ಸೋಮವಾರ, ಜನವರಿ 20, 2020
21 °C

ಶಾಸಕರ ವಿರುದ್ಧ ಯಡಿಯೂರಪ್ಪ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: `ಬಿಜೆಪಿ ಸರ್ಕಾರ ವಸತಿ ಸಚಿವರು ಬಾಗೇಪಲ್ಲಿ ತಾಲ್ಲೂಕಿನ 2,500 ಮನೆಗಳ ಸೌಲಭ್ಯ ಮಾಡಿಸಿಕೊಟ್ಟರೆ, ಆ ತಾಲ್ಲೂಕಿನ ಕಾಂಗ್ರೆಸ್ ಶಾಸಕರು ತಮ್ಮಿಂದಲೇ ವಸತಿ ಸೌಲಭ್ಯ ಸಿಕ್ಕಿದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ.

 

ವಸತಿ ಸೌಲಭ್ಯ ಒದಗಿಸಿದವರು ಯಾರೆಂದು ನೀವು ಪ್ರಶ್ನಿಸಿ~,

-ಹೀಗೆ ಹೇಳಿದವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಪ್ರಶ್ನಿಸುವಂತೆ ಹೇಳಿದ್ದು ಬಿಜೆಪಿ ಕಾರ್ಯಕರ್ತರಿಗೆ. ನಗರದಲ್ಲಿ ಶುಕ್ರವಾರ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರದಿಂದ ಬಾಗೇಪಲ್ಲಿಯ ಜನರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಟ್ಟರೆ, ಅಲ್ಲಿನ ಶಾಸಕ ಎಲ್ಲವೂ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಮತ್ತು ತನ್ನಿಂದ ಸಾಧ್ಯವಾಗಿದೆ ಎಂದು ಹೇಳಿಕೊಂಡು ಅಡ್ಡಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಸುಮ್ಮನಿದಷ್ಟು ಬೇರೆ ಪಕ್ಷದವರು ನಮ್ಮ ಯೋಜನೆಗಳ ಯಶಸ್ಸನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಾರೆ ಎಂದರು.ಬಾಗೇಪಲ್ಲಿ ಶಾಸಕರ ವರ್ತನೆ ಕುರಿತು ನಮ್ಮ ಸರ್ಕಾರಕ್ಕೆ ಅಥವಾ ಪಕ್ಷದ ಮುಖಂಡರಿಗೆ ಪತ್ರ ಬರೆದರೆ ಸಾಲದು. ನೀವೇ ಖುದ್ದು ಅದರ ಬಗ್ಗೆ ಪರಿಶೀಲನೆ ನಡೆಸಬೇಕು. ಸರ್ಕಾರದ ಯೋಜನೆಗಳು ಇನ್ನೊಬ್ಬರ ಪಾಲಾಗದಂತೆ ನೋಡಿಕೊಳ್ಳಬೇಕೆಂದು ತಾಕೀತು ಮಾಡಿದರು.`ಜೆಡಿಎಸ್ ಈಗ ಮೊಮ್ಮಕ್ಕಳ ಪಕ್ಷ~

ಇಷ್ಟು ವರ್ಷಗಳ ಕಾಲ ಅಪ್ಪಮಕ್ಕಳ ಪಕ್ಷವಾಗಿದ್ದ ಜೆಡಿಎಸ್ ಈಗ ಮೊಮ್ಮಕ್ಕಳ ಪಕ್ಷ. ದೇವೇಗೌಡರು ಅಧಿಕಾರ ನಡೆಸಿದರು. ಬಳಿಕ ಅವರ ಮಗ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಅವರ ಪತ್ನಿ ಸಹ ರಾಜಕೀಯಕ್ಕೆ ಬಂದರು. ಈಗ ದೇವೇಗೌಡರ ಮೊಮ್ಮಗ ರಾಜಕೀಯಕ್ಕೆ ಬರುತ್ತಿದ್ದಾನೆ ಎಂದು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ವ್ಯಂಗ್ಯವಾಡಿದರು.ನಗರದಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅವರದ್ದು ವಂಶಾಡಳಿತ ಪಕ್ಷ. ಜವಹರಲಾಲ್ ನೆಹರೂ, ಇಂದಿರಾಗಾಂಧಿ, ರಾಜೀವ್‌ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಎಲ್ಲರೂ ರಾಜಕೀಯಕ್ಕೆ ಬಂದರು. ಅದೇ ರೀತಿ ಜೆಡಿಎಸ್‌ನಲ್ಲೂ ದೇವೇಗೌಡರ ಮಕ್ಕಳು, ಸೊಸೆಯಂದಿರು ರಾಜಕೀಯಕ್ಕೆ ಬಂದರು. ಈಗ ಮೊಮಕ್ಕಳು ಸಹ ಪ್ರವೇಶಿಸುತ್ತಿದ್ದಾರೆ ಎಂದರು.ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಭವಿಷ್ಯವಿಲ್ಲ. ಎಲ್ಲರೂ ಸೇರಿ ಪಕ್ಷ ಬಲಪಡಿಸಿ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.ನೀವೇ ಅಕೌಂಟ್ ಓಪನ್ ಮಾಡಿಸಿ

ಬಿಜೆಪಿ ಸರ್ಕಾರವು ಚಿಕ್ಕಬಳ್ಳಾಪುರ ಜಿಲ್ಲೆಗೆ ಹಲವಾರು ಅಭಿವೃದ್ಧಿ ಯೋಜನೆ ಜಾರಿಗಿಳಿಸುತ್ತಿದೆ. ಅನುದಾನ ಬಿಡುಗಡೆ ಮಾಡುತ್ತಿದೆ. ಹೀಗಿದ್ದರೂ ಜಿಲ್ಲೆಯಲ್ಲಿ ನೀವು ಬಿಜೆಪಿಯ ಅಕೌಂಟ್ ಓಪನ್ ಮಾಡಿಸದಿದ್ದರೆ ಹೇಗೆ ಎಂದು ಜವಳಿ ಸಚಿವ ವರ್ತೂರು ಪ್ರಕಾಶ್ ಪ್ರಶ್ನಿಸಿದರು.ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಜಿಲ್ಲೆಯಲ್ಲಿ ಬಿಜೆಪಿ ಅಕೌಂಟ್ ತೆರೆಯಬೇಕು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿನಾರಾಯಣ ರೆಡ್ಡಿಯವರನ್ನು ಶಾಸಕರನ್ನಾಗಿಸಬೇಕು ಎಂದರು.ಹರ್ಷೋದ್ಗಾರ

ನಗರದಲ್ಲಿ ಶುಕ್ರವಾರ ನಡೆದ ಬೆಂಗಳೂರು ಗ್ರಾಮಾಂತರ ವಿಭಾಗದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರು ಕೇಳಿ ಬಂದಾಗಲೆಲ್ಲ ಕಾರ್ಯಕರ್ತರಿಂದ ಜೈಘೋಷ ಮತ್ತು ಹರ್ಷ ವ್ಯಕ್ತವಾಗುತಿತ್ತು.ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸೇರಿದಂತೆ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅತಿಥಿಗಳು, ಯಡಿಯೂರಪ್ಪ ಅಭಿವೃದ್ಧಿ ಹರಿಕಾರರು. ಪಕ್ಷವನ್ನು ಹಿಮಾಲಯದ ಎತ್ತರಕ್ಕೆ ತಂದಿದ್ದಾರೆ. ಅವರು ಉತ್ತಮ ಆಡಳಿತ ನೀಡಿದ್ದಾರೆ. ಅವರಿಂದ ಪಕ್ಷಕ್ಕೆ ಇನ್ನಷ್ಟು ಬಲ ಬಂದಿದೆ ಎಂದು ಹೇಳಿದಾಗಲೆಲ್ಲ ಕಾರ್ಯಕರ್ತರು ಯಡಿಯೂರಪ್ಪ ಪರ ಜೈಘೋಷ ಹಾಕುತ್ತಿದ್ದರು.ಡಿ.ವಿ.ಸದಾನಂದಗೌಡ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ಭಾಷಣಗಳನ್ನು ಗಮನವಿಟ್ಟು ಆಲಿಸಿದ ಕಾರ್ಯಕರ್ತರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಭಾಷಣ ಆರಂಭಿಸಿದ ಕೂಡಲೇ ಒಬ್ಬೊಬ್ಬರಾಗಿ ಹೊರನಡೆದರು.

ಪ್ರತಿಕ್ರಿಯಿಸಿ (+)