ಬುಧವಾರ, ಏಪ್ರಿಲ್ 14, 2021
23 °C

ವಿಶ್ವ ಪರಂಪರೆಯ ಪಟ್ಟಿಗೆ ಪಶ್ಚಿಮ ಘಟ್ಟಗಳು: ಕೇಂದ್ರದ ಕ್ರಮಕ್ಕೆ ರಾಜ್ಯದ ತೀವ್ರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ 10 ಪ್ರದೇಶಗಳನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸುವ `ಯುನೆಸ್ಕೊ~ (ವಿಶ್ವ ಸಂಸ್ಥೆಯ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ) ನಿರ್ಧಾರವನ್ನು ವಿರೋಧಿಸುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿದೆ.ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. 10 ಪ್ರದೇಶಗಳನ್ನು ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆಗೊಳಿಸುವ ಒಪ್ಪಂದಕ್ಕೆ ರಾಜ್ಯ ಸಹಿ ಮಾಡಬಾರದು ಎಂಬ ತೀರ್ಮಾನವನ್ನೂ ತೆಗೆದುಕೊಳ್ಳಲಾಗಿದೆ.ಮುಖ್ಯಮಂತ್ರಿಗಳ ಗೃಹ ಕಚೇರಿ `ಕೃಷ್ಣಾ~ದಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್, `ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರ ಹೊಸದಲ್ಲ. ವಿಶ್ವ ಪರಂಪರೆಯ ಪಟ್ಟಿಗೆ ಪಶ್ಚಿಮ ಘಟ್ಟ ಸಾಲಿನ ಕೆಲವು ಪ್ರದೇಶಗಳ ಸೇರ್ಪಡೆಗೆ ಸರ್ಕಾರ ಹಿಂದೆಯೂ ವಿರೋಧ ವ್ಯಕ್ತಪಡಿಸಿತ್ತು. ಇಂದಿಗೂ ಅದೇ ನಿಲುವಿಗೆ ಬದ್ಧವಾಗಿದೆ~ ಎಂದು ಸ್ಪಷ್ಟಪಡಿಸಿದರು.`ಅಭಿವೃದ್ಧಿಗೆ ಅಡಚಣೆ~: ಇದೇ   ವಿಷಯದ ಕುರಿತು ವಿಧಾನಸೌಧದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೋಗೇಶ್ವರ್, `ಯುನೆಸ್ಕೊದ ಈ ಕ್ರಮದಿಂದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ಸಾಧ್ಯವಾಗುವುದಿಲ್ಲ.ಹಾಗಾಗಿ, ವಿಶ್ವ ಪರಂಪರೆಯ ಪಟ್ಟಿಗೆ ಈ ಪ್ರದೇಶಗಳನ್ನು ಸೇರಿಸಲು ಸಮ್ಮತಿ ಇಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಈ ಹಿಂದೆಯೇ ತಿಳಿಸಲಾಗಿತ್ತು. ಆದರೂ ಕೇಂದ್ರ, ರಾಜ್ಯದ ವಾದವನ್ನು ಮಾನ್ಯ ಮಾಡಿಲ್ಲ~ ಎಂದು ದೂರಿದರು.ಈಗಾಗಲೇ ಜಾರಿಯಲ್ಲಿರುವ ನಿಯಮಗಳ ಕಾರಣ, ಪಶ್ಚಿಮ ಘಟ್ಟದ ಕೆಲವು ಪ್ರದೇಶಗಳಲ್ಲಿ ರಸ್ತೆ ವಿಸ್ತರಣೆ, ವಿದ್ಯುತ್ ಸಂಪರ್ಕದಂತಹ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಹಲವು ಅಡಚಣೆಗಳು ಎದುರಾಗುತ್ತಿವೆ. ಈ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳು ಆಗದ ಕಾರಣ ನಕ್ಸಲೀಯರ ಪಿಡುಗು ಸಹ ವ್ಯಾಪಿಸಿದೆ. ಈಗ ಇವುಗಳನ್ನು ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಿದರೆ, ಅಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣ ಆಗುತ್ತದೆ ಎಂದು ಹೇಳಿದರು.ಪಶ್ಚಿಮ ಘಟ್ಟದ ಅರಣ್ಯ, ವನ್ಯಜೀವಿಗಳ ಸಂರಕ್ಷಣೆಗೆ ಅಗತ್ಯ ಕಾನೂನು ಈಗಾಗಲೇ ಇದೆ. ಅಲ್ಲಿನ ಅನೇಕ ಪ್ರದೇಶಗಳನ್ನು ವನ್ಯಜೀವಿ ಅಭಯಾರಣ್ಯ, ರಾಷ್ಟ್ರೀಯ ಜೈವಿಕ ಉದ್ಯಾನವನ, ಹುಲಿ ಅಭಯಾರಣ್ಯ ಎಂದು ಘೋಷಿಸಲಾಗಿದೆ. ಈ ಪ್ರದೇಶಗಳಿಗೆ ಅನ್ವಯ ಆಗುವಂತೆ ಪ್ರತ್ಯೇಕ ಕಾನೂನು ಇದೆ. ಈಗ ಈ ಪ್ರದೇಶಗಳನ್ನು ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಿದರೆ, ಅಲ್ಲಿ ಹೊಸ ನಿಯಮಗಳು ಜಾರಿಯಾಗುತ್ತವೆ ಎಂದು ವಿವರಿಸಿದರು.ಪಶ್ಚಿಮ ಘಟ್ಟದಲ್ಲಿ ಬರುವ ಯಾವುದಾದರೂ ಒಂದು ಪ್ರದೇಶ ಅಥವಾ ಸ್ಮಾರಕವನ್ನು ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಿದರೆ ವಿರೋಧಿಸುತ್ತಿರಲಿಲ್ಲ. ಆದರೆ ವಿಸ್ತಾರವಾದ ಪ್ರದೇಶವೊಂದನ್ನು ಈ ಪಟ್ಟಿಗೆ ಸೇರಿಸಲಾಗಿದೆ. ಆ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳನ್ನು ಪಶ್ಚಿಮ ಘಟ್ಟ ವ್ಯಾಪಿಸಿದೆ. ಇವುಗಳ ಪೈಕಿ ಕೇರಳ ಸಹ ಯುನೆಸ್ಕೊ ಕ್ರಮವನ್ನು ವಿರೋಧಿಸಿದೆ. ಗುಜರಾತ್ ಹಾಗೂ ಗೋವಾ ರಾಜ್ಯಗಳು ಮಾತ್ರ ಯುನೆಸ್ಕೊ ಕ್ರಮವನ್ನು ಸ್ವಾಗತ ಮಾಡಿವೆ ಎಂದು ಸಚಿವರು ತಿಳಿಸಿದರು.

 

ಪಶ್ಚಿಮ ಘಟ್ಟಗಳ ಹೆಸರನ್ನು ಯುನೆಸ್ಕೊಗೆ ಶಿಫಾರಸು ಮಾಡುವ ಮೊದಲು ಕೇಂದ್ರ ಸರ್ಕಾರ ಈ ಭಾಗದ ಜನಪ್ರತಿನಿಧಿಗಳ ಜೊತೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಶೃಂಗೇರಿ ಶಾಸಕ ಡಿ.ಎನ್. ಜೀವರಾಜ್ ಹೇಳಿದರು.`ರಕ್ಷಣೆಗೆ ನಮ್ಮಲ್ಲೇ ಕಾನೂನು~

`ವಿಶ್ವ ಪರಂಪರೆ ಪಟ್ಟಿಗೆ ಪಶ್ಚಿಮ ಘಟ್ಟಗಳನ್ನು ಸೇರಿಸುವುದನ್ನು ವಿರೋಧಿಸಲು ಮೇಲ್ನೋಟಕ್ಕೆ ಕಾರಣಗಳಿಲ್ಲ. ಯುನೆಸ್ಕೊ ಈ ಪ್ರದೇಶಗಳಿಗೆ ಯಾವ ನಿಯಮಾವಳಿಗಳನ್ನು ರೂಪಿಸುತ್ತದೆ ಎಂಬುದನ್ನು ಇನ್ನಷ್ಟೇ ತಿಳಿದುಕೊಳ್ಳಬೇಕು, ಅಲ್ಲಿಯವರೆಗೆ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಆದರೆ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಈ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವುದೊಂದೇ ಮಾರ್ಗ ಎಂಬುದು ಸುಳ್ಳು. ರಕ್ಷಣೆಗೆ ಸಾಕಷ್ಟು ಕಾನೂನುಗಳು ನಮ್ಮಲ್ಲೇ ಇವೆ~ 

- ಅನಂತ ಹೆಗಡೆ ಆಶೀಸರ,  ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.