ಬುಧವಾರ, ಮೇ 18, 2022
23 °C

ವೀರಶೈವ-ಲಿಂಗಾಯತ ಒಂದೇ: ಸಾಣೇಹಳ್ಳಿ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: `ವೀರಶೈವ ಮತ್ತು ಲಿಂಗಾಯತ ಧರ್ಮ ಎರಡೂ ಒಂದೇ~ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಶನಿವಾರ ವಿಶ್ವ ವೀರಶೈವ ಲಿಂಗಾಯತ ಏಕೀಕರಣ ಪರಿಷತ್ ಆಯೋಜಿಸದ್ದ `ವೀರಶೈವ ಪರಂಪರೆ ಮತ್ತು ಸಂಸ್ಕೃತಿ~ ವಿಚಾರ ಮಂಥನ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.`ವೀರಶೈವ-ಲಿಂಗಾಯತ ಬೇರೆಬೇರೆ ಅಲ್ಲ. ಆದರೆ, ಧರ್ಮದ ತಿರುಳನ್ನು ಅರಿಯದವರು ಎರಡೂ ಬೇರೆಬೇರೆ ಎಂದು ಅವಾಂತರ ಮಾಡಿದ್ದಾರಷ್ಟೇ~ ಎಂದು ಅವರು ನುಡಿದರು.ಮಾಧ್ಯಮಗಳಲ್ಲಿ ಬಿತ್ತರ ಆಗುತ್ತಿರುವ ಮೂಢನಂಬಿಕೆಯ ಕಾರ್ಯಕ್ರಮಗಳನ್ನು ಜನರು ತಿರಸ್ಕರಿಸಬೇಕು. ಮನೋಬಲ ಮತ್ತು ಆತ್ಮಸ್ಥೈರ್ಯ ಇಲ್ಲದ ಜನರು ಇಂತಹ ಮೌಢ್ಯತೆಗೆ ಬಲಿಯಾಗುತ್ತಿದ್ದಾರೆ. ಆದರೆ, 12ನೇ ಶತಮಾನದಲ್ಲೇ ಇಂತಹ ಮೌಢ್ಯತೆಯನ್ನು ಶರಣರು ಸಾರಾಸಗಟಾಗಿ ತಿರಸ್ಕರಿಸಿದ್ದರು. ಹಾಗಾಗಿ, ಶರಣ ಧರ್ಮವನ್ನು ಅನುಷ್ಠಾನಗೊಳಿಸಿದಲ್ಲಿ ನೆಮ್ಮದಿಯ ಜೀವನ ಕಾಣಬಹುದು~ ಎಂದು ಸಲಹೆ ನೀಡಿದರು.ಪ್ರೊ.ಬಿ.ವಿ. ವೀರಭದ್ರಪ್ಪ ಮಾತನಾಡಿ, `ಜಗತ್ತನ್ನು ಸಂಕುಚಿತಗೊಳಿಸುವ ಜಗದ್ಗುರು ಪರಂಪರೆ ಬೇಡ. ಗುರು-ಹಿರಿಯರ ಮಾರ್ಗದರ್ಶನ ಬೇಕು. ಆದರೆ, ಅದು ಜಾತ್ಯತೀತ ಮತ್ತು ಮನುಷ್ಯತ್ವದ ನೆಲೆಯಲ್ಲಿರಬೇಕು. ವೀರಶೈವ ಲಿಂಗಾಯತ ಪರಿಷತ್ ವೀರಶೈವರನ್ನಷ್ಟೇ ಏಕೀಕರಣ ಮಾಡದೇ, ಎಲ್ಲರನ್ನೂ ಒಂದುಗೂಡಿಸುವ ಕಾರ್ಯ ಮಾಡಲಿ~ ಎಂದು ಆಶಿಸಿದರು.`ವೀರಶೈವದಲ್ಲಿ ಅಷ್ಟಾವರಣದ ಪಾತ್ರ~ ವಿಷಯ ಕುರಿತು ರಾಣೇಬೆನ್ನೂರು ಹಿರೇಮಠದ ಶಿವಯೋಗಿ ದೇವರು ಸ್ವಾಮೀಜಿ ಮಾತನಾಡಿ, ವೀರಶೈವ ಸಿದ್ಧಾಂತ ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತದಲ್ಲಿದೆ. ಜಾತಿ, ಧರ್ಮ ಯಾವುದೇ ಆಗಿದ್ದರೂ ಮನುಷ್ಯತ್ವವನ್ನು ಮರೆಯಬಾರದು~ ಎಂದು ಸಲಹೆ ನೀಡಿದರು.ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, `ಕೇವಲ ವೀರಶೈವ ಒಳಪಂಗಡಗಳಷ್ಟೇ ಅಲ್ಲ, ಮನುಷ್ಯರೆಲ್ಲರ ಏಕೀಕರಣ ಆಗಬೇಕಿದೆ. ಇಂದು ಜಗತ್ತಿಗೆ ಬಸವ ತತ್ವಗಳು ಅನಿವಾರ್ಯ. ಸಮಾನತೆಗಾಗಿ 8ನೇ ವಯಸ್ಸಿನಲ್ಲೇ ಮನೆ ತೊರೆದವರು ಬಸವಣ್ಣ. ಅಂತಹ ಬಸವಣ್ಣ ಕಟ್ಟಬಯಸಿದ ಆದರ್ಶ ಸಮಾಜ ನಮ್ಮದಾಗಬೇಕು. ಬಸವ ಧರ್ಮ ಇಡೀ ವಿಶ್ವಕ್ಕೆ ಬೆಳಕಾದ ಧರ್ಮ.ನಾವಿನ್ನೂ ಮಹಾನ್ ವ್ಯಕ್ತಿಗಳ ಜಯಂತಿ ಹೆಸರಲ್ಲಿ ರಜೆ ಪಡೆದು, ಮತ್ತಷ್ಟು ಹಿಂದುಳಿಯುತ್ತಿದ್ದೇವೆ. ಅದೇ ವಿದೇಶಗಳಲ್ಲಿ ಮಹಾತ್ಮರ ಜನ್ಮದಿನದಂದು ಹೆಚ್ಚು ಗಂಟೆ ಕಾಲ ಕೆಲಸ ಮಾಡಿ ಗೌರವ ಸಲ್ಲಿಸುವ ಪರಂಪರೆ ಇದೆ. ಇದನ್ನು ಭಾರತೀಯರು ಅಳವಡಿಸಿಕೊಳ್ಳಬೇಕಿದೆ. ಹಾಗಾಗಿ, ರಜೆ ನೀಡುವ ಜಯಂತಿಗಳು ನಮಗೆ ಬೇಡ ಎಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದರು.ದಾವಣಗೆರೆ ವಿವಿ ಕುಲಪತಿ ಪ್ರೊ.ಎಸ್. ಇಂದುಮತಿ ವಿಚಾರ ಮಂಥನಕ್ಕೆ ಚಾಲನೆ ನೀಡಿದರು. ಪರಿಷತ್‌ನ ಗೌರವ ಅಧ್ಯಕ್ಷ ಬೆಳ್ಳೂಡಿ ಕಂದನಕೋವಿ ರುದ್ರಪ್ಪ ಹಾಜರಿದ್ದರು. ಅಧ್ಯಕ್ಷ ಮಾಕನೂರು ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆ ವಹಿಸಿದ್ದರು. ನಾಗೇಂದ್ರಪ್ಪ-ವೀರಮ್ಮ ಪ್ರಾರ್ಥಿಸಿದರು. ಬೇತೂರು ಬಸವರಾಜಪ್ಪ ಸ್ವಾಗತಿಸಿದರು.ಶರಣಯ್ಯ ಬೀಳಗಿಮಠ ಪ್ರಾಸ್ತಾವಿಕ ಮಾತನಾಡಿದರು. ರೇವಣ್ಣ ಬಳ್ಳಾರಿ ಕಾರ್ಯಕ್ರಮ ನಿರೂಪಿಸಿದರು. ಬೆಳ್ಳೂಡಿ ವಿಜಯಮೂರ್ತಿ ವಂದಿಸಿದರು. ಸಂಗಪ್ಪ ತೋಟದ ಮತ್ತು ಸಂಗಡಿಗರು ವಚನ ಗಾಯನ ನಡೆಸಿಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.