ಶನಿವಾರ, ಜೂನ್ 19, 2021
23 °C

ಶಿಕ್ಷಣ ವ್ಯವಸ್ಥೆ ಲೋಪ: ಮಕ್ಕಳ ಮಾನಸಿಕ ಒತ್ತಡ ಅಧಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕ್ಷಣ ವ್ಯವಸ್ಥೆ ಲೋಪ: ಮಕ್ಕಳ ಮಾನಸಿಕ ಒತ್ತಡ ಅಧಿಕ

ಬೆಂಗಳೂರು:  `ಮಕ್ಕಳ ಮಾನಸಿಕ ಒತ್ತಡ ಹೆಚ್ಚಲು ನಮ್ಮ ಶಿಕ್ಷಣ ವ್ಯವಸ್ಥೆಯ ಲೋಪಗಳೇ ಮುಖ್ಯ ಕಾರಣ~ ಎಂದು ಬಂಜಾರ ಅಕಾಡೆಮಿಯ ಅಧ್ಯಕ್ಷ ಡಾ.ಆಲಿ ಕ್ವಾಜಾ ಹೇಳಿದರು.ಮಹಿಳಾ ದಕ್ಷತಾ ಸಮಿತಿ ಹಾಗೂ ಜೈನ್ ವಿಶ್ವವಿದ್ಯಾಲಯ ನಗರದಲ್ಲಿ ಶನಿವಾರ ಆಯೋಜಿಸಿದ್ದ `ಇಂದಿನ ಶಿಕ್ಷಣ ವ್ಯವಸ್ಥೆಯಿಂದಾಗಿ ಹೆಚ್ಚುತ್ತಿರುವ ಮಕ್ಕಳ ಮಾನಸಿಕ ಒತ್ತಡ~ ವಿಷಯವಾಗಿ ನಡೆದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ನಮ್ಮ ಶಿಕ್ಷಣ ವ್ಯವಸ್ಥೆ ಕೇವಲ ಪಠ್ಯಕ್ರಮದ ಶಿಕ್ಷಣವನ್ನೇ ಮಕ್ಕಳಲ್ಲಿ ಬಿತ್ತುತ್ತಾ ಮಕ್ಕಳ ಬೆಳವಣಿಗೆಯನ್ನು ಕುಂಠಿಸುತ್ತಿದೆ. ಜೀವನಕ್ಕೆ ಅಗತ್ಯವಿರುವ ಶಿಕ್ಷಣವನ್ನು ಮಕ್ಕಳಿಗೆ ನೀಡುವಲ್ಲಿ ನಮ್ಮ ಶಿಕ್ಷಣ ಕ್ರಮ ಸೋತಿದೆ. ಹೀಗಾಗಿ ಫಲಿತಾಂಶದ ಶಿಕ್ಷಣಕ್ಕೆ ಮಾತ್ರ ಮಕ್ಕಳನ್ನು ಸಿದ್ಧ ಪಡಿಸಲಾಗುತ್ತಿದೆ. ಇದು ಮಕ್ಕಳ ಮಾನಸಿಕ ಒತ್ತಡ ಹೆಚ್ಚಾಗುವಂತೆ ಮಾಡಿದೆ. ಪ್ರತಿಭೆಯನ್ನು ಗುರುತಿಸಿ, ಉತ್ತೇಜಿಸಿ ಮಕ್ಕಳ ಮಾನಸಿಕ ಒತ್ತಡ ತಗ್ಗಿಸಲು ಪೋಷಕರು ಹಾಗೂ ಶಿಕ್ಷಕರು ಮುಂದಾಗಬೇಕು~ ಎಂದರು. ನಿಮ್ಹಾನ್ಸ್‌ನ ಮಕ್ಕಳ ಮಾನೋರೋಗ ವಿಭಾಗದ ಸಹ ಪ್ರಾಧ್ಯಾಪಕ ಡಾ.ಜಾನ್ ವಿಜಯ್ ಸಾಗರ್ ಮಾತನಾಡಿ, `ಪೋಷಕರು ಮಕ್ಕಳಿಂದ ಅತಿಯಾದ ನಿರೀಕ್ಷೆಯ ಪ್ರವೃತ್ತಿಯನ್ನು ಬಿಡಬೇಕು. ಇದು ಮಕ್ಕಳ ಒತ್ತಡವನ್ನು ಹೆಚ್ಚಿಸುತ್ತದೆ. ಮಾನಸಿಕ ಒತ್ತಡದಿಂದ ಮಕ್ಕಳಲ್ಲಿ ಏಕಾಗ್ರತೆ, ಪ್ರಜ್ಞೆ ಹಾಗೂ ನಿದ್ರೆಯ ತೊಂದರೆಗಳೂ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳ ಆತ್ಮಹತ್ಯೆಗಳಿಗೂ ಇದು ಉತ್ತೇಜನ ನೀಡುತ್ತದೆ. ಮಕ್ಕಳ ಸಹಜ ವಬೆಳವಣಿಗೆಗೆ ಪ್ರೋತ್ಸಾಹ ನೀಡುವ ಮೂಲಕ ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಬೇಕು~ ಎಂದರು.`ಪೋಷಕರು ತಮ್ಮ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತಿದ್ದಾರೆ. ಶಾಲೆಯ ಕಲಿಕೆಯ ಜೊತೆಗೆ, ಸಂಗೀತ ಪಾಠ, ಟ್ಯೂಷನ್‌ಗಳ ಒತ್ತಡವೂ ಸೇರಿ ಮಕ್ಕಳ ಮಾನಸಿಕ ಬಿಡುವಿನ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳಲಾಗಿದೆ. ಇದು ತಪ್ಪಬೇಕು. ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಮನಸ್ಸನ್ನು ಅರಿತು ತಾವೂ ಅವರ ಮನೋವೃತ್ತಿಗೆ ಅನುಗುಣವಾಗಿ ನಡೆದುಕೊಳ್ಳಬೇಕು~ ಎಂದರು.ಜೈನ್ ವಿಶ್ವವಿದ್ಯಾಲಯದ ನಿರ್ವಹಣಾ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ಪ್ರೊ.ಅನಿಲಾ ಬಾಜಪೇಯಿ ಮಾತನಾಡಿ, `ಮಕ್ಕಳ ಮಾನಸಿಕ ಒತ್ತಡ ನಿವಾರಣೆಯಲ್ಲಿ ಪೋಷಕರ ಪಾತ್ರ ಮುಖ್ಯವಾದುದು. ಮಕ್ಕಳ ಮನಸ್ಸನ್ನು ಅರಿತು ಪೋಷಕರು ತಮ್ಮ ನಡವಳಿಕೆಗಳನ್ನೂ ಬದಲಿಸಿಕೊಳ್ಳಬೇಕು. ತಾವು ಸಾಧಿಸಲಾರದ್ದನ್ನು ತಮ್ಮ ಮಕ್ಕಳು ಸಾಧಿಸಬೇಕು ಎಂಬ ಪೋಷಕರ ಮನೋಭಾವ ಮೊದಲು ತಪ್ಪಬೇಕು~ ಎಂದರು.ಮಹಿಳಾ ದಕ್ಷತಾ ಸಮಿತಿಯ ಅಧ್ಯಕ್ಷೆ ಶರಣ್ಯಾ ಎಸ್. ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಜ್ಯೋತಿ ಭಂಡಾರಿ, ಜೈನ್ ವಿಶ್ವವಿದ್ಯಾಲಯದ ನಿರ್ವಹಣಾ ಅಧ್ಯಯನ ಕೇಂದ್ರದ ಪ್ರಾಂಶುಪಾಲ ದಿನೇಶ್ ನೀಲಕಂಠ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.