ಸೋಮವಾರ, ಮೇ 16, 2022
28 °C

ವೈಮಾನಿಕ ಪ್ರದರ್ಶನ: ಭದ್ರತೆಗೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇದೇ 9ರಿಂದ ಯಲಹಂಕ ಮೈದಾನದಲ್ಲಿ ನಡೆಯಲಿರುವ ವೈಮಾನಿಕ ಪ್ರದರ್ಶನದಲ್ಲಿ ಹೊರ ಭಾಗಗಳಿಂದ ಬರುವ ವಿಮಾನಗಳನ್ನು ಭದ್ರತಾ ದೃಷ್ಟಿಯಿಂದ ಪರಿಶೀಲನೆ ನಡೆಸಲು ಹಾಗೂ ಪ್ರದರ್ಶನದ ಉಸ್ತುವಾರಿ ವಹಿಸಿಕೊಳ್ಳಲು ಸಾಕಷ್ಟು ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು ಎಂದು ಕಸ್ಟಮ್ಸ್ ಆಯುಕ್ತ ಪಿ.ಭಟ್ಟಾಚಾರ್ಯ ಅವರು ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿದರು.ಇದರ ಜೊತೆಗೆ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಬರುವ ನಾಗರಿಕ ಮತ್ತು ಸೇನಾ ವಿಮಾನಗಳಲ್ಲಿ ತರುವ ವಿವಿಧ ಸಾಮಗ್ರಿಗಳಿಗೆ ಕಸ್ಟಮ್ಸ್ ಕಾಯ್ದೆ ಅಡಿ ತೆರಿಗೆ ಕೂಡ ವಿಧಿಸಲಾಗುವುದು ಎಂದು ಅವರು ತಿಳಿಸಿದರು.ಕಳೆದ ಏಳು ವರ್ಷಗಳ ವೈಮಾನಿಕ ಪ್ರದರ್ಶನದಲ್ಲಿ ಭದ್ರತೆ ಹಾಗೂ ತೆರಿಗೆಗೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳದ ಬಗ್ಗೆ ದೆಹಲಿ ಮೂಲದ ವಕೀಲ ಸೌರಭ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಈ ಮಾಹಿತಿ ನೀಡಿದರು. ವಿಮಾನಗಳಲ್ಲಿ ದೇಶದ ಭದ್ರತೆಗೆ ಧಕ್ಕೆ ಆಗುವ ಸಾಮಗ್ರಿಗಳನ್ನು ತರುವ ಸಾಧ್ಯತೆ ಇದೆ. ಆದರೆ ವಿಮಾನಗಳನ್ನು ತಪಾಸಣೆ ಮಾಡುವುದಿಲ್ಲ. ಅಷ್ಟೇ ಅಲ್ಲದೇ ಅವುಗಳಲ್ಲಿ ಬರುವ ಸಾಮಗ್ರಿಗಳ ಮೇಲೆ ತೆರಿಗೆ ವಿಧಿಸುತ್ತಿಲ್ಲ ಇದರಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಆಗುತ್ತಿದೆ ಎನ್ನುವುದು ಅರ್ಜಿದಾರರ ವಾದ.ಭದ್ರತೆ ಹಾಗೂ ತೆರಿಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದುಕೊಂಡ ದಾಖಲೆಗಳನ್ನು ಕೋರ್ಟ್‌ಗೆ ನೀಡಿದ್ದ ಅರ್ಜಿದಾರರು, ಈ ಬಾರಿಯಾದರೂ ಕಾಯ್ದೆಯ ಅನ್ವಯ ಕ್ರಮ ತೆಗೆದುಕೊಳ್ಳಲು ಆದೇಶಿಸುವಂತೆ ಕೋರಿದ್ದರು.ಬೆಳಿಗ್ಗೆ ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಮಧ್ಯಾಹ್ನದ ವೇಳೆಯೇ ಈ ಬಗ್ಗೆ ಕಸ್ಟಮ್ಸ್ ಇಲಾಖೆಯಿಂದ ಸೂಕ್ತ ಮಾಹಿತಿ ಪಡೆದುಕೊಳ್ಳುವಂತೆ ಸರ್ಕಾರದ ಪರ ವಕೀಲರಿಗೆ ಆದೇಶಿಸಿತ್ತು.ಮಧ್ಯಾಹ್ನ ಈ ಪ್ರಕರಣ ವಿಚಾರಣೆ ಬಂದಾಗ, ಖುದ್ದಾಗಿ ಆಯುಕ್ತರೇ ಹಾಜರಾಗಿ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಇತ್ಯರ್ಥಗೊಳಿಸಲಾಯಿತು.‘ವಿವಾದ ಕಗ್ಗಂಟು ಮಾಡದಿರಿ’

 ಬಿಬಿಎಂಪಿ ವ್ಯಾಪ್ತಿಯಲ್ಲಿನ ಬಹುಕೋಟಿ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಕರೆದಿರುವ ಟೆಂಡರ್ ಸಂಬಂಧದ ವಿವಾದವನ್ನು ತನ್ನ ಮುಂದಿನ ಆದೇಶದವರೆಗೆ ಕಗ್ಗಂಟು ಮಾಡದಂತೆ ಹೈಕೋರ್ಟ್ ಆದೇಶಿಸಿದೆ.ಟೆಂಡರ್ ಪ್ರಕ್ರಿಯೆಯನ್ನು ಕೇವಲ ಕಂಪೆನಿಗಳಿಗೆ ಸೀಮಿತಗೊಳಿಸಿ ಕಳೆದ ಜ.13ರಂದು ಪಾಲಿಕೆ ನಿರ್ಣಯ ಮಂಡಿಸಿರುವುದನ್ನು ಪ್ರಶ್ನಿಸಿ ಗುತ್ತಿಗೆದಾರರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಈ ಆದೇಶ ಹೊರಡಿಸಿದ್ದಾರೆ.ಭದ್ರತೆ: ಆದೇಶಕ್ಕೆ ತಡೆ

ಸ್ವಾತಂತ್ರ್ಯ ಉದ್ಯಾನದ ಭದ್ರತೆಗಾಗಿ ನಿಯೋಜನೆಗೊಂಡಿರುವ ಭದ್ರತಾ ಸಂಸ್ಥೆಯ ಗುತ್ತಿಗೆಯನ್ನು ಮೊಟಕುಗೊಳಿಸಿರುವ ಪಾಲಿಕೆ ಆದೇಶವನ್ನು ಶಶಾಂಕ್ ಎಂಟರ್‌ಪ್ರೈಸಸ್ ಸಂಸ್ಥೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ.ಕಳೆದ ಜನವರಿ 1ರಿಂದ ಬರುವ ಡಿ.31ರ ಒಳಗೆ ತಮಗೆ ಗುತ್ತಿಗೆ ನೀಡಲಾಗಿದೆ. ಆದರೆ ತಮ್ಮ ಸಂಸ್ಥೆಯನ್ನು ‘ಕಪ್ಪು ಪಟ್ಟಿ’ಗೆ ಸೇರಿಸಲಾಗಿದೆ ಎಂಬ ಕಾರಣ ನೀಡಿ ಗುತ್ತಿಗೆಯನ್ನು ಏಕಾಏಕಿ ರದ್ದುಗೊಳಿಸಲಾಗಿದೆ. ಇದರಿಂದ 20ಕ್ಕೂ ಅಧಿಕ ಭದ್ರತಾ ಸಿಬ್ಬಂದಿಗೆ ದಿಕ್ಕು ತೋಚದಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ.ಪಾಲಿಕೆಯ ಆದೇಶಕ್ಕೆ ನಾಲ್ಕು ವಾರಗಳ ತಡೆ ನೀಡಿರುವ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ, ಪಾಲಿಕೆಗೆ ನೋಟಿಸ್ ಜಾರಿಗೆ ಆದೇಶಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.