ಶುಕ್ರವಾರ, ಜೂನ್ 18, 2021
27 °C

ವೃತ್ತಿರಂಗಭೂಮಿ ಕಳೆ ಹೆಚ್ಚಿಸಿದ ಖಳನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಗಭೂಮಿ ಕಲೆಯನ್ನು ತಮ್ಮ  ಬದುಕಿಗೆ ಆಧಾರವಾಗಿಸಿಕೊಂಡು  ಕಳೆದ 30ವರ್ಷಗಳ ಕಾಲ `ಖಳನಾಯಕ~ ಪಾತ್ರಕ್ಕೆ ಜೀವ ತುಂಬುತ್ತಿರುವ  ಹುನಗುಂದ ತಾಲ್ಲೂಕಿನ ಅಮೀನಗಡದ ರುದ್ರಪ್ಪ ಮುದ್ದೇಬಿಹಾಳ  ಒಬ್ಬ ಅಸಾಮಾನ್ಯ ಕಲಾವಿದ.ನೇಕಾರಿಕೆ ಕುಟಂಬದಲ್ಲಿ ಜನಿಸಿದ ರುದ್ರಪ್ಪ  ಕಷ್ಟದಲ್ಲಿ ಬದುಕು ರೂಪಿಸಿಕೊಂಡವರು. ಮಗ್ಗದ ಕುಣಿ(ತಗ್ಗು)ಯಲ್ಲಿ ಕುಳಿತುಕೊಂಡು ನೇಕಾರಿಕೆ ಮಾಡಿಕೊಂಡಿರಬೇಕಿದ್ದ ಬಡ ನೇಕಾರ ವೃತ್ತಿರಂಗಭೂಮಿಯಲ್ಲಿ ತನ್ನ  ಮನೋಜ್ಞ ಅಭಿಯನದ ಮೂಲಕ ಹೆಸರು ಮಾಡಿ, ಹಿರಿಯ ಕಲಾವಿದರು ಮೆಚ್ಚುವ ರೀತಿಯಲ್ಲಿ ಖಳನಾಯಕ ಪಾತ್ರಕ್ಕೆ ತಕ್ಕಂತೆ ನಟಿಸಿದ್ದು, ಅಮೀನಗಡದ ಜನತೆ ಅಭಿಮಾನ ಪಡುವ ಸಂಗತಿಯಾಗಿದೆ.ಒಂಬತ್ತನೇ  ತರಗತಿ ಓದಿಕೊಂಡಿರುವ  ರುದ್ರಪ್ಪ ತಮ್ಮ 18ನೇ ವಯಸ್ಸಿನಲ್ಲಿಯೇ ನಾಟಕ ಗೀಳನ್ನು ಬೆಳೆಸಿಕೊಂಡು, ಗ್ರಾಮದಲ್ಲಿ ಜಾತ್ರೆ, ವಿಶೇಷ ಸಂದರ್ಭ, ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಸ್ಥಳೀಯ ಕಲಾವಿದರೆ ಸಂಘಟನೆ ಮಾಡುತ್ತಿದ್ದ ನಾಟಕಗಳಲ್ಲಿ ಮುಖಕ್ಕೆ ಬಣ್ಣ ಹಚ್ಚಿಕೊಂಡು `ವಿಲನ್~ ಪಾತ್ರದಲ್ಲಿ  ಅಭಿನಯಿಸುವುದನ್ನು ಒಂದು ಹವ್ಯಾಸವಾಗಿ ಬೆಳೆಸಿಕೊಂಡರು.1978ರಲ್ಲಿ ಮೊಟ್ಟಮೊದಲ ಬಾರಿಗೆ ಅಮೀನಗಡದಲ್ಲಿ `ಕಲಿತಕಳ್ಳ~ ನಾಟಕದಲ್ಲಿ ಖಳನಾಯಕ ಪಾತ್ರದಲ್ಲಿ ನಟಿಸಿ ಜನಮೆಚ್ಚುಗೆ ಗಳಿಸಿದರು.ಅಮೀನಗಡದವರೇ ಆದ ಬಸಪ್ಪನವರು ಕುಂಟೋಜಿ ಅವರು ರುದ್ರಪ್ಪನಿಗೆ ವೃತ್ತಿ ರಂಗಭೂಮಿಯ ಮೆಟ್ಟಿಲು ಹತ್ತಿಸಿದವರು. ಅನೇಕ ತೊಂದರೆ, ತೊಡಕುಗಳಿಂದ ಹುಟ್ಟಿದ ಕೆಲವೇ ವರ್ಷದಲ್ಲಿ ಮುಚ್ಚಿಕೊಂಡ ಇಳಕಲ್‌ದ ಚಾಮುಂಡೇಶ್ವರಿ ನಾಟ್ಯ ಸಂಘದ ನಾಟಕ ಪ್ರದರ್ಶನಗಳಲ್ಲಿ ಅಭಿನಯಿಸುವ ಮೂಲಕ 1985ರಲ್ಲಿ ವೃತ್ತಿ ರಂಗಭೂಮಿಗೆ ಪಾದಾರ್ಪಣೆ ಮಾಡಿದ ರುದ್ರಪ್ಪ ವರ್ಷದೊಳಗಾಗಿ ನಾಟಕ ಕಂಪನಿಯನ್ನು ಬಿಟ್ಟು ಹೋಗುವಂತಹ ಕಾಲಘಟ್ಟದಲ್ಲಿ ಬಂದು ನಿಂತರು.1986ರಲ್ಲಿ ಮಹಾರಾಷ್ಟ್ರ ಮೂಲದ ಮೈಂದರಗಿ ಜಗದ್ಗುರು ರೇಣುಕಾಚಾರ್ಯ ನಾಟ್ಯ ಸಂಘದೊಂದಿಗೆ ನಂಟು ಬೆಳೆಸಿಕೊಂಡು ವೃತ್ತಿರಂಗಭೂಮಿ ಬದುಕು ಪ್ರಾರಂಭಿಸಿದರು.ದಿಗ್ಗಜರ ಜೊತೆ ಅಭಿನಯ: ವೃತ್ತಿ ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದ ಚಲನಚಿತ್ರ ಹಿರಿಯ ನಟರಾದ ಸುಧೀರ್, ವಜ್ರಮುನಿ, ಶ್ರೀನಾಥ, ಎಂ.ಎಸ್.ಕಾರಂತ, ಉಮಾಶ್ರೀ ಸೇರಿದಂತೆ ಇತರೆ ಕಲಾವಿದರ ಜೊತೆಗೆ ರುದ್ರಪ್ಪ ನಟಿಸಿದ್ದಾರೆ.1986ರಲ್ಲಿ ವರ್ಷ ಜಮಖಂಡಿಯಲ್ಲಿ ನಡೆದ `ಗಂಡನ ಆಜ್ಞೆ~ ನಾಟಕದಲ್ಲಿ ರುದ್ರಪ್ಪರ ಮಾತು, ಗಂಭೀರ ನಟನೆ ಬಗ್ಗೆ ಮಾರು ಹೋದ  ವಜ್ರಮುನಿ  ಹೂವಿನ ಹಾರ  ಕೊರಗೆ ಹಾಕಿ, ಬೆನ್ನು ಚಪ್ಪರಿಸಿ, ಶಭಾಷ್‌ಗಿರಿ ನೀಡಿ ನಾಟಕ ಪ್ರದರ್ಶನದಿಂದ ಅರ್ಧಕ್ಕೆ ನಿರ್ಗಮಿಸಿ ದ್ದನ್ನು ನೋಡಿದರೆ ರುದ್ರಪ್ಪ ಅವರ ನಟನಾ ಕೌಶಲದ ಎತ್ತರ ಅರವಿಗೆ ಬರುತ್ತದೆ.ಅಭಿನಯಿಸಿದ ನಾಟಕಗಳು: ಕಲಿತ ಕಳ್ಳ, ಸೂಳೆಯ ಮಗ, ಸತಿ ಸಂಸಾರದ ಜ್ಯೋತಿ, ಕಳ್ಳ ಕಟ್ಟಿದ ತಾಳಿ, ಮದನ ಮೋಹನ್, ಇದೆಂಥಾ ಸರ್ಕಾರ, ಕಲಿತ ಕತ್ತೆ, ಚಿನ್ನದ ಗೊಂಬೆ, ಬಸ್ ಹಮಾಲ, ಹಸಿರು ಬಳೆ, ಮನೆಗೆ ತಕ್ಕ ಮಗ, ಶ್ರೀ ಜಗಜ್ಯೋತಿ ಬಸವೇಶ್ವರ, ಮಂಗಳಾ ನನ್ನ ಅತ್ತಿಗೆ, ತಾಯಿಯ ಕರಳು, ಚನ್ನಪ್ಪ ಚನ್ನಗೌಡ, ನೀತಿ ತಪ್ಪಿದ ನ್ಯಾಯ, ಕಾಳಿಂಗ ಸರ್ಪ, ನನ್ನವರು ನನ್ನ ಹಡೆದವರು, ಗಂಡನ ಆಜ್ಞೆ, ಸಿಡಿದೆದ್ದ ಶಿವಶಕ್ತಿ, ದಕ್ಷಗಿರಿಜ, ರತಿ ಕಲ್ಯಾಣ ಹೀಗೆ 35ಕ್ಕೂ ಹೆಚ್ಚು ನಾಟಕಗಳಲ್ಲಿ ಖಳನಾಯಕನಾಗಿಯೇ ನಟಿಸಿದ್ದು ರುದ್ರಪ್ಪ ಅವರ ವಿಶೇಷ.30ವರ್ಷಗಳ ಕಾಲ ವೃತ್ತಿರಂಗ ಭೂಮಿಯಲ್ಲಿ ಬದುಕು ಸವಿಸಿದ ರುದ್ರಪ್ಪ ಕೌಟುಂಬಿಕ ತೊಂದರೆಯಿಂದ ವೃತ್ತಿರಂಗಭೂಮಿ ಕೊರಳಿನಿಂದ ಹೆಗಲು ಕಳಚಿಕೊಂಡು ಅಮೀನ ಗಡದಲ್ಲಿದ್ದುಕೊಂಡು ಬದುಕು ಸಾಗಿಸುತ್ತಿದ್ದಾರೆ.ಈ ಭಾಗದಲ್ಲಿ ಹಬ್ಬ ಹರಿದಿನಗಳಲ್ಲಿ ನಡೆಯುವ ನಾಟಕಗಳಿಗೆ ನಿರ್ದೇಶನ ಮಾಡುತ್ತಾ, ಯುವ ಕಲಾವಿದರಿಗೆ ಮಾರ್ಗದರ್ಶನ ಮಾಡುವ ಮೂಲಕ ನಾಟಕದ ಉಳುವಿಗಾಗಿ ಶ್ರಮಿಸು ತ್ತಿದ್ದಾರೆ. ರುದ್ರಪ್ಪ ಅವರ ನಟನಾ ಕೌಶಲವನ್ನು ಕಂಡು ಅನೇಕ ಸಂಘ ಸಂಸ್ಥೆಗಳು ಗುರುತಿಸಿ, ಸನ್ಮಾನಿಸಿ, ಪ್ರಶಸ್ತಿ ನೀಡಿ ಗೌರವಿಸಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.