ಭಾನುವಾರ, ಮೇ 16, 2021
24 °C

ವಿಮಾನ ನಿಲ್ದಾಣಕ್ಕೆ ಭೂಮಿ: ಕೆಐಎಡಿಬಿ :ವಂಚನೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಕೆಐಎಡಿಬಿಯಿಂದ ಸಿಗಬೇಕಿದ್ದ ಪರಿಹಾರ ಧನವನ್ನು ನಕಲಿ ಸಹಿ, ಕರಾರು ಪತ್ರ ಸೃಷ್ಟಿಸಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ನುಂಗಿದ್ದಾರೆ. ಯಾರ‌್ಯಾರದೋ ಹೆಸರಿನಲ್ಲಿ ಚೆಕ್ ವಿತರಣೆಯಾಗಿದೆ. ಅನ್ನ ನೀಡುತ್ತಿದ್ದ ಜಮೀನನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿರುವ ಸರ್ಕಾರ ನಮ್ಮನ್ನು ಬೀದಿಪಾಲು ಮಾಡಿದೆ...~ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ನೀಡಿದ ಜಮೀನಿನ ಪರಿಹಾರಧನ `ಕೈಗೆ ಬಂದರೂ ಬಾಯಿಗೆ ಬರಲಿಲ್ಲ~ ಎಂಬಂತಾಗಿ ಪರಿತಪಿಸುತ್ತಿರುವ ಅನಕ್ಷರಸ್ಥ ರೈತರ ಅಳಲಿದು. ಈ ಪೈಕಿ ಕೆಲವರು ಒಟ್ಟಾಗಿ ಕೆಐಡಿಬಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ವಿರುದ್ಧ ಲೋಕಾಯುಕ್ತ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ತಮಗಾದ ವಂಚನೆ ಬಯಲಿಗೆಳೆಯಲು ಸಿದ್ಧತೆ ನಡೆಸಿದ್ದಾರೆ.`ನಾನು ಮತ್ತು ಹನುಮಂತಪ್ಪ ಉಣಕಲ್ ಅಣ್ಣ- ತಮ್ಮ. ಗೋಕುಲ ಗ್ರಾಮದ ಸರ್ವೇ ನಂ. 355ರಲ್ಲಿ 4.39 ಎಕರೆ, 229ರಲ್ಲಿ 20 ಗುಂಟೆ ಜಮೀನಿಗೆ ವಾರಸುದಾರರು. ಇದರ ಪರಿಹಾರಧನ 1.40 ಕೋಟಿ ರೂಪಾಯಿ ಮಧ್ಯವರ್ತಿಗಳ ಪಾಲಾಗಿದೆ. ನಾವಿಬ್ಬರೂ ಅನಕ್ಷರಸ್ಥರು. ಸಹಿ ಮಾಡಲು ಬರಲ್ಲ. ನಾವು ಯಾರಿಗೂ ಏನೂ ಬರ‌್ಕೊಟ್ಟಿಲ್ಲ. ನಮ್ಮಿಬ್ಬರ ಸಹಿ ಮಾಡಿ ಹಣ ಲಪಟಾಯಿಸಿದ್ದಾರೆ~ ಎಂದು ಇಳಿವಯಸ್ಸಿನ ಚೆನ್ನಬಸಪ್ಪ ಉಣಕಲ್  `ಪ್ರಜಾವಾಣಿ~ ಎದುರು ಅಲವತ್ತುಕೊಂಡರು.`ನೀಲಪ್ಪ, ರಾಮಪ್ಪ, ಚಿದಾನಂದ ನಾವು ಮೂರು ಜನ ಅಣ್ಣತಮ್ಮಂದಿರು. ಗೋಕುಲ ಗ್ರಾಮದ ಸರ್ವೆ ನಂ. 232ರಲ್ಲಿ 5.13 ಎಕರೆಯನ್ನು ಕೆಐಎಡಿಬಿ ವಶಪಡಿಸಿಕೊಂಡಿದೆ. ಪರಿಹಾರವಾಗಿ ರೂ 7 ಲಕ್ಷ  ಮಾತ್ರ ಸಿಕ್ಕಿದೆ. ಬಾಕಿ ಕೇಳಿದರೆ `ನಿಮಗೆ ಎಲ್ಲವನ್ನೂ ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ. ನಾವು ಯಾವುದಕ್ಕೂ ಸಹಿ ಮಾಡಿಲ್ಲ~ ಎಂದು ನೀಲಪ್ಪ ಬಡಿಗೇರ ನೊಂದು ನುಡಿದರು.`ನನ್ನಪ್ಪ ಗುರಪ್ಪ ಇದೇ 2ರಂದು ನಿಧನರಾದರು. ಅವರ ಹೆಸರಿನಲ್ಲಿ ಸರ್ವೆ ನಂ. 230ರಲ್ಲಿ 3.5 ಎಕರೆ ಜಾಗವಿದೆ. ಕೆಐಎಡಿಬಿ ಅಧಿಕಾರಿಗಳನ್ನು ವಿಚಾರಿಸಿದರೆ. `ನಿಮಗೆ ಪರಿಹಾರಧನ ವಿತರಣೆಯಾಗಿದೆ~ ಎನ್ನುತ್ತಾರೆ. ನಮ್ಮಪ್ಪ ಯಾರಿಗೂ ಕರಾರು ಪತ್ರ ಬರೆದುಕೊಟ್ಟಿಲ್ಲ~ ಎಂದು ರಾಮಪ್ಪ ಉಣಕಲ್ ಅಳಲು ತೋಡಿಕೊಂಡರು.ರೈತರ ಪರ ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳ ಆಧಾರದಲ್ಲಿ ಮುತ್ತಣ್ಣ ಶಿವಳ್ಳಿ ಎಂಬವರು, ಭೂಸ್ವಾಧೀನ ವೇಳೆ ಕೆಐಎಡಿಬಿ ಅಧಿಕಾರಿಗಳಾಗಿದ್ದ ಮಹಾಂತೇಶ, ಬಿ. ವೀರಪ್ಪ, ಸಿ.ಎಂ. ಮರಡಿ, ಕೆ.ಪ್ರಭುದೇವ ಮತ್ತು ನಾಗಾವಿ, `ಮಧ್ಯವರ್ತಿ~ಗಳಾಗಿದ್ದ ಶ್ಯಾಮರಾವ್ ಕುಲಕರ್ಣಿ, ಎಂ.ಐ.ಸಿಂದಗಿ ಮತ್ತು ನಾಗರಾಜ ವಿರುದ್ಧ ಲೋಕಾಯುಕ್ತ ಕೋರ್ಟಿಗೆ ದೂರು ನೀಡಿದ್ದಾರೆ.ಈಗ ನಿವೃತ್ತರಾಗಿರುವ ವೀರಪ್ಪ, `ಭೂ ಸ್ವಾಧೀನ ವಿಷಯದಲ್ಲಿ ನಮ್ಮದೇನೂ ಇಲ್ಲ. ನಮ್ಮ ಮಟ್ಟಿಗೆ ನಾವು (ಅಧಿಕಾರಿಗಳು) ಶುದ್ಧರಿದ್ದೇವೆ. ಪರಿಹಾರಧನ ಇನ್ನೊಬ್ಬರಿಗೆ ವಿತರಣೆಯಾದ ಬಗ್ಗೆ ದೂರುಗಳಿರುವುದು ನಿಜ. ಈ ಬಗ್ಗೆ ಕೋರ್ಟ್‌ನಲ್ಲಿ ಕ್ರಿಮಿನಲ್ ದಾವೆ ಹೂಡಲು ಅವಕಾಶವಿದೆ~ ಎಂದು ಪ್ರತಿಕ್ರಿಯಿಸಿದರು.

`ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸಲು ಎಎಐಗೆ ಈಗಾಗಲೇ 615 ಎಕರೆ ಭೂಮಿ ಹಸ್ತಾಂತರವಾಗಿದೆ. ಇದೀಗ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿರುವುದರಿಂದ ಜಮೀನು ವಿವಾದವನ್ನು ಮುಂದಿನ 2 ತಿಂಗಳಿನೊಳಗೆ ಜಿಲ್ಲಾಡಳಿತ ಪರಿಹರಿಸಿ ಕೊಡಬೇಕಾಗಿದೆ~ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ದೇಶಕ ಕೆ.ಎಂ.ಬಸವರಾಜು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.