ಮಂಗಳವಾರ, ಮೇ 11, 2021
19 °C
ಭಾರತ ಮತ್ತು ಅಮೆರಿಕದ ನಡುವೆ ಮಾತುಕತೆ

ವೀಸಾ ಸಮಸ್ಯೆಗೆ ಪರಿಹಾರ: ಜಾನ್ ಕೆರ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದ್ವಿಪಕ್ಷೀಯ ಹೂಡಿಕೆ ಒಪ್ಪಂದವನ್ನು ಪ್ರೋತ್ಸಾಹಿಸಿ ಆರ್ಥಿಕ ಬಾಂಧವ್ಯ ಬಲಪಡಿಸುವ ದಿಸೆಯಲ್ಲಿ  ಭಾರತವು ತನ್ನ ವ್ಯಾಪಾರದ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ತೆಗೆದುಹಾಕಬೇಕು ಎಂದು ಅಮೆರಿಕ ಒತ್ತಾಯಿಸಿದೆ. ಇದಕ್ಕೆ ಪ್ರತಿಯಾಗಿ ತನ್ನ ಐಟಿ ಕಂಪೆನಿಗಳು ಎದುರಿಸುತ್ತಿರುವ ವೀಸಾ ಸಮಸ್ಯೆಯನ್ನು ಪರಿಹರಿಸಲು ಅಮೆರಿಕ ಮುಂದಾಗಬೇಕು ಎಂದು ಭಾರತ ಒತ್ತಾಯಿಸಿದೆ.ಭಾರತ ಪ್ರವಾಸಕ್ಕೆ ಆಗಮಿಸಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ, ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಅವರ ಜತೆ ಸೋಮವಾರ ನಡೆಸಿದ ಮಾತುಕತೆಯ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಅಮೆರಿಕದ ಬೇಡಿಕೆಗೆ ಪೂರಕವಾಗಿ ಮರುಭರವಸೆ ನೀಡಿದ ಭಾರತ, ಪರಸ್ಪರರ ಅಗತ್ಯಗಳನ್ನು ಪೂರೈಸುವ ದಿಸೆಯಲ್ಲಿ `ವ್ಯಾಪಾರ ನಿರ್ಬಂಧ' ವಿಷಯದ ಕುರಿತು ಗಮನಹರಿಸುವುದಾಗಿ ತಿಳಿಸಿತು.ಅಮೆರಿಕದಲ್ಲಿ ಭಾರತೀಯ ಮೂಲದ ಐಟಿ ಕಂಪೆನಿಗಳು ವೀಸಾ ಕುರಿತಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿದ ಭಾರತ, ವೃತ್ತಿಪರ ವೀಸಾಗಳನ್ನು ನೀಡುವ ದಿಸೆಯಲ್ಲಿ ಅಮೆರಿಕದ ಕಾನೂನುಗಳಲ್ಲಿ ಬದಲಾವಣೆಯಾಗಬೇಕು ಎಂದು  ಒತ್ತಾಯ ಮಾಡಿತು.

`ವೀಸಾ ಸಮಸ್ಯೆಯನ್ನು ಅಮೆರಿಕದ ಕಾರ್ಯದರ್ಶಿ ಗಮನಕ್ಕೆ ತರಲಾಗಿದ್ದು ಸಾಧ್ಯವಿರುವ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ' ಎಂದು ಖುರ್ಷಿದ್‌ ವಿವರಿಸಿದರು.ದ್ವಿಪಕ್ಷೀಯ ಹೂಡಿಕೆ ನೀತಿಗೆ ಸಂಬಂಧಿಸಿದಂತೆ ಭಾರತ ಹಾಗೂ ಅಮೆರಿಕ 2008ರಿಂದ ಮಾತುಕತೆಯಲ್ಲಿ ತೊಡಗಿದ್ದು ಕಳೆದ ಸಾಲಿನ ಇಂತಹ ಮಾತುಕತೆ 2012ರ ಜೂನ್‌ನಲ್ಲಿ ನಡೆದಿತ್ತು. ವ್ಯಾಪಾರಿ ಸವಾಲುಗಳಿಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವಣ ಸಂಬಂಧಗಳ ವೃದ್ಧಿಗೆ ಜುಲೈ 12 ರಂದು ವಾಷಿಂಗ್ಟನ್‌ನಲ್ಲಿ ಸಭೆಯೊಂದನ್ನು ಏರ್ಪಡಿಸಲಾಗಿದೆ.ಹೆಡ್ಲಿ ವಿಚಾರಣೆಗೆ ಅವಕಾಶ ನಕಾರ

ನವದೆಹಲಿ (ಪಿಟಿಐ):
ಭಾರತದ ತನಿಖಾ ಸಂಸ್ಥೆಗಳು ತನ್ನನ್ನು ಮತ್ತಷ್ಟು ವಿಚಾರಣೆಗೆ ಒಳಪಡಲು ಮುಂಬೈ ದಾಳಿ ಭಯೋತ್ಪಾದಕ ಹಾಗೂ ಅಮೆರಿಕದ ವಶದಲ್ಲಿರುವ ಡೇವಿಡ್ ಹೆಡ್ಲಿ ನಿರಾಕರಿಸಿದ್ದಾನೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.ಸೋಮವಾರ ಇಲ್ಲಿ ನಡೆದ ಭಾರತ- ಅಮೆರಿಕ ನಡುವಿನ ರಾಜತಾಂತ್ರಿಕ ಮಾತುಕತೆ ಸಂದರ್ಭದಲ್ಲಿ ಈ ವಿಷಯ ತಿಳಿಸಲಾಯಿತು. ನವೆಂಬರ್ 2008ರಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿ ಕುರಿತಂತೆ ಹೆಡ್ಲಿಯನ್ನು ಎರಡನೇ ಬಾರಿಗೆ ವಿಚಾರಣೆಗೆ ಒಳಪಡಿಸಲು ಅವಕಾಶ ನೀಡುವಂತೆ ಭಾರತ ಪದೇಪದೇ ಅಮೆರಿಕಕ್ಕೆ ಒತ್ತಾಯಿಸುತ್ತಲೇ ಇದೆ.ಅಮೆರಿಕದ ಅಧಿಕಾರಿಗಳಿಗೆ ಹೆಡ್ಲಿ ಮನವಿಯೊಂದನ್ನು ಸಲ್ಲಿಸಿದ್ದು, ಇದರಿಂದಾಗಿ ಆತನನ್ನು ವಿಚಾರಣೆಗೆ ಒಳಪಡಿಸಲು ಭಾರತದ ತನಿಖಾಧಿಕಾರಿಗಳಿಗೆ ಅವಕಾಶ ಕೊಡುವುದು ಅಸಾಧ್ಯ ಎಂದು ಅಮೆರಿಕದ ಅಧಿಕಾರಿಗಳು ಮಾತುಕತೆ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.ಆದರೆ ಹೆಡ್ಲಿಯ ಸ್ನೇಹಿತ ಹಾಗೂ ಮುಂಬೈ ದಾಳಿಗೆ ನೆರವು ನೀಡಿದ ತಹಾವುರ್ ಹುಸೇನ್ ರಾಣಾನನ್ನು ವಿಚಾರಣೆಗೆ ಒಳಪಡಿಸಲು ಭಾರತಕ್ಕೆ ಅವಕಾಶ ನೀಡಲಾಗುವುದು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದರು.ಹೆಡ್ಲಿ ಸಹಚರನಾದ ರಾಣಾನನ್ನು ವಿಚಾರಣೆಗೆ ಒಳಪಡಿಸಿದರೆ, ಮುಂಬೈ ದಾಳಿ ಹಿಂದಿನ ಪಿತೂರಿ ಸೇರಿದಂತೆ ಇನ್ನಷ್ಟು ವಿವರಗಳು ಸಿಗಬಹುದು ಎಂದು ಭಾರತದ ತನಿಖಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೊದಲು ಭಾರತದ ತನಿಖಾಧಿಕಾರಿಗಳು 2010ರಲ್ಲಿ ಹೆಡ್ಲಿಯನ್ನು ವಿಚಾರಣೆಗೆ ಒಳಪಡಿಸಿದ್ದರು.ಭಾರತದಲ್ಲಿ ಶುದ್ಧ ಇಂಧನ ತಯಾರಿಕೆ

ಅಮೆರಿಕದಿಂದ ರೂ. 590 ಕೋಟಿ ಹೂಡಿಕೆ

ವಾಷಿಂಗ್ಟನ್ (ಪಿಟಿಐ):
ಭಾರತದಲ್ಲಿ ಕಡಿಮೆ ಪ್ರಮಾಣದ ಇಂಗಾಲ ಹೊರಸೂಸುವ ಶುದ್ಧ ಇಂಧನ ತಯಾರಿಕೆಗೆ ಪ್ರೋತ್ಸಾಹಿಸಲು ರೂ. 590 ಕೋಟಿ (10 ಕೋಟಿ ಡಾಲರ್) ಹೂಡಿಕೆ ಮಾಡಲಾಗುವುದು ಎಂದು ಅಮೆರಿಕ ಮೂಲದ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ ಘೋಷಿಸಿದೆ.ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಅವರು ಭಾರತ ಪ್ರವಾಸದಲ್ಲಿರುವ ಸಂದರ್ಭದಲ್ಲೇ ಈ ಘೋಷಣೆ ಮಾಡಿರುವುದು ಮಹತ್ವ ಪಡೆದಿದೆ.ಅಂತರರಾಷ್ಟ್ರೀಯ ಸಂಸ್ಥೆಯ ಅಭಿವೃದ್ಧಿ ಪ್ರಾಧಿಕಾರವು ಮಾಡುವ ಭಾರಿ ಮೊತ್ತದ ಹೂಡಿಕೆಯಿಂದಾಗಿ ಭಾರತದ ಸುಸ್ಥಿರ ಇಂಧನ ಸಾಮರ್ಥ್ಯ  ಹೆಚ್ಚಲಿದೆ ಮತ್ತು ಶುದ್ಧ ಇಂಧನ ತಯಾರಿಕೆ ಕ್ಷೇತ್ರ ಮತ್ತಷ್ಟು ಬಲ ಪಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.