ಶನಿವಾರ, ಜನವರಿ 18, 2020
19 °C

ವೈಕಲ್ಯ ಮೆಟ್ಟಿ ನಿಂತ ಚೇತನಗಳು

ಪ್ರಜಾವಾಣಿ ವಾರ್ತೆ/ಯು. ಉದಯ Updated:

ಅಕ್ಷರ ಗಾತ್ರ : | |

ಹಾಸನ: ಈ ವರ್ಷದ ಆರಂಭದಲ್ಲಿ ಹಾಸನ ಜಿಲ್ಲೆಯ ಅಂಗವಿಕಲನೊಬ್ಬ ಪ್ಯಾರಾ ಒಲಂಪಿಕ್‌ನಲ್ಲಿ ಬೆಳ್ಳಿ ಪದಕ ಪಡೆದು ದೇಶದ ಗಮನ ಸೆಳೆದ. ಅರಕಲಗೂಡು ತಾಲ್ಲೂಕಿನ ಹೊಸನಗರದಲ್ಲಿ ಅತ್ಯಂತ ಬಡಕುಟುಂಬದಲ್ಲಿ ಹುಟ್ಟಿ, ಬಡತನದಲ್ಲೇ ಬೆಳೆದಿದ್ದ ಎಚ್‌.ಎನ್‌. ಗಿರೀಶ್‌ ಪದಕದ ‘ಜಿಗಿತ’ದ ಬಳಿಕ ಒಮ್ಮೆಲೇ ಎಲ್ಲರ ಕಣ್ಮಣಿಯಾದ. ‘ಜಿಲ್ಲೆಯ ಕೀರ್ತಿ ಬೆಳಗಿದ ಪುತ್ರ‘ ಎಂದು ಆತನನ್ನು ಬಣ್ಣಿಸಲಾಯಿತು.ಸನ್ಮಾನಗಳಾದವು, ನಿವೇಶನ ಸಿಕ್ಕಿತು, ಹಣ ಹರಿದುಬಂತು, ಸರ್ಕಾರಿ ಸೌಲಭ್ಯಗಳು ಲಭಿಸಿದವು. ಆದರೆ, ಲಂಡನ್‌ನಲ್ಲಿ ನಡೆದ ಪ್ಯಾರಾ ಒಲಿಂಪಿಕ್‌ನ ಎತ್ತರ ಜಿಗಿತ ಸ್ಪರ್ಧೆಗೂ ಮೊದಲು ಇದೇ ಗಿರೀಶ್‌ ಪರಿಚಯ ನಮ್ಮದೇ ಜಿಲ್ಲೆಯ ಶೇ 80ರಷ್ಟು ಜನರಿಗೆ ಇರಲಿಲ್ಲ ಎಂಬುದು ವಾಸ್ತವ.ಇದು ಸಹಜ. ಗಿರೀಶ್‌ ಸಾಧನೆಯ ಶಿಖರಕ್ಕೇರಿ ಅಂಗವಿಕಲರಿಗೆ ಸ್ಫೂರ್ತಿಯಾದದ್ದಾಯಿತು. ಅಂಥ ಅದೆಷ್ಟೋ ಅಂಗವಿಕಲರು ಈಗಲೂ ನಮ್ಮ ನಡುವೆಯೇ ಸೌಲಭ್ಯಕ್ಕಾಗಿ ಕಾಯುತ್ತಿಲ್ಲವೇ. ಅಂಗವಿಕಲರ ವಾಲಿಬಾಲ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ಅಂಥೋಣಪ್ಪ, ಬ್ಯಾಡ್ಮಿಂಟನ್‌ನಲ್ಲಿ ಸಾಧನೆ ಮಾಡಿರುವ ಕುಬ್ಜ ಚೇತನ್‌ ಎಲ್ಲರೂ ನಮ್ಮದೇ ಜಿಲ್ಲೆಯವರಲ್ಲವೇ ? ಅವರೆಲ್ಲ ಈಗಲೂ ಸಣ್ಣಪುಟ್ಟ ಸೌಲಭ್ಯಗಳಿಗಾಗಿ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದಾರೆ. ಇಂಥ ಸಾಧನೆ ಮಾಡುವ ಛಲ, ಸಾಮರ್ಥ್ಯ ಇರುವ ಅನೇಕರು ಈಗಲೂ ಇದ್ದಾರೆ. ನಾವಾಗಲಿ, ನಮ್ಮ ಇಲಾಖೆಗಳಾಗಲಿ ಅವರಿಗೆ ಅಂಥ ಪ್ರೋತ್ಸಾಹ ನೀಡುತ್ತಿಲ್ಲ. ಅಂಗವಿಕಲರ ಕಲ್ಯಾಣಕ್ಕಾಗಿ ಇಲಾಖೆಯಲ್ಲಿ ಹಣಕ್ಕೆ ಕೊರತೆ ಇಲ್ಲ ನಿಜ, ಆದರೂ ಪ್ಯಾರಾ ಒಲಿಂಪಿಕ್ಸ್‌ಗೆ ಲಂಡನ್‌ಗೆ ತೆರಳಲು ಗಿರೀಶ್‌ ಕೈಯಲ್ಲಿ ಹಣ ಇರಲಿಲ್ಲ. ಹಾಸನದ ವಿವಿಧ ಶಾಲೆಯ ಮಕ್ಕಳು ತಮ್ಮ ಪಾಕೆಟ್‌ ಮನಿಯಿಂದ ಐದು ಹತ್ತು ರೂಪಾಯಿ ಸಂಗ್ರಹಿಸಿ ಕೊಟ್ಟಿದ್ದರು ಎಂಬುದು ಜಿಲ್ಲಾಡಳಿತಕ್ಕೆ ಅಥವಾ ಸರ್ಕಾರಕ್ಕೆ ಗೊತ್ತಿಲ್ಲದ ವಿಚಾರವೇ ?.ಸಹಾಯ ಹಸ್ತ ನೀಡಿ

ಅಂಗವಿಕಲರಿಗೆ ಕರುಣೆ ತೋರಿಸುವ ಅಗತ್ಯವಿಲ್ಲ, ಅವರಿಗೆ ಸಹಾಯ ಹಸ್ತ ನೀಡಿ, ನಮ್ಮಂತೆಯೇ ಅವರನ್ನೂ ಪರಿಗಣಿಸಿ ಎಂದು ಹೇಳುತ್ತಲೇ ಬಂದಿದ್ದೇವೆ. ಅವರ ನೆರವಿಗಾಗಿ ಕಾನೂನುಗಳನ್ನು ರೂಪಿಸಿದ್ದರೂ ಅವು ಜಾರಿಯಾಗುತ್ತಿಲ್ಲ. ಒಂದು ಸರಳ ಉದಾಹರಣೆ ನೀಡಲೇಬೇಕು, ಎಲ್ಲ ಸರ್ಕಾರಿ ಕಚೇರಿಗಳು, ಸಭಾಗೃಹಗಳಲ್ಲಿ ಅಂಗವಿಕಲರಿಗೆ ನೆರವಾಗಲು ರ್‌ಯಾಂಪ್‌ ನಿರ್ಮಿಸಬೇಕು ಎಂಬುದು ಕಡ್ಡಾಯವಾಯಿತು. ಅದರಂತೆ ಬಹುತೇಕ ಎಲ್ಲ ಕಚೇರಿಗಳಲ್ಲೂ ರ್‌ಯಾಂಪ್‌ಗಳಾದವು. ಅದರಿಂದ ಗುತ್ತಿಗೆದಾರರನ್ನು ಬಿಟ್ಟರೆ ಯಾರಿಗೂ ಉಪಯೋಗವಾಗಿಲ್ಲ. ಎವರೆಸ್ಟ್‌ ಹತ್ತಿದಂತೆ ಅಂಗವಿಕಲರು ಈ ರ್‌ಯಾಂಪ್‌ಗಳ ಮೇಲೆ ಹತ್ತಬೇಕು. ಕಲಾಭವನದ ರ್‌್ಯಾಂಪ್‌ ಮಕ್ಕಳ ಜಾರುಬಂಡಿಯಂತಿದೆ. ಅಲ್ಲೂ ವೇದಿಕೆ ಮೇಲೆ ಹತ್ತಲು ರ್‌ಯಾಂಪ್‌ ಇಲ್ಲ. ಕಾನೂನಿನ ಕೈಗಳು ಉದ್ದವಾಗಿರುವುದರಿಂದ ರ್‌ಯಾಂಪ್‌ ನಿರ್ಮಿಸದಿದ್ದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಶಿಕ್ಷೆಯಾಗುತ್ತಿತ್ತು, ಆದರೆ ಕಾನೂನಿಗೆ ಹೃದಯ ಇಲ್ಲದಿರುವುದರಿಂದ ರ್‌ಯಾಂಪ್‌ಗಳು ನಿಜವಾಗಿ ಬಳಕೆಯಾಗುತ್ತಿವೆಯೇ, ಅಂಗವಿಕಲರಿಗೆ ಇದರಿಂದ ನೆರವಾಗುತ್ತಿದೆಯೇ ಎಂದು ಕೇಳುವವರು ಇಲ್ಲದಂತಾಗಿದೆ.ಸರ್ಕಾರದ ಎಲ್ಲ ಯೋಜನೆಗಳು ಸರಿಯಾಗಿ ಜಾರಿಯಾಗಿದ್ದರೆ, ಕೊಟ್ಟ ಅನುದಾನ ಪೂರ್ತಿಯಾಗಿ ಬಳಕೆಯಾಗಿದ್ದರೆ ನಮ್ಮ ಜಿಲ್ಲೆಯ ಅಂಗವಿಕಲರು ಕೊರಗಬೇಕಾದ ಸ್ಥಿತಿಯೇ ಇರುತ್ತಿರಲಿಲ್ಲ. ಅಂಗವಿಕಲರ ಕಲ್ಯಾಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 19,025 ಪುರುಷರು ಮತ್ತು 10,456 ಮಹಿಳೆಯರು ಸೇರಿ ಒಟ್ಟಾರೆ 29,481 ಅಂಗವಿಕಲರಿದ್ದಾರೆ. ಇವರಿಗೆ ಸೌಲಭ್ಯ ನೀಡಲು ಹಣಕ್ಕೆ ಕೊರತೆ ಇಲ್ಲ, ಇವರಿಗಾಗಿಯೇ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಎಷ್ಟು ಜನರಿಗೆ ನೆರವು ಲಭ್ಯವಾಗಿದೆ ? ಲಭ್ಯವಾಗಿಲ್ಲ ಎಂಬುದಕ್ಕಿಂತ ಹೆಚ್ಚಾಗಿ ಅಂಗವಿಕಲರಿಗೆ ಅಥವಾ ಅವರ ಕುಟುಂಬದವರಿಗೆ ಯೋಜನೆಗಳ ಬಗ್ಗೆ ಮಾಹಿತಿಯೇ ಇಲ್ಲ. ಸರ್ಕಾರೇತರ ಸಂಸ್ಥೆಗಳೂ ಈ ನಿಟ್ಟಿನಲ್ಲಿ ಗಮನಾರ್ಹ ಕೆಲಸವೇನೂ ಮಾಡಿದಂತೆ ಕಾಣುತ್ತಿಲ್ಲ.ನಗರದ ‘ಅನನ್ಯ ಟ್ರಸ್ಟ್‌’ ಕೆಲವು ತಿಂಗಳ ಹಿಂದೆ ಅಂಗವಿಕಲದ ಸಮ್ಮೇಳನ ಆಯೋಜಿಸಿ, ಅಂಗವಿಕಲರಿಗೆ ಗಾಲಿ ಕುರ್ಚಿಗಳು ಹಾಗೂ ಇತರ ಉಪಕರಣಗಳನ್ನು ನೀಡಿತ್ತು. ಈ ಸಂಸ್ಥೆ ಸರ್ಕಾರಿ ಯೋಜನೆಗಳನ್ನು ಅವರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂಬುದು ಸಮಾಧಾನದ ವಿಚಾರ. ‘ಸರ್ಕಾರ ಏನೇನು ನೆರವು ನೀಡುತ್ತದೆ ಎಂಬ ಮಾಹಿತಿ ಅಂಗವಿಕಲರಿಗೆ ಇಲ್ಲ ಎಂಬುದು ಒಂದು ಸಮಸ್ಯೆಯಾದರೆ, ಗೊತ್ತಿರುವ ಅಂಗವಿಕಲರೂ ಅದನ್ನು ಇತರರಿಗೆ ತಿಳಿಸುವ ಗೋಜಿಗೆ ಹೋಗುವುದಿಲ್ಲ. ಕೆಲವೇ ಕೆಲವರು ಎಲ್ಲ ಸೌಲಭ್ಯಗಳನ್ನೂ ಬಳಸಿಕೊಳ್ಳುತ್ತಿದ್ದಾರೆ. ಒಂದರ್ಥದಲ್ಲಿ ಇಲ್ಲೂ ಬಡವರು, ಶಕ್ತಿಹೀನರ ಶೋಷಣೆ ಆಗುತ್ತಿದೆ’ ಎಂದು ಟ್ರಸ್ಟ್‌ ಅಧ್ಯಕ್ಷೆ ಕೆ.ಟಿ. ಜಯಶ್ರೀ ನುಡಿಯುತ್ತಾರೆ.ದ್ವಿಚಕ್ರ ವಾಹನ ನೀಡುವ ಪ್ರಸ್ತಾವನೆ

ಇಲಾಖೆ ಮಾತ್ರವಲ್ಲ, ಪ್ರತಿಯೊಬ್ಬ ಶಾಸಕರೂ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ 10 ಲಕ್ಷ ರೂಪಾಯಿಯನ್ನು ಅಂಗವಿಕಲರ ಸೌಲಭ್ಯಕ್ಕಾಗಿ ವೆಚ್ಚ ಮಾಡಲು ಅವಕಾಶ ಇದೆ. ಅಂದರೆ ಜಿಲ್ಲೆಯ ಏಳು ಮಂದಿ ಶಾಸಕರ ಹಣವೇ 70ಲಕ್ಷ ರೂಪಾಯಿಯಾಗುತ್ತದೆ. ದುರಂತವೆಂದರೆ ಈವರೆಗೆ ಈ ಹಣ ಬಳಕೆಯಾಗಿಯೇ ಇಲ್ಲ. ಇದೇ ಮೊದಲಬಾರಿ 17 ಅಂಗವಿಕಲರಿಗೆ ಶಾಸಕರ ನಿಧಿಯಿಂದ ದ್ವಿಚಕ್ರ ವಾಹನ ನೀಡುವ ಪ್ರಸ್ತಾವನೆ ಸಿದ್ಧವಾಗಿದೆ.ಅಂಗವಿಕಲರ ಯೋಜನೆಗಳು ಸರಿಯಾಗಿ ಜಾರಿ ಯಾದರೆ ಅವರಿಗೆ ಯಾರೂ ನೆರವು ನೀಡುವ ಅಗತ್ಯ ಇಲ್ಲ. ಸಾಂತ್ವನದ ಮಾತುಗಳಿಗಿಂತ ಯೋಜನೆಗಳು ಜಾರಿಯಾಗುವಂತಾಗಬೇಕು. ಅಂಗವಿಕಲರು ಬಂದು ಅರ್ಜಿ ಸಲ್ಲಿಸಬೇಕು ಎಂಬ ಭಾವನೆ ಹೋಗಿ ಅವರಿದ್ದಲ್ಲಿಗೇ ಸೌಲಭ್ಯಗಳು ತಲುಪುವಂತಾಗಬೇಕು. ಹೀಗಾದರೆ ಅವರೂ ಮುಖ್ಯವಾಹಿನಿಯಲ್ಲಿ ನಮ್ಮಷ್ಟೇ ವೇಗವಾಗಿ ನಡೆಯಬಲ್ಲರು. ಗಿರೀಶ್‌, ಅಂಥೋಣಪ್ಪ, ಚೇತನ್‌ನಂಥ ಅನೇಕ ಸಾಧಕರು ಇದಕ್ಕೆ ನಮ್ಮ ನಡುವೆ ಇರುವ ಉದಾಹರಣೆಗಳು.

ಪ್ರತಿಕ್ರಿಯಿಸಿ (+)