ಶುಕ್ರವಾರ, ಏಪ್ರಿಲ್ 23, 2021
28 °C

ಶಿಥಿಲಾವಸ್ಥೆಯಲ್ಲಿ ಸಿದ್ದಾಪುರ ತಹಸೀಲ್ದಾರ ಕಚೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಥಿಲಾವಸ್ಥೆಯಲ್ಲಿ ಸಿದ್ದಾಪುರ ತಹಸೀಲ್ದಾರ ಕಚೇರಿ

ಸಿದ್ದಾಪುರ: ನೂರು ವರ್ಷಕ್ಕಿಂತ ಹೆಚ್ಚು ಹಳೆಯದಾಗಿರುವ ಪಟ್ಟಣದ ತಹಸೀಲ್ದಾರರ ಕಾರ್ಯಾಲಯದ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಈ ಸರ್ಕಾರಿ ಕಚೇರಿಯ ಒಳಹೊಕ್ಕವರು ಭಯಗೊಳ್ಳುವಂತಿದೆ. ಈ ಕಟ್ಟಡದ ಮುಂಭಾಗವನ್ನು ಬ್ರಿಟಿಷರ ಕಾಲದಲ್ಲಿ ಅಂದರೆ 1881ರ ಸುಮಾರಿಗೆ ನಿರ್ಮಾಣ ಮಾಡಲಾಗಿದೆ. ಆದರೆ ಇದೇ ಕಟ್ಟಡದ ಹಿಂಭಾಗವನ್ನು 20-25 ವರ್ಷಗಳ ಹಿಂದೆ ದುರಸ್ತಿ ಮಾಡಲಾಗಿದೆ.  ಕಟ್ಟಡದ ಮುಂದಿನ ಭಾಗ ಇಂದಿನ ಅಗತ್ಯಕ್ಕೆ ಹೊಂದಿಕೊಳ್ಳದಿದ್ದರೂ, ತಲೆಯ ಮೇಲೆ ತಕ್ಷಣ ಬೀಳುವಂತೆ ಭಯಹುಟ್ಟಿಸುವದಿಲ್ಲ. ಆದರೆ ಇದೇ ಕಟ್ಟಡದ ಹಿಂಭಾಗ ಮಾತ್ರ ಶೋಚನೀಯ ಸ್ಥಿತಿಯಲ್ಲಿದೆ.ಇಲ್ಲಿ ಕೆಲಸ ಮಾಡುವ ಕಂದಾಯ ಇಲಾಖೆಯ ಸಿಬ್ಬಂದಿ ಅಕ್ಷರಶಃ ಜೀವವನ್ನು ಕೈಯಲ್ಲಿ ಹಿಡಿದೇ ಕೆಲಸ ಮಾಡುತ್ತಾರೆ. ಕಂದಾಯ ಇಲಾಖೆಯ ಮೂವರು ಶಿರಸ್ತೇದಾರರು ಮತ್ತು ಇತರ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡುವ ವಿಭಾಗ ಮತ್ತು ಕಂಪ್ಯೂಟರೀಕೃತ ಪಹಣಿ ಪತ್ರಿಕೆಗಳ ವಿಭಾಗವೂ ಕೂಡ ಈ ಭಾಗದಲ್ಲಿದೆ. ಆದ್ದರಿಂದ ಇಲ್ಲಿಗೆ ಸಾರ್ವಜನಿಕರು ದಿನನಿತ್ಯವೂ ಭೇಟಿ ನೀಡುತ್ತಲೇ ಇರುತ್ತಾರೆ. ಕಿತ್ತು ಬೀಳುತ್ತಿರುವ ಸಿಮೆಂಟ್ ಛಾವಣಿ, ಒಡೆದು ಹೋದ ಬೀಮ್(ತೊಲೆ)ಗಳು, ಬೀಳುವಂತಿರುವ ಗೋಡೆಗಳು, ಹಾಳಾದ ಕಿಟಕಿಗಳು ನಾಗರಿಕರಿಗೆ ಭಯ ಹುಟ್ಟಿಸುತ್ತವೆ.ಶಿರಸ್ತೇದಾರರೊಬ್ಬರು ಮತ್ತು ಇತರ ಮೂರ್ನಾಲ್ಕು ಸಿಬ್ಬಂದಿ ಕೆಲಸ ಮಾಡುವ ಕೊಠಡಿಯಲ್ಲಿ ಇತ್ತೀಚೆಗೆ ಮೇಲ್ಛಾವಣಿಯ ಸಾಕಷ್ಟು ಅಗಲವಾದ ಸಿಮೆಂಟ್ ಕಿತ್ತು ಕೆಳಗೆ ಬಿದ್ದಿದೆ. ಆದರೆ ಅಂದು ರಜೆಯ ದಿನವಾಗಿದ್ದರಿಂದ ಸಿಬ್ಬಂದಿಗೆ ಯಾವುದೇ ಗಾಯವಾಗಿಲ್ಲ. ಈ ತಹಸೀಲ್ದಾರ ಕಚೇರಿಗೆ ಹೊಂದಿಕೊಂಡಂತೆ ಇದ್ದ ಪೊಲೀಸ್ ಠಾಣೆಯೂ ಕೆಲವು ವರ್ಷಗಳ ಹಿಂದೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.    ಹೊಸ ಕಟ್ಟಡ?: ಈ ಮಧ್ಯೆ ತಾಲ್ಲೂಕಿಗೆ ಅತ್ಯಗತ್ಯವಾಗಿರುವ  ಮಿನಿ ವಿಧಾನಸೌಧ ನಿರ್ಮಾಣ ಮಾತ್ರ  ಗಗನ ಕುಸುಮವಾಗಿಯೇ ಉಳಿದಿದೆ. ಪಟ್ಟಣದಲ್ಲಿರುವ ಬಹಳಷ್ಟು ಸರ್ಕಾರಿ ಕಚೇರಿಗಳು ಸುಸಜ್ಜಿತವಾಗಿವೆ. ಕೆಲವು ಕಟ್ಟಡಗಳಂತೂ ಶ್ರೀಮಂತಿಕೆಯನ್ನೇ ಹೊರಸೂಸುತ್ತವೆ. ಆದರೆ ಜನರು ನಿತ್ಯವೂ ಭೇಟಿ ನೀಡುವ ತಹಸೀಲ್ದಾರ ಕಾರ್ಯಾಲಯ ಮಾತ್ರ ಅಧಿಕಾರಸ್ಥರ ಕಣ್ಣಿಗೆ ಬಿದ್ದಂತಿಲ್ಲ.

‘ತಹಸೀಲ್ದಾರ ಕಾರ್ಯಾಲಯ ಕಟ್ಟಡವಿರುವಲ್ಲಿ ಕಂದಾಯ ಇಲಾಖೆಗೆ ಸೇರಿದ 27 ಗುಂಟೆ ಸ್ಥಳವಿದ್ದು, ಈ ಸ್ಥಳದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ನಕ್ಷೆ ಸಿದ್ಧಪಡಿಸಲಾಗಿದೆ.ಹಣಕಾಸು ಇಲಾಖೆಯ ಒಪ್ಪಿಗಾಗಿ ಕಾಯಲಾಗುತ್ತಿದೆ’ ಎಂದು ತಹಸೀಲ್ದಾರ ಗಣಪತಿ ಕಟ್ಟಿನಕೆರೆ ವಿವರ ನೀಡುತ್ತಾರೆ. ಮತ್ತೊಂದು ಮಳೆಗಾಲ ಬರುತ್ತಿದೆ. ಸೋರುವ ತಹಸೀಲ್ದಾರ ಕಚೇರಿಯ ಹಳೆಯ ಕಟ್ಟಡ ಮಾತ್ರ ಕಳೆದ ಮಳೆಗಾಲದಂತೆ ಈ ವರ್ಷವೂ ಸೋರುತ್ತಲೇ ಸಾರ್ವಜನಿಕರನ್ನು ಸ್ವಾಗತಿಸಲಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.