ಗುರುವಾರ , ಫೆಬ್ರವರಿ 25, 2021
29 °C

ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಇದರಿಂದಾಗಿ ವರ್ಗಾವಣೆ ಕುರಿತ ಗೊಂದಲಕ್ಕೆ ತೆರೆ ಬಿದ್ದಿದೆ. ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳ ಶಿಕ್ಷಕರು, ‘ಬಿ’ ವೃಂದದ ಅಧಿಕಾರಿಗಳು ಮತ್ತು ದೈಹಿಕ ಶಿಕ್ಷಣ ಪರಿವೀಕ್ಷಕರು ಹಾಗೂ ವಿಷಯ ಪರಿವೀಕ್ಷಕರು (ವೃತ್ತಿ ಶಿಕ್ಷಣ) ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು.‘ಕರ್ನಾಟಕ ರಾಜ್ಯ ಶಿಕ್ಷಕರ ವರ್ಗಾವಣೆ ನಿಯಂತ್ರಣ ಅಧಿನಿಯಮಗಳು–2007’ಕ್ಕೆ ತಿದ್ದುಪಡಿ ತಂದು ನಂತರ ವರ್ಗಾವಣೆ ಪ್ರಕ್ರಿಯೆ ನಡೆಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಹೇಳಿದ್ದರು. ಆದರೆ, ಇದೇ ಕಾಯ್ದೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಹೆಚ್ಚುವರಿ ಶಿಕ್ಷಕರ ಗುರುತಿಸುವಿಕೆ ಮತ್ತು ನಿಯೋಜನೆ ನಂತರ ಉಳಿದಿರುವ ಖಾಲಿ ಹುದ್ದೆಗಳಿಗೆ ಆನ್‌ಲೈನ್‌ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ನಡೆಯಲಿದೆ.ಅಂತರಜಿಲ್ಲೆ ವರ್ಗಾವಣೆ: ‘ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ’ ಅನುಸಾರ ಹೆಚ್ಚುವರಿ ಶಿಕ್ಷಕರು ಇರುವ  ಜಿಲ್ಲೆಗಳ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅಂತಹ ಜಿಲ್ಲೆಗಳಿಗೆ ಇತರೆ ಜಿಲ್ಲೆಗಳಿಂದ ವರ್ಗಾವಣೆ ಪಡೆಯಲು ಅವಕಾಶವಿಲ್ಲ.  ಆದರೆ, ಅದೇ ಜಿಲ್ಲೆಯ ವ್ಯಾಪ್ತಿಯೊಳಗೆ ಖಾಲಿ ಹುದ್ದೆ ಇರುವ ಶಾಲೆಗೆ ವರ್ಗಾವಣೆ ಪಡೆಯಬಹುದು.ಹೆಚ್ಚುವರಿ ಶಿಕ್ಷಕರಿರುವ ಜಿಲ್ಲೆಗಳಿಂದ ಖಾಲಿ ಹುದ್ದೆಗಳಿರುವ ಜಿಲ್ಲೆಗಳಿಗೆ ವರ್ಗಾವಣೆ ನೀಡುವಾಗ ಒಟ್ಟು ಹುದ್ದೆಗಳ ಶೇ3ರ ಪ್ರಮಾಣದ ಮಿತಿ ಅನ್ವಯಿಸುವುದಿಲ್ಲ.ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಸಂದರ್ಭಕ್ಕೆ ಮಾತ್ರ ಅನ್ವಯ ಆಗುವಂತೆ ಅಯಾ ಜಿಲ್ಲೆಯನ್ನು ‘ಜೇಷ್ಠತಾ ಘಟಕ’ ಎಂದು ಪರಿಗಣಿಸಲಾಗಿದೆ. ವರ್ಗಾವಣೆ ಪ್ರಕ್ರಿಯೆ ಮುಗಿದ ನಂತರ ಖಾಲಿ ಉಳಿಯುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.ಪತಿ–ಪತ್ನಿ ವರ್ಗಾವಣೆ :  ಪತಿ ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಲ್ಲಿ ಮತ್ತು ಶಿಕ್ಷಕರು ಪ್ರಸ್ತುತ ಶಾಲೆಯಲ್ಲಿ ಕನಿಷ್ಠ 3 ವರ್ಷ ಸೇವೆ ಪೂರ್ಣಗೊಳಿಸಿದ್ದರೆ ಪತಿ ಅಥವಾ ಪತ್ನಿ ಸೇವೆ ಸಲ್ಲಿಸುತ್ತಿರುವ ಸ್ಥಳಕ್ಕೆ ಅಥವಾ ಸಮೀಪದ ಖಾಲಿ ಸ್ಥಳಕ್ಕೆ ವರ್ಗಾವಣೆ ಪಡೆಯಬಹುದು.ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಸರ್ಕಾರಿ ಶಾಲೆ, ಮತ್ತೊಬ್ಬರು ಅನುದಾನಿತ ಶಾಲೆಯಲ್ಲಿ  ಕಾರ್ಯನಿರ್ವಹಿಸುತ್ತಿದ್ದರೆ ಅಂಥವರೂ ವರ್ಗಾವಣೆ ಪಡೆಯಬಹುದು. ಆದರೆ, ನಗರ ಪ್ರದೇಶ ಹೊರತುಪಡಿಸಿ ವರ್ಗಾವಣೆ ನೀಡಬೇಕು.ಕಾಯಿಲೆ ಪ್ರಕರಣಗಳು: ಶಿಕ್ಷಕರು ಅಥವಾ ಅವರ ಪತಿ/ಪತ್ನಿ/ಮಕ್ಕಳು ಹೃದಯ ಸಂಬಂಧಿ, ಮೂತ್ರಪಿಂಡ, ಕ್ಯಾನ್ಸರ್‌ ಮತ್ತು ಎಚ್‌ಐವಿ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದರೆ ದಾಖಲೆ ಒದಗಿಸಿ ಅರ್ಜಿ ಸಲ್ಲಿಸಬಹುದು.ಅಂಗವಿಕಲ ಪ್ರಕರಣಗಳು: ಶಿಕ್ಷಕರು ಅಂಗವಿಕಲ ಮೀಸಲಾತಿ ಕೋಟಾದಡಿ ನೇಮಕವಾಗಿರಬೇಕು. ಶೇ 40ಕ್ಕಿಂತ ಹೆಚ್ಚು ಪ್ರಮಾಣ ಅಂಗವಿಕಲತೆ ಇರುವ ಬಗ್ಗೆ ಜಿಲ್ಲಾ ಸರ್ಜನ್‌ ಅವರಿಂದ ಪಡೆದ ಪ್ರಮಾಣ ಪತ್ರ ಸಲ್ಲಿಸಬೇಕು.ವಿಧವಾ ಶಿಕ್ಷಕಿಯರು ಪತಿಯ ಮರಣ ಪ್ರಮಾಣ ಪತ್ರ ಸಲ್ಲಿಸಬೇಕು. ಸೈನ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಥವಾ ಮೃತರ ಅವಲಂಬಿತರು ಆ ಬಗ್ಗೆ ಪ್ರಮಾಣ ಪತ್ರ ಹಾಜರುಪಡಿಸಿ ಅರ್ಜಿ ಸಲ್ಲಿಸಬಹುದು.ಗ್ರೂಪ್‌ ‘ಬಿ’ ವೃಂದ: ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಅಥವಾ ತತ್ಸಮಾನ ಗ್ರೂಪ್‌ ‘ಬಿ’ ವೃಂದದ ಅಧಿಕಾರಿಗಳಿಗೆ ಆಗಸ್ಟ್‌ 6ರಿಂದ 19ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಸೆ. 13ರಂದು ಪರಸ್ಪರ ವರ್ಗಾವಣೆ ಕೌನ್ಸೆಲಿಂಗ್‌ ನಡೆಯುತ್ತದೆ. ಸೆ. 20 ಮತ್ತು 21ರಂದು ಆಯಾ  ಆಯುಕ್ತರ ವ್ಯಾಪ್ತಿಯೊಳಗೆ ಮತ್ತು 25ರಂದು ಆಯುಕ್ತರ ವ್ಯಾಪ್ತಿ ಹೊರಗೆ ವರ್ಗಾವಣೆ ಕೌನ್ಸೆಲಿಂಗ್‌ ನಡೆಯಲಿದೆ.

*

ವರ್ಗಾವಣೆ ಪ್ರಕ್ರಿಯೆಯ ವೇಳಾಪಟ್ಟಿ

* ಆಗಸ್ಟ್‌ 5:  ವರ್ಗಾವಣೆ ಬಯಸಿದ ಶಿಕ್ಷಕರಿಂದ ಅರ್ಜಿ ಆಹ್ವಾನ.

* ಆಗಸ್ಟ್‌ 6ರಿಂದ 12: ಇಲಾಖಾ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಅರ್ಜಿ ಸಲ್ಲಿಕೆ.

* ಆಗಸ್ಟ್‌ 6ರಿಂದ 14: ಅರ್ಜಿ ಸಲ್ಲಿಸಿದವರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ದಾಖಲೆ ನೀಡಿ ಅರ್ಜಿ ಸಲ್ಲಿಸಿರುವುದಕ್ಕೆ ಸ್ವೀಕೃತಿ ಪಡೆಯಬೇಕು.

* ಆಗಸ್ಟ್‌ 19: ಪರಸ್ಪರ ವರ್ಗಾವಣೆ ಬಯಸಿರುವವರ ತಾತ್ಕಾಲಿಕ ಪಟ್ಟಿ ವೆಬ್‌ಸೈಟ್‌ನಲ್ಲಿ ಪ್ರಕಟ.

* ಆಗಸ್ಟ್‌ 21: ಕೋರಿಕೆ ವರ್ಗಾವಣೆ ಬಯಸಿರುವ ಪ್ರಾಥಮಿಕ ಶಾಲಾ ಶಿಕ್ಷಕರ ತಾತ್ಕಾಲಿಕ ಪಟ್ಟಿ ಪ್ರಕಟ.

* ಆಗಸ್ಟ್‌ 22: ಕೋರಿಕೆ ವರ್ಗಾವಣೆ ಬಯಸಿರುವ ಪ್ರೌಢ ಶಾಲಾ ಶಿಕ್ಷಕರ ತಾತ್ಕಾಲಿಕ ಪಟ್ಟಿ ಪ್ರಕಟ.

* 19ರಿಂದ 21 ಆಗಸ್ಟ್‌: ಪರಸ್ಪರ ವರ್ಗಾವಣೆಗೆ ಸಂಬಂಧಿಸಿದ ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆ ಸಲ್ಲಿಸುವ ಅವಧಿ.* ಆಗಸ್ಟ್‌ 21ರಿಂದ 23 : ಪ್ರಾಥಮಿಕ ಶಾಲಾ ಶಿಕ್ಷಕರ ಕೋರಿಗೆ ವರ್ಗಾವಣೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಆದ್ಯತಾ ಪಟ್ಟಿಗೆ  ಆಕ್ಷೇಪಣೆ ಸಲ್ಲಿಸಲು ಅವಕಾಶ.

* ಆಗಸ್ಟ್‌  22ರಿಂದ 24: ಪ್ರೌಢ ಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಆದ್ಯತಾ ಪಟ್ಟಿಗೆ ಆಕ್ಷೇಪಣೆಗಳ ಸಲ್ಲಿಕೆಗೆ ಅವಕಾಶ.

* ಸೆಪ್ಟಂಬರ್‌ 6 : ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಅಂತಿಮ ಆದ್ಯತಾ ಪಟ್ಟಿ ಮತ್ತು ಖಾಲಿ ಹುದ್ದೆಗಳ ಅಂತಿಮ ಪಟ್ಟಿ ಪ್ರಕಟ.

* ಸೆ. 9: ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಕರಿಗೆ ಪರಸ್ಪರ ವರ್ಗಾವಣೆ ಕೌನ್ಸೆಲಿಂಗ್‌ (ಘಟಕದ ಒಳಗೆ).

* ಸೆ. 14: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪರಸ್ಪರ ವರ್ಗಾವಣೆ ಕೌನ್ಸೆಲಿಂಗ್‌ (ಘಟಕದ ಹೊರಗೆ).

* ಸೆ. 15: ಪ್ರೌಢ ಶಾಲಾ ಶಿಕ್ಷಕರಿಗೆ ಪರಸ್ಪರ ವರ್ಗಾವಣೆ ಕೌನ್ಸೆಲಿಂಗ್‌ (ಘಟಕದ ಹೊರಗೆ).* ಸೆ. 19: ಕೋರಿಕೆ ವರ್ಗಾವಣೆಗೆ ಸಂಬಂಧಿಸಿದಂತೆ ಘಟಕದ ಒಳಗಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಅಂತಿಮ ಆದ್ಯತಾ ಪಟ್ಟಿ ಪ್ರಕಟ.

* ಸೆ. 22ರಿಂದ 25: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಘಟಕದೊಳಗಿನ ಕೋರಿಕೆಗೆ ವರ್ಗಾವಣೆ ಕೌನ್ಸೆಲಿಂಗ್‌.

* ಸೆ. 26ರಿಂದ 29: ಪ್ರೌಢ ಶಾಲಾ ಶಿಕ್ಷಕರಿಗೆ ಘಟಕದೊಳಗಿನ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್‌.

* ಸೆ. 29: ಕೋರಿಕೆ ವರ್ಗಾವಣೆಗೆ ಸಂಬಂಧಿಸಿದಂತೆ ಘಟಕದ ಹೊರಗೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಅಂತಿಮ ಆದ್ಯತಾ ಪಟ್ಟಿ ಪ್ರಕಟ.

* ಅಕ್ಟೋಬರ್‌ 1ರಿಂದ 7 : ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವರ್ಗಾವಣೆ ಕೌನ್ಸೆಲಿಂಗ್‌.

* ಅಕ್ಟೋಬರ್‌ 4ರಿಂದ 8: ಪ್ರೌಢ ಶಾಲಾ ಶಿಕ್ಷಕರಿಗೆ ವರ್ಗಾವಣೆ ಕೌನ್ಸೆಲಿಂಗ್‌.

*

ಪರಸ್ಪರ ವರ್ಗಾವಣೆಗೆ ಸೂಚನೆಗಳು

* ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಾಲೆಯಲ್ಲಿ 3 ವರ್ಷ ಸೇವಾವಧಿ ಪೂರ್ಣಗೊಂಡಿರಬೇಕು.

* ಇಬ್ಬರೂ ಶಿಕ್ಷಕರ ವೃಂದ ಮತ್ತು ವಿಷಯಗಳ ಹೊಂದಾಣಿಕೆ ಇರಬೇಕು.

* ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ಒಳಗೆ ‘ಎ’ ವಲಯದಿಂದ ‘ಎ’ ವಲಯಕ್ಕೆ ವರ್ಗಾವಣೆಗೆ ಅವಕಾಶ ಇಲ್ಲ.

* ಕನಿಷ್ಠ ಮೂರು ವರ್ಷಕ್ಕಿಂತ ಹೆಚ್ಚಿನ ಸೇವೆ ಹೊಂದಿರಬೇಕು.

* ಪರಸ್ಪರ ಒಬ್ಬರೊಂದಿಗೆ ಮಾತ್ರ ಅರ್ಜಿ ಸಲ್ಲಿಸಬೇಕು. ಕೌನ್ಸೆಲಿಂಗ್‌ಗೆ ಇಬ್ಬರೂ ಹಾಜರಾಗಿ ವರ್ಗಾವಣೆ ಆದೇಶ ಪಡೆಯಬೇಕು.

*

ಕೋರಿಕೆ ವರ್ಗಾವಣೆಗೆ ಸೂಚನೆಗಳು

* ಸರ್ವ ಶಿಕ್ಷಣ ಅಭಿಯಾನದ ಹುದ್ದೆಯಿಂದ ರಾಜ್ಯ ವಲಯದ ಸಾಮಾನ್ಯ ಹುದ್ದೆಗೆ ವರ್ಗಾವಣೆ ಪಡೆಯಲು ಅವಕಾಶವಿಲ್ಲ.

* ಜೇಷ್ಠತಾ ಘಟಕಕ್ಕೆ ಅರ್ಜಿ ಸಲ್ಲಿಸಿರುವವರು ಪ್ರಸ್ತುತ ಶಾಲೆಯಲ್ಲಿ 5 ವರ್ಷ ಸೇವೆ ಪೂರ್ಣಗೊಳಿಸಿರಬೇಕು. ಆದರೆ, ಗಂಡ ಹೆಂಡತಿ ಪ್ರಕರಣದಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿರುವವರು, ವಿಧವಾ, ಅಂಗವಿಕಲ ಹಾಗೂ ಸೈನಿಕ ಪ್ರಕರಣದ  ಶಿಕ್ಷಕರು ಅರ್ಜಿ ಸಲ್ಲಿಸಲು ಅವಕಾಶವಿದೆ.

* ಶಿಕ್ಷಕರ ಪತಿ ಅಥವಾ ಪತ್ನಿ ಅಥವಾ ಮಕ್ಕಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಲ್ಲಿ ಅಂಥವರ ವರ್ಗಾವಣೆಗೆ ಅವಕಾಶ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.