ಶನಿವಾರ, ಮೇ 8, 2021
26 °C
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ‌್ರಿ 23ರಿಂದ ಭಾರತಕ್ಕೆ ಭೇಟಿ

ಶಕ್ತಿಶಾಲಿ ರಾಷ್ಟ್ರವಾಗಿ ಭಾರತ: ಅಮೆರಿಕ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಸುಧಾರಿತ ಹಾಗೂ ವಿಸ್ತರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ  ಕಾಯಂ ಸದಸ್ಯತ್ವ ಪಡೆಯುವ ದಿಸೆಯಲ್ಲಿ  ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತವನ್ನು ಅಮೆರಿಕ ಸ್ವಾಗತಿಸಿದೆ.ಇದೇ 23ರಿಂದ 25ರವರೆಗೆ  ಭಾರತ ಭೇಟಿಗೆ ಆಗಮಿಸುತ್ತಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ‌್ರಿ ಈ ಆಶಯ ವ್ಯಕ್ತಪಡಿಸಿದ್ದು ಈ ಸಂಬಂಧ ಭಾರತೀಯರಿಗೆ ವಿಡಿಯೊ ಸಂದೇಶ ನೀಡಿದ್ದಾರೆ.23ಕ್ಕೆ ನವದೆಹಲಿಗೆ ಆಗಮಿಸಲಿರುವ ಜಾನ್, ಅಮೆರಿಕ-ಭಾರತ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ.   ಉಭಯ ದೇಶಗಳ ನಡುವೆ ಪರಸ್ಪರ ಸಹಕಾರ, ಪ್ರಾದೇಶಿಕ ಸಮಸ್ಯೆಗಳು ಮತ್ತು ಪರಸ್ಪರ ಸದೃಢ ರಾಷ್ಟ್ರಗಳಾಗಿ ಬೆಳವಣಿಗೆ ಸಾಧಿಸುವ ಕುರಿತು ಮಾತುಕತೆ ನಡೆಸಲು 2009ರಲ್ಲಿ ವೇದಿಕೆಯೊಂದನ್ನು ರೂಪಿಸಲಾಗಿದೆ. ಈ ವೇದಿಕೆಯ ನಾಲ್ಕನೇ ವಾರ್ಷಿಕ ಕಾರ್ಯಕ್ರಮದಲ್ಲಿ ಜಾನ್ ಭಾಗವಹಿಸಲಿದ್ದು, ವಿವಿಧ ಕ್ಷೇತ್ರಗಳ ಕುರಿತು ಮಾತುಕತೆ ನಡೆಸುವರು ಎಂದು ಮೂಲಗಳು ತಿಳಿಸಿವೆ.ಐದು ನಿಮಿಷಗಳ ವಿಡಿಯೊ ಸಂದೇಶವನ್ನು `ನಮಸ್ಕಾರ' ಎನ್ನುವ ಮೂಲಕ ಆರಂಭಿಸಿದ ಜಾನ್,  ಸದೃಢ ರಾಷ್ಟ್ರವಾಗಿ ಭಾರತ ಪ್ರವರ್ಧಮಾನಕ್ಕೆ ಬರುತ್ತಿರುವುದನ್ನು ಅಮೆರಿಕ ಉತ್ಸಾಹದಿಂದಲೇ ಸ್ವಾಗತಿಸುತ್ತದೆ. ಹಾಗಾಗಿ, ಭಾರತ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರವಾಗಲು ಅಮೆರಿಕದ ಅಧ್ಯಕ್ಷ ಬರಾಕ್ ಒಮಾಮ ಮತ್ತು ತಾವು ಬೆಂಬಲಿಸುವುದಾಗಿ ಅವರು ಹೇಳಿದ್ದಾರೆ.ನವದೆಹಲಿಯಲ್ಲಿ ಪ್ರಮುಖ  ಐತಿಹಾಸಿಕ ಸ್ಥಳಗಳಿಗೆ ಭೇಟಿ ಹಾಗೂ ಭಾರತದ ಹೊಸ ಪೀಳಿಗೆಯ ನಾಯಕರನ್ನು ಭೇಟಿ ಮಾಡಲು ಬಯಸುವುದಾಗಿ ಜಾನ್ ತಿಳಿಸಿದ್ದಾರೆ.

ಉಭಯ ದೇಶಗಳ ನಡುವಿನ ಮಾತುಕತೆ ಈ ಹಿಂದಿಗಿಂತಲೂ ಈಗ ಪ್ರಾಮುಖ್ಯತೆ ಪಡೆದಿದೆ. ಭಾರತ ಮತ್ತು ಅಮೆರಿಕ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಹತ್ತಿರವಾಗಿದ್ದು  ಎರಡೂ ದೇಶಗಳು ಏಕಕಾಲಕ್ಕೆ ಸವಾಲುಗಳನ್ನು ಎದುರಿಸುತ್ತಲೇ ಹೊಸ ಅವಕಾಶಗಳನ್ನೂ ಸೃಷ್ಟಿಸುತ್ತಿವೆ ಎಂದಿದ್ದಾರೆ.ಉನ್ನತ ಶಿಕ್ಷಣ, ಭಯೋತ್ಪಾದನೆ ನಿಗ್ರಹ, ಬಾಹ್ಯಾಕಾಶ ವಿಜ್ಞಾನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉಭಯ ದೇಶಗಳು ಜತೆಯಾಗಿಯೇ ಕಾರ್ಯ ನಿರ್ವಹಿಸಿವೆ ಎಂದು ಜಾನ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.ಭಾರತದ ಭೇಟಿ ಸಮಯದಲ್ಲಿ ಜಾನ್, ಉಭಯ ದೇಶಗಳ ಆರ್ಥಿಕ ಒಪ್ಪಂದ, ಭದ್ರತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಹವಾಮಾನ ಬದಲಾವಣೆ ಸೇರಿದಂತೆ ಜಾಗತಿಕ ಮಟ್ಟದ ಸಮಸ್ಯೆಗಳಾದ ಮಹಿಳಾ ಸಬಲೀಕರಣ, ಬಾಹ್ಯಾಕಾಶ ಸಹಯೋಗ ಇತ್ಯಾದಿ ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ.ಇದೇ ಸಂದರ್ಭದಲ್ಲಿ ನವದೆಹೆಲಿಯಲ್ಲಿ ಜಾನ್ ಅವರು, ಅಮೆರಿಕ-ಭಾರತ ಉನ್ನತ ಶಿಕ್ಷಣ ಕುರಿತ ಸಂವಾದಕ್ಕೆ ಚಾಲನೆ ನೀಡುವರು. ಭಾರತಕ್ಕೆ ಭೇಟಿ ನೀಡುವ ಮುನ್ನ ಜಾನ್ ದೋಹಾಕ್ಕೆ ತೆರಳುವರು. ದೆಹಲಿ ಭೇಟಿ ನಂತರ ಜೆಡ್ಡಾ, ಕುವೈತ್, ಅಮ್ಮಾನ್, ಜೆರುಸಲೇಂಗಳಿಗೆ ಜಾನ್ ಪ್ರವಾಸ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.