ಶನಿವಾರ, ಜೂನ್ 19, 2021
26 °C

ವಿದ್ಯಾರ್ಥಿನಿ ಸೇರಿ ಮೂವರ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ವಿದ್ಯಾರ್ಥಿನಿ ಸೇರಿದಂತೆ ಮೂವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ತಂದೆಯ ಮರಣದಿಂದ ಮನನೊಂದು ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಹನುಮಂತನಗರದಲ್ಲಿ ನಡೆದಿದೆ.ಮೇಘನಾ (17) ಆತ್ಮಹತ್ಯೆ ಮಾಡಿಕೊಂಡವರು. ಅವರು ಭಾರತ್ ಮಾತಾ ಕಾಲೇಜಿನಲ್ಲಿ ಮೊದಲ ಪಿಯುಸಿ ಓದುತ್ತಿದ್ದರು.ಇವರ ತಂದೆ ಶಂಕರಪ್ಪ ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪಿದರು. ಸದಾ ತಂದೆಯ ನೆನಪಿನಿಂದ ಕೊರಗುತ್ತಿದ್ದ ಮೇಘನಾ ಮಧ್ಯಾಹ್ನ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ(ಬಿಡಬ್ಲ್ಯುಎಸ್‌ಎಸ್‌ಬಿ)ಯಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಜಯಮ್ಮ ಕೆಲಸಕ್ಕೆ ಹೋಗಿದ್ದರು. ಅಣ್ಣ ವಸಂತ್‌ಕುಮಾರ್ ಕೂಡಾ ಕಾಲೇಜಿಗೆ ಹೋಗಿದ್ದರು. ಪರೀಕ್ಷೆಗೆ ಓದಿಕೊಳ್ಳಲು ರಜೆ ನೀಡಿದ್ದರಿಂದ ಮನೆಯಲ್ಲಿ ಒಬ್ಬರೇ ಇದ್ದ ಮೇಘನಾ ತಂದೆಯ ನೆನಪಿನಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಮಾಹಿತಿ ನೀಡಿದರು.ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಒಪ್ಪಿಸಲಾಗಿದೆ ಎಂದರು.ಮತ್ತೊಂದು ಪ್ರಕರಣ: ಹೆಂಡತಿ ಅಸ್ವಸ್ಥಗೊಂಡಿದ್ದರಿಂದ ಮನನೊಂದು ಆಟೊ ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀನಗರದಲ್ಲಿ ನಡೆದಿದೆ.ಸುಬ್ರಮಣಿ (50) ಆತ್ಮಹತ್ಯೆ ಮಾಡಿಕೊಂಡವರು. ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯನ್ನು ಶಸ್ತ್ರಚಿಕಿತ್ಸೆಗೆಂದು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿದ್ದರು. ವಿಪರೀತ ಕುಡಿಯುತ್ತಿದ್ದ ಅವರು ಮಧ್ಯಾಹ್ನ ಮನೆಯಲ್ಲಿಯೇ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.ಮತ್ತೊಂದು ಪ್ರಕರಣ :  ಮೂರ್ಛೆ ರೋಗದಿಂದ ಬಳಲುತ್ತಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನುಮಂತನಗರ ಸಮೀಪದ ಟಿ.ಆರ್.ಶಾಮಣ್ಣನಗರದಲ್ಲಿ ಮಂಗಳವಾರ ನಡೆದಿದೆ.

ನಂಜುಂಡ (20) ಆತ್ಮಹತ್ಯೆ ಮಾಡಿಕೊಂಡವರು. ಮೆಕಾನಿಕ್ ಕೆಲಸ ಮಾಡುತ್ತಿದ್ದ ಅವರು ಐದು ವರ್ಷಗಳಿಂದ ಮೂರ್ಛೆ ರೋಗದಿಂದ ಬಳಲುತ್ತಿದ್ದರು. ಕಳೆದ ಮೂರು ತಿಂಗಳಲ್ಲಿ ಏಳೆಂಟು ಬಾರಿ ಮೂರ್ಛೆ ರೋಗಕ್ಕೆ ಗುರಿಯಾಗಿದ್ದರು. ಇದರಿಂದ ಬೇಸರಗೊಂಡ ಅವರು ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದಾಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೈಕ್ ಅಪಘಾತ: ಸಾವು

ಒಂದೇ ಬೈಕ್‌ನಲ್ಲಿ ಹೋಗುತ್ತಿದ್ದ ಮೂವರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಪರಿಣಾಮ, ಒಬ್ಬರು ಸಾವನ್ನಪ್ಪಿದ ಘಟನೆ ಪೀಣ್ಯ ಸಮೀಪದ ಹೆಸರಘಟ್ಟ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ.ಹೆಸರುಘಟ್ಟ ನಿವಾಸಿ ಅರುಣ್ ಕುಮಾರ್(19) ಮೃತಪಟ್ಟವರು. ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಅರುಣ್ ಕೆಲಸ ಮುಗಿಸಿ ತನ್ನ ಸ್ನೇಹಿತರಾದ ಪುನೀತ್ ಹಾಗೂ ಲೋಕೇಶ್ ಜತೆ ಸಂಜೆ ಮನೆಗೆ ತೆರಳುತ್ತಿದ್ದರು.ಹೆಸರುಘಟ್ಟ ವೃತ್ತದ ಬಳಿ ತಿರುವು ಪಡೆಯುವಾಗ ನಿಯಂತ್ರಣ ತಪ್ಪಿ ಮೂವರು ಕೆಳಗೆ ಬಿದ್ದಿದ್ದಾರೆ. ಅರುಣ್ ತಲೆಗೆ ತೀವ್ರ ಪೆಟ್ಟಾಗಿದ್ದು, ಸಾರ್ವಜನಿಕರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ರಾತ್ರಿ 11ಗಂಟೆಗೆ ಅರುಣ್ ಸಾವನ್ನಪ್ಪಿದರು. ಅವರ ಸ್ನೇಹಿತರು ಪರಾರಿಯಾಗಿದ್ದು, ಪ್ರಕರಣ ದಾಖಲಿಕೊಳ್ಳಲಾಗಿದೆ ಎಂದು ಪೀಣ್ಯ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.