ಶನಿವಾರ, ಮೇ 21, 2022
27 °C

ವಿಶ್ವ ಜನಸಂಖ್ಯೆ 700 ಕೋಟಿ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ (ಪಿಟಿಐ): ಇನ್ನು ಐದು ದಿನಗಳಲ್ಲಿ ವಸುಂಧರೆಯ ಒಡಲು ಏಳು ನೂರು ಕೋಟಿ ಜನರಿಂದ ತುಂಬಿಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಒಂದೆಡೆ ಮನುಷ್ಯನ ಜೀವತಾವಧಿ ದಿನೇ ದಿನೇ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಆಧುನಿಕ ಆರೋಗ್ಯ ಸೇವೆಗಳು ಪರಿಪೂರ್ಣವಾಗಿ ಎಲ್ಲರನ್ನು ತಲುಪಲು ವಿಫಲವಾಗಿವೆ.ಆದರೆ, ಭವಿಷ್ಯದಲ್ಲಿ ಯುವಕರ ಪಾತ್ರ ಮಹತ್ತರವಾಗುವುದರಿಂದ ಜಾಗತಿಕ ಸಮುದಾಯವು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ವಿಶ್ವಸಂಸ್ಥೆ ಮನವಿ ಮಾಡಿಕೊಂಡಿದೆ.ಈಗ ನಾವು ತೆಗೆದುಕೊಂಡ ತೀರ್ಮಾನಗಳೇ ಮುಂದೆ ನಮ್ಮ ಸುಸ್ಥಿರ, ಸಮೃದ್ಧ, ಆರೋಗ್ಯಪೂರ್ಣ, ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಹಿನ್ನಡೆ ವಿಚಾರದ ಭವಿಷ್ಯವನ್ನು ನಿರ್ಧರಿಸುತ್ತವೆ. ಆದ್ದರಿಂದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ವಿಶ್ವಸಂಸ್ಥೆಯ ವರದಿ ಹೇಳಿದೆ.`ಭವಿಷ್ಯದಲ್ಲಿ ಆರ್ಥಿಕ ಅಭಿವೃದ್ಧಿ ಸಾಧಿಸಬೇಕಿದ್ದರೆ ಜಾಗತಿಕ ಸಮುದಾಯವು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಅವಕಾಶಗಳ ಸದ್ಬಳಕೆಗೆ ಆದ್ಯತೆ ಕೊಡಬೇಕು. ಇಲ್ಲದಿದ್ದರೆ ಸರ್ಕಾರಗಳು ತಮ್ಮ ದೇಶವಾಸಿಗಳಿಗೆ ಕನಿಷ್ಠ ಮೂಲ ಸೌಕರ‌್ಯಗಳನ್ನು ಸಮರ್ಪಕವಾಗಿ ಒದಗಿಸಲಾಗದೆ ಯಾವತ್ತೂ ವಿಷಾದ ವ್ಯಕ್ತಪಡಿಸುವ ಸ್ಥಿತಿಯಲ್ಲೇ ಇರಬೇಕಾಗುತ್ತದೆ. ಅದರಲ್ಲೂ ಅಭಿವೃದ್ಧಿಶೀಲ ರಾಷ್ಟ್ರಗಳು ಈ ದಿಸೆಯಲ್ಲಿ ಹೆಚ್ಚು ಚಿಂತಿಸುವ ಅಗತ್ಯವಿದೆ~ ಎಂದು ವಿಶ್ವಸಂಸ್ಥೆಯ ಜನಸಂಖ್ಯೆ ನಿಧಿ (ಯುಎನ್‌ಎಫ್‌ಪಿಎ) ಕಾರ್ಯನಿರ್ವಾಹಕ ನಿರ್ದೇಶಕ  ಬಬಾತುಂಡೆ ಒಸೊತಿಮೆಹಿನ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.