ಮಂಗಳೂರು: ಕೈಗಾರಿಕೀಕರಣ, ಕಾಂಕ್ರಿಟೀಕರಣ ಮತ್ತಿತರ ವ್ಯವಸಾಯೇತರ ಉದ್ದೇಶದಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ಭತ್ತದ ಕ್ಷೇತ್ರ ಪ್ರತಿವರ್ಷ ಕಡಿಮೆಯಾಗುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಈ ಸಂಬಂಧ ಭತ್ತದ ಕೃಷಿಕರಿಗೆ ಉತ್ತೇಜನ ನೀಡುವಂತಾಗಲು ಕೇರಳ ಮಾದರಿ ಪ್ಯಾಕೇಜ್ ಘೋಷಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವೊಂದನ್ನು ಮಂಗಳವಾರ ಅಂಗೀಕರಿಸಿದೆ.

ನಗರದಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸಭೆಯಲ್ಲಿ ಮಾತನಾಡಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕೃಷಿಕ ಸಮಾಜದ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ತೀರ್ಮಾನ ಪ್ರಕಟಿಸಿದರು.ಪ್ರಸಕ್ತ ಸಾಲಿನಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಹಾಗೂ ಕೃಷಿ ಕ್ಷೇತ್ರ ವಿಸ್ತೀರ್ಣ ಕುಸಿತವಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಪದ್ಮಯ ನಾಯಕ್, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 66755 ಹೆಕ್ಟೇರ್ನಲ್ಲಿ ಆಹಾರ ಧಾನ್ಯಗಳ ಉತ್ಪಾದನೆಗೆ ಗುರಿ ಹಾಕಿಕೊಳ್ಳಲಾಗಿದ್ದು, ಫೆಬ್ರುವರಿ ಅಂತ್ಯಕ್ಕೆ 58127 ಹೆಕ್ಟೇರ್ (ಶೇ. 87) ಮಾತ್ರ ಪೂರ್ಣಗೊಂಡಿದೆ. ಭತ್ತದ ಗದ್ದೆಗಳ ಕ್ಷೇತ್ರ ಪ್ರತಿವರ್ಷ ಕಡಿಮೆಯಾಗುತ್ತಿದ್ದು, ಇದನ್ನು ತಡೆದು ಭತ್ತದ ಕೃಷಿಗೆ ಉತ್ತೇಜನ ನೀಡುವಂತಾಗಲು ಕೇರಳ ಮಾದರಿಯನ್ನು ಇಲ್ಲೂ ಅನುಷ್ಠಾನಕ್ಕೆ ತರಬೇಕು ಎಂಬ ಸಲಹೆ ನೀಡಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಕೃಷಿಕ ಸಮಾಜದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ, ಕೇರಳದಲ್ಲಿ ಭತ್ತದ ಬೆಳೆ ಉತ್ತೇಜನಕ್ಕೆ ಭತ್ತ ಬೆಳೆ ಕಾರ್ಯಪಡೆಯೇ ಇದೆ. ಇತರೆ ಬೆಳೆ ಬಿಟ್ಟು ಭತ್ತ ಬೆಳೆಯಲು ಮುಂದೆ ಬರುವವರಿಗೆ ಅಲ್ಲಿಯ ಸರ್ಕಾರ ಪ್ರೋತ್ಸಾಹಧನವನ್ನೂ ನೀಡುತ್ತಿದೆ. ಹೀಗಾಗಿ ಅಲ್ಲಿ ಭತ್ತದ ಗದ್ದೆಗಳು ಅಷ್ಟಾಗಿ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲ. ನಮ್ಮಲ್ಲೂ ಇಂತಹ ವ್ಯವಸ್ಥೆ ಜಾರಿಗೆ ಬರುವುದು ಅಗತ್ಯ ಎಂದು ಪ್ರತಿಪಾದಿಸಿದರು.

ಕೃಷಿಕ ಸಮಾಜದ ಅಧ್ಯಕ್ಷರ ಸಲಹೆಗೆ ಸಹಮತ ಸೂಚಿಸಿದ ಸಿಇಒ ‘ಜಿಲ್ಲಾ ಪಂಚಾಯಿತಿಯಿಂದಲೂ ಈ ಕುರಿತು ನಿರ್ಣಯ ಅಂಗೀಕರಿಸಿ ಕಳುಹಿಸೋಣ. ಕರಾವಳಿ ಜಿಲ್ಲೆಗಳಿಗಾಗಿಯೇ ಇಂತಹ ನೀತಿ ಇರಬೇಕು’ ಎಂದರು. ವಾಣಿಜ್ಯ ಉದ್ದೇಶಕ್ಕೆ ಭತ್ತದ ಗದ್ದೆಗಳು ಬಳಕೆಯಾಗುತ್ತಿರುವುದು ಒಂದೆಡೆಯಾದರೆ ಕೃಷಿ ಕಾರ್ಮಿಕರ ಕೊರತೆಯೂ ತೀವ್ರವಾಗಿದೆ. ಹೀಗಾಗಿ ಕೃಷಿಯಲ್ಲಿ ಈಗ ಯಾರಿಗೂ ಆಸಕ್ತಿ ಇಲ್ಲ. ಇದನ್ನು ತಪ್ಪಿಸಲು ಶಾಲಾ ಹಂತದಲ್ಲಿಯೇ ಕೃಷಿ ಕುರಿತು ಆಸಕ್ತಿ ಮೂಡಿಸಲು ಚಿಣ್ಣರ ಜಿಲ್ಲಾ ಪ್ರವಾಸದಲ್ಲಿ ಪ್ರಗತಿಪರ ಕೃಷಿಕರ ತೋಟಗಳಿಗೂ ಭೇಟಿ ನೀಡುವ ಕಾರ್ಯಕ್ರಮ ಏರ್ಪಡಿಸಬೇಕು, ಈ ಬದಲಾವಣೆ ಜಿಲ್ಲಾ ಮಟ್ಟದಲ್ಲಿಯೇ ಮಾಡಬಹುದು ಎಂಬ ಸಿಇಒ ಸಲಹೆಗೆ ಜಿ.ಪಂ. ಅಧ್ಯಕ್ಷೆ ಶೈಲಜಾ ಭಟ್ ಸಹ ಒಪ್ಪಿಗೆ ಸೂಚಿಸಿದರು.

‘ಕೊಳವೆ ಬಾವಿ ಎಲ್ಲಿ?’: ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪ್ರಸಕ್ತ ಸಾಲಿನಲ್ಲಿ 150 ಕೊಳವೆಬಾವಿ ತೆರೆಯಲು ಗುರಿ ಹೊಂದಲಾಗಿದ್ದರೂ ಇಲ್ಲಿಯವರೆಗೆ ಕೇವಲ ಪೂರ್ಣಗೊಂಡಿದ್ದು 28 ಮಾತ್ರ. ನೀರಿನ ಕೊರತೆ ಇರುವ ಈ ದಿನಗಳಲ್ಲಿ ಈ ವೈಫಲ್ಯ ಏಕೆ ಎಂದು ನಿಗಮದ ವ್ಯವಸ್ಥಾಪಕರನ್ನು ಶೈಲಜಾ ಭಟ್ ತರಾಟೆ ತೆಗೆದುಕೊಂಡರು. ಆದರೆ ವೈಫಲ್ಯಕ್ಕೆ ಸ್ಪಷ್ಟ ಕಾರಣ ನೀಡದ ವ್ಯವಸ್ಥಾಪಕ, ‘ಆದಷ್ಟು ಬೇಗ ಉಳಿದ ಕೊಳವೆ ಬಾವಿಗಳನ್ನು ಪೂರ್ಣಗೊಳಿಸಲಾಗುವುದು’ ಎಂಬ ಭರವಸೆಯ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ್ ಮಾತನಾಡಿ, ಜಿಲ್ಲೆಯ ಬಹುತೇಕ ಇಲಾಖೆಗಳಲ್ಲಿ ಕನ್ನಡ ಬಳಕೆ ಶೇ. 90ರಿಂದ 100ರಷ್ಟಿದ್ದು ಸಾಕಷ್ಟು ಪ್ರಗತಿಯಾಗಿದೆ ಎಂಬ ಮಾಹಿತಿ ನೀಡಿದರು. ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಹಲಗಪ್ಪ ಇಲಾಖೆ ಪ್ರಗತಿ ವರದಿ ನೀಡಿ, ಕೃತಕ ಗರ್ಭಧಾರಣೆ ವಿಷಯದಲ್ಲಿ ಜಿಲ್ಲೆಯಲ್ಲಿ ಗುರಿಮೀರಿ ಸಾಧನೆ ಮಾಡಲಾಗಿದ್ದರೆ, ರಾಸುಗಳ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯ ಇದ್ದು ಈ ತಿಂಗಳೊಳಗೆ ಪೂರ್ಣ ಪ್ರಗತಿ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.

ವಿವಿಧ ಇಲಾಖೆಗಳಲ್ಲಿ ಅಂಗವಿಕಲರಿಗೆ ಕಾಯ್ದಿರಿಸಲಾದ ಯೋಜನೆಗಳಲ್ಲಿ ನಿರೀಕ್ಷಿತ ಪ್ರಗತಿಯಾಗದ ಮಾಹಿತಿಯಿಂದ ಅಸಮಾಧಾನಗೊಂಡ ಸಿಇಒ, ಎಲ್ಲದಕ್ಕೂ ತಾಂತ್ರಿಕ ಕಾರಣ ಮುಂದಿಡದೆ ಈ ತಿಂಗಳ ಒಳಗೆ ಗುರಿ ಸಾಧಿಸಲೇಬೇಕು ಎಂದು ತಾಕೀತು ಮಾಡಿದರು.ಇಂದಿರಾ ಆವಾಜ್, ಅಶ್ರಯ, ಅಂಬೇಡ್ಕರ್ ವಸತಿ ಯೋಜನೆಯಡಿ 2008ರಿಂದ ಇಲ್ಲಿಯವರೆಗೆ ನಿರೀಕ್ಷಿತ ಪ್ರಗತಿ ಸಾಧಿಸಲಾಗಿಲ್ಲ. ದಾಖಲೆಗಳ ಪರಿಶೀಲನೆ ಮತ್ತಿತರ ನೆಪ ಮುಂದಿಟ್ಟುಕೊಂಡು ಕಾಮಗಾರಿ ನಿಲ್ಲಿಸುವುದು ಬೇಡ ಎಂದು ಅಧಿಕಾರಿಗಳಿಗೆ ಜಿ.ಪಂ. ಅಧ್ಯಕ್ಷೆ ಸೂಚಿಸಿದರು.

ಕೆರೆಗಳ ಅಭಿವೃದ್ಧಿ: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 112 ಕೆರೆಗಳ ಹೂಳು ತೆಗೆಯಲು ರೂ. 35 ಕೋಟಿ ಯೋಜನೆ ಪ್ರಸ್ತಾವನೆಯೊಂದನ್ನು ಜಿಲ್ಲಾಧಿಕಾರಿ ಮೂಲಕ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸಣ್ಣ ನೀರಾವರಿ ಇಲಾಖೆ ಮೂಲಕ ಜಿಲ್ಲೆಯಲ್ಲಿ 31 ವೆಂಟೆಡ್ ಡ್ಯಾಂಗಳ ನಿರ್ಮಾಣಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿ.ಪಂ. ಕಾರ್ಯನಿರ್ವಾಹಕ ಎಂಜಿನಿಯರ್ ಸತ್ಯನಾರಾಯಣ ತಿಳಿಸಿದರು.

‘ಈ ತಿಂಗಳಲ್ಲಿಯೇ ಎಲ್ಲ ಕೆಲಸ ಮುಗಿಸ್ತೇವೆ ಸರ್!’
ಪ್ರಸಕ್ತ ಹಣಕಾಸು ವರ್ಷದ ಕೊನೆಯ ಕೆಡಿಪಿ ಸಭೆ ಇದಾಗಿರುವುದರಿಂದ ಬಾಕಿ ಇರುವ ಕಾಮಗಾರಿಗಳನ್ನು ಮಾರ್ಚ್ 31ಕ್ಕೂ ಮುನ್ನವೇ ಮುಗಿಸಲೇಬೇಕಿದೆ. ಮಾರ್ಚ್ 15 ದಾಟಿದರೂ ವಿವಿಧ ಇಲಾಖೆಗಳ ಯೋಜನೆಗಳು ನಿರೀಕ್ಷಿತ ಪ್ರಗತಿ ಸಾಧಿಸದ ಪರಿಣಾಮ ಸಂಬಂಧಿಸಿದ ಇಲಾಖೆಗಳ ಅನುಷ್ಠಾನ ಅಧಿಕಾರಿಗಳಲ್ಲಿ ಬಹುತೇಕರು ನೀಡಿದ ಉತ್ತರ ‘ಈ ತಿಂಗಳಲ್ಲಿ ಎಲ್ಲ ಮುಗಿಸ್ತೇವೆ ಸರ್’!

ಹನ್ನೊಂದೂವರೆ ತಿಂಗಳಲ್ಲಿ ಆಗದ ಕೆಲಸ 15 ದಿನಗಳಲ್ಲಿ ಮುಗಿಸುವುದಾದರೂ ಹೇಗೆ ಎಂಬ ಸಿಇಒ ಶಿವಶಂಕರ್, ಅಧ್ಯಕ್ಷೆ ಶೈಲಜಾ ಭಟ್ ಅವರ ಕಳವಳಕಾರಿ ಪ್ರಶ್ನೆಗೆ ಅಧಿಕಾರಿಗಳು ನೀಡಿದ ಉತ್ತರ ಇದೇ ಆಗಿತ್ತು.ದೀನ ದುರ್ಬಲ ವರ್ಗದವರ ವಸತಿ ಸಮಸ್ಯೆಗೆ ಪರಿಹಾರವಾಗುವ ಅಂಬೇಡ್ಕರ್, ಆಶ್ರಯ, ಇಂದಿರಾ ಆವಾಜ್ನಂತಹ ಪ್ರಮುಖ ಯೋಜನೆಗಳಲ್ಲಿ ಕೈಗೆತ್ತಿಕೊಂಡ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲು 5-6 ತಿಂಗಳುಗಳೇ ಬೇಕಾಗಬಹುದು. ಆದರೂ ಅಧಿಕಾರಿಗಳು ನೀಡಿದ ಉತ್ತರ, ‘ಗುರಿ ಪೂರ್ಣಗೊಳಿಸಲು ಇನ್ನೂ 15 ದಿನ ಕಾಲಾವಕಾಶ ಇದೆಯಲ್ಲ’ ಎಂಬುದೇ ಆಗಿದ್ದು ಸಭೆಯಲ್ಲಿದ್ದ ಹಲವರ ಹುಬ್ಬೇರುವಂತೆ ಮಾಡಿತು!

‘ಶೂನ್ಯ ಸಾಧನೆ!’
ಆರೋಗ್ಯ ಇಲಾಖೆಯ ಕುಟುಂಬ ಕಲ್ಯಾಣ ಮತ್ತು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ (ಪುರುಷರಿಗೆ) ವಿಷಯದಲ್ಲಿ ಜಿಲ್ಲೆಯಲ್ಲಿ ಸಾಧನೆ ಶೂನ್ಯ ಎಂಬ ಟೀಕೆ ಕಳೆದ ಸಭೆಯಲ್ಲಿ ಕೇಳಿಬಂದಿತು. ಈ ಬಗ್ಗೆ ಕೈಗೊಂಡ ಕ್ರಮಗಳೇನು ಎಂಬ ಸಿಇಒ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶ್ರೀರಂಗಪ್ಪ, ಪುರುಷರಿಗೆ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಿಸುವ ವಿಚಾರದಲ್ಲಿ ಇಲಾಖೆಗೆ ಗ್ರಾಮ ಪಂಚಾಯಿತಿಯಿಂದಲೂ ಸಹಕಾರ ಬೇಕಿದೆ ಎಂದರು.

ಡಿಪಿಟಿ, ಬಿಸಿಜಿ ಲಸಿಕೆ ಮತ್ತು ಪೋಲಿಯೊ ಹನಿ ಹಾಕಿಸುವ ವಿಷಯದಲ್ಲಿ ಶೇ. 60ರಿಂದ 65ರಷ್ಟು ಗುರು ಸಾಧನೆಯಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಪ್ರಗತಿಯಾಗಿದೆ ಎಂದರು.

ಕೆಡಿಪಿ ಸಭೆ ನಿರ್ಧಾರ..
4ಚಿಣ್ಣರ ಅನುಭವಕ್ಕೆ ಗದ್ದೆ, ತೋಟ ಭೇಟಿ
4ಅಂಗವಿಕಲರ ಕಲ್ಯಾಣ ಯೋಜನೆ ವಿಫಲ
4 ಗುರಿ ಸಾಧಿಸದ ಸಿಬ್ಬಂದಿಗೆ ಸಿಇಒ ತಾಕೀತು
4ವಸತಿ ಯೋಜನೆಗಳಲ್ಲಿ ಭಾರಿ ಹಿನ್ನಡೆ
4112 ಕೆರೆಗಳ ಅಭಿವೃದ್ಧಿಗೆ 35 ಕೋಟಿ

‘ಭತ್ತದ ಕೃಷಿಕರಿಗೆ ಉತ್ತೇಜನ ನೀಡುವಂತಾಗಲು ಕೇರಳ ಮಾದರಿ ಪ್ಯಾಕೇಜ್ ಘೋಷಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವ ನಿರ್ಣಯ ಜಿಲ್ಲಾ ಪಂಚಾಯಿತಿಯಲ್ಲೂ ಅಂಗೀಕರಿಸಿ ಕಳುಹಿಸೋಣ. ಕರಾವಳಿ ಜಿಲ್ಲೆಗಳಿಗಾಗಿಯೇ ಇಂತಹ ನೀತಿ ಇರಬೇಕು
ಪಿ. ಶಿವಶಂಕರ್, ಸಿಇಒ ದ.ಕ ಜಿಪಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.