ಶುಕ್ರವಾರ, ಆಗಸ್ಟ್ 7, 2020
23 °C

ವಿಶಿಷ್ಟ ಹವ್ಯಾಸದ ಮಹಿಮೂದ್ ಖಾದ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಿಷ್ಟ ಹವ್ಯಾಸದ ಮಹಿಮೂದ್ ಖಾದ್ರಿ

ಮಾನ್ವಿ ಪಟ್ಟಣದ ಸೈಯದ್ ಮಖ್ದೂಮ್ ಮೋಹಿಯುದ್ದೀನ್ ಖಾದ್ರಿ ಉರ್ಫ್ ಮಹಿಮೂದ್ ಖಾದ್ರಿ ತಮ್ಮ ವಿಶಿಷ್ಟ ಹವ್ಯಾಸದ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಮಹಿಮೂದ್ ಖಾದ್ರಿ ಅವರು ವೃತ್ತಿಯಲ್ಲಿ ಉಪನೋಂದಣಿ ಕಚೇರಿಯ ದಸ್ತಾವೇಜು ಬರಹಗಾರ. ಇಲ್ಲಿನ ಜನತೆ ಪ್ರೀತಿಯಿಂದ ಅವರನ್ನು `ಸಾಹೇಬ~ ಎಂತಲೂ ಕರೆಯುತ್ತಾರೆ.ಪ್ರತಿನಿತ್ಯ ರಾಜ್ಯ, ದೇಶ ಮತ್ತು ಹೊರ ದೇಶಗಳಲ್ಲಿ ನಡೆಯುವ ಪ್ರಮುಖ ಘಟನಾವಳಿಗಳು ಹಾಗೂ ಮಾನ್ವಿ ಪಟ್ಟಣದಲ್ಲಿ ನಡೆಯುವ ಪ್ರಮುಖ ಸಂಗತಿಗಳನ್ನು ತಮ್ಮ ಪುಟ್ಟ ಡೈರಿ ಪುಸ್ತಕದಲ್ಲಿ ವಿವರವಾಗಿ ಬರೆದು ದಾಖಲಿಸುವುದು ಅವರ ಹವ್ಯಾಸ. 1986ರರಿಂದ ಅವರು ಈ ಹವ್ಯಾಸವನ್ನು ರೂಢಿ ಸಿಕೊಂಡಿದ್ದಾರೆ. ಅವರ ಮನೆಯಲ್ಲಿರುವ ನೂರಾರು ಡೈರಿ ಪುಸ್ತಕಗಳು ಕಳೆದ ಮೂರು ದಶಕಗಳಲ್ಲಿ ನಡೆದ ರಾಜಕೀಯ ಹಾಗೂ ಸಾಮಾಜಿಕ ಬದಲಾವಣೆಗಳು, ಸಂಭವಿಸಿದ ಪೃಕೃತಿ ವಿಕೋಪದ ಘಟನೆಗಳು, ರಾಜಕೀಯ ಘಟನೆಗಳು, ಕೋಮು ಗಲಬೆಗಳು ಮತ್ತು ದೊಡ್ಡ ಅಪಘಾತಗಳ ಕುರಿತು ವಿವರವಾದ ಮಾಹಿತಿ ಕೊಡುತ್ತವೆ. ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಎಸ್.ಬಂಗಾರಪ್ಪ ಸೇರಿದಂತೆ ಹಲವು ರಾಜಕೀಯ ಗಣ್ಯರು, ಚಿತ್ರನಟರು, ಧಾರ್ಮಿಕ ಮುಖಂಡರು ಮಾನ್ವಿ ಪಟ್ಟಣಕ್ಕೆ ಆಗಮಿಸಿದ ದಿನಾಂಕ, ಭಾಗವಹಿಸಿದ ಕಾರ್ಯಕ್ರಮದ ವಿವರವಾದ ಮಾಹಿತಿಗಳು ಈ ಡೈರಿಗಳಲ್ಲಿವೆ.  ತಮ್ಮ ಬಂಧುಗಳ ಮದುವೆ ಸಮಾರಂಭ, ಬಂಧು ಬಳಗದ ಯುವಕರು ಪದವೀಧರರಾದದ್ದು, ಸರ್ಕಾರಿ ನೌಕರಿಗೆ ಸೇರಿದ ದಿನಾಂಕ, ವಿವರವಾದ ಮಾಹಿತಿಗಳು ಕೂಡ ಅವರು ಬರೆದ ಡೈರಿ ಪುಸ್ತಕಗಳಲ್ಲಿವೆ.

ಡೈರಿ ಪುಸ್ತಕವನ್ನು ಸದಾ ತಮ್ಮ ಜೇಬಿನಲ್ಲಿ ಇಟ್ಟುಕೊಳ್ಳುವ ಮಹಿಮೂದ್ ಖಾದ್ರಿ, ಯಾವುದೇ ಘಟನೆ ಸಂಭವಿಸಿದ ಕುರಿತು ತಮಗೆ ಸುದ್ದಿ ತಿಳಿಯುತ್ತಿದ್ದಂತೆ ಡೈರಿ ಹೊರತೆಗೆದು ತಕ್ಷಣವೇ ಬರೆದು ದಾಖಲಿಸಿಕೊಳ್ಳುತ್ತಾರೆ.ಕೆಲಸದಲ್ಲಿ ಬಿಜಿಯಾಗಿದ್ದರೆ ರಾತ್ರಿ ಮನೆಗೆ ಬಂದ ನಂತರ ಬರೆಯುತ್ತಾರೆ. ಈ ಹವ್ಯಾಸದ ಕುರಿತು ಅವರನ್ನು ಪ್ರಶ್ನಿಸಿದರೆ, ತಮ್ಮ ತಂದೆಯವರಾದ ಸೈಯದ್ ಮಿರಾಮೋಹಿಯುದ್ದೀನ್ ಖಾದ್ರಿ ಅವರಿಗೆ ಇದೇ ರೀತಿಯ ಹವ್ಯಾಸ ಇತ್ತು. ಅವರಿಂದ ಪ್ರಭಾವಿತನಾದ ನಾನು ನಿತ್ಯದ ಘಟನೆಗಳನ್ನು ಡೈರಿ ಪುಸ್ತಕದಲ್ಲಿ ದಾಖಲಿಸುವ ಹವ್ಯಾಸ ರೂಢಿ ಸಿಕೊಂಡೆ ಎಂದು ಮಹಿಮೂದ್ ಖಾದ್ರಿ ಉತ್ತರಿಸುತ್ತಾರೆ. ಪ್ರತಿ ದಿನ  ಬರೆಯದಿದ್ದರೆ ಚಡಪಡಿಸುವ ಭಾವನೆಯಿಂದ ಸಮಾಧಾನವೇ ಇರುವುದಿಲ್ಲ. ರಾತ್ರಿಯಾದರೂ ಕೂಡ ಅಂದಿನ ಎಲ್ಲಾ ಘಟನೆಗಳನ್ನು ನೆನೆಪಿಸಿಕೊಂಡು ಡೈರಿಯಲ್ಲಿ ಬರೆದು ನಂತರ ಮಲಗುತ್ತೇನೆ ಎಂದು ಮಹಿಮೂದ್ ಖಾದ್ರಿ ವಿವರಿಸುತ್ತಾರೆ. ದ್ವಿತೀಯ ಪಿಯುಸಿ ವರೆಗೆ ಓದಿರುವ ಮಹಿಮೂದ್ ಖಾದ್ರಿ ಈ ಎಲ್ಲಾ ಮಾಹಿತಿಗಳನ್ನು ಕನ್ನಡದಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ.`ನಾವು ಚಿಕ್ಕವರಾಗಿದ್ದಾಗ ಮಹಿಮೂದ್ ಖಾದ್ರಿ ಅವರು ಡೈರಿಯಲ್ಲಿ ಬರೆಯುವುದನ್ನು ನೋಡಿ ಅಚ್ಚರಿಯಾಗುತ್ತಿತ್ತು. ಈಗ ಅವರ ಡೈರಿಗಳನ್ನು ಓದಿದರೆ ನಮ್ಮ ಬಾಲ್ಯದ ಹಲವು ಘಟನೆಗಳು ನೆನಪಿಗೆ ಬರುತ್ತವೆ. ಅವರು ಬರೆದ ಡೈರಿಗಳ ಮಹತ್ವ ನಮಗೆ ಈಗ ಗೊತ್ತಾಗುತ್ತಿದೆ~ ಎನ್ನುತ್ತಾರೆ ಮಹಿಮೂದ್ ಖಾದ್ರಿ ಅವರ ಸಹೋದರ ಸಂಬಂಧಿ ರಾಯಚೂರಿನ ಸರ್ಕಾರಿ ಪದವಿ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದ ಉಪನ್ಯಾಸಕ ಸೈಯದ್ ಮಿನಾಜ್ ಉಲ್ ಹಸನ್ ಮಾನ್ವಿ.  ಮಹಿಮೂದ್ ಖಾದ್ರಿ ಅವರು ತಮ್ಮ ಡೈರಿ ಪುಸ್ತಕಗಳಲ್ಲಿ ದಾಖಲಿಸಿದ ಹಲವು ಸಂಗತಿಗಳು ಭವಿಷ್ಯದಲ್ಲಿ ಅಧ್ಯಯನದ ಆಸಕ್ತರಿಗೆ ಅಗತ್ಯ ಮಾಹಿತಿ ಒದಗಿಸುವುದರಲ್ಲಿ ಸಂದೇಹ ಇಲ್ಲ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.