ಭಾನುವಾರ, ಜನವರಿ 19, 2020
25 °C
ಸಿಇಟಿ ಪರೀಕ್ಷೆಯ ಪೂರ್ವಭಾವಿ ತರಬೇತಿ ಶಿಬಿರದಲ್ಲಿ ಡಾ.ಜಿ.ಎನ್‌.ಮಲ್ಲಿಕಾರ್ಜುನಪ್ಪ ಅಭಿಮತ

ವಿದ್ಯಾರ್ಥಿಗಳ ಹಿತವೇ ಶಿಕ್ಷಕರ ಗುರಿಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ವಿದ್ಯಾರ್ಥಿಗಳ ಹಿತ ಕಾಯುವುದರ ಜತೆಗೆ ಅವರು ಉತ್ತಮ ಬದುಕು ಕಟ್ಟಿಕೊಳ್ಳಲು ಶಿಕ್ಷಕರು ಹಾಗೂ ಶಾಲಾ–ಕಾಲೇಜುಗಳು ಮಹತ್ತರ ಪಾತ್ರ ವಹಿಸಬೇಕು ಎಂದು ಎಸ್‌ಜೆಎಂ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ತಿಳಿಸಿದರು.ನಗರದ ರೋಟರಿ ಬಾಲಭವನದಲ್ಲಿ ಜ್ಞಾನಧಾರ ಸಿಇಟಿ ತರಬೇತಿ ಕೇಂದ್ರ ಹಾಗೂ ಎಸ್‌ಕೆಆರ್ಎಂಎಸ್ ಪಿಯು ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಿಇಟಿ ಪರೀಕ್ಷೆಯ ಪೂರ್ವಭಾವಿ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಯಾವ ಶಿಕ್ಷಕ ತನ್ನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಮುಂದಾಗುತ್ತಾನೋ ಅದೇ ರೀತಿಯ ಶಿಕ್ಷಣವನ್ನು ಶಾಲೆಯಲ್ಲಿರುವ ವಿದ್ಯಾರ್ಥಿಗಳಿಗೆ ನೀಡಬೇಕು. ಆಗ ಮಾತ್ರ ಒಬ್ಬ ಉತ್ತಮ ಶಿಕ್ಷಕನಾಗಿ ವಿದ್ಯಾರ್ಥಿಗಳು ಉತ್ತಮ ಬದುಕು ಕಟ್ಟಿಕೊಳ್ಳಲು ನೆರವು ನೀಡಿದಂತಾಗುತ್ತದೆ ಎಂದರು.‘ನಮ್ಮಲಿನ ಶಿಕ್ಷಣ ವ್ಯವಸ್ಥೆಯಿಂದಾಗಿ ಕೆಲ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅದನ್ನು ವ್ಯವಸ್ಥೆಯ ನಿರಾಕರಣೆ ಎನ್ನಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಕ್ಷಣ ಪ್ರತಿಯೊಬ್ಬರ ಹಕ್ಕಾಗಿದ್ದು, ಎಲ್ಲರಿಗೂ ಲಭಿಸಬೇಕು’ ಎಂದು ಹೇಳಿದರು.ಸಿಇಟಿಯಲ್ಲಿನ ಅವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಈ ಪ್ರಕ್ರಿಯೆ ಸರಿಯಾಗಬೇಕು. ವಿದ್ಯಾರ್ಥಿಗಳು ಕೂಡಾ ಧೃತಿಗೆಡದೇ ಸ್ಪಷ್ಟವಾದ ಗುರಿಗಳನ್ನು ನಿಗಧಿ ಮಾಡಿಕೊಂಡು ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.ಬೆಂಗಳೂರು ವಿಜಯಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಎಸ್.ಎ. ಶ್ರೀಕಂಠ ಮಾತನಾಡಿ, ಸಿಬಿಎಸ್‌ಇ ಪಠ್ಯ ಶರಣ ಸಾಹಿತ್ಯವಿದ್ದಂತೆ, ಅದರಲ್ಲಿ ಎಲ್ಲಾ ವಿಷಯಗಳು ಅಡಗಿವೆ. ಆದರೆ, ಅದನ್ನು ವಿದ್ಯಾರ್ಥಿಗಳ ಮೇಲೆ ಹೇರಲಾಗಿದೆ. ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅನೇಕ ಮಕ್ಕಳಿಗೆ ಇದು ಕಷ್ಟವಾಗುತ್ತಿದೆ. ಅದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಮಕ್ಕಳಿಗೆ ಸಿಗುತ್ತಿಲ್ಲ ಎಂದು ವಿವರಿಸಿದರು.ಡಿಸೆಂಬರ್ ತಿಂಗಳು ಮುಗಿಯಲು ಕೆಲವೇ ದಿನಗಳಿದ್ದರೂ ಕೂಡಾ ಸಿಇಟಿಗೆ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಲು ಪಿಯು ಮಂಡಳಿ ಸಭೆ ಕರೆದಿಲ್ಲ. ಇದರಿಂದ ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳಲ್ಲಿ ಯಾವುದನ್ನು ಓದಬೇಕು ಎನ್ನುವ ಗೊಂದಲ ಕಾಡುತ್ತದೆ ಎಂದರು.ಜ್ಞಾನಕ್ಕಿಂತ ಮಿಗಿಲಾದ ವಸ್ತು ಮತ್ತೊಂದಿಲ್ಲ. ಅದು ನಮ್ಮನ್ನು ಕಡೆಯ ತನಕ ಕಾಯುತ್ತದೆ. ಶ್ರೀಮಂತಿಕೆ, ಹೊಟ್ಟೆ ತುಂಬಾ ಊಟ ಮಾಡುವುದು ನಮ್ಮ ಸಂಸ್ಕೃತಿಯಲ್ಲ. ಆದ್ದರಿಂದ ವಿದ್ಯಾರ್ಥಿಗಳಾಗಿದ್ದಾಗ ಶ್ರದ್ಧೆಯಿಂದ ಅಧ್ಯಯನ ಮಾಡುವ ಮೂಲಕ ಜ್ಞಾನವಂತನಾಗು, ವಿಶ್ವಕ್ಕೆ ಸರ್ವ ಶ್ರೇಷ್ಠನಾಗು ಎನ್ನುವುದಾಗಿ ನಮ್ಮ ಹಿರಿಯರು ಆಶೀರ್ವಾದ ಮಾಡುತ್ತಿದ್ದರು. ಈ ದಿಶೆಯಲ್ಲಿ ಸಾಧನೆಗೆ ಹೆಚ್ಚಿನ ಒಲವು ತೋರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ. ವೀರೇಶ್, ಪ್ರಾಧ್ಯಾಪಕ ಡಾ.ಜೆ. ಕರಿಯಪ್ಪ ಮಾಳಿಗೆ, ಎಸ್‌ಕೆಆರ್‌ಎಂಎಸ್ ಕಾಲೇಜಿನ ಪ್ರಾಂಶುಪಾಲ ತಿಪ್ಪೇಸ್ವಾಮಿ, ಪ್ರಾಧ್ಯಾಪಕ ವಿಜಯಕುಮಾರ್, ವಿಜಯ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಡಿ. ರಾಮಚಂದ್ರಪ್ಪ ಹಾಜರಿದ್ದರು.

ಪ್ರತಿಕ್ರಿಯಿಸಿ (+)