ಭಾನುವಾರ, ಏಪ್ರಿಲ್ 11, 2021
27 °C

ವಿದ್ಯಾರ್ಥಿಗಳ ಬಂಧನ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ:  ಡಿಪ್ಲೊಮಾ ಕೋರ್ಸ್‌ನಲ್ಲಿ ತಾಂತ್ರಿಕ ಶಿಕ್ಷಣ ಮಂಡಳಿ ಅವೈಜ್ಞಾನಿಕ ನೀತಿ ಜಾರಿಮಾಡಲು ಮುಂದಾಗಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ, ಮುಖಂಡರ ಮೇಲೆ ಪೊಲೀಸರು ನಡೆಸಿರುವ ಲಾಠಿಪ್ರಹಾರ ಹಾಗೂ ದೌರ್ಜನ್ಯ ಖಂಡಿಸಿ ಪಟ್ಟಣದಲ್ಲಿ ಸಂಘಟನೆಯ ತಾಲ್ಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಲಹಳ್ಳಿ ಮಂಜುನಾಥ ಮಾತನಾಡಿ, ಡಿಪ್ಲೊಮಾ ಕೋರ್ಸ್‌ನ ಫಲಿತಾಂಶ ಪ್ರಕಟಿಸಿದ ಮಾರನೇ ದಿನವೇ ಅರ್ಹತೆಯ ಮಾನದಂಡ ಸುತ್ತೋಲೆ ಹೊರಡಿಸುವ ಮೂಲಕ ತಾಂತ್ರಿಕ ಶಿಕ್ಷಣ ಮಂಡಳಿ, ಬಹುಸಂಖ್ಯಾತ ವಿದ್ಯಾರ್ಥಿಗಳನ್ನು ತಾಂತ್ರಿಕ ಶಿಕ್ಷಣದಿಂದ ವಂಚಿಸುವ ಹುನ್ನಾರ ನಡೆಸಿದೆ. ತೀವ್ರ ಅವ್ಯವಸ್ಥೆಯ ಗೂಡಾಗಿರುವ ತಾಂತ್ರಿಕ ಶಿಕ್ಷಣವನ್ನು ಸರಿಪಡಿಸಲು ಸೋತುಹೋಗಿರುವ ಮಂಡಳಿ, ಸೂಪರ್ ಕ್ಯಾರಿಓವರ್‌ನಂತಹ ಪದ್ಧತಿಗಳನ್ನು ಕೈಬಿಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟ ಆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಂಧಿತ ವಿದ್ಯಾರ್ಥಿ ಮುಖಂಡರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಹಾಗೂ ಅವರ ಮೇಲೆ ಹೂಡಿರುವ ಮೊಕದ್ದಮೆಗಳನ್ನು ಕೈ ಬಿಡಬೇಕೆನ್ನುವುದು ಸೇರಿದಂತೆ ಪಾಲಿಟೆಕ್ನಿಕ್ ಕಾಲೇಜುಗಳಿಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ತಾಲ್ಲೂಕು ಕಚೇರಿಗೆ ಸಲ್ಲಿಸಿದರು.ಸಂಘಟನೆಯ ಮುಖಂಡರಾದ ದೇವೇಂದ್ರಪ್ಪ, ಸತೀಶ್ ನಾಯ್ಕ, ಚವಾಣ್ ಕುಮಾರ್, ಬೀರಪ್ಪ, ಪ್ರವೀಣ್, ಜಾನಕಿ, ಯರಿಸ್ವಾಮಿ, ವಿವಿಧ ಸಂಘಟನೆಯ ಮುಖಂಡರಾದ ಬೇವಿನಹಳ್ಳಿ ವೆಂಕಟೇಶ್, ವೈ. ಬಸವರಾಜ, ಎಲ್.ಬಿ. ಹಾಲೇಶನಾಯ್ಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.