ಸೋಮವಾರ, ಮಾರ್ಚ್ 8, 2021
25 °C

ವಿಶ್ವದ ಅತಿ ದೊಡ್ಡ ರೈಲು ಸುರಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವದ ಅತಿ ದೊಡ್ಡ ರೈಲು ಸುರಂಗ

ಜಗತ್ತಿನ ಅತಿ ದೊಡ್ಡ ರೈಲು ಸುರಂಗ ಯಾವುದು ಎಂದು ಕೇಳಿದರೆ ಮೊನ್ನೆಯವರೆಗೂ ಜಪಾನಿನ ಹದಿನೈದು ಮೈಲುದ್ದದ ಸುರಂಗದತ್ತ ಬೆಟ್ಟು ಮಾಡಿ ತೋರಿಸುತ್ತಿದ್ದೆವು. ಆದರೆ ಇನ್ನು ಹಾಗಿಲ್ಲ. ಇದಕ್ಕಿಂತ ಎರಡು ಪಾಲು ದೊಡ್ಡದಿರುವ ಗೊಥ್ವಾರ್ಡ್ ಸುರಂಗ ಹಾದಿ ಸ್ವಿಜಲ್ಯಾಂಡ್‌ನಲ್ಲಿ ನಿರ್ಮಾಣವಾಗಿದೆ. ಈ ವರ್ಷ ಮೇ ಮೂವತ್ತರಂದು ಅದರಲ್ಲಿ ಪರೀಕ್ಷಾರ್ಥ ರೈಲು ಓಡಾಟವೂ ನಡೆದಿದೆ. ಡಿಸೆಂಬರ್‌ ತಿಂಗಳಿನಿಂದ ಪೂರ್ಣ ಪ್ರಮಾಣದಲ್ಲಿ ಸರಾಗವಾಗಿ ಪ್ರಯಾಣಿಕ ಮತ್ತು ಸರಕು ಸಾಗಣೆಯ ರೈಲುಗಳು ಓಡಾಡಲಿವೆ. ಈ ಅದ್ಭುತ ಸುರಂಗ 35.5 ಮೈಲುಗಳಷ್ಟು ದೀರ್ಘವಾಗಿದೆ.ಸ್ವಿಜಲ್ಯಾಂಡಿನ ಆಲ್ಪ್ಸ್ ಪರ್ವತ ಸಮುದ್ರ ಮಟ್ಟದಿಂದ ಅತಿ ಎಂದರೆ 1801 ಅಡಿಗಳು, ಕಡಿಮೆಯೆಂದರೆ  1024 ಅಡಿಗಳಷ್ಟು ಎತ್ತರವಾಗಿದೆ. ಜುರಿಚ್‌ನಿಂದ ಮಿಲಾನ್‌ಗೆ ಹೋಗಲು ಈ ಮೊದಲು ನಾಲ್ಕು ತಾಸುಗಳು ಬೇಕಾಗುತ್ತಿತ್ತು; ಆದರೆ ಈಗ ಈ ನೂತನ ದಾರಿಯ ನಿರ್ಮಾಣದಿಂದ ಪ್ರಯಾಣದ ಅವಧಿಯಲ್ಲಿ ಒಂದು ತಾಸಿನ ಉಳಿತಾಯವೂ ಆಗಲಿದೆ. ಆಲ್ಪ್ಸ್ ಪರ್ವತದ ಎಂಟು ಸಾವಿರ ಅಡಿಗಳಷ್ಟು ಕೆಳಗೆ ಈ ವಿಶಿಷ್ಟ ಸುರಂಗವನ್ನು ಕೊರೆಯಲಾಗಿದೆ. 70 ವರ್ಷಗಳ ಹಿಂದೆಯೇ ಸ್ವಿಸ್ ತಜ್ಞರು ಈ ಹಾದಿಯ ಬಗೆಗೆ ನೀಲಿನಕ್ಷೆಯನ್ನು ತಯಾರಿಸಿದ್ದರು. ಅದರ ವಿವಿಧ ಹಂತದ ಪರಿಶೀಲನೆಗಳು ನಡೆದು 1996ರಲ್ಲಿ ಕೆಲಸ ಉದ್ಘಾಟನೆಗೊಂಡಿತು. ಆದರೆ ಇದಕ್ಕೆ ಪೂರ್ಣವಾಗಿ ಕೆಲಸ ನಡೆದಿರುವುದು ಸತತ ಹದಿನೇಳು ವರ್ಷಗಳ ಕಾಲ. ಸರಾಸರಿ ದಿನಕ್ಕೆ ಎರಡು ಸಾವಿರ ಕಾರ್ಮಿಕರ ದುಡಿಮೆ ಇದಕ್ಕಾಗಿ ವ್ಯಯವಾಗಿದೆ. ಆದರೂ ದಿನದಲ್ಲಿ ಕೊರೆದ ಸುರಂಗ ಕೇವಲ ನೂರು ಅಡಿಗಳಷ್ಟು ಮಾತ್ರ.ಸುರಂಗವನ್ನು ಶೇ. 80ರಷ್ಟು ಭಾಗ ಸಾಂಪ್ರದಾಯಿಕ ವಿಧಾನದಿಂದಲೇ ಕೊರೆಯಲಾಗಿದೆ. ಅದಕ್ಕಾಗಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಉಪಯೋಗಿಸಿದ್ದಾರೆ. ಪೂರ್ವ ಮತ್ತು ಪಶ್ಚಿಮಕ್ಕೆ ಎರಡು ರೈಲು ದಾರಿಗಳು ಇದರಲ್ಲಿವೆ. ಒಂದು ರೈಲು ಹೋಗುವಾಗ ಇನ್ನೊಂದು ಹಾದಿಯಲ್ಲಿ ರೈಲು ಬರಬಹುದು.ಇದರೊಳಗಿನ ಸಂಚಾರದ ವೇಗ ತಾಸಿಗೆ 250 ಮೈಲುಗಳಷ್ಟಿದೆಯಂತೆ. ಇದಕ್ಕೆ ಆಗಿರುವ ವೆಚ್ಚ 12 ಶತಕೋಟಿ ಅಮೆರಿಕನ್ ಡಾಲರುಗಳು.  73 ಬಗೆಯ ಮೃದು ಮತ್ತು ಗಟ್ಟಿ ಕಲ್ಲುಗಳನ್ನು ಕೊರೆಯುವ ಹಂತದಲ್ಲಿ ಎರಡು ಮಿಲಿಯನ್ ಟ್ರಕ್ ಲೋಡುಗಳಷ್ಟು ಅದರ ಧೂಳನ್ನು ಹೊರಗೆ ಸಾಗಿಸಲಾಗಿದೆ. ಸುರಂಗ ನಿರ್ಮಾಣದಿಂದಾಗಿ ಸಹಸ್ರಾರು ಎಕರೆಗಳಷ್ಟು ಕಾಡು, ನದಿ ಮತ್ತು ಕೃಷಿಭೂಮಿ, ವಾಸದ ಮನೆಗಳು ನಾಶವಾಗದೆ ಉಳಿದುಕೊಂಡಿವೆ.ಸುರಂಗದೊಳಗೆ ಹಾಕಿರುವ ತಾಮ್ರದತಂತಿ ಉದ್ದವೇ ಎರಡು ಸಾವಿರ ಮೈಲುಗಳು. ಇದು ಮ್ಯಾಡ್ರಿಡ್‌ನಿಂದ ಮಾಸ್ಕೋ ತನಕ ಎಳೆಯಬಹುದಾದಷ್ಟು ಉದ್ದ. ಸುರಂಗದ ಒಳಗೆ ನಿರಂತರ ವಿದ್ಯುತ್ ಸಂಪರ್ಕ ಇರುತ್ತದೆ. ದೂರಸಂಪರ್ಕದ  ವ್ಯವಸ್ಥೆಯೂ ಇದೆ. ರೇಡಿಯೋ, ರಕ್ಷಣಾ ಸೌಲಭ್ಯಗಳೂ ಇವೆ. ಮೂಲ ಸೌಕರ್ಯಗಳಾದ ಗಾಳಿ, ನೀರು, ಅಗ್ನಿಶಾಮಕ ದಳಗಳು, ಹವಾ ನಿಯಂತ್ರಿತ ಕೊಠಡಿಗಳಿವೆ. ತುರ್ತು ರಕ್ಷಣೆಗೆ ಬೇಕಾದ ಅಗತ್ಯ ವ್ಯವಸ್ಥೆಯೂ ಇದೆ. ಪರ್ವತದೊಳಗಿನ ವಿಹಂಗಮ ಯಾತ್ರೆಗೆ ಕಾತರರಾಗಿ ಕಾಯುತ್ತಿದ್ದಾರೆ ಆ ದೇಶದ ಜನತೆ.ಈ ಸುರಂಗದ ನಿರ್ಮಾಣದಿಂದಾಗಿ ಪ್ರತಿದಿನ ಎರಡೂ ಮಾರ್ಗಗಳಲ್ಲಿ 260 ಸರಕು ಸಾಗಣೆ ಮತ್ತು 65 ಪ್ರಯಾಣಿಕರ ರೈಲುಗಳು ಸಂಚರಿಸಲಿವೆ. ಇಟಲಿ, ಜಿನೋವಾಗಳಿಗೆ ಸುಲಭ ಸಂಪರ್ಕವಾಗಲಿದೆ.20 ದಶಲಕ್ಷ ಟನ್ನುಗಳಿಗೆ ಮೀಸಲಾಗಿದ್ದ ಸರಕು ಸಾಗಣೆ 50 ದಶಲಕ್ಷ ಟನ್ನುಗಳಿಗೇರಲಿದೆ. ಸುಮಾರು ಎರಡು ಕೋಟಿ ಜನರಿಗೆ ಇದು ಲಾಭ ತರಲಿದೆ. ಮೌಲ್ಯವರ್ಧಿತ ಸರಕು ಮತ್ತು ಪ್ರಯಾಣಿಕರ ಶೀಘ್ರಸಂಚಾರದ ಕನಸು ಕೈಗೂಡಲಿದೆ. ಈಗಾಗಲೇ  160 ಚಾಲಕರು  ಸುರಕ್ಷಾ ಸಂಚಾರದ ಐದು ಸಾವಿರದಷ್ಟು ಯಶಸ್ವಿ ಪ್ರಯೋಗಗಳನ್ನು ನಡೆಸಿದ ಮೇಲೆಯೇ ಈ ಡಿಸೆಂಬರ್‌ ತಿಂಗಳಿನಿಂದ ಅದು ಪೂರ್ಣಪ್ರಮಾಣದ ಮುಕ್ತ ಸಂಚಾರಕ್ಕೆ ಯೋಗ್ಯ ಎಂದು ತೀರ್ಮಾನಕ್ಕೆ ಬಂದಿರುವುದು.ಸುರಂಗವನ್ನು ಕೊರೆಯುವಾಗ ಆಕಸ್ಮಿಕ ಅವಘಡಗಳಿಗೆ ತುತ್ತಾಗಿ ಅಕಾಲ ಮರಣಕ್ಕೆ ತುತ್ತಾದ ಒಂಬತ್ತು ಮಂದಿ ಕಾರ್ಮಿಕರಿಗೆ ಉದ್ಘಾಟನೆಯ ಸಂದರ್ಭದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

- ಆರ್. ಎಸ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.