ಸೋಮವಾರ, ಜೂನ್ 21, 2021
21 °C

ಶಿವನ ಪಾದ ಸೇರಿದ ಶಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ (ಆನೆಕಾಡು): ಆನೆಕಾಡು ಹಾಡಿಯ ಗಿರಿಜನರ ಮೊರೆ ಆ ದೇವರಿಗೆ ಕೇಳಿಸಲೇ ಇಲ್ಲ. ಗಿರಿಜನರ ಹರಕೆಯೂ ಸಹಾಯಕ್ಕೆ ಬಾರದೇ ಹೋಯಿತು. ಹಾಡಿಯ ಸದಸ್ಯನಂತೆ ಓಡಾಡಿಕೊಂಡು, ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಮರಿಯಾನೆ `ಶಿವ~ನನ್ನು ಸೋಮವಾರ ರಾತ್ರಿ ತನ್ನ ಬಳಿ ಕರೆಸಿಕೊಂಡುಬಿಟ್ಟ.ಮೂರು ದಿನಗಳಿಂದ ಉಸಿರಾಟದ ತೊಂದರೆಯಿಂದ (ನ್ಯೂಮೊನಿಯಾ) ಬಳಲುತ್ತಿದ್ದ ಮರಿಯಾನೆಯನ್ನು ರಕ್ಷಿಸಲು ವೈದ್ಯರ ತಂಡ ಸಾಕಷ್ಟು ಪ್ರಯತ್ನಿಸಿತ್ತು. ವೈದ್ಯರ ಪ್ರಯತ್ನ, ಹಾಡಿ ಜನರ ಹರಕೆ ಯಾವುದಕ್ಕೂ ಫಲ ದೊರೆಯಲಿಲ್ಲ. ಮರಿಯಾನೆ `ಶಿವ~ ಇಹಲೋಕ ತ್ಯಜಿಸಿತು.ಹಸುಗೂಸು ಇದ್ದಾಗಲೇ ತಾಯಿಯಿಂದ ಬೇರ್ಪಟ್ಟಿದ್ದ `ಶಿವ~ನಿಗೆ ಕುಶಾಲನಗರ ಬಳಿಯ ಆನೆಕಾಡು ಹಾಡಿಯ ಗಿರಿಜನರು ಆಶ್ರಯ ನೀಡಿದ್ದರು. ನಿಲ್ಲುವುದಕ್ಕೂ ನಿತ್ರಾಣವಾಗಿದ್ದ `ಶಿವ~ನನ್ನು ತಂದು ಸಾಕಿದ ಗಿರಿಜನರು ಅಚ್ಚರಿ ಮೂಡಿಸುವಂತೆ ಮರಿಯಾನೆಗೆ ಬದುಕು ನೀಡಿದ್ದರು.ತಾಯಿ ಹಾಲು ಇಲ್ಲದೇ ಅನಾಥವಾಗಿದ್ದ ಮರಿಯಾನೆ ಬದುಕುಳಿಯುವುದೇ ಅನುಮಾನ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದ ಸಮಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಗಿರಿಜನರ ಮುತುವರ್ಜಿಯಿಂದ ಮರಿಯಾನೆಯು ಒಂದು ವರ್ಷದವರೆಗೆ ಬದುಕಿ ಬಾಳಿದ್ದು ಈಗ ನೆನಪು ಮಾತ್ರ.ಮಗನನ್ನು ಕಳೆದುಕೊಂಡೆ: `ಶಿವ~ ನಮ್ಮ ಕುಟುಂಬದ ಒಬ್ಬ ಸದಸ್ಯನಂತಿದ್ದ. ನನ್ನ ಮಕ್ಕಳು ಈತನೊಂದಿಗೆ ಆಟ ಆಡುತ್ತಿದ್ದರು. ಹಟ್ಟಿಯಲ್ಲಿ ಅವನ ಜೊತೆ ನಾನು ಮಲಗಿಕೊಳ್ಳುತ್ತಿದ್ದೆ. ಈಗ ನಮ್ಮ ಮಗನನ್ನು ಕಳೆದುಕೊಂಡಂತಾಗಿದೆ~ ಎಂದು ಶಿವನ ಸಲಹುತ್ತಿದ್ದ ಚಂದ್ರು ಹಾಗೂ ಆತನ ಪತ್ನಿ ಹೇಮಾವತಿ ಕಣ್ಣೀರಿಟ್ಟರು.`ಶಿವ~ ನೆಲಹಿಡಿದ ದಿನದಿಂದ ನಮ್ಮ ಗಂಟಲಲ್ಲಿ ಒಂದು ತುತ್ತು ಇಳಿದಿಲ್ಲ. ಹಗಲು-ರಾತ್ರಿ ಎನ್ನದೇ ಇವನ ಸೇವೆಯಲ್ಲಿ ನಿರತರಾಗಿದ್ದೆವು. ಬೇಗ ಹುಷಾರಾಗಲಿ ಎಂದು ಹಾಡಿಯ ಹಿಂದೆ ಇರುವ ಬಸವಣ್ಣ ಹಾಗೂ ದುಬಾರೆಯಲ್ಲಿರುವ ಅಮ್ಮಳೆ ದೇವಿಗೆ ಹರಕೆ ಹೊತ್ತಿದ್ದೆವು. ಇದ್ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಕಳೆದ ತಿಂಗಳಷ್ಟೇ ನಮ್ಮ ಮೂರನೇ ಮಗ ತೀರಿಹೋಗಿದ್ದಾನೆ. ಈಗ `ಶಿವ~ ಕೂಡ ನಮ್ಮಿಂದ ದೂರವಾಗಿದ್ದಾನೆ. ಇದಕ್ಕೆ ಏನು ಕಾರಣ ಎಂದು ಕಣಿ ಕೇಳಬೇಕು ಎಂದು ಅಳಲು ತೋಡಿಕೊಂಡರು.ಮರಿಯಾನೆಯನ್ನು ದತ್ತು ಪಡೆದುಕೊಂಡಿದ್ದ ಸುಂಟಿಕೊಪ್ಪದ ಕಾಫಿ ಬೆಳೆಗಾರ ವಿನೋದ್ ಶಿವಪ್ಪ ಮಾತನಾಡಿ, ಇದೊಂದು ದುರದೃಷ್ಟಕರ ಸಂಗತಿಯಾಗಿದೆ. `ಶಿವನನ್ನು ಕಳೆದುಕೊಂಡಿದ್ದಕ್ಕೆ ನನಗೆ ಮರೆಯಲಾಗದ ನೋವು ಉಂಟಾಗಿದೆ~ ಎಂದರು. ಅರಣ್ಯ ಇಲಾಖೆಯವರು ಹಾಗೂ ಹಾಡಿಯ ಜನರು ಎಷ್ಟೆಲ್ಲ ಕಷ್ಟಪಟ್ಟರೂ ಮರಿಯಾನೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.15-20 ದಿನದಲ್ಲಿ ಮರಣೋತ್ತರ ಪರೀಕ್ಷೆ ವರದಿ: ನ್ಯೂಮೊನಿಯಾದಿಂದ ಮರಿಯಾನೆ ಮೃತಪಟ್ಟಿದೆ. ಇತರ ಕಾರಣಗಳೇನಾದರೂ ಇದ್ದರೆ ಅವುಗಳ ಪತ್ತೆಗಾಗಿ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ. ವರದಿಯು 15-20 ದಿನಗಳೊಳಗೆ ಸಿಗಬಹುದು ಎಂದು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯಾಧಿಕಾರಿ ಉಮಾಶಂಕರ್ ಹೇಳಿದರು.ಹುಟ್ಟಿದ ತಕ್ಷಣವೇ ತಾಯಿಯಿಂದ ಬೇರ್ಪಟ್ಟ `ಶಿವ~ನಿಗೆ ತಾಯಿ ಹಾಲು ದೊರೆತಿಲ್ಲ. ರೋಗ ನಿರೋಧಕ ಶಕ್ತಿ ಹೊಂದಿದ ತಾಯಿ ಹಾಲು ದೊರೆಯದೆ `ಶಿವ~ ನಿಶಕ್ತನಾಗಿಯೇ ಬೆಳೆದ. ಇದರಿಂದಾಗಿ ಸಣ್ಣ ಸಣ್ಣ ಕಾಯಿಲೆ, ಸೋಂಕು ಎದುರಿಸುವ ಶಕ್ತಿ `ಶಿವ~ನ ದೇಹಕ್ಕೆ ಇರುವುದಿಲ್ಲ ಎಂದು ಆತನನ್ನು ಪರೀಕ್ಷಿಸುತ್ತಿರುವ ವೈದ್ಯಾಧಿಕಾರಿಗಳು ತಿಳಿಸಿದರು.ಹಾರಂಗಿ ಜಲಾಶಯದ ಹಿನ್ನೀರಿನ ಪ್ರದೇಶವಾದ ಯಡವಾರೆಯಲ್ಲಿ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ `ಶಿವ~ ಪತ್ತೆಯಾಗಿದ್ದ. ತಾಯಿಯಾನೆಯು ಹೆರಿಗೆ ನಂತರ ಗರ್ಭಕೋಶದ ತೊಂದರೆಯಿಂದ ಮೃತಪಟ್ಟಿತ್ತು. ನಂತರ `ಶಿವ~ನನ್ನು ಕುಶಾಲನಗರದ ಬಳಿಯಿರುವ ಆನೆಕಾಡು ಶಿಬಿರಕ್ಕೆ ತಂದು ಗಿರಿಜನರಿಗೆ ಸಾಕಲು ನೀಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.