ಸೋಮವಾರ, ಏಪ್ರಿಲ್ 19, 2021
30 °C

ಶಿಕ್ಷಕ ಅನುಮಾನಾಸ್ಪದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ(ಮುದಗಲ್ಲ): ತಾಲ್ಲೂಕಿನ ಆಶಿಹಾಳತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆ  ಶಿಕ್ಷಕ ಶೇಖರಗೌಡ ವಿರುಪಾಕ್ಷಪ್ಪಗೌಡ (46) ಮಾಲಿ ಪಾಟೀಲ ಎಂಬುವವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು.



ಸೋಮವಾರ ಸಂಜೆ ಅವರ ತೋಟದ ಮನೆಯ ಪಂಪ್‌ಹೌಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಶಿಕ್ಷಕನ ಸಾವು ಕೊಲೆಯೊ? ಅಥವಾ ಆತ್ಮಹತ್ಯೆಯೊ? ಎಂಬುದು ನಿಗೂಢವಾಗಿದ್ದು ತನಿಖೆ ಕುತೂಹಲ ಘಟಕ್ಕೆ ತಲುಪಿದೆ.



ಸೋಮವಾರ ತೋಟದ ಮನೆಯ ಪಂಪ್‌ಹೌಸ್ ಕೊಠಡಿಯಿಂದ ದುರ್ನಾತ ಬಂದಿದ್ದನ್ನು ಕಂಡು ಮಾಹಿತಿ ನೀಡುತ್ತಿದ್ದಂತೆ ಕುಟುಂಬದವರು ಬಂದು ನೋಡಿ ಮೃತ ವ್ಯಕ್ತಿ ಶೇಖರಗೌಡ ಎಂದು ಗುರುತಿಸಿದ್ದಾರೆ. ಮೃತ ದೇಹದ ಬಳಿ ವಿಷದ ಬಾಟಲಿ ನೋಡಿದ ಜನತೆ ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ಮೃತನ ತಾಯಿ ಶಿವಬಸಮ್ಮ ಕೊಲೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿರುವುದು ಸಂಬಂಧಿಗಳಲ್ಲಿ ಅಚ್ಚರಿ ಮೂಡಿಸಿದೆ.



ಮನೆಯಲ್ಲಿ ಮೃತನ ಹೆಂಡತಿ, ಮಗ, ಮಗಳು, ಹೆಂಡತಿ ತಮ್ಮ ಆಗಾಗ್ಗೆ ಮೃತ ಶೇಖರಗೌಡರೊಂದಿಗೆ ವಾಗ್ವಾದ ಮಾಡುತ್ತಿದ್ದರು. ನೀನು ಸತ್ತರೆ ಮಕ್ಕಳಿಗೆ ನೌಕರಿ ಬರುತ್ತೆ, ನಮಗೆ ಹಣ ಸಿಗುತ್ತೆ ಅಂತ ಹೀಯಾಳಿಸುತ್ತಿದ್ದರು.



ಶನಿವಾರ ಕೂಡ ವಾಗ್ವಾದ ನಡೆದಿತ್ತು. ನಾನು ಬಿಡಿಸಲು ಹೋದ್ರೆ ಬೈದರು. ಹೀಗಾಗಿ ಅವರೆ ಅಂದು ಮಗ ಶೇಖರಗೌಡನನ್ನು ಕೊಲೆ ಮಾಡಿ ಕೊಠಡಿಯಲ್ಲಿ ಮುಚ್ಚಿಟ್ಟು ಸಾಕ್ಷಿ ಹಾಳು ಮಾಡುವ ಹುನ್ನಾರ ನಡೆಸಿರಬಹುದು ಎಂದು ದೂರಿನಲ್ಲಿ ವಿವರಿಸಿದ್ದಾರೆ.



ಮಾಹಿತಿ ಗೊತ್ತಿಲ್ಲ: ಘಟನೆ ಕುರಿತಂತೆ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಸ್ನಳ್ಳಿ ಅವರು ಕೂಲಂಕುಷ ತನಿಖೆಗೆಂದು ತೋಟದ ಮನೆಯ ಪಂಪಹೌಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೂರು ನೀಡಿದ ಮೃತನ ತಾಯಿ ಶಿವಬಸಮ್ಮ ಅವರನ್ನು ವಿಚಾರಣೆ ಮಾಡಿದಾಗ ಪೊಲೀಸರಿಗೆ ನಿನ್ನೆ ದಿನ ಮಗನ ಸಾವಿನ ದುಃಖದಲ್ಲಿ ಏನು ದೂರು ನೀಡಿದ್ದೇನೊ ತಿಳಿಯುತ್ತಿಲ್ಲ. ಸೊಸೆ, ಮೊಮ್ಮಕ್ಕಳು ಅಂಥವರಲ್ಲ. ಅವರನ್ನು ದೂರ ಮಾಡಿಕೊಂಡು ಬದುಕಲಾರೆ ಅನ್ಯಾಯ ಮಾಡದಿರಿ ಎಂದು ಅಲವತ್ತುಕೊಂಡ ಘಟನೆ ಜರುಗಿತು.



ಈ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಬಿಸ್ನಳ್ಳಿ ಅವರನ್ನು ಸಂಪರ್ಕಿಸಿದಾಗ ಯಾವುದಕ್ಕೂ ಮರಣೋತ್ತರ ಪರೀಕ್ಷೆಯ ವರದಿ ಬರುವವರೆಗೆ ಯಾರನ್ನು ಬಂಧಿಸುವುದಿಲ್ಲ. ಮೃತನ ಹೆಂಡತಿ, ಮಕ್ಕಳನ್ನು ತನಿಖೆಗೆ ಒಳಪಡಿಸಲಾಗಿದೆ. ಕೂಲಂಕುಷ ತನಿಖೆ ನಂತರವೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಅಲ್ಲಿಯವರೆಗೆ ಘಟನೆ ಕುರಿತಂತೆ ಏನೊಂದು ಹೇಳಲು ಆಗದು.  ಇಲಾಖೆ ವಾಸ್ತವಾಂಶದ ಬಗ್ಗೆ ಗಮನ ನೀಡುತ್ತದೆ ಎಂದು ಸ್ಪಷ್ಟಪಡಿಸಿದರು.



ಪೊಲೀಸ್ ಉಪ ವಿಭಾಗಾಧಿಕಾರಿ ಡಿ.ಎ. ಸೂರ್ಯವಂಶಿ, ಸರ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್ ಲಕ್ಷ್ಮಿನಾರಾಯಣ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮಾರುತಿ ಗುಳ್ಳಾರಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.