ಗುರುವಾರ , ಮೇ 19, 2022
23 °C

ವಿದೇಶಿ ಪ್ರಜೆಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಅಕ್ರಮವಾಗಿ ಧರ್ಮಪ್ರಚಾರದಲ್ಲಿ ತೊಡಗಿದ್ದರು ಎನ್ನಲಾದ ಹದಿನೈದು ವಿದೇಶಿ ಪ್ರಜೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಒತ್ತಾಯಿಸಿದ್ದಾರೆ.ಪ್ರವಾಸಿ ವೀಸಾ ಹೊಂದಿದ್ದ ಇಜಿಪ್ತ್, ಯಮೆನ್ ಹಾಗೂ ಜೋರ್ಡಾನ್ ದೇಶದ ಹದಿನೈದು ಜನರ ತಂಡವು ಜಿಲ್ಲೆಯ ಮಸೀದಿಗಳು ಹಾಗೂ ಕೆಲ ಸಂಘ-ಸಂಸ್ಥೆಗಳಲ್ಲಿ ಧಾರ್ಮಿಕ ಉಪನ್ಯಾಸ ನೀಡುತ್ತಿದೆ ಎಂಬ ಆರೋಪದ ಮೇರೆಗೆ ವಿದೇಶಿ ಪ್ರಜೆಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.ವಿದೇಶಿ ಧರ್ಮಪ್ರಚಾರಕರ ಬಂಧನ ಸುದ್ದಿ ತಿಳಿಯುತ್ತಿದ್ದಂತೆ ನವನಗರದ ಶಹರ ಠಾಣೆಯ ಸಿಪಿಐ ಕಚೇರಿ ಎದುರು ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದರು.

ಆರೋಪಿಗಳು ಧರ್ಮ ಪ್ರಚಾರದಲ್ಲಿ ತೊಡಗಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಸಾಬೀತಾಗಿರುವುದರಿಂದ ಕಠಿಣ ಕ್ರಮಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಅಶೋಕ ಮುತ್ತಿನಮಠ ಆಗ್ರಹಿಸಿದರು.ಒಂದು ವೇಳೆ ಪೊಲೀಸ್ ಅಧಿಕಾರಿಗಳು ಯಾರದೋ ಒತ್ತಡಕ್ಕೆ ಮಣಿದು ಸಾದಾ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಖುಲಾಸೆ ಮಾಡಿದರೆ ಹೋರಾಟ ನಡೆಸಲಾಗುವುದು ಎಂದು ಮುತ್ತಿನಮಠ ‘ಪ್ರಜಾವಾಣಿ’ಗೆ ತಿಳಿಸಿದರು.ತಪಾಸಣೆಗೆ ಆಗ್ರಹ: ಜಿಲ್ಲೆಯ ಪ್ರಾರ್ಥನಾ ಮಂದಿರಗಳಲ್ಲಿ ಅಕ್ರಮವಾಗಿ ಧರ್ಮಪ್ರಚಾರ ಮಾಡುತ್ತಿರುವ ಆರೋಪಗಳು ಕೇಳಿಬರುತ್ತಿರುವುದರಿಂದ ಎಲ್ಲ ಪ್ರಾರ್ಥನಾ ಮಂದಿರಗಳನ್ನು ಪೊಲೀಸರು ತಪಾಸಣೆ ಮಾಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಯಂಕಂಚಿ, ದತ್ತು ಲೋನಾರೆ ಮತ್ತಿತರರು ಉಪಸ್ಥಿತರಿದ್ದರು.ಇಜಿಪ್ತ್‌ನ 2, ಜೋರ್ಡಾನ್ 6 ಹಾಗ ಯೆಮೆನ್ ದೇಶದ 5 ಪ್ರಜೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.ರಾತ್ರಿ 9.30ರವರೆಗೆ ವಿಚಾರಣೆ ಹಾಗೂ ಪ್ರಕರಣ ದಾಖಲು ಪ್ರಕ್ರಿಯೆ ನಡೆದಿದ್ದರಿಂದ ಆರೋಪಿಗಳ ಹೆಸರು ಗೊತ್ತಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.