ಗುರುವಾರ , ಜೂನ್ 24, 2021
29 °C

ಶಾಸನಗಳ ಸಮರ್ಪಕ ಅಧ್ಯಯನ ಆಗುತ್ತಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಸನಗಳ ಸಮರ್ಪಕ ಅಧ್ಯಯನ ಆಗುತ್ತಿಲ್ಲ

ಬೆಂಗಳೂರು: `ರಾಜ್ಯದಲ್ಲಿ ವಿಶ್ವವಿದ್ಯಾಲಯಗಳು ಆರಂಭವಾದಾಗಿನಿಂದಲೂ ಕನ್ನಡ ಭಾಷೆಗೆ ಸಂಬಂಧಪಟ್ಟಂತೆ ಉನ್ನತ ಮಟ್ಟದ ಸಂಶೋಧನೆಗಳು ನಡೆಯುತ್ತಿಲ್ಲ. ಇದಕ್ಕೆ ಮೂಲ ಕಾರಣ ಅಧ್ಯಾಪಕರು ಕನ್ನಡ ಶಾಸನಗಳನ್ನು ಸಮರ್ಪಕವಾಗಿ ಅಧ್ಯಯನ ನಡೆಸುತ್ತಿಲ್ಲ~ ಎಂದು ಸಂಶೋಧಕ ಪ್ರೊ.ಎಸ್.ಶೆಟ್ಟರ್ ದೂರಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ `ಕನ್ನಡ ಸಾಹಿತ್ಯ ಇತಿಹಾಸ-ಒಂದು ಅವಲೋಕನ~ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

`ಇತಿಹಾಸಕಾರರಿಗಿಂತ ಕನ್ನಡ ಪ್ರಾಧ್ಯಾಪಕರು ಕನ್ನಡ ಸಾಹಿತ್ಯ ಚರಿತ್ರೆಯನ್ನು ಆಳವಾಗಿ ಅಭ್ಯಸಿಸಿದ್ದಾರೆ. ಯುವ ಸಂಶೋಧಕರು ಪ್ರಸ್ತುತವಿರುವ ಕನ್ನಡ ಸಂಶೋಧನಾ ಗ್ರಂಥಗಳನ್ನು ಯಥಾವತ್ತಾಗಿ ಅನುಕರಿಸದೇ, ಇದನ್ನು ಆಧಾರವಾಗಿಟ್ಟುಕೊಂಡೇ ವಿವಿಧ ಆಯಾಮಗಳಲ್ಲಿ ಅಧ್ಯಯನ ನಡೆಸಬೇಕು~ ಎಂದರು.

`ಕನ್ನಡ ಸಾಹಿತ್ಯ ಚರಿತ್ರೆ ಅಧ್ಯಯನ ಮಾಡಲು ಇಚ್ಛಿಸುವವರು ಕನ್ನಡ ಭಾಷೆ ಜತೆಗೆ ಸಮಕಾಲೀನ ಇತರೆ ಭಾಷೆಗಳನ್ನು ಅಧ್ಯಯನ ಮಾಡಿದಾಗ ಮಾತ್ರ ಸಂಶೋಧನೆ ಅರ್ಥಪೂರ್ಣವೆನಿಸುತ್ತದೆ. ಈ ನಿಟ್ಟಿನಲ್ಲಿ ಯುವ ಸಂಶೋಧಕರು ಕಾರ್ಯನಿರ್ವಹಿಸಬೇಕು~ ಎಂದು ಸಲಹೆ ನೀಡಿದರು.

`ಕೇವಲ ನಾಲ್ಕೈದು ಸಾಹಿತ್ಯ ಪುಸ್ತಕಗಳ ಅಧ್ಯಯನದಿಂದ ಕನ್ನಡ ಸಾಹಿತ್ಯ ಸಂಶೋಧನೆ ಪೂರ್ಣಗೊಳ್ಳುವುದಿಲ್ಲ. ಆರಂಭದಲ್ಲಿ ಅನೇಕ ಸಂಶೋಧಕರು ತಮ್ಮ ಕಾಲಘಟ್ಟದಲ್ಲಿ ದೊರೆತ ಮಾಹಿತಿಯನ್ನು ಮಾತ್ರ ಆಧರಿಸಿ ಸಂಶೋಧನೆ ಮಾಡಿದ್ದಾರೆ ಇದರಿಂದಲೂ ಕನ್ನಡ ಸಾಹಿತ್ಯ ಸಂಶೋಧನೆ ಅಪೂರ್ಣವಾಗಿದೆ~ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್, `ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಭಾಷೆಯನ್ನು ಸಮರ್ಪಕವಾಗಿ ಬಳಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕನ್ನಡಿಗರು ಮುಂದಾಗಬೇಕು~ ಎಂದು ಕರೆ ನೀಡಿದರು.

ಬೆಂಗಳೂರು ವಿ.ವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಕೆ.ಕೃಷ್ಣಪ್ಪ, ಇಲಾಖೆಯ ಜಂಟಿ ನಿರ್ದೇಶಕ ಕಾ.ತ.ಚಿಕ್ಕಣ್ಣ, ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಆರ್.ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.