ಭಾನುವಾರ, ಜನವರಿ 19, 2020
27 °C

ವ್ಯಾಟ್ ಇಳಿಸಲು ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಪೂರೈಸಲಾಗುವ ವಸ್ತುಗಳಿಗೆ ವಿಧಿಸಲಾಗುತ್ತಿರುವ ಶೇ 14ರಷ್ಟು ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಅನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುವುದು~ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಪ್ರದೀಪ್ ಸಿಂಗ್ ಖರೋಲ ಇಲ್ಲಿ ಭರವಸೆ ನೀಡಿದರು.ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ರಾಜ್ಯ ರಸ್ತೆ ಸಾರಿಗೆ ನಿಗಮ, ರೈಲ್ವೆ ಇಲಾಖೆ, ಬೆಸ್ಕಾಂ ಮುಂತಾದ ಸಂಸ್ಥೆಗಳಿಗೆ ರಾಜ್ಯದ ಉದ್ಯಮಿಗಳು ಸರಕುಗಳನ್ನು ಪೂರೈಕೆ ಮಾಡಲು ಶೇ 14ರಷ್ಟು ವ್ಯಾಟ್ ಪಾವತಿಸಬೇಕು. ಆದರೆ, ಹೊರ ರಾಜ್ಯದ ಉದ್ಯಮಿಗಳು ಶೇ 2ರಷ್ಟು ಮಾತ್ರ ಪಾವತಿ ಮಾಡಿದರೆ ಸಾಕು.

 

ಈ ನಿಯಮದಿಂದ ಸ್ಥಳೀಯರಿಗೆ ತೊಂದರೆ ಆಗುತ್ತಿದ್ದು ಪೈಪೋಟಿ ನೀಡಲಾಗುತ್ತಿಲ್ಲ. ಇದರಿಂದಾಗಿ ಅವಕಾಶ ಕಳೆದುಕೊಳ್ಳುತ್ತಿದಾರೆ. ಸಂಸ್ಕರಿಸಿದ ಆಹಾರ ಪದಾರ್ಥ, ಕುಡಿಯುವ ನೀರು ಮುಂತಾದ ವಸ್ತುಗಳ ಮೇಲಿನ `ವ್ಯಾಟ್~ನಲ್ಲೂ ತಾರತಮ್ಯ ಇದೆ. ಆದ್ದರಿಂದ ವ್ಯಾಟ್ ಪ್ರಮಾಣ ಕಡಿಮೆ ಮಾಡಿ ಎಂದು ಸಂಘದ ಸದಸ್ಯರು ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಪ್ರದೀಪ್ ಸಿಂಗ್, ಈ ಸಮಸ್ಯೆ ನಿವಾರಣೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.`ಇ- ಸುಗಮ~ ಸಂಖ್ಯೆ ಹಾಗೂ ರಹಸ್ಯ ಸಂಕೇತಗಳನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದಾರೆ. ಆದ್ದರಿಂದ ಈ ಸಂಖ್ಯೆ ಮತ್ತು ರಹಸ್ಯ ಸಂಕೇತಗಳನ್ನು ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳ ಹಾಗೆ ಕಾಪಾಡಿಕೊಳ್ಳಿ. ಬೇರೊಬ್ಬರ ಸಂಖ್ಯೆದುರ್ಬಳಕೆ ಮಾಡಿಕೊಂಡ ಕೆಲವರನ್ನು ಕೆಲ ದಿನಗಳ ಹಿಂದೆ ಬಂಧಿಸಲಾಗಿದೆ ಎಂದು  ಮಾಹಿತಿ ನೀಡಿದರು.

`ಇ-ಸುಗಮ~ ಸಂಖ್ಯೆಯ ಬಳಕೆಯಾದ ನಂತರ ಸಂಬಂಧಿಸಿದ ವ್ಯಕ್ತಿಯ ಮೊಬೈಲ್‌ಗೆ ಸಂದೇಶ ಕಳುಹಿಸುವ ಪದ್ಧತಿಯನ್ನು ಜಾರಿಗೆ ತರಲು ಚಿಂತನೆ ನಡೆದಿದೆ.

 

ಇದು ಜಾರಿಗೆ ಬಂದ ನಂತರ ಸಂಖ್ಯೆದಾರರಿಗೆ ಶೀಘ್ರದಲ್ಲೇ ಮಾಹಿತಿ ಲಭ್ಯವಾಗಲಿದೆ. ದುರ್ಬಳಕೆ ತಡೆಯಲು ಇದರಿಂದ ಸಹಾಯವಾಗಲಿದೆ. ಪಾರದರ್ಶಕತೆ, ಉತ್ತರದಾಯಿತ್ವ, ಸೇವೆಗೆ ಇಲಾಖೆ ಆದ್ಯತೆ ನೀಡಲಿದೆ. ಉದ್ಯಮಿಗಳು ಸಹ ಇಲಾಖೆಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು. ಇದರಿಂದ ಸಮಸ್ಯೆಗಳು ಪರಿಹಾರವಾಗಿ ಕೆಲಸ ಸುಗಮವಾಗಿ ಆಗಲಿವೆ ಎಂದು  ಸಲಹೆ ನೀಡಿದರು.

ಪ್ರತಿಕ್ರಿಯಿಸಿ (+)