನು ಸಂಸ್ಕೃತಿಯ ಸಂಘರ್ಷಗಳನ್ನು ನಿರೂಪಿಸುವುದರೊಂದಿಗೆ ಪ್ರೇಮ ಕಥನವನ್ನು ಹೇಳಿತು. ಸಂಸ್ಕೃತಿ ಭಿನ್ನಾಭಿಪ್ರಾಯಗಳು ಹೊಂದಿರುವ ಒಳಸುಳಿಗಳು ಸರಳ ಸೂತ್ರಗಳಿಂದ ಬಗೆಹರಿಯುವಂತದ್ದಲ್ಲ ಎನ್ನುತ್ತಲೇ ಇದನ್ನು ವ್ಯಂಗ್ಯ ಮಾಡಿದರು ಮೃಣಾಲ್‌ಸೇನ್. ಕುಡಿಯುವ ನೀರಿನ ಸಮಸ್ಯೆಯನ್ನು ಮಾನವೀಯ ನೋಟಗಳೊಂದಿಗೆ ಕೆ. ಬಾಲಚಂದರ್ `ತಣ್ಣೀರ್ ತಣ್ಣೀರ್' ಚಿತ್ರವನ್ನು ನಿರೂಪಿಸಿ ಪ್ರಭುತ್ವದ ಹುಳುಕುಗಳನ್ನು ಹಂಗಿಸಿದರೆ, ಹೃಷಿಕೇಶ್ ಮುಖರ್ಜಿ ಅವರಂತೂ ತಮ್ಮೆಲ್ಲ ಚಿತ್ರಗಳಲ್ಲಿ ವಿಡಂಬಿಸುವ ಗುಣವನ್ನು ಚಾಲ್ತಿಯಲ್ಲಿಟ್ಟಿದ್ದರು.ಗುಡ್ಡಿ, ಚುಪ್ಕೆ ಚುಪ್ಕೆ, ಕೂಬ್‌ಸೂರತ್ ಮೊದಲಾದ ತಮ್ಮ ನಿರ್ದೇಶನದ ಚಿತ್ರಗಳಲ್ಲಿ ಹೃಷಿಕೇಶ್ ಮುಖರ್ಜಿ ಮಾನವೀಯ ಸಂಬಂಧಗಳನ್ನು ಅರಿಯುವ ನಿಟ್ಟಿನಲ್ಲಿ ವಿಡಂಬನೆಯ ಅಂಶಗಳನ್ನು ಹರಿಯಬಿಟ್ಟಿದ್ದಾರೆ. ಅವರ `ಗೋಲ್‌ಮಾಲ್' ಚಿತ್ರದಲ್ಲಿ ಮುಗ್ಧಮನಸ್ಸಿನ ಪಾತ್ರಧಾರಿಗಳಿಂದ ಹಾಸ್ಯ ದೃಶ್ಯಗಳನ್ನು ಶಕ್ತಿಯುತ ವಿಡಂಬನೆಯಾಗಿ ಹೊರಹೊಮ್ಮುವಂತೆ ಮಾಡಿದ್ದಾರೆ.

ಗಂಭೀರವಾದ ವಿಷಯಗಳನ್ನು ಭಿನ್ನಶೈಲಿಯಲ್ಲಿ ತೆರೆದಿಟ್ಟ ಶ್ಯಾಮ್ ಬೆನಗಲ್ ಅವರ ಅನೇಕ ಚಿತ್ರಗಳಲ್ಲಿ ವಿಡಂಬನೆಯ ಅಂಶಗಳು ಸಹಜವೆಂಬಂತೆ ಹಾದು ಹೋಗುತ್ತವೆ ಅದಕ್ಕೆ ನಿಶಂತ್, ಮಂಥನ್, ಜುಬೇದ ಕೆಲವು ಉದಾಹರಣೆಗಳಷ್ಟೇ.ಗಿರೀಶ್ ಕಾಸರವಳ್ಳಿ, ಎನ್. ಲಕ್ಷ್ಮೀನಾರಾಯಣ್, ಮಣಿರತ್ನಂ, ಗೌತಮ್ ಘೋಷ್, ಪ್ರಿಯದರ್ಶನ್, ಆಡೂರ್ ಗೋಪಾಲಕೃಷ್ಣನ್, ಅರವಿಂದನ್ ಹೀಗೆ ಹಲವು ಖ್ಯಾತನಾಮ ನಿರ್ದೇಶಕರು ವಿಡಂಬನೆಯ ಅಂಶಗಳನ್ನು ತಮ್ಮ ಚಿತ್ರಗಳ ಚೌಕಟ್ಟಿನಲ್ಲಿ ಅಳವಡಿಸಿಕೊಂಡಿದ್ದರೆ ಇನ್ನೂ ಕೆಲವರು ಇಡೀ ಚಿತ್ರಗಳನ್ನು ಇಂತಹ ಪ್ರಯೋಗಗಳಿಗಾಗಿ ಬಳಸಿಕೊಂಡಿರುವ ಸಂಗತಿಗಳೂ ಇವೆ.ವ್ಯಂಗ್ಯಚಿತ್ರಕಾರರಾಗಿದ್ದ ಬಸುಭಟ್ಟಾಚಾರ್ಯ ಚಿತ್ರ ಜಗತ್ತಿನಲ್ಲಿ ತಮ್ಮ ಹೆಜ್ಜೆಗಳ ಮೂಡಿಸುವ ಸಂದರ್ಭದಲ್ಲಿ ತಮ್ಮ ಲೇಖನಿಯಿಂದ ಬಿಚ್ಚಿಕೊಳ್ಳುವ ವಿಡಂಬನೆಯ ನೋಟಗಳನ್ನು ಅಳವಡಿಸಲು ಹಿಂದೆ ಮುಂದೆ ನೋಡಲಿಲ್ಲ. ದೃಶ್ಯಗಳ ಮುಖೇನ ಇವರ ವ್ಯಂಗ್ಯದ ತೀಕ್ಷ್ಣತೆ ಮೂಡಿದಂತೆ ಕಾಣದಿದ್ದರೂ ಪಾತ್ರಗಳ ನಡವಳಿಕೆಗಳಲ್ಲಿ ಅವು ನಿಶ್ಚಳವಾಗಿವೆ. ಬಸು ಅವರ `ಲಾಕೊಂಕಾ ಕೀ ಬಾತ್' ಜನತೆಯ ಆಶೋತ್ತರಗಳನ್ನು ಸೂಕ್ಷ್ಮವಾಗಿ ಮುಂದಿಟ್ಟರೆ ಅವರ ಬಹುತೇಕ ಚಿತ್ರಗಳೂ ಅದೇ ಕೆಲಸವನ್ನು ಮಾಡಿವೆ.ರಮ್ಯ ಗೀತ ರಚನೆಗಳಿಂದ ಹೆಸರಾಗಿರುವ ಗುಲ್ಜಾರ್ ಗಂಭೀರ ವಿಚಾರಗಳನ್ನು ತಮ್ಮ ಚಿತ್ರಗಳ ಮೂಲಕ ಹೇಳಿದ್ದಾರೆ. ವ್ಯಕ್ತಿ ಸಹಜ ತಪ್ಪುಗಳನ್ನು ಎತ್ತಿ ತೋರುವ ಅದಕ್ಕೆ ಪರಿಹಾರ ಕಂಡುಕೊಳ್ಳುವ ನಾಲ್ಕಾರು ಘಟನೆಗಳು ಗುಲ್ಜಾರ್ ಅವರ ಚಿತ್ರಗಳಲ್ಲಿ ಮೂಡಿಬಂದಿವೆ. ಷೇಕ್ಸ್ ಫಿಯರ್ ಅವರ ಕೃತಿ ಆಧರಿಸಿದ `ಅಂಗೂರ್' ಅಂತಹ ಚಿತ್ರಗಳಲ್ಲೊಂದು.

ಸಾಮಾಜಿಕ ಧಾರ್ಮಿಕ ಜನಾಂಗೀಯ ಸಮಸ್ಯೆಗಳನ್ನು ಜೀವ ವಿರೋಧಿ ಘಟನೆಗಳನ್ನು ಪರಿಣಾಮಕಾರಿಯಾಗಿ ಸಲ್ಯುಲಾಯ್ಡ ಮೇಲೆತರುವ ಹಾದಿಯಲ್ಲಿ ನಡೆದಿರುವ ನಡೆಯುತ್ತಿರುವ ನಿರ್ದೇಶಕರ ಬಹುತೇಕ ಚಿತ್ರಗಳು ವಿಡಂಬನೆಯ ಅಂಶಗಳನ್ನು ಸಹಜವೆಂಬಂತೆ ತಮ್ಮದಾಗಿಸಿಕೊಂಡಿವೆ. ಜನಪ್ರಿಯ ವಾಣಿಜ್ಯ ಚಿತ್ರಗಳಲ್ಲೂ ಸಮಾಜದ ಅಂಕು ಡೊಂಕುಗಳನ್ನು ವಿಡಂಬನಾತ್ಮಕವಾಗಿ ಅಳವಡಿಸುವ ಪ್ರವೃತ್ತಿ ಕೂಡ ಪ್ರಚಲಿತದಲ್ಲಿದೆ.ಮೇಲ್ನೋಟಕ್ಕೆ ಹಾಸ್ಯವೆನ್ನಿಸಿದರೂ ಈ ವಿಷಯಗಳ ಆಳದಲ್ಲಿ ಅಡಗಿರುವ ವಾಸ್ತವವತೆಯನ್ನು ಸೃಜನಶೀಲ ಮಾರ್ಗಗಳ ಮೂಲಕ ಪ್ರೇಕ್ಷಕರಿಗೆ ತಲುಪಿಸಲು ನಿರ್ದೇಶಕರು ಪ್ರಯತ್ನಿಸುತ್ತಿರುವುದು ನಿರಂತರವಾಗಿ ಕಂಡು ಬಂದಿರುವ ಅಂಶ.

ನಕ್ಕು ನಲಿಯುವ ಹಾಸ್ಯ ಸನ್ನಿವೇಶಗಳನ್ನು ಪ್ರೇಕ್ಷಕನ ಸ್ಮೃತಿ ಪಟಲದಿಂದ ಬೇಗ ಮರೆಯಾದರೂ ವಿಡಂಬನೆಯ ಮೊನಚು ನೋಟಗಳು ನೋಡುಗನ ಮನಸ್ಸಿನಾಳಕ್ಕೆ ಇಳಿಯುತ್ತವೆ. ಹಾಗಾಗಿ ವಿಡಂಬನಾತ್ಮಕ ಕ್ರಿಯೆ ಚಲನಚಿತ್ರ ಮಾಧ್ಯಮದಲ್ಲಿ ಎಂದಿಗೂ ಜೀವಂತ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.