ಭಾನುವಾರ, ಮೇ 16, 2021
28 °C

ವಿಮಾನ ಖರೀದಿ ಜುಟ್ಟಿಗೆ ಮಲ್ಲಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಯುಪಿಎ-1ರ ಅವಧಿಯಲ್ಲಿ ಭಾರಿ ಸಾಲ ಮಾಡಿ ಏರ್ ಇಂಡಿಯಾಗೆ 111 ವಿಮಾನಗಳನ್ನು ಖರೀದಿಸಿದ್ದನ್ನು ಮಹಾಲೇಖಪಾಲರು ತೀವ್ರವಾಗಿ ಆಕ್ಷೇಪಿಸಿದ್ದು, `ನಾಗರಿಕ ವಿಮಾನಯಾನ ಸಂಸ್ಥೆ ಪಾಲಿಗೆ ಇದೊಂದು ಗಂಡಾಂತರಕಾರಿ ಯೋಜನೆ~ ಎಂದು ಗುರುತರ ಆಪಾದನೆ ಮಾಡಿದ್ದಾರೆ.ಸಾಲ ಮಾಡಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ವಿಮಾನಗಳನ್ನು ಖರೀದಿಸಿದ್ದು ಆಪತ್ತಿನ ನಿರ್ಧಾರ. ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಏರ್ ಇಂಡಿಯಾ ಮೇಲೆ 38,423 ಕೋಟಿ ರೂಪಾಯಿ ಸಾಲ ಇದ್ದು,  ವಿಮಾನ ಖರೀದಿ ನಿರ್ಧಾರ ಇದಕ್ಕೆ ದೊಡ್ಡ ಪಾಲು ನೀಡಿದೆ ಎಂದು ಮುಂಗಾರು ಅಧಿವೇಶನದ ಕೊನೆಯ ದಿನವಾದ ಗುರುವಾರ ಸಂಸತ್ತಿನಲ್ಲಿ ಮಂಡಿಸಿದ ಮಹಾಲೇಖಪಾಲರ ವರದಿಯಲ್ಲಿ (ಸಿಎಜಿ) ಹೇಳಲಾಗಿದೆ.ಕೇಂದ್ರ ಸರ್ಕಾರ 50 ವಿಮಾನಗಳ ಖರೀದಿಗೆ ಬೋಯಿಂಗ್ ಕಂಪೆನಿಯೊಂದಿಗೆ ಬಹಳ ಅವಸರದಲ್ಲಿ ಒಪ್ಪಂದ ಮಾಡಿಕೊಂಡಿದೆ. ಸರ್ಕಾರ ಖರೀದಿಗೆ ಒಪ್ಪಿಗೆ ನೀಡಿದ ದಿನವೇ ಕಂಪೆನಿ ಜತೆ ಒಪ್ಪಂದಕ್ಕೆ ಸಹಿ ಹಾಕಿರುವುದು ಇದಕ್ಕೆ ನಿದರ್ಶನ. ಒಟ್ಟಾರೆ ಇದರಿಂದ ವಿಮಾನ ಸಂಸ್ಥೆಯ ಮೇಲೆ ದೀರ್ಘಕಾಲೀನವಾದ ದೊಡ್ಡ ಆರ್ಥಿಕ ಹೊರೆ ಬಿದ್ದಿದೆ ಎಂದು ವರದಿ ಒತ್ತಿ ಹೇಳಿದೆ.ಇದಕ್ಕೆ ಮುನ್ನ, ವಿಮಾನ ಖರೀದಿ ಪ್ರಸ್ತಾವ ಮೊದಲು ಆಗಿದ್ದು 1996ರಲ್ಲಿ. ನಂತರ ಕುಂಟುತ್ತಾ, ತೆವಳುತ್ತಾ 2004ರ ಜನವರಿವರೆಗೆ ಇದರ ಪರಿಶೀಲನೆ ನಡೆದಿದೆ. 2004ರ ಜನವರಿಯಲ್ಲಿ 28 ವಿಮಾನಗಳ ಖರೀದಿಗೆ ಒಪ್ಪಿಗೆ ನೀಡಿ, ನಂತರ ಅದನ್ನು ಪುನರ್‌ಪರಿಶೀಲಿಸಿ ಹೆಚ್ಚು ವಿಮಾನಗಳ ಖರೀದಿಗೆ ನಿರ್ಧರಿಸಲಾಗಿದೆ. ಪುನರ್ ಪರಿಶೀಲನೆಯಲ್ಲಿ ವಿಮಾನಗಳ ಖರೀದಿ ಸಂಖ್ಯೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿರುವುದನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.ವಿಮಾನ ಖರೀದಿ ಒಪ್ಪಂದ ಪ್ರಕ್ರಿಯೆ ನಿಗದಿಯಂತೆ, ಪಾರದರ್ಶಕವಾಗಿ ನಡೆದಿಲ್ಲ. ಇದೇ ಮಾದರಿಯ ಇತರ ವಿಮಾನಗಳ ಬೆಲೆ ಎಷ್ಟು ಇದೆ ಎಂಬುದನ್ನು ಎಲ್ಲೂ ನಮೂದಿಸಿಲ್ಲ. ಈ ಅಂಶ  ಇಲ್ಲದಿರುವಾಗ ವಿಮಾನದ ಬೆಲೆ ಎಷ್ಟು ಎಂಬುದನ್ನು ಅಂದಾಜಿಸುವುದು ಅಸಾಧ್ಯವಾಗುತ್ತದೆ ಎಂದು ಮಹಾಲೇಖಪಾಲರು ದೂರಿದ್ದಾರೆ. ಏರ್ ಇಂಡಿಯಾ ಆಪತ್ತಿನಲ್ಲಿ ಸಿಲುಕಿದೆ. ಸಿಬ್ಬಂದಿಗೆ ವೇತನ ಪಾವತಿ ಹಾಗೂ ಇಂಧನ ಖರೀದಿ ಕೂಡ ಕಷ್ಟವಾಗಿದೆ. ಸಂಸ್ಥೆ ಉಳಿಯಬೇಕೆಂದರೆ, ಆಡಳಿತ ಮಂಡಲಿ ಮತ್ತು ಸಿಬ್ಬಂದಿ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿರಿಸಿ  ಕಠಿಣ ತೀರ್ಮಾನಗಳನ್ನು ಕೈಗೊಳ್ಳಬೇಕು ಎಂದು ಹೇಳಲಾಗಿದೆ.ಏರ್ ಇಂಡಿಯಾ ಮತ್ತು ಇಂಡಿಯನ್ ಏರ್‌ಲೈನ್ಸ್‌ಗಳ ವಿಲೀನ ಸೂಕ್ತ ಸಮಯದಲ್ಲಿ ಏರ್ಪಡಲಿಲ್ಲ ಎಂಬುದನ್ನೂ ವರದಿ ಪ್ರಸ್ತಾಪಿಸಿದೆ. ಎರಡೂ ಸಂಸ್ಥೆಗಳ ಮಾನವ ಸಂಪನ್ಮೂಲ, ಮಾಹಿತಿ ತಂತ್ರಜ್ಞಾನ ಇತ್ಯಾದಿಗಳನ್ನು ಸಂಯೋಜಿಸುವಲ್ಲಿ ಎದುರಾಗುವ ತೊಡಕುಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ವಿಲೀನಕ್ಕೆ ಅಂಕಿತ ಹಾಕಲಾಗಿದೆ. ಏರ್ ಇಂಡಿಯಾ ಆಂತರಿಕವಾಗಿ ಸದೃಢವಾಗಿದೆ. ಆದರೂ ನಾಗರಿಕ ವಿಮಾನಯಾನ ಇಲಾಖೆ ಕಳೆದ ಕೆಲವು ವರ್ಷಗಳಿಂದ ಸಂಸ್ಥೆಗೆ ಸಕಾರಾತ್ಮಕ ಬೆಂಬಲ ನೀಡಿಲ್ಲ ಎಂದು ವರದಿ ದೂರಿದೆ.ವಿಮಾನಗಳ ಖರೀದಿ ಹಾಗೂ ವಿಲೀನ ನಿರ್ಧಾರದಲ್ಲಿ ಆಗಿರುವ ಲೋಪಗಳ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯ, ಸಾರ್ವಜನಿಕ ಬಂಡವಾಳ ಹೂಡಿಕೆ ಮಂಡಲಿ ಮತ್ತು ಯೋಜನಾ ಆಯೋಗಗಳು ಎಚ್ಚರಿಕೆ ಪ್ರದರ್ಶಿಸಬೇಕಿತ್ತು ಎಂದು ವರದಿಯಲ್ಲಿ ದಾಖಲಿಸಲಾಗಿದೆ.ಇತರ ರಾಷ್ಟ್ರಗಳೊಂದಿಗಿನ ದ್ವಿಪಕ್ಷೀಯ ವಾಯು ಸಂಚಾರ ಬಾಧ್ಯತೆಗಳನ್ನು ಉದಾರೀಕರಣಗೊಳಿಸಿದ ಸರ್ಕಾರದ ನೀತಿಯನ್ನೂ ಸಿಎಜಿ ಆಕ್ಷೇಪಿಸಿದೆ.

ಪ್ರಫುಲ್ ಸಮರ್ಥನೆ

ಪ್ರತಿಪಕ್ಷಗಳು ಈ ವರದಿಯನ್ನು ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಇರುವುದರಿಂದ ವರದಿಯು ಕೇಂದ್ರದ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸುವ ಸಾಧ್ಯತೆ ಇದೆ. ಈ ಹಿಂದೆ 2 ಜಿ ಹಗರಣ ಕುರಿತು ಸಿಎಜಿ ನೀಡಿದ್ದ ವರದಿ ಯುಪಿಎ ಸರ್ಕಾರವನ್ನು ಇನ್ನೂ ಕಾಡುತ್ತಿರುವಾಗಲೇ ಈಗ ಮತ್ತೊಂದು ವರದಿ ಹೊರಬಿದ್ದಿದೆ.ವಿಮಾನ ಖರೀದಿ ಹಾಗೂ ವಿಲೀನದ ವೇಳೆ ಯುಪಿಎ-1 ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿದ್ದ ಪ್ರಫುಲ್ ಪಟೇಲ್ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.2004ರಲ್ಲಿ ಏರ್ ಇಂಡಿಯಾ ಮತ್ತು ಇಂಡಿಯನ್ ಏರ್‌ಲೈನ್ಸ್ 93 ವಿಮಾನಗಳನ್ನು ಹೊಂದಿದ್ದವು. ಇವುಗಳಲ್ಲಿ ಬಹುತೇಕ ವಿಮಾನಗಳು 20 ವರ್ಷಗಳಷ್ಟು ಹಳೆಯದಾಗಿದ್ದವು. ಈ ವಿಮಾನಗಳನ್ನು ಇಟ್ಟುಕೊಂಡು ಜಾಗತಿಕ ಪೈಪೋಟಿ ಎದುರಿಸಲು ಸಾಧ್ಯವಿರಲಿಲ್ಲ ಎಂದು ಪ್ರಸ್ತುತ ಬೃಹತ್ ಕೈಗಾರಿಕೆ ಸಚಿವರಾಗಿರುವ ಪಟೇಲ್ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.