ಗುರುವಾರ , ಏಪ್ರಿಲ್ 15, 2021
24 °C

ವಿದ್ಯುತ್ ಸಮಸ್ಯೆ; ಪರಿಹಾರ ಶೀಘ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ/ಬಾಗೇಪಲ್ಲಿ: ಬಳ್ಳಾರಿ ಮತ್ತು ಉಡುಪಿಯಲ್ಲಿನ ದೋಷಪೂರಿತ ವಿದ್ಯುತ್ ಉತ್ಪನ್ನ ಘಟಕಗಳನ್ನು ದುರಸ್ತಿಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆ ನಿವಾರಣೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ಟೊಮೆಟೊ ಉತ್ಪನ್ನಕ್ಕೆ ನೂತನ ಹರಾಜುಕಟ್ಟೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಮುಂದಿನ ದಿನಗಳಲ್ಲಿ ಆರು ಗಂಟೆಗಳ ಕಾಲ ಮೂರು ಫೇಸ್ ವಿದ್ಯುತ್ ಪೂರೈಸಲು ಪ್ರಯತ್ನಿಸಲಾಗುವುದು. ರೈತರಿಗೆ ಅನುಕೂಲ ಕಲ್ಪಿಸುವುದು ಸರ್ಕಾರದ ಮೂಲ ಉದ್ದೇಶವಾಗಿದೆ’ ಎಂದರು.ವಿದ್ಯುತ್ ಪೂರೈಕೆ ಸಮಸ್ಯೆಯಿಂದ ರೈತರಿಗೆ ಅನಾನುಕೂಲವಾಗುತ್ತಿದೆ. ಕೃಷಿ ಚಟುವಟಿಕೆಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಸರ್ಕಾರವು ರೈತಪರವಾಗಿದ್ದು, ಇದರ ಹಿನ್ನೆಲೆಯಲ್ಲೇ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಲಾಗಿದೆ. ರೈತರ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ಅವರು ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಕೆರೆಗಳ ಜೀರ್ಣೊದ್ಧಾರ ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಐದು ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದಾರೆ.ಅದರಲ್ಲಿ ಒಂದು ಕೋಟಿ ರೂಪಾಯಿಯನ್ನು ನಗರ ಪ್ರದೇಶದ ಕೆರೆಗಳ ಅಭಿವೃದ್ಧಿ, ಇನ್ನುಳಿದ ನಾಲ್ಕು ಕೋಟಿ ರೂಪಾಯಿಯನ್ನು ಗ್ರಾಮೀಣಾಭಿವೃದ್ಧಿಗೆ ಸದ್ಬಳಕೆ ಮಾಡಲಾಗುವುದು ಎಂದು ಅವರು ತಿಳಿಸಿದರು. ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಅತ್ಯಾಧುನಿಕ ಸೌಕರ್ಯ  ಕಲ್ಪಿಸಲು ಪ್ರಯತ್ನಿಸಲಾಗುವುದು. ಹಂತಹಂತವಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಅವರು ತಿಳಿಸಿದರು.ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, ‘ಜಿಲ್ಲೆಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ತುರ್ತು ಕ್ರಮ ತೆಗೆದುಕೊಳ್ಳಬೇಕು.  ಇನ್ನು ನೀರಾವರಿ ತಜ್ಞ ಡಾ. ಜಿ.ಎಸ್.ಪರಮಶಿವಯ್ಯ ಅವರ ವರದಿಯನ್ನು ಶೀಘ್ರವೇ ಅನುಷ್ಠಾನಗೊಳಿಸಬೇಕು’ ಎಂದು ಮನವಿ ಮಾಡಿದರು. ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಎಪಿಎಂಸಿ ಕೂಲಿಕಾರ್ಮಿಕರ ಸಂಘದ ಸದಸ್ಯರು ಶೋಭಾ ಕರಂದ್ಲಾಜೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ನಾಗರಾಜ, ಉಪವಿಭಾಗಾಧಿಕಾರಿ ಪಿ.ವಸಂತ್‌ಕುಮಾರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿನಾರಾಯಣ ರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.