ಗುರುವಾರ , ಜನವರಿ 30, 2020
20 °C
ಬೈಕ್‌ಗೆ ಬಿಎಂಟಿಸಿ ಬಸ್‌ ಡಿಕ್ಕಿ

ವಿಧಾನಸೌಧದ ನೌಕರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ಬಿಎಂಟಿಸಿ ಬಸ್‌ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬಿ.ಶ್ಯಾಮಸುಂದರ್‌ (50) ಎಂಬ ವಿಧಾನಸೌಧದ ‘ಡಿ’ ದರ್ಜೆಯ ನೌಕರ ಮೃತಪಟ್ಟಿದ್ದಾರೆ.ಪತ್ನಿ ಮೌನಬಾಯಿ ಹಾಗೂ ಮಗ ಮುರಳೀಧರ್‌ ಜತೆ ಟಿ.ದಾಸರಹಳ್ಳಿ ವಾಸವಾಗಿದ್ದ ಶ್ಯಾಮಸುಂದರ್‌, ಬೆಳಿಗ್ಗೆ 9.15ರ ಸುಮಾರಿಗೆ ಬೈಕ್‌ನಲ್ಲಿ ಮಲ್ಲೇಶ್ವರ ಮಾರ್ಗವಾಗಿ ವಿಧಾನಸೌಧಕ್ಕೆ ಹೋಗುತ್ತಿದ್ದರು. ಈ ವೇಳೆ ಯಶವಂತಪುರ– ಮೆಜೆಸ್ಟಿಕ್‌ ಮಾರ್ಗದ ಬಿಎಂಟಿಸಿ ಬಸ್‌ ಹಿಂದಿನಿಂದ ಬೈಕ್‌ಗೆ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ಕೆಳಗೆ ಬಿದ್ದ ಅವರ ತಲೆ ಮೇಲೆ ಬಸ್‌ನ ಹಿಂದಿನ ಚಕ್ರ ಹರಿದ ಪರಿಣಾಮ ಶ್ಯಾಮಸುಂದರ್‌ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.ಬಸ್‌ ಚಾಲಕ ಕುಮಾರ್‌ನನ್ನು ಬಂಧಿಸಲಾಗಿದೆ. ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮಲ್ಲೇಶ್ವರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವ್ಯಕ್ತಿ ಆತ್ಮಹತ್ಯೆ:

ಕಾಡುಗೋಡಿ ಸಮೀಪದ ಹನುಮಂತಪ್ಪ ಗಾರ್ಡನ್‌ನಲ್ಲಿ ಗುರುವಾರ ರಾತ್ರಿ ಸಂತೋಷ್‌ ಆನಂದ್ (36) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಜಾರ್ಖಂಡ್ ಮೂಲದ ಸಂತೋಷ್, ಮುದ್ರಣ ಯಂತ್ರಗಳನ್ನು ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದರು. ನಾಲ್ಕೂವರೆ ವರ್ಷದ ಹಿಂದೆ ಬಾಲಾ ಎಂಬುವರನ್ನು ವಿವಾಹವಾಗಿದ್ದ ಅವರಿಗೆ ಸೌಮ್ಯ ಎಂಬ ಎರಡು ವರ್ಷದ ಮಗುವಿದೆ. ರಾತ್ರಿ ಪತ್ನಿ– ಮಗು ಮಲಗಿದ್ದ ವೇಳೆ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಪತ್ನಿ ಬೆಳಿಗ್ಗೆ ಎಂಟು ಗಂಟೆಗೆ ಎಚ್ಚರಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ.‘ರಾತ್ರಿ ಊಟ ಮಾಡುವಾಗ ಅಡುಗೆ ಸರಿ ಇಲ್ಲ ಎಂದು ಜಗಳ ತೆಗೆದರು. ಈ ವೇಳೆ ಪರಸ್ಪರರ ನಡುವೆ

ಮಾತಿನ ಚಕಮಕಿ ನಡೆಯಿತು. ಆಗ ಊಟ ಅರ್ಧಕ್ಕೆ ಬಿಟ್ಟು ಕೋಣೆಗೆ ತೆರಳಿ ಬಾಗಿಲು ಹಾಕಿಕೊಂಡರು. ನಾನು, ಮಗಳೊಂದಿಗೆ ನಡುಮನೆಯಲ್ಲೇ ಮಲಗಿದೆ.ಬೆಳಿಗ್ಗೆ ಎಚ್ಚರಗೊಂಡು ಬಾಗಿಲು ಬಡಿದರೂ ಪ್ರತಿಕ್ರಿಯೆ ಇರಲಿಲ್ಲ. ಕಿಟಕಿ ಮೂಲಕ ನೋಡಿದಾಗ ಪತಿ ನೇಣು ಹಾಕಿಕೊಂಡಿದ್ದರು’ ಎಂದು ಬಾಲಾ ಪೊಲೀಸ್‌ ವಿಚಾರಣೆಯಲ್ಲಿ ತಿಳಿಸಿದ್ದಾರೆ. ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)