ಮಂಗಳವಾರ, ಏಪ್ರಿಲ್ 13, 2021
30 °C

ಶಿಷ್ಯನ ನೆರವು (ನಾದ ಲೋಕದ ರಸ ನಿಮಿಷಗಳು)

ಶಿರೀಷ ಜೋಶಿ Updated:

ಅಕ್ಷರ ಗಾತ್ರ : | |

ಶಿಷ್ಯನ ನೆರವು (ನಾದ ಲೋಕದ ರಸ ನಿಮಿಷಗಳು)

ಒಂದು ಸಂಗೀತ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಗಾಯಕ ಅದ್ಭುತವಾಗಿ ಹಾಡಬೇಕಾಗುತ್ತದೆ. ಆದರೆ ಅವನ ಮೂಡ್ ಕೆಡದಂತೆ ಕಾರ್ಯಕ್ರಮದುದ್ದಕ್ಕೂ ಕಾಯ್ದುಕೊಳ್ಳುವ ಜವಾಬ್ದಾರಿ ಅವನ ಸಾಥಿದಾರರಿಗಿರುತ್ತದೆ. ಅವರೇನಾದರೂ ಎಡವಟ್ಟು ಮಾಡಿದರೆ, ಅಲ್ಲಿಗೆ ಕಾರ್ಯಕ್ರಮದ ಕತೆಯೇ ಮುಗಿದಂತೆ. ಗಾಯಕನ ಮನಸ್ಸೇ ಕೆಟ್ಟು ಹೋದಮೇಲೆ ಆತ ಹಾಡುವುದಾದರೂ ಏನನ್ನು? ಅದಕ್ಕೇ ಪಂ.ಭೀಮಸೇನ ಜೋಶಿ ಪದೇ ಪದೇ ಹೇಳುತ್ತಿದ್ದರು- ‘ಸಾಥಿ ಎನ್ನುವುದು ಹಾಡಿಗೆ ಪೂರಕವಾಗಿರಬೇಕೆ ವಿನಃ, ಅದು ಸಾಡೇಸಾಥಿ (ಶನಿಪೀಡೆ) ಆಗಬಾರದು’.ಹಾಡುಗಾರಿಕೆಯ ಸಾಥಿಯಲ್ಲಿ ತಬಲಾ ಹಾರ್ಮೋನಿಯಂ ವಾದಕರಷ್ಟೇ ಮಹತ್ವ ತಂಬೂರಿ ಸಾಥ್ ಮಾಡುವವರದೂ ಇರುತ್ತದೆ. ಸಾಮಾನ್ಯವಾಗಿ ಗವಾಯಿಗಳು ತಮ್ಮ ಶಿಷ್ಯರೇ ತಂಬೂರಿ ಸಾಥಿಗೆ ಕೂರಬೇಕೆಂದು ಬಯಸುತ್ತಾರೆ. ಕಾರಣವಿಷ್ಟೇ, ಶಿಷ್ಯ ಗುರುವಿನ ಮನೋಗತ ಅರಿತು ತಂಬೂರಿ ನುಡಿಸುತ್ತಾನೆ. ಅಲ್ಲದೆ, ಶಿಷ್ಯನಿಗೆ ವೇದಿಕೆಯ ಮೇಲೆಯೇ ಪಾಠ ಮಾಡುವ ಅನುಕೂಲತೆಯೂ ದೊರೆಯುತ್ತದೆ. ಹೀಗಾಗಿ ಬಹಳಷ್ಟು ಕಾರ್ಯಕ್ರಮಗಳಲ್ಲಿ ಶಿಷ್ಯರನ್ನೇ ತಂಬೂರಿ ಸಾಥಿಗೆ ಕೂರಿಸಿಕೊಳ್ಳುವುದನ್ನು ಕಾಣುತ್ತೇವೆ. ಅನೇಕ ಸಂದರ್ಭಗಳಲ್ಲಿ ಈ ಶಿಷ್ಯರು ಗುರುಗಳೊಂದಿಗೆ ಸಹಗಾಯನವನ್ನೂ ಮಾಡುತ್ತ ಕಲಿಯುವುದನ್ನು ಕಾಣುತ್ತೇವೆ.ಕೆಲವು ಸಂದರ್ಭಗಳಲ್ಲಿ ಪೇಚಿಗೆ ಸಿಲುಕಿದ ಗುರುಗಳನ್ನು ಶಿಷ್ಯರು ತಮ್ಮ ಸಮಯಸ್ಫೂರ್ತಿಯಿಂದ ಕಾಪಾಡಿದ ಪ್ರಸಂಗಗಳೂ ಸಂಗೀತದ ಇತಿಹಾಸದಲ್ಲಿ ದಾಖಲಾಗಿವೆ. ಅಂಥದೊಂದು ರಸಗಳಿಗೆ ಇಲ್ಲಿದೆ.1934ನೇ ಇಸವಿ. ಮುಂಬೈನ ಮ್ಯೂಸಿಕ್ ಸರ್ಕಲ್ ಆಯೋಜಿಸಿದ ಅಲ್ಲಾದಿಯಾಖಾನರ ಕಾರ್ಯಕ್ರಮ. ಎರಡು ತಂಬೂರಿಗಳ ಮಧ್ಯದಲ್ಲಿ ವಿರಾಜಿಸಿದ್ದಾರೆ ಅಲ್ಲಾದಿಯಾಖಾನರು. ಎಡಬದಿಗೆ ಶಿಷ್ಯ ಹಾಗೂ ಕಿರಿಯ ಸಹೋದರ ಹೈದರಖಾನ್ ಮತ್ತು ಬಲದಿಗೆ ಅಲ್ಲಾದಿಯಾಖಾನರ ಮಗ ಮಂಜೀಖಾನರು ತಂಬೂರಿಗಳೊಂದಿಗೆ ಕುಳಿತಿದ್ದಾರೆ. ಇಬ್ಬರೂ ಅಪ್ರತಿಮ ಗಾಯಕರು! ಎದುರಿಗೆ ತಾನರಸಖಾನರ ಸುಪುತ್ರ, ಹೆಸರಾಂತ ಗಾಯಕ, ವಿದ್ವಾಂಸ ಉಮರಾವಖಾನ್ ಸಾಹೇಬರು! ಇದಿಷ್ಟೇ ಸಾಲದೆಂಬಂತೆ, ಫೈಯಾಜ್‌ಖಾನ್, ಪ್ರೊ.ವಿಲಾಯತ್‌ಖಾನರೂ ಶೋತೃಗಳ ಸಾಲಿನಲ್ಲಿದ್ದಾರೆ. ಮುಂಬೈಯ ಗುಣೀ ಶೋತೃಗಳಿಂದ ಸಭಾಂಗಣ ತುಂಬಿದೆ.ಸಾಯಂಕಾಲದ ಸಮಯ. ಗಾಯನ ಮಹರ್ಷಿ ಅಲ್ಲಾದಿಯಾಖಾನರು ಎತ್ತಿಕೊಂಡದ್ದು ರಾಗ ‘ಜೈತಶ್ರೀ’. ರಾಗದ ಆರಂಭ ಎಷ್ಟೊಂದು ಪರಿಣಾಮಕಾರಿಯಾಗಿತ್ತೆಂದರೆ, ಅಸ್ತಂಗತನಾಗುತ್ತಿರುವ ಸೂರ್ಯನಾರಾಯಣನಿಗೆ ಈ ತಪಸ್ವಿ ಗಾಯಕ ಅರ್ಘ್ಯಪ್ರದಾನ ಮಾಡುತ್ತಿದ್ದಾರೇನೋ ಎಂದು ಭಾಸವಾಗುತ್ತಿತ್ತು. ಅವರ ಪ್ರಶಾಂತ, ಪಾಂಡಿತ್ಯಪೂರ್ಣ ಗಾಯನ ಪಕ್ಕದಲ್ಲಿರುವ ಸಮುದ್ರದ ಜೊತೆಗೆ ಸ್ಪರ್ಧಿಸುವಂತಿತ್ತು. ಆ ಸ್ಥಾಯಿಯಲ್ಲಿಯೇ ಒಂದು ಗಂಟೆ ಕಳೆದದ್ದು ಯಾರ ಗಮನಕ್ಕೂ ಬರಲಿಲ್ಲ. ಎಲ್ಲರೂ ಗಾಯನದ ತಂದ್ರಿಯಲ್ಲಿರುವಾಗ ಮುಂದೆ ಕುಳಿತ ಉಮರಾವಖಾನ ಹೇಳಿದರು- ‘ಈಗ ಅಂತರಾ ಹಾಡಿರಿ’.ಅಲ್ಲಾದಿಯಾಖಾನರು ಆಗ ತಾನ್‌ಗಳ ಮಳೆಯನ್ನೇ ಸುರಿಸುತ್ತಿದ್ದರು. ಅವರ ತಾನ್‌ಗಳು ಪಕ್ಕದ ಸಮುದ್ರದ ತೆರೆಗಳೊಂದಿಗೆ ಪೈಪೋಟಿಗಿಳಿದಂತೆ ಭಾಸವಾಗುತ್ತಿತ್ತು. ಒಂದು ತೆರೆ ಸಮುದ್ರ ದಂಡೆಗೆ ಅಪ್ಪಳಿಸಿ ಮರಳುವಾಗ, ಅದರ ಹಿಂದಿನಿಂದ ಬಂದ ಇನ್ನೊಂದು ತೆರೆ ಮೊದಲಿನದನ್ನು ತನ್ನ ಗರ್ಭದೊಳಗೆ ಹುದುಗಿಸಿಕೊಂಡು ಇನ್ನಷ್ಟು ಬಲವಾಗಿ ತೀರಕ್ಕೆ ಅಪ್ಪಳಿಸುವಂತೆ ಅವರ ತಾನ್‌ಗಳು ಒಂದರೊಳಗೊಂದು ಹುಟ್ಟಿಬರುತ್ತಿದ್ದುವು.ಅವರು ತಮ್ಮ ಗಾಯನದ ಕಲ್ಪನಾ ಸಾಮ್ರಾಜ್ಯದಲ್ಲಿ ಮುಳುಗಿರುವಾಗಲೇ ಉಮರಾವಖಾನರ ಆದೇಶ! ಅಲ್ಲಾದಿಯಾಖಾನರಿಗೆ ಬಂದಿಶ್ ನೆನಪಾಗುತ್ತಿಲ್ಲ! ಇದುವರೆಗೆ ಸಂಗೀತಲೋಕದಲ್ಲಿ ಗಳಿಸಿದ ಎಲ್ಲ ಮರ್ಯಾದೆ ಮಣ್ಣುಪಾಲಾಗುವ ಭಯ. ಎರಡೇ ಕ್ಷಣಗಳು. ಎಡಬದಿಯಲ್ಲಿ ತಂಬೂರಿ ಮೀಂಟುತ್ತ ಕುಳಿತ ಶಿಷ್ಯ ಹೈದರ್‌ಖಾನರು ‘ಶ್ಯಾಮ ಬಿನಾ’ ಎಂದು ಮೆಲ್ಲನೆ ಉಸುರಿದರು. ತಕ್ಷಣ ಅಲ್ಲಾದಿಯಾಖಾನರ ಮುಖ ಅರಳಿತು. ಬಂದಿಶ್ ಸಂಪೂರ್ಣ ನೆನಪಾಯಿತು. ಅವಿಸ್ಮರಣೀಯ ಹಾಡುಗಾರಿಕೆ ಮೂಡಿಬಂತು.ಆ ಬೈಠಕ್‌ನಲ್ಲಿ ಅಲ್ಲಾದಿಯಾಖಾನರು ತ್ರಿವೇಣಿ, ಭೂಪನಟ್ ರಾಗಗಳಲ್ಲಿನ ಬಂದಿಶ್‌ಗಳನ್ನು ಎಂದೂ ಮರೆಯದಂತೆ ಹಾಡಿದರು. ಇಲ್ಲಿಂದ ಮುಂದೆ ಹಾಡು ಎನ್ನುವುದೇ ಇಲ್ಲ ಎಂಬ ಭಾವನೆ ಎಲ್ಲರಿಗೂ.‘ಸಮಯಕ್ಕೆ ಸರಿಯಾಗಿ ಬಂದಿಶ್ ನೆನಪು ಮಾಡಿಕೊಟ್ಟು ಹೈದರ್‌ಖಾನ್ ನನ್ನ ಮರ್ಯಾದೆ ಕಾಪಾಡಿದ’ ಎಂದು ಅಲ್ಲಾದಿಯಾಖಾನರು ಕೊನೆಯವರೆಗೂ ಈ ಪ್ರಸಂಗವನ್ನು ಸ್ಮರಿಸುತ್ತಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.