ಗುರುವಾರ , ಮೇ 6, 2021
27 °C

ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಅಂಬೇಡ್ಕರ್ ಜನ್ಮದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ದಲಿತರ ಬಗ್ಗೆ ಸಮಾಜದಲ್ಲಿ ತೋರಿಕೆಯ ಬದಲಾವಣೆಯಾಗಿದೆಯೇ ಹೊರತು, ಮಾನಸಿಕ ಬದಲಾವಣೆಯಾಗಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ದಲಿತರಿನ್ನೂ ಹೊರಕೇರಿಯಲ್ಲಿದ್ದಾರೆ; ಅವರಿನ್ನೂ ಒಳಕೇರಿಗೆ ಬಂದಿಲ್ಲ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ ವಿಷಾದಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಸಂಯುಕ್ತ ಆಶ್ರಯದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 121ನೇ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಅಂಬೇಡ್ಕರ್ ಅವರ ಜನ್ಮದಿನ ಆಚರಣೆ ವರ್ಷದಿಂದ ವರ್ಷಕ್ಕೆ ಪ್ರಸ್ತುತವಾಗುತ್ತಿದ್ದು, ಸ್ವಾತಂತ್ರ್ಯ ಬಂದು ಹಲವು ದಶಕಗಳು ಕಳೆದರೂ ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಾಗಿಲ್ಲ. ಅಂತರ‌್ಯದಲ್ಲಿ ಬರಬೇಕಾದ ಬದಲಾವಣೆ ಇನ್ನೂ ಬಂದಿಲ್ಲ ಎಂದರು.ಸಾಮಾಜಿಕ ವ್ಯವಸ್ಥೆಯಲ್ಲಿನ ಅಂಕು-ಡೊಂಕುಗಳನ್ನು ತಿದ್ದಲು ತಮ್ಮ ಜೀವನವನ್ನೇ ಮುಡುಪಾಗಿಟ್ಟ ಮಹಾನ್ ವ್ಯಕ್ತಿಯನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸಲಾಗಿದೆ. ಅಂಬೇಡ್ಕರ್ ನಮ್ಮವರೆಂಬ ಭಾವನೆ ದೇಶದಲ್ಲಿನ್ನೂ ಬಂದಿಲ್ಲ ಎಂದು ಅವರು ನೋವು ವ್ಯಕ್ತಪಡಿಸಿದರು.ಸವಲತ್ತುಗಳ ಮೂಲಕ ಸಮಾನತೆ ಸಾಧಿಸಿದ್ದೇವೆ ಎಂದು ಸರ್ಕಾರ ತಿಳಿದುಕೊಳ್ಳುವುದು ತಪ್ಪಾಗುತ್ತದೆ. ಮೊದಲು ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು. ಎಲ್ಲದಕ್ಕಿಂತ ಮುಖ್ಯವಾಗಿ, ಜನರ ಮಾನಸಿಕ ಸ್ಥಿತಿಯಲ್ಲಿ ಪರಿವರ್ತನೆ ತರಬೇಕು. ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ವ್ಯವಸ್ಥೆ ಸೃಷ್ಟಿಯಾಗಬೇಕು ಎಂದರು.ಶಾಸಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ಮಡೆಸ್ನಾನದಂತ ಪದ್ಧತಿಗಳು ಸಮಾಜದಿಂದ ನಿರ್ಮೂಲನೆಯಾಗಬೇಕು ಎಂದ ಅವರು, ವ್ಯವಸ್ಥೆಯಲ್ಲಿನ ತಪ್ಪನ್ನು ತಪ್ಪು ಎಂದು ಹೇಳಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಹಾಗೂ ಸುಧಾರಣೆ ತರಲು ಸಾಧ್ಯ. ಇಲ್ಲದಿದ್ದರೆ, ಬದಲಾವಣೆ ಅಸಾಧ್ಯ ಎಂದರು.ಜಾತಿ ಮತ್ತು ಅಸ್ಪೃಶ್ಯತೆಯಿಂದ ದಲಿತರು ಹೊರಬರಲು ವಿದ್ಯಾವಂತರಾಗಬೇಕು; ಸಂಘಟಿತರಾಗಬೇಕು ಎಂದ ಅವರು, ಸಂಕುಚಿತ ಮನಸ್ಥಿತಿಯ ಜನರ ಪರಿವರ್ತನೆ ಮಾಡಿ ಸಾಮಾಜಿಕ ಸಮಾನತೆ ಕಾಣಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

 ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗದ ಸಹಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅಂಬೇಡ್ಕರ್ ಅವರ ಹೋರಾಟ ಮತ್ತು ಚಿಂತನೆ ಕುರಿತು ಉಪನ್ಯಾಸ ನೀಡಿದರು.  ಕಾರ್ಯಕ್ರಮದಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್, ಕರ್ನಾಟಕ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಚೂಡಾನಾಯಕ್, ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ, ನಗರಸಭಾ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ಸೂಡಾ ಅಧ್ಯಕ್ಷ ಎಸ್. ದತ್ತಾತ್ರಿ, ನಗರಸಭಾ ಉಪಾಧ್ಯಕ್ಷ ಎಸ್. ರಮೇಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಸಂಜಯ್ ಬಿಜ್ಜೂರ್ ಸೇರಿದಂತೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ಸ್ವಾಗತಿಸಿದರು. ಕಾಶಿ ಕಾರ್ಯಕ್ರಮ ನಿರೂಪಿಸಿದರು. ನಗರಸಭೆ ಪೌರಾಯುಕ್ತ ಪಿ.ಜಿ. ರಮೇಶ್ ವಂದಿಸಿದರು.ಕಾರ್ಯಕ್ರಮಕ್ಕೂ ಮೊದಲು ಸೈನ್ಸ್ ಮೈದಾನದಿಂದ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ನಡೆಯಿತು. ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿದ ಅಂಬೇಡ್ಕರ್!`ಅಂಬೇಡ್ಕರ್ ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿ, ದಲಿತರನ್ನು ಉದ್ದಾರ ಮಾಡಿದ ಮಹಾನ್ ಪುರುಷ~!

-ಬಿಜೆಪಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಹೇಳಿದ ಮಾತುಗಳಿವು. ತಮ್ಮ ಭಾಷಣದ ಆರಂಭದಲ್ಲಿ ಮೇಲಿನಂತೆ ಹೇಳಿದ ಅವರು, ತಪ್ಪಿನ ಅರಿವು ಆಗದೆ ಮಾತು ಮುಂದುವರಿಸಿದ್ದರು. ತದನಂತರ ವೇದಿಕೆಯಲ್ಲಿದ್ದ ನಗರಸಭಾ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಈಶ್ವರಪ್ಪಗೆ ಚೀಟಿ ನೀಡಿದರು.ಚೀಟಿ ಓದಿದ ಈಶ್ವರಪ್ಪಗೆ ತಪ್ಪಿನ ಅರಿವಾಗಿ, ಅಂಬೇಡ್ಕರ್‌ರವರು ಬ್ರಾಹ್ಮಣ ಸಮಾಜದಲ್ಲಿ ಹುಟ್ಟಲಿಲ್ಲ. ಅವರು ಮೆಹರ್ ಸಮಾಜದಲ್ಲಿ ಹುಟ್ಟಿದರು ಎಂದು ಹೇಳಿ ತಪ್ಪು ತಿದ್ದಿಕೊಂಡರು.ಅಂಬೇಡ್ಕರ್ `ಆಧುನಿಕ ಮನು~ಅಂಬೇಡ್ಕರ್ ನಂತರದ ಹೋರಾಟಗಳು ಅವರನ್ನು ಬ್ರಾಹ್ಮಣ ವಿರೋಧಿಯಾಗಿ ರೂಪಿಸಿದವು ಎಂದು ಬೆಂಗಳೂರಿನ ಸಮಾಜ ಸೇವಾ ಕಾರ್ಯಕರ್ತ ಎಂ. ಮುನಿಯಪ್ಪ ಆರೋಪಿಸಿದರು. ಸಮಾರಂಭದಲ್ಲಿ ಅಂಬೇಡ್ಕರ್ ವಿಚಾರಧಾರೆಗಳ ಕುರಿತು ಉಪನ್ಯಾಸ ನೀಡಿದ ಅವರು, ಅಂಬೇಡ್ಕರ್ ಸಮಗ್ರ ಸಮಾಜದ ಚಿಂತಕರಾಗಿದ್ದರು. ಸಾಮಾಜಿಕ ನ್ಯಾಯ ಪಡೆಯಲು ಮುಂದುವರಿದವರನ್ನು ಜತೆಗಿಟ್ಟುಕೊಂಡೇ ಹೋರಾಟ ನಡೆಸಬೇಕು ಎಂದುಕೊಂಡಿದ್ದರು. ಆದರೆ, ನಂತರದ ದಿನಗಳಲ್ಲಿ ಹೋರಾಟಗಳು ಅವರನ್ನು ಬ್ರಾಹ್ಮಣ ವಿರೋಧಿ ಎಂದು ರೂಪಿಸಿದವು ಎಂದರು.ಅಂಬೇಡ್ಕರ್ ಭಗವತ್ ಧ್ವಜವನ್ನು ರಾಷ್ಟ್ರಧ್ವಜವನ್ನಾಗಿ ಮಾಡುವ ಕನಸು ಕಂಡಿದ್ದರು ಎಂದ ಅವರು, ಅಂಬೇಡ್ಕರ್ ಮನು ಸ್ಮೃತಿಯನ್ನು ಸುಟ್ಟುಹಾಕಿ, ದೇಶಕ್ಕೆ ಹೊಸ ಸಂವಿಧಾನ ಬರೆದು ಆಧುನಿಕ ಮನು ಎಂದು ಎನಿಸಿಕೊಂಡರು ಎಂದು ವಿಶ್ಲೇಷಿಸಿದರು.ಅಂಬೇಡ್ಕರ್ ಜನವಿರೋಧಿಯಾಗಿರಲಿಲ್ಲ, ಸಮಾಜಮುಖಿಯಾಗಿದ್ದರು. ದೇಶದ್ರೋಹಿ ಕೆಲಸ ಮಾಡಲಿಲ್ಲ. ಜಾತಿ-ಧರ್ಮಗಳನ್ನು ನಿಂದಿಸಲಿಲ್ಲ. ಆದರೆ, ಪರಿವರ್ತನೆಯ ಪರಿಕಲ್ಪನೆಯಲ್ಲಿ ಶೋಷಿತ ಜನರಲ್ಲಿ ಹೋರಾಟದ ಆತ್ಮಸ್ಥೈರ್ಯವನ್ನು ತುಂಬಿದರು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.