ಮಂಗಳವಾರ, ಮೇ 11, 2021
19 °C

ಶಿಕ್ಷಣದ ಜತೆಗೆ ಅನುಭವ ಕೂಡ ಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಅಭಿವೃದ್ಧಿಯಲ್ಲಿ ಮೇಯರ್ ಪಾತ್ರ ಏನು? ನಾಗರಿಕ ಸೇವೆಗಳಿಗೆ ಖಾತರಿ ನೀಡುವಂತಿರಬೇಕು, ಸಾರ್ವಜನಿಕ ಆಸ್ತಿಗಳನ್ನು ಕಾಪಾಡಬೇಕು. ಸ್ಥಳೀಯ ಆಡಳಿತದಲ್ಲಿ ನಾಗರಿಕರು ಪಾಲ್ಗೊಳ್ಳಲು ಮುಕ್ತ ಅವಕಾಶ ನೀಡಬೇಕು ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಸಂಪರ್ಕ ಕಾಯ್ದುಕೊಳ್ಳುವಂತಿರಬೇಕು.ಬಿಬಿಎಂಪಿ ಒಂದು ರೀತಿಯಲ್ಲಿ 85 ಲಕ್ಷ ಜನರ ಹಿತ ಕಾಪಾಡುವಂತಹ ಬೃಹತ್ ಸಾರ್ವಜನಿಕ ಸ್ವಾಮ್ಯದ ಕಂಪೆನಿಯಿದ್ದಂತೆ. ಪಾಲಿಕೆ ಸುಮಾರು ಒಂಬತ್ತು ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಬಜೆಟ್ ಮಂಡಿಸುತ್ತಿದೆ. ಆ ಮೊತ್ತವನ್ನು 850 ಚದರ ಕಿ.ಮೀ.ಗೆ ಸಮಾನವಾಗಿ ಹಂಚಿಕೆ ಮಾಡಲು ಹಾಗೂ ಅಷ್ಟು ಮೊತ್ತವನ್ನು ಸರಿಯಾಗಿ ನಿರ್ವಹಿಸುವ ಸಾಮರ್ಥ್ಯ ಮೇಯರ್‌ಗಿರಬೇಕು.ನಗರದ 85 ಲಕ್ಷ ಜನರ ಸಮಸ್ಯೆಗಳನ್ನು ಮೇಯರ್ ಒಬ್ಬರೇ ಪರಿಹರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ವಿವಿಧ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ, ಒಟ್ಟಿಗೆ ಕೆಲಸ ಮಾಡಲು ಪ್ರಯತ್ನಿಸುವುದು ಕೂಡ ಮುಖ್ಯ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಿಇಓ ರೀತಿ ಕೆಲಸ ಮಾಡುವ ಮೇಯರ್ ಹುದ್ದೆಗೆ ಅಗತ್ಯ ಶಿಕ್ಷಣದ ಜತೆಗೆ, ಒಳ್ಳೆಯ ಅನುಭವ ಕೂಡ ಮುಖ್ಯ. ಮಾನವ ಸಂಪನ್ಮೂಲ, ನಿರ್ವಹಣಾ ಕೌಶಲ, ಹಣಕಾಸು ನಿರ್ವಹಣೆ ಬಗ್ಗೆ ತಮಗಿರುವ ಜ್ಞಾನ ಹಾಗೂ ಸಾಮರ್ಥ್ಯವನ್ನು ಮೇಯರ್ ಪ್ರದರ್ಶಿಸ ಬೇಕಾಗುತ್ತದೆ. ಅಂತೆಯೇ, ಸಮಸ್ಯೆಗಳನ್ನು ಪರಿಹರಿಸುವ ಕೌಶಲದ ಜತೆಗೆ, ಸಂಕಷ್ಟ ಪರಿಸ್ಥಿತಿಯನ್ನು ತಕ್ಷಣ ವಿಶ್ಲೇಷಿಸುವ ಹಾಗೂ ಅಷ್ಟೇ ಪ್ರಾಮಾಣಿಕವಾಗಿ ಕ್ರಮ ಜರುಗಿಸುವ ದಿಟ್ಟತನ ಪ್ರದರ್ಶಿಸಬೇಕು.  ಆದರೆ, ಬಿಬಿಎಂಪಿ ಮೇಯರ್ ಆಯ್ಕೆ ವಿಚಾರದಲ್ಲಿ ಏನಾಗುತ್ತಿದೆ? ಪ್ರತಿ ವರ್ಷ ಏಪ್ರಿಲ್ ಬಂದಾಗಲೆಲ್ಲ ಯಾರು ಮೇಯರ್ ಹಾಗೂ ಉಪ ಮೇಯರ್ ಆಗುತ್ತಾರೆ ಎಂಬ ಕುತೂಹಲ ಮೂಡುತ್ತದೆ. ಮೇಯರ್ ಆಗುವುದು ಒಂದು ಪ್ರತಿಷ್ಠೆ. ಆದರೆ, ಮೇಯರ್ ಆಯ್ಕೆ ಪ್ರಕ್ರಿಯೆ ಮೆರಿಟ್ ಆಧಾರದಲ್ಲಿ ನಡೆಯುತ್ತಿಲ್ಲ ಹಾಗೂ ಇದರಲ್ಲಿ ಸ್ವಹಿತಾಸಕ್ತಿಯೂ ಅಡಗಿರುತ್ತದೆ ಎಂಬುದು ವಿಷಾದನೀಯ ಸಂಗತಿ. ಇದರಿಂದ ಬೆಂಗಳೂರಿನ ಬೆಳವಣಿಗೆಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುದು ನನ್ನ ಅನಿಸಿಕೆ.ಐದು ವರ್ಷಗಳ ಪಾಲಿಕೆ ಆಡಳಿತದಲ್ಲಿ ಎರಡು ವರ್ಷಗಳು ಈಗಾಗಲೇ ಉರುಳಿವೆ. ನಗರದ ಅಭಿವೃದ್ಧಿಯ ನಿರ್ವಹಣೆ ಅಥವಾ ಯೋಜನೆಗಳ ಅನುಷ್ಠಾನದ ಸುಧಾರಣೆಯಲ್ಲಿ ಮಹತ್ತರ ಬದಲಾವಣೆಗಳು ನಡೆದ ಉದಾಹರಣೆಗಳಿಲ್ಲ. ಬದಲಿಗೆ, ಅದೇ ಕೆಟ್ಟ ರಸ್ತೆಗಳು, ಹೆಚ್ಚುತ್ತಿರುವ ವಾಹನ ದಟ್ಟಣೆ, ಅಸಮರ್ಪಕ ಕಸ ವಿಲೇವಾರಿ, ಚರಂಡಿಗಳ ಅವ್ಯವಸ್ಥೆ, ದಿನದಿಂದ ದಿನಕ್ಕೆ ಹಸಿರು ವಲಯ ಕಣ್ಮರೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇದರಿಂದ ಬೇಸಿಗೆಯಲ್ಲಿ ನಗರದಲ್ಲಿ ತಾಪಮಾನ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಅದೇ ಮಳೆಗಾಲದಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತಿವೆ.  ನಗರದ ಜನತೆ ಪ್ರತಿ ದಿನ ಅನುಭವಿಸುತ್ತಿರುವ ಇಂತಹ ಸಮಸ್ಯೆಗಳ ಬಗ್ಗೆ ಮೇಯರ್ ತುರ್ತು ಗಮನಹರಿಸುವುದರ ಜತೆಗೆ, ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.