ಮಂಗಳವಾರ, ಏಪ್ರಿಲ್ 20, 2021
24 °C

ಶಾರುಖ್ ಬಾಳಪುಟದಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾರುಖ್ ಬಾಳಪುಟದಿಂದ

ಈಚೆಗಷ್ಟೆ ತಮ್ಮ 47ನೆಯ ಜನ್ಮದಿನ ಆಚರಿಸಿಕೊಂಡ ಸಂದರ್ಭದಲ್ಲಿ `ನಾನೇನು ಅಷ್ಟು ದೊಡ್ಡವನಲ್ಲ~ ಎಂದು ಹೇಳಿಕೊಂಡಿದ್ದ ಶಾರುಖ್ ಇದೀಗ ತಮ್ಮ ಆತ್ಮಕತೆಯನ್ನು ಮುಗಿಸುವ ಹಂತದಲ್ಲಿದ್ದಾರಂತೆ.ತಮ್ಮ ಬದುಕಿನ ಮೊದಲ ಪುಟಗಳು ಸುಖಕರವಾಗಿರಲಿಲ್ಲ ಎಂಬ ಸತ್ಯವನ್ನು ಬಿಚ್ಚಿಟ್ಟಿರುವ ಶಾರುಖ್ ಖಾನ್, ಹದಿಹರೆಯದಲ್ಲಿಯೇ ತಂದೆಯನ್ನು ಕಳೆದುಕೊಂಡ ನಂತರದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.`ಅಪ್ಪ ಚೆಲುವಾಂತ ಚೆನ್ನಿಗ ಪಠಾಣ್ ಆಗಿದ್ದ. ಅಪ್ಪ ಒಮ್ಮೆ ನವದೆಹಲಿಯಲ್ಲಿ ಸಿನಿಮಾ ನೋಡಲು ಕರೆದೊಯ್ದರು. ಆದರೆ ಅವರ ಬಳಿ ಸಿನಿಮಾ ನೋಡಲು ಸಾಕಷ್ಟು ಹಣ ಇರಲಿಲ್ಲ. ಕಾಮತಿ ಸಭಾಂಗಣದ ಬಳಿ ಕುಳಿತೆವು. ಇಲ್ಲಿಂದ ಹೋಗಿ ಬರುವ ಕಾರುಗಳನ್ನು ನೋಡುವುದು ಅದೆಷ್ಟು ಚಂದ ಅಲ್ಲವೇ?ಎಂದು ಕೇಳಿದ್ದರು. ನಾವು ಒಂದಷ್ಟು ಹೊತ್ತು ಚಂದದ ಕಾರುಗಳನ್ನು ನೋಡುತ್ತ ಕುಳಿತು ಎದ್ದು ಬಂದೆವು. ಈ ಘಟನೆ ಮನಸಿನಲ್ಲಿ ಅಚ್ಚೊತ್ತಿ ನಿಂತಿದೆ. ಪ್ರತಿದಿನವೂ ನನಗಿಂಥ ವೈಫಲ್ಯದ ಆತಂಕ ಕಾಡುತ್ತಲೇ ಇರುತ್ತದೆ.ನನ್ನ ಮಕ್ಕಳನ್ನು ಸಿನಿಮಾ ನೋಡಲು ಕರೆದೊಯ್ದರೆ, ಅವರು ಇಷ್ಟಪಟ್ಟದ್ದನ್ನು ತೋರಿಸುವಷ್ಟು ನಾನು ಸಮರ್ಥನಾಗಿರಬೇಕು; ಇನ್ನೊಬ್ಬರ ಕಾರುಗಳನ್ನು ತೋರಿಸಿಕೊಂಡು ಬರಬಾರದು ಎಂಬ ಪ್ರಜ್ಞೆ ಯಾವತ್ತೂ ಕಾಡುತ್ತದೆ.

 

ಇದೇ ನನ್ನ ಪರಿಶ್ರಮದ ಮೂಲ ಸೆಲೆ ಎಂದೂ ಹೇಳಬಹುದು. ಯಶಸ್ಸಿನ ಪ್ರೀತಿಗಿಂತಲೂ ವೈಫಲ್ಯದ ಭೀತಿ ನನ್ನನ್ನು ಕಾಡುತ್ತದೆ~ ಎಂದು ಬಾಲಿವುಡ್ ಬಾದ್‌ಶಾ ಗೋವಾದಲ್ಲಿ ತಮ್ಮ ಬದುಕಿನ ಪುಟಗಳನ್ನು ಬಿಚ್ಚಿಟ್ಟಿದ್ದಾರೆ.`ನನ್ನಪ್ಪ ವಿಶ್ವದಲ್ಲಿಯೇ ಅತಿ ಯಶಸ್ವಿಯಾಗಿ ವೈಫಲ್ಯ ಕಂಡ ವ್ಯಕ್ತಿ. ಅದನ್ನು ಅವರು ಅನುಭವಿಸುತ್ತಿದ್ದ ರೀತಿಯನ್ನಂತೂ ಮರೆಯಲಾಗದು. ಆದರೆ ನನಗೆ ನನ್ನಪ್ಪನ ಬಗ್ಗೆ ಹೆಮ್ಮೆ ಇದೆ. ಅವರಿಗೆ ಜೀವನದಲ್ಲಿ ಯಾವತ್ತಿಗೂ ಕಾಡುವ ದೃಶ್ಯವೆಂದರೆ, ಅವರ ಅಪ್ಪನ ಪಾರ್ಥಿವ ಶರೀರವನ್ನು ಮನೆಗೆ ಹೊತ್ತು ತಂದ ಸಂದರ್ಭ.ಶಾರುಖ್ ಸಹೋದರಿ ಶವವನ್ನು ಎದುರುಗೊಂಡಾಗ ಜ್ಞಾನ ತಪ್ಪಿದರು. ನಂತರ ಅವರಿಗೆ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಅವರು ಕಣ್ಣೀರು ಸುರಿಸಲಿಲ್ಲ. ಕೆಲ ವರ್ಷಗಳವರೆಗೂ ಈ ಸತ್ಯವನ್ನು ಒಪ್ಪಿಕೊಳ್ಳುವುದು ಆಗಲೇ ಇಲ್ಲ. ಅಪ್ಪ ಇದ್ದಕ್ಕಿದ್ದಂತೆ ಬದುಕಿನಿಂದ ಎದ್ದು ಹೋಗಿದ್ದ. ನಂತರದ ದಿನಗಳು ಇನ್ನೂ ಕಠಿಣವಾಗಿದ್ದವು. ಮನೆಯಲ್ಲಿ ಹಣಕ್ಕಾಗಿ ಯಾವತ್ತೂ ಕೊರತೆ ಇರುತ್ತಿತ್ತು. ಇವೆಲ್ಲವೂ ಮರೆಯದ ದಿನಗಳು~ ಎಂದಾಗ ಶಾರುಖ್ ಕಂಗಳಲ್ಲಿ ಪಸೆಯ ತೆರೆ.ಪ್ರತಿರಾತ್ರಿ ಅಮ್ಮನೊಂದಿಗೆ ಕೂರುವ ಕ್ಷಣಗಳು ಸಂತಸದಾಯಕ ಎಂದು ಖುಷಿಯಿಂದ ನೆನೆಯುತ್ತಾರೆ ಡಾನ್: `ಎಲ್ಲ ಕೆಲಸಗಳನ್ನು ಮುಗಿಸಿದ ನಂತರ ಅಮ್ಮಿ ನನ್ನನ್ನು ಕರೆಯುತ್ತಿದ್ದರು. ಅವರ ಕಾಲು ಒತ್ತುತ್ತ ಕೂರುತ್ತಿದ್ದೆ. ಇಬ್ಬರಿಗೂ ನಿದ್ದೆ ಬರುತ್ತಿರಲಿಲ್ಲ. ಮನೆಯಲ್ಲೊಂದು ಕಪ್ಪು-ಬಿಳುಪು ಟೀವಿ ಇತ್ತು. ಇಬ್ಬರೂ ಯುರೋಪ್ ಫುಟ್‌ಬಾಲ್ ಪಂದ್ಯಾವಳಿ ನೋಡುತ್ತಿದ್ದೆವು.ಎಲ್ಲ ಚಿಂತೆಗಳನ್ನೂ ಪಂದ್ಯ ಮರೆಸುತ್ತಿತ್ತು. ಇಬ್ಬರೂ ಖುಷಿಯಿಂದ ನೋಡುತ್ತಿದ್ದೆವು. ನಿದ್ದೆ ಮಾಡುತ್ತಿದ್ದೆವು. ಮರುದಿನದ ಬದುಕಿಗಾಗಿ ಇಬ್ಬರ ಮನಸ್ಸುಗಳೂ ಸಿದ್ಧಗೊಳಿಸುತ್ತಿದ್ದವು. ಪುಟ್ಟ ಪರದೆಯ ಈ ಆಕರ್ಷಣೆ, ಕ್ರೀಡೆಯತ್ತ ಒಲವು ಎರಡೂ ಬೆಳೆದಿದ್ದು ಇದೇ ಸಂದರ್ಭದಲ್ಲಿ. ಅಮ್ಮನ ಗಟ್ಟಿತನ, ಬದುಕನ್ನು ಎದುರಿಸುವ ಛಾತಿಯನ್ನು ನೆನಪಿಸಿಕೊಂಡರೆ ಈಗಲೂ ಖುಷಿಯಿಂದ ಮನಸು ಅರಳುತ್ತದೆ. ಹೆಮ್ಮೆಯಿಂದ ಎದೆ ಬೀಗುತ್ತದೆ.~ತಮ್ಮ ಸಿನಿಮಾಗಳ ಬಗ್ಗೆ ಮಾತನಾಡುತ್ತ ಶಾರುಖ್ ತಾವು ನಿಭಾಯಿಸಿರುವ ಹಲವಾರು ಪಾತ್ರಗಳು, ಸನ್ನಿವೇಶಗಳು ನಿಜ ಜೀವನದಲ್ಲಿ ಅನುಭವಿಸಿದ್ದೇ ಆಗಿವೆ ಎಂದು ಹೇಳಿಕೊಂಡಿದ್ದಾರೆ. `ಶೇ 90ರಷ್ಟು ದುಃಖಕರ ಘಟನೆಗಳು ನನ್ನ ಬದುಕಿನದ್ದೇ ಆಗಿವೆ. ಬದುಕು ಸಹ ಇಷ್ಟು ಸಿನಿಮೀಯವಾಗಿರಬಹುದೆ ಎಂದು ಸೋಜಿಗವೆನಿಸುತ್ತದೆ~ ಎಂದಿರುವ ಅವರನ್ನು ಇದೀಗ ಒಂಟಿತನ ಕಾಡುತ್ತಿದೆಯಂತೆ.

 

ಇದೀಗ ಯಶಸ್ಸು ನನ್ನ ಪರಿಶ್ರಮದ ಬೆನ್ನಟ್ಟಿ ಬಂದಿದೆ. ಸಾಧನೆಯ ಉತ್ತುಂಗದ ಶಿಖರದಲ್ಲಿದ್ದೇನೆ. ಚಿತ್ರೋದ್ಯಮಕ್ಕೆ ಬರುವವರಲ್ಲಿ, ಬಹುತೇಕರು ಶಾರುಖ್‌ನೊಂದಿಗೆ ನಟಿಸುವುದು ಕನಸು ನನಸಾದಂತಿದೆ ಎಂದಾಗ ಖುಷಿಯೆನಿಸುತ್ತದೆ. ಆದರೂ ಏನೋ ಕೊರತೆ ಇದೆ ಎಂದೆನಿಸುವುದು ಸುಳ್ಳಲ್ಲ. ಪ್ರೀತಿಯ ಮಳೆ ಸುರಿಸುವ ಕುಟುಂಬವಿದೆ.ಆತ್ಮೀಯರ ಸಖ್ಯವಿದೆ. ಸಾಕಷ್ಟು ಸಮಯವನ್ನು ಅವರೊಂದಿಗೆ ಕಳೆಯುತ್ತೇನೆ. ಆದರೂ ಒಂಟಿತನ ಮಾತ್ರ ಇನ್ನಿಲ್ಲದಂತೆ ಕಾಡುತ್ತದೆ~ ಎಂದೂ ತಮ್ಮ ಮನಸನ್ನು ಬಿಚ್ಚಿಟ್ಟಿದ್ದಾರೆ.

ಇತ್ತೀಚೆಗೆ ಶಾರುಖ್ ಸಹನೆ ಕಳೆದುಕೊಳ್ಳುತ್ತಿದ್ದಾರೆ. ಅದು ಮಧ್ಯ ವಯಸ್ಸಿನ ಪರಿಣಾಮವೇ ಎಂಬ ಪ್ರಶ್ನೆ ಹೊಮ್ಮಿದಾಗ, ಅವರು ಒಂದರೆ ಕ್ಷಣ ಸುಮ್ಮನಾದರು.ಸಂವಾದದಲ್ಲಿ ಭಾಗವಹಿಸಿದ್ದವರು ಈ ವಾದವನ್ನು ಸಮರ್ಥಿಸುವಂತೆ ಶಿರೀಶ್ ಕುಂದರ್ ಮೇಲೆ ಕೈ ಮಾಡಿದ್ದು, ವಾಂಖೇಡೆ ಸ್ಟೇಡಿಯಂ ಪ್ರಕರಣ ಮುಂತಾದುವನ್ನು ಕೆದಕಿದರು. ಅದಕ್ಕೆ ಶಾರುಖ್ ಕೊಟ್ಟ ಪ್ರತಿಕ್ರಿಯೆ ಇದು: `ಇದು ದೆಹಲಿ ಮಣ್ಣಿನ ಗುಣ. ನಾನು ದೆಹಲಿಯ ಹುಡುಗ. ಸಿಟ್ಟನ್ನು ನಿಗ್ರಹಿಸುವುದು ಅಸಾಧ್ಯ. ಕಭಿ ಹಾಂ, ಕಭೀ ನಾ ಚಿತ್ರೀಕರಣದ ಸಂದರ್ಭದಲ್ಲಿ ನನ್ನ ಹೆಸರನ್ನು ಇನ್ನೊಬ್ಬ ನಟಿಯ ಹೆಸರಿನೊಂದಿಗೆ ಬೆಸೆದು ಬರೆಯಲಾಗಿತ್ತು.ಅದನ್ನು ಬರೆದ ಪತ್ರಕರ್ತರ ಮನೆಗೆ ನುಗ್ಗಿದೆ. ಧಮಕಿ ಹಾಕಿದೆ. ಮರುದಿನ ಕಂಬಿಗಳ ಹಿಂದೆ ದಿನ ಕಳೆಯಬೇಕಾಯಿತು. ಪೊಲೀಸ್ ಠಾಣೆಯಿಂದ ಒಂದೇ ಒಂದು ದೂರವಾಣಿ ಕರೆ ಮಾಡುವ ಅವಕಾಶವಿತ್ತು. ಆಗಲೂ ಗೌರಿ ಅಥವಾ ವಕೀಲರಿಗೆ ಕರೆ ಮಾಡದೆ, ಮತ್ತದೇ ಪತ್ರಕರ್ತನಿಗೆ ಕರೆ ಮಾಡಿ ಮತ್ತೊಮ್ಮೆ ಧಮಕಿ ಹಾಕಿದ್ದೆ~.ಇವೆಲ್ಲಾ ಮೂರ್ಖತನದ ವರ್ತನೆಗಳು ಎಂದೂ ಒಪ್ಪಿಕೊಳ್ಳುವ ಶಾರುಖ್, ಬಾಲ್ಯದಿಂದ ತಾವು ಚಿತ್ರರಂಗಕ್ಕೆ ಬರುವವರೆಗಿನ ಬದುಕನ್ನು ತಮ್ಮ ಆತ್ಮಕತೆಯಲ್ಲಿ ತೆರೆದಿಟ್ಟಿದ್ದಾರಂತೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.