ಬುಧವಾರ, ಏಪ್ರಿಲ್ 14, 2021
32 °C

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ವೈದ್ಯಾಧಿಕಾರಿಗಳ ಉಪವಾಸ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಹತ್ತು ಜಿಲ್ಲಾ ಆಸ್ಪತ್ರೆಗಳನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಹಿಂಪಡೆಯಬೇಕು ಮತ್ತು ವೈದ್ಯಾಧಿಕಾರಗಳ ವೇತನ ಭತ್ಯೆಯನ್ನು ವೇತನದ ಜೊತೆಗೆ ವಿಲೀನಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಸದಸ್ಯರು ನಗರದ ಆನಂದರಾವ್ ವೃತ್ತದ ಬಳಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಕಚೇರಿಯ ಎದುರು ಸೋಮವಾರ ಉಪವಾಸ ಸತ್ಯಾಗ್ರಹ ನಡೆಸಿದರು.

`ರಾಜ್ಯದ 28 ಜಿಲ್ಲಾ ಆಸ್ಪತ್ರೆಗಳಲ್ಲಿ 10 ಜಿಲ್ಲಾ ಆಸ್ಪತ್ರೆಗಳನ್ನು 2008ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ. ಇದು ಅವೈಜ್ಞಾನಿಕ ಕ್ರಮವಾಗಿದ್ದು, ಇದರಿಂದ ವೈದ್ಯಾಧಿಕಾರಿಗಳ ಸೇವಾ ಸಂಯೋಜನೆಯಲ್ಲಿ ಗೊಂದಲ ಉಂಟಾಗುತ್ತಿದೆ. ಹೀಗಾಗಿ 10 ಜಿಲ್ಲಾ ಆಸ್ಪತ್ರೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವಹಿಸಬೇಕು. ವೈದ್ಯಾಧಿಕಾರಿಗಳಿಗೆ ನೀಡುತ್ತಿರುವ ವೇತನ ಭತ್ಯೆಯನ್ನು ವೇತನದ ಜೊತೆಗೆ ವಿಲೀನಗೊಳಿಸಬೇಕು~ ಎಂದು ಸಂಘದ ಅಧ್ಯಕ್ಷ ಡಾ.ಎಚ್.ಎನ್.ರವೀಂದ್ರ ಒತ್ತಾಯಿಸಿದರು. `ಈ ಎರಡೂ ಬೇಡಿಕೆಗಳನ್ನು ಎರಡು ವರ್ಷಗಳ ಹಿಂದಿನಿಂದಲೂ ಕೇಳುತ್ತಲೇ ಇದ್ದೇವೆ. ಆದರೆ ನಮ್ಮ ಬೇಡಿಕೆಗಳಿಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳು ಉಪವಾಸ ನಿರತರನ್ನು ಭೇಟಿ ಮಾಡಿ ಎಂದಿನಂತೆ ಬೇಡಿಕೆ ಈಡೇರಿಕೆಯ ಭರವಸೆ ನೀಡಿದ್ದಾರೆ.

ಆದರೆ ಈ ಭರವಸೆಯಲ್ಲಿ ನಮಗೆ ನಂಬಿಕೆ ಇಲ್ಲ. ಸೋಮವಾರದ ಒಂದು ದಿನದ ಉಪವಾಸ ಸತ್ಯಾಗ್ರಹ ಮುಗಿದಿದ್ದು, ಸಂಘದ ಅಧ್ಯಕ್ಷನಾಗಿ ನಾನು ಬೇಡಿಕೆ ಈಡೇರುವವರೆಗೂ ಮಾಗಡಿ ರಸ್ತೆಯ ಆರೋಗ್ಯ ಭವನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ. ಆಡಳಿತ ಮತ್ತಿತರ ಕೆಲಸಗಳಿಗೆ ತೊಂದರೆಯಾಗದಂತೆ ನನ್ನ ಉಪವಾಸ ಸತ್ಯಾಗ್ರಹ ಮುಂದುವರಿಯಲಿದೆ~ ಎಂದು ಅವರು ತಿಳಿಸಿದರು.

ಹತ್ತುದಿನಗಳ ಒಳಗೆ ಸಭೆ ನಡೆಸಿ ವೈದ್ಯಾಧಿಕಾರಿಗಳ ಬೇಡಿಕೆಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.