ಸೋಮವಾರ, ಜೂನ್ 14, 2021
21 °C

ಶಾಸಕರ ಗೈರು ಖಂಡಿಸಿ ಸಭೆ ಬಹಿಷ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳ ಪರಿಶೀಲನೆ ಸಭೆಗೆ ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ಗೈರು ಹಾಜರಾಗಿದ್ದರಿಂದ ದಲಿತ ಸಂಘಟನೆಗಳ ಮುಖಂಡರು ಸಭೆ ಬಹಿಷ್ಕರಿಸಿ ಹೊರ ನಡೆದ ಘಟನೆ ನಡೆಯಿತು.ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ತಹಶೀಲ್ದಾರ್ ಅಧ್ಯಕ್ಷತೆ ಯಲ್ಲಿ ಕರೆದಿದ್ದ ಸಭೆಯಲ್ಲಿ ದಸಂಸ ಬೆಂಗಳೂರು ವಿಭಾಗೀಯ ಸಂಚಾಲಕ ಮು.ತಿಮ್ಮಯ್ಯ ಮಾತನಾಡಿ, ಪ್ರತಿ 3 ತಿಂಗಳಿಗೊಮ್ಮೆ ದೌರ್ಜನ್ಯ ಪ್ರಕರಣ ಪರಿಶೀಲನೆ ಸಭೆಯನ್ನು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಶಾಸಕರ ಉಪಸ್ಥಿತಿ ಯಲ್ಲಿ ನಡೆಸಬೇಕಾಗಿದೆ.ಆದರೆ ಕಳೆದ ಒಂದು ವರ್ಷದಿಂದ ಸಭೆ ಮೊಟಕು ಗೊಳಿಸಿ ದಲಿತ ವಿರೋದಿ ನೀತಿಯನ್ನು ಇಲ್ಲಿನ ಆಡಳಿತ ಅನುಸರಿಸುತ್ತಿದೆ ಎಂದು ಆರೋಪಿಸಿದರು.ಸಭೆಯಲ್ಲಿ ಸರಿಯಾದ ಆಸನ ವ್ಯವಸ್ಥೆ ಕಲ್ಪಿಸದೇ ನಿರ್ಲಕ್ಷ್ಯ ವಹಿಸಲಾಗಿದೆ. ದಲಿತರ ಸಮಸ್ಯೆಗಳನ್ನು ಶಾಸಕರಿಗೆ ಮನವರಿಕೆ ಮಾಡಿಕೊಡುವುದಕ್ಕೆ ಹಲವಾರು ದಲಿತ ಮುಖಂಡರು ಸಭೆಗೆ ಆಗಮಿಸಿದ್ದರು. ಕ್ಷೇತ್ರದ ಶಾಸಕರು ಸಭೆಗೆ ಹಾಜರಾಗದೆ ಇರುವುದರಿಂದ ಸಭೆಯನ್ನು ಬಹಿಷ್ಕರಿಸುವ ತೀರ್ಮಾನ ಕೈಗೊಳ್ಳಲಾಯಿತೆಂದು ಹೇಳಿದರು.ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಚಿಕ್ಕಾಪುರ ಶ್ರೀನಿವಾಸ್, ದಲಿತ ನಾಗರಿಕ ಸಮಿತಿ ಜಿಲ್ಲಾ ಸಂಚಾಲಕ ಪುರಸನಹಳ್ಳಿ ಶ್ರೀನಿವಾಸ್, ಅಧ್ಯಕ್ಷ ಗೋಪಾಲ್, ದಲಿತ ಮುಖಂಡ ರಾದ ಇಂದುಮಂಗಲ ಶ್ರೀನಿವಾಸ್, ಭುವನಹಳ್ಳಿ ಚನ್ನಪ್ಪ, ಮಾನವ ಭೂ ಹಕ್ಕುಗಳ- ಸಂರಕ್ಷಣಾ ಸಮಿತಿ ಅಧ್ಯಕ್ಷ ಎ.ಕೆ.ವೆಂಕಟೇಶ್, ದಲಿತ ಸಿಂಹಸೇನೆ ಅಧ್ಯಕ್ಷ ತಿಪ್ಪಸಂದ್ರ ಶ್ರೀನಿವಾಸ್, ಸಮತ ಸೈನಿಕದಳ ತಾಲ್ಲೂಕು ಅಧ್ಯಕ್ಷ ಗೋವಿಂದಸ್ವಾಮಿ ಉಪಸ್ಥಿತರಿದ್ದರು.ತಡವಾಗಿ ಆಗಮಿಸಿದ ಶಾಸಕದಲಿತ ಮುಖಂಡರು ಸಭೆ ಬಹಿಷ್ಕ ರಿಸಿ ಹೊರನಡೆದ ನಂತರ ತಡವಾಗಿ ಬಂದ ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ಪತ್ರಕರ್ತರೊಂದಿಗೆ ಮಾತನಾಡಿ, ಅನ್ಯಕಾರ್ಯ ನಿಮಿತ್ತ ಸಭೆಗೆ ಬರಲು ತಡವಾಗಿದೆ. ದಲಿತ ಮುಖಂಡರು ಸಭೆ ಬಹಿಷ್ಕರಿಸಿದ್ದರಿಂದ ಮಾರ್ಚ್ 6ಕ್ಕೆ ಮುಂದೂಡಲಾಗಿದೆ ಎಂದರು.ದಲಿತರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ತಾಲ್ಲೂಕಿನಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣ ಗಳಲ್ಲಿ ಇಳಿಮುಖ ಕಂಡಿದೆ ಎಂದರು.ತಹಶೀಲ್ದಾರ್ ಎಚ್.ಅಮರೇಶ್, ತಾ.ಪಂ. ಅಧ್ಯಕ್ಷ ಕೆ.ಗೋಪಾಲಗೌಡ, ಸದಸ್ಯ ಎಸ್.ವಿ.ಲೋಕೇಶ್, ಜಿ.ಪಂ. ಸದಸ್ಯೆ ಯಲ್ಲಮ್ಮ, ಪುರಸಭಾ ಅಧ್ಯಕ್ಷೆ ಗುಲಾಬ್‌ಜಾನ್, ಉಪಾಧ್ಯಕ್ಷ ಎ. ರಾಜಪ್ಪ ಮುಂತಾದವರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.