ಬುಧವಾರ, ಫೆಬ್ರವರಿ 24, 2021
23 °C

ಶೀಘ್ರವೇ ರಸ್ತೆಗಿಳಿಯಲಿವೆ ಕ್ವಾಡ್ರಾಸೈಕಲ್‌!

ಇ.ಎಸ್‌.ಸುಧೀಂದ್ರ ಪ್ರಸಾದ್‌ Updated:

ಅಕ್ಷರ ಗಾತ್ರ : | |

ಶೀಘ್ರವೇ ರಸ್ತೆಗಿಳಿಯಲಿವೆ ಕ್ವಾಡ್ರಾಸೈಕಲ್‌!

ಇಬ್ಬರು ಪ್ರಯಾಣಿಕರನ್ನು ಹಿಂಬದಿಯ ಆಸನದಲ್ಲಿ ಕುಳ್ಳಿರಿಸಿ ಮನುಷ್ಯನೊಬ್ಬ ತನ್ನ ದೇಹಶಕ್ತಿಯನ್ನೇ ಚಲನೆಯ ಶಕ್ತಿಯಾ ಗಿಸಿ ಮುಂದಕ್ಕೆ ಎಳೆದೊಯ್ಯುತ್ತಿದ್ದ ಎರಡು ಚಕ್ರದ ಗಾಡಿಯನ್ನೇ ಈ ಹಿಂದೆ ‘ರಿಕ್ಷಾ’ ಎಂದು ಕರೆಯಲಾಗುತ್ತಿತ್ತು. ಇಂತಹ ಮಾನವ ರಿಕ್ಷಾಗಳು ಕೋಲ್ಕತ್ತ, ಮುಂಬೈ ಮಹಾನಗರ ಗಳಲ್ಲಿ ಮೊದಲು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಯಲ್ಲಿದ್ದವು. ಇದೇ ವಾಹನ ನಂತರದ ದಿನಗಳಲ್ಲಿ ಪೆಡಲ್‌ ಮಾಡಬಹುದಾದ ‘ಸೈಕಲ್‌ ರಿಕ್ಷಾ’ ಆಗಿ ಪರಿವರ್ತನೆಗೊಂಡಿತು.ಈ ಸೈಕಲ್‌ ರಿಕ್ಷಾಗಳಿಗೆ ದಶಕಗಳ ಹಿಂದೆ ಮೋಟಾರು ಅಳವಡಿಸಿ ಪೆಟ್ರೋಲ್‌ ಉರಿದು ಚಲಿಸುವಂತೆ ಮಾಡಿದಾಗ ‘ಆಟೋ ರಿಕ್ಷಾ’ ಎಂಬುದು ಅಭಿವೃದ್ಧಿಗೊಂಡಂತಾಯಿತು. ಈ ಮೂರು ಚಕ್ರಗಳ ಆಟೋ ರಿಕ್ಷಾಗಳೇ ಈಗಲೂ ದೇಶದ ಬಹುತೇಕ ಎಲ್ಲ ನಗರಗಳಲ್ಲಿಯೂ ಜನರಿಗೆ ಸೇವೆ ಒದಗಿಸುತ್ತಿವೆ, ಸರಕನ್ನೂ ಸಾಗಿಸಿಕೊಡುತ್ತಿವೆ.ಇಂದು ಇಷ್ಟೇ ಅಳತೆಯ, ನಾಲ್ಕು ಚಕ್ರದ ರಿಕ್ಷಾಗಳು ರಸ್ತೆಗಿಳಿ ಯಲು ಸಜ್ಜಾಗಿವೆ. ಈ ಹೊಸ ಪ್ರಯಾಣಿಕ ವಾಹನಕ್ಕೆ ಕೇಂದ್ರ ಸರ್ಕಾರವೂ ಹಸಿರು ನಿಶಾನೆ ತೋರಿಸಿದೆ. ‘ಕ್ವಾಡ್ರಾಸೈಕಲ್‌’ ಎಂದು ಕರೆಯಲಾಗುವ ಈ ವಾಹನ ಆಟೋ ರಿಕ್ಷಾಗಿಂತ ಕೊಂಚ ದೊಡ್ಡದು, ಆದರೆ, ಮಾರುತಿ 800 ಅಥವಾ ಹುಂಡೈ ಸ್ಯಾಂಟ್ರೊ ಕಾರಿಗಿಂತ ಚಿಕ್ಕ ಗಾತ್ರದ್ದು.* ಹೇಗಿರಬೇಕು ಕ್ವಾಡ್ರಾಸೈಕಲ್‌

ಸೈಕಲ್‌ ರಿಕ್ಷಾ, ಆಟೋ ರಿಕ್ಷಾ ಎಂದು ಕರೆಯುವ ನಾವು ‘ಕ್ವಾಡ್ರಾ ಸೈಕಲ್‌’ ಎಂಬ ಈ ಸಾರಿಗೆ ವಾಹನವನ್ನು ಸುಲಭವಾಗಿ ‘ಕಾರ್‌  ರಿಕ್ಷಾ’ ಎಂದೂ ಕರೆಯಬಹುದು. ನಾಲ್ಕು ಮಂದಿ ಆರಾಮವಾಗಿ ಕುಳಿತು ಹೋಗಬಹುದಾದ ‘ಕ್ವಾಡ್ರಾಸೈಕಲ್‌’ 2014ರ ಅಕ್ಟೋಬರ್‌ನಿಂದ ದೇಶದ ಆಯ್ದ ನಗರಗಳಲ್ಲಿ ರಸ್ತೆಗೆ ಇಳಿಯುವ ಸಾಧ್ಯತೆ ಇದೆ.ಆದರೆ ಇದಕ್ಕೊಂದಿಷ್ಟು ನಿಬಂಧನೆಯನ್ನೂ ಸರ್ಕಾರ ವಿಧಿಸಿದೆ. ನಾಲ್ಕು ಚಕ್ರಗಳ ಈ ‘ಕಾರ್ ರಿಕ್ಷಾ’ವನ್ನು ಹೆದ್ದಾರಿಯಲ್ಲಿ ಓಡಿಸು ವಂತಿಲ್ಲ. ಕೇವಲ ನಗರ, ಪಟ್ಟಣ ಹಾಗೂ ಜನವಸತಿ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುವ ಈ ವಾಹನದ ಪೂರ್ಣ ಭಾಗ ಮುಚ್ಚಿ ದಂತಿರಬೇಕು. ಆಟೋ ರಿಕ್ಷಾದಲ್ಲಿರುವ ಸ್ಕೂಟರ್‌ ಹ್ಯಾಂಡಲ್‌ಗೆ ಬದಲಾಗಿ ಕಾರಿನಲ್ಲಿರುವಂತೆ ಸ್ಟೀರಿಂಗ್ ಇರಬೇಕಾದ್ದು ಕಡ್ಡಾಯ.ಪ್ರಯಾಣಿಕರನ್ನು ಕರೆದೊಯ್ಯಲು ಬಳಸುವುದಾದಲ್ಲಿ ಖಾಲಿ ಕ್ವಾಡ್ರಾಸೈಕಲ್‌ನ ತೂಕ 450 ಕೆ.ಜಿ. ಮೀರಿರಬಾರದು. ಸರಕು ಗಳನ್ನೂ ಸಾಗಿಸಲು ಬಳಸಬಹುದಾದ ಈ ವಾಹನ, ಖಾಲಿ ಇದ್ದಾಗ 550 ಕೆ.ಜಿ. ತೂಕವನ್ನು ಮೀರಬಾರದು.ಕೆಲವೇ ದಿನಗಳ ಹಿಂದೆಯಷ್ಟೇ ಈ ವಾಹನ ಸೂಚನೆ ಹೊರ ಬಿದ್ದಿದೆ. ಇದೊಂದು ಹೊಸ ಬಗೆಯ ಪ್ರಯತ್ನವಾದ್ದರಿಂದ ಕ್ವಾಡ್ರಾ ಸೈಕಲ್‌ನ ರೂಪುರೇಷೆ ಕುರಿತು ಸಾರ್ವಜನಿಕರು 30 ದಿನದೊಳಗಾಗಿ ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಿಳಿಸಲು ಕರೆ ನೀಡಲಾಗಿದೆ. ಇದರ ಆಧಾರದ ಮೇಲೆ ಅಂತಿಮ ಆದೇಶ ನೀಡುವುದಾಗಿ ಇಲಾಖೆ ಹೇಳಿಕೊಂಡಿದೆ.* 3 ಮೀಟರ್‌ ಉದ್ದ ಮಿತಿ

ಕ್ವಾಡ್ರಾಸೈಕಲ್‌ನ ಉದ್ದ ಮೂರು ಮೀಟರ್‌ಗಳನ್ನು ಮೀರುವಂತಿಲ್ಲ. ಅಂದರೆ ಟಾಟಾ ನ್ಯಾನೊ (3.2 ಮೀ) ಕಾರಿಗಿಂತ ಉದ್ದದಲ್ಲಿ ಕೊಂಚ ಚಿಕ್ಕದಾದ ವಾಹನ ಇದಾಗಿರಬೇಕು ಎಂಬುದು ಇಲಾಖೆಯ ಸ್ಪಷ್ಟ ಆದೇಶ. ಇಷ್ಟು ಮಾತ್ರವಲ್ಲ ವಾಹನದ ಪಾರ್ಶ್ವ ಭಾಗಗಳನ್ನು ರೆಕ್ಸಿನ್‌, ಬಟ್ಟೆ ಅಥವಾ ಪ್ಲಾಸ್ಟಿಕ್ ಬಳಸಿ ಮುಚ್ಚುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ಚಾಲಕ ಮತ್ತು ಮೂರು ಮಂದಿ ಪ್ರಯಾಣಿಕರು ಈ ವಾಹನದಲ್ಲಿ ಪ್ರಯಾಣಿಸಲು ಅವಕಾಶ.* ಸರಕು ಸಾಗಣೆಗೂ ಸೈ

ಇದರ ಉದ್ದ ಗರಿಷ್ಠ 3.7 ಮೀ ಇರಬಹುದು. ಆದರೆ ಅಗಲ 1.5 ಮೀಟರ್‌ ಮೀರಬಾರದು ಎಂದು ಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಸರಕು ಸಾಗಾಣೆಯ ಈ ವಾಹನದಲ್ಲಿ ಚಾಲಕನೊಂದಿಗೆ ಒಬ್ಬರಿಗೆ ಮಾತ್ರ ಕೂರಲು ಅವಕಾಶ. ಜತೆಗೆ ಕ್ವಾಡ್ರಾಸೈಕಲ್‌ಗೆ ಕಾರಿಗೆ ಇರುವಂತೆ ಸುರಕ್ಷತಾ ದೃಷ್ಟಿಯ ಯಾವುದೇ ಮುನ್ನೆಚರಿಕೆ ಅಥವಾ ಸಾಧನಗಳನ್ನು ಅಳವಡಿಸಲು ಸರ್ಕಾರ ತಿಳಿಸಿಲ್ಲ. ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರವೂ ಸಹ ಆಟೋ ರಿಕ್ಷಾಗಳಷ್ಟೇ ಸಾಕು ಎಂದಿದೆ. ಅಂದರೆ ಧೂಮ ವಿಸರ್ಜನೆ ಮತ್ತು ಇಂಧನ ಬಳಕೆಯ ಮಾರ್ಗಸೂಚಿಯಲ್ಲಿ ಈ ನೂತನ ವಾಹನ ಈಗಿರುವ ಭಾರತ್‌-3 ಅಥವಾ ಭಾರತ್‌-4 ಶ್ರೇಣಿಗಿಂತಲೂ ಕಡಿಮೆಯದಾಗಿದೆ.ಸರ್ಕಾರದ ಈ ನಿರ್ಧಾರವನ್ನು ದೇಶದ ವಾಹನ ಉದ್ಯಮ ಕ್ಷೇತ್ರ ವಿರೋಧಿಸಿದೆ. ‘ಭಾರತದಂತಹ ರಸ್ತೆಗಳಲ್ಲಿ ಕ್ವಾಡ್ರಾಸೈಕಲ್‌ನ ಅವಶ್ಯಕತೆ ಇಲ್ಲ’ ಎಂದಿರುವ ವಾಹನ ಕ್ಷೇತ್ರದ ದಿಗ್ಗಜರು, ಇಂಥದ್ದೊಂದು ವಾಹನ ರಸ್ತೆಗಿಳಿಯುವುದರಿಂದ ವಾಹನ ಕ್ಷೇತ್ರ ಬಹಳ ವರ್ಷಗಳಷ್ಟು ಹಿಂದಿನ ಕಾಲಕ್ಕೆ ಸರಿದಂತಾಗಲಿದೆ. ಭಾರತದ ರಸ್ತೆಗಳಿಗೆ ಯಾವ ಬಗೆಯ ಕ್ವಾಡ್ರಾಸೈಕಲ್‌ಗಳ ಅವಶ್ಯಕತೆ ಇದೆ ಎಂಬುದನ್ನು ಇನ್ನೂ ಸಮರ್ಪಕವಾಗಿ ಅರ್ಥೈಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.* ವಿರೋಧ

ಭಾರತದಲ್ಲಿ ಕ್ವಾಡ್ರಾಸೈಕಲ್‌ ಪರಿಕಲ್ಪನೆಯನ್ನು ವಿರೋಧಿಸುತ್ತಿ ರುವವರಲ್ಲಿ ಪ್ರಮುಖವಾಗಿ ಟಾಟಾ ಮೋಟಾರ್ಸ್‌, ಟಿವಿಎಸ್‌ ಮೋಟಾರ್ಸ್‌, ಮಾರುತಿ ಸುಜುಕಿ, ಮಹೀಂದ್ರಾ ಆಂಡ್‌ ಮಹೀಂದ್ರಾ ಹಾಗೂ ಪಿಯಾಜಿಯೋ ಕಂಪೆನಿಗಳು ಸೇರಿವೆ. ಆದರೆ ಐರೋಪ್ಯ ರಾಷ್ಟ್ರಗಳಲ್ಲಿ ಕೆಲವು ಕಂಪೆನಿಗಳು ಕ್ವಾಡ್ರಾಸೈಕಲ್‌ಗಳನ್ನು ತಯಾರಿಸಿ ಮಾರಾಟ ಮಾಡುತ್ತಿವೆ.ಸದ್ಯದ ಪರಿಸ್ಥಿತಿಯಲ್ಲಿ ಬಜಾಜ್‌ ಮೋಟಾರ್ಸ್‌ ಮಾತ್ರ ಈಗಾಗಲೇ ಕ್ವಾಡ್ರಾಸೈಕಲ್‌ ಮಾದರಿಯ ನಾಲ್ಕು ಚಕ್ರದ ವಾಹನವನ್ನು ಅಭಿವೃದ್ಧಿಪಡಿಸಿದೆ. ಆರ್‌ಇ60 ಎಂಬ ಹೆಸರಿನ ಈ ವಾಹನ ಈ ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ಲಕ್ಷಣಗಳಿವೆ. ಇದರ ಜತೆಯಲ್ಲೇ ಹೆಚ್ಚು ಇಂಧನ ಕ್ಷಮತೆಯ, ಪ್ರಯಾಣಿಕರ ಸುರಕ್ಷತೆ ಹಾಗೂ ಆರಾಮ ನೀಡುವಂತಹ ಸಾಂಪ್ರದಾಯಿಕ ರಿಕ್ಷಾಗಿಂತ ಮೇಲ್ದರ್ಜೆಯ ವಾಹನವನ್ನು ಅಭಿವೃದ್ಧಿಪಡಿಸುವತ್ತ ಬಜಾಜ್‌ ಗಮನ ಹರಿಸಿರುವುದಾಗಿ ಕೆಲವು ದಿನಗಳ ಹಿಂದೆ ಕಂಪೆನಿ ಅಧಿಕಾರಿಯೊಬ್ಬರು ತಿಳಿಸಿದ್ದರು.ಬಜಾಜ್‌ ಆಟೋದ ಆರ್‌ಇ60 2012ರಲ್ಲೇ ಬಿಡುಗಡೆ ಕಂಡಿತ್ತು. 200ಸಿಸಿ ಎಂಜಿನ್‌ ಹೊಂದಿರುವ ಈ ಕ್ವಾಡ್ರಾಸೈಕಲ್‌ ಪ್ರತಿ ಗಂಟೆಗೆ 70ಕಿ.ಮೀ. ವೇಗದಲ್ಲಿ ಚಲಿಸುವಂತಹ ಹಾಗೂ ಪ್ರತಿ ಲೀಟರ್‌ ಪೆಟ್ರೋಲ್‌ಗೆ 35 ಕಿ.ಮೀ. ಇಂಧನ ಕ್ಷಮತೆ ಇರುವಂತಹ ವಾಹನ ಎಂದು ಕಂಪೆನಿ ಹೇಳಿಕೊಂಡಿದೆ. ವಾಟರ್‌ ಕೂಲ್ಡ್‌, ಟ್ವಿನ್‌ ಸ್ಪಾರ್ಕ್‌ ಹಾಗೂ ಐದು ಗೇರ್‌ಗಳ ಯಾಂತ್ರಿಕ ವ್ಯವಸ್ಥೆಯನ್ನು ಇದು ಹೊಂದಿದೆ.ಆದರೆ ಈಗಾಗಲೇ ಇರುವ ಆಟೋ ರಿಕ್ಷಾಗಳಿಗೆ ಹೊಸ ಸ್ಪರ್ಶ ನೀಡುವ ಮೊದಲ ಪ್ರಯತ್ನ ಇದಾಗಿದೆ. ಸಾರ್ವಜನಿಕರನ್ನು ಕರೆದೊಯ್ಯುವಲ್ಲಿ ಸುಧಾರಿತ ತಂತ್ರಜ್ಞಾನ, ಗಟ್ಟಿಮುಟ್ಟಾದ ದೇಹ ಹಾಗೂ ಅತ್ಯಾಧುನಿಕ ಸೌಲಭ್ಯ ಅಳವಡಿಸುವ ಮೂಲಕ ಸಾರ್ವಜನಿಕರ ಪ್ರಯಾಣ ಮತ್ತಷ್ಟು ಹಿತಕರವೆನಿಸುವಂತೆ ಮಾಡಬೇಕಾಗಿದೆ ಎಂದು ಸಾರಿಗೆ ಮಂತ್ರಾಲಯ ಗಮನ ಸೆಳೆದಿದೆ.ಕ್ವಾಡ್ರಾಸೈಕಲ್‌ಗೆ ಡಿಸೆಂಬರ್‌ನಲ್ಲಿ ಅಸ್ತು ಎಂದಿದ್ದ ಸಾರಿಗೆ ಮಂತ್ರಾಲಯ, ಅದರ ಸಾಧಕ ಬಾಧಕಗಳ ಕುರಿತು ಕಾನೂನು ಸಚಿವಾಲಯದ ಅನುಮೋದನೆಗೆ ಕಳುಹಿಸಿತ್ತು. ಅಲ್ಲಿಯೂ ಕ್ವಾಡ್ರಾಸೈಕಲ್‌ಗೆ ಈಗ ಹಸಿರು ನಿಶಾನೆ ದೊರೆತಿದೆ. ಇದರ ಬೆನ್ನಲ್ಲೇ ಬಜಾಜ್‌ ಆಟೋ ಕಂಪೆನಿಯ ಅಧಿಕಾರಿಗಳು ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯ ಸರ್ಕಾರಗಳನ್ನು ಭೇಟಿ ಮಾಡುತ್ತಿರುವ ಸುದ್ದಿಯೂ ವರದಿಯಾಗಿದೆ. ಪಶ್ಚಿಮ ಬಂಗಾಳ ಒಂದಕ್ಕೇ ಎರಡು ಸಾವಿರ ಕ್ವಾಡ್ರಾಸೈಕಲ್‌ಗಳ ಅಗತ್ಯವಿದೆಯಂತೆ. ಇವರಂತೆಯೇ ಇನ್ನೂ ಹಲವು ರಾಜ್ಯ ಸರ್ಕಾರಗಳು ಕ್ವಾಡ್ರಾಸೈಕಲ್‌ ಪರಿಕಲ್ಪನೆಯತ್ತ ಆಸಕ್ತಿ ತೋರಿಸಿವೆ ಎನ್ನುತ್ತದೆ ಬಜಾಜ್‌.ಕ್ವಾಡ್ರಾಸೈಕಲ್‌ ಬಂದ ಮಾತ್ರಕ್ಕೆ ಮೂರು ಚಕ್ರದ ಆಟೋ ರಿಕ್ಷಾ ಗಳಿಗೆ ಬೇಡಿಕೆ ಕಡಿಮೆಯಾಗದು ಎಂಬುದೂ ಹಲವು ಕಂಪೆನಿಗಳ ಅಭಿಪ್ರಾಯ.

ಸದ್ಯ ಪ್ರತಿ ವರ್ಷ 4.5 ಲಕ್ಷದಷ್ಟು ತ್ರಿಚಕ್ರ ವಾಹನಗಳು ಮಾರಾಟ ವಾಗುತ್ತಿವೆ. ದೆಹಲಿಯೊಂದರಲ್ಲೇ ವಾರ್ಷಿಕ 70 ಸಾವಿರ ಆಟೋ ರಿಕ್ಷಾಗಳಿಗೆ ಬೇಡಿಕೆ ಇದೆ. ಟ್ಯಾಕ್ಸಿಗಳಂತೆ ಬಳಸಬಹುದಾದ ಕ್ವಾಡ್ರಾಸೈಕಲ್‌ಗಳ ಬೆಲೆ ಆಟೋ ರಿಕ್ಷಾಕ್ಕಿಂತ (ರೂ.1.25ಲಕ್ಷ) ಸ್ವಲ್ಪ ಹೆಚ್ಚೇ ಇರಲಿದೆ.ಆದರೆ, ದೇಶದಲ್ಲಿ ಸದ್ಯ ಸಂಚರಿಸುತ್ತಿರುವ ಪುಟ್ಟ ಗಾತ್ರದ ಕಾರಿನ ಬೆಲೆಗಿಂತ (ರೂ. 2.5ಲಕ್ಷ) ಕಡಿಮೆ ಇರಲಿದೆ ಎಂದೇ ಹೇಳಲಾಗುತ್ತಿದೆ. ಪ್ರವಾಸೋಧ್ಯಮ ಏರುಮುಖವಾಗಿರುವ ಈ ಕಾಲದಲ್ಲಿ ನಗರ ಪ್ರದೇಶದಲ್ಲಿ ಸುರಕ್ಷಿತ ಹಾಗೂ ಹೆಚ್ಚು ಆರಾಮದಾಯಕ ವಾಹನದ ನಿರೀಕ್ಷೆಯಲ್ಲಿರುವವರಿಗೆ ಕ್ವಾಡ್ರಾಸೈಕಲ್‌ ಹೊಸ ಭರವಸೆ ನೀಡಲಿದೆ.ಫೋರ್ಡ್‌ನ ಕ್ವಾಡ್ರಾಸೈಕಲ್‌ ಆವಿಷ್ಕಾರ

ನಾಲ್ಕು ಚಕ್ರಗಳ ಇತಿಹಾಸ ಶತಮಾನಗಳಷ್ಟು ಹಳೆಯದು.  1981ರಲ್ಲಿ ಎಂಜಿನ್‌ ಬಳಸಿದ ಕ್ವಾಡ್ರಾಸೈಕಲ್‌ನ ಅಭಿವೃದ್ಧಿಗೆ ಫೋರ್ಡ್‌ ಕೈಹಾಕಿದ್ದರು. ಆ ವೇಳೆಗೆ ಫೋರ್ಡ್‌ ಅಮೆರಿಕದ ಡೆಟ್ರಾಯ್ಟ್‌ನಲ್ಲಿದ್ದ ಎಡಿಸನ್‌ ಇಲ್ಯುಮಿನೇಟಿಂಗ್‌ ಕಂಪೆನಿಯಲ್ಲಿ ರಾತ್ರಿ ಪಾಳಿಯ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಬಿಡುವಿನ ವೇಳೆಯಲ್ಲಿ ಪೆಟ್ರೋಲ್‌ ಎಂಜಿನ್‌ ಬಳಸಿ ಕ್ವಾಡ್ರಾಸೈಕಲ್‌ ಮೇಲಿನ ಪ್ರಯೋಗ ನಡೆಸುತ್ತಲೇ ಇದ್ದರು.

ಇವರು ಅಭವೃದ್ಧಿಪಡಿಸುತ್ತಿದ್ದ ಕ್ವಾಡ್ರಾಸೈಕಲ್‌ನ ವಿನ್ಯಾಸದಲ್ಲಿ ಚಾಸೀಸ್‌ ಮೇಲೆ ಟೂಲ್‌ಬಾಕ್ಸ್‌ ಆಸನವನ್ನು ಅಳವಡಿಸಿದ್ದರು. ನಾಲ್ಕು ಸೈಕಲ್‌ ಚಕ್ರಗಳನ್ನೇ ಇದಕ್ಕೆ ಬಳಸಿದ್ದರು. ಹತ್ತು ಅಡಿಯಷ್ಟು ಉದ್ದದ ಚೈನ್‌ ಮೂಲಕ ಚಕ್ರಗಳ ನಡುವೆ ಸಂಪರ್ಕ ಕಲ್ಪಿಸಿದರು. ಎರಡು ಸಿಲಿಂಡರ್‌ಗಳ ಎಂಜಿನ್‌ ಅಳವಡಿಸಿದರು. ಅದು ನಾಲ್ಕು ಅಶ್ವಶಕ್ತಿ ಉತ್ಪಾದಿಸುತ್ತಿತ್ತು ಹಾಗೂ ಪ್ರತಿ ಗಂಟೆಗೆ 30 ಕಿಲೊ ಮೀಟರ್‌ ವೇಗದಲ್ಲಿ ಚಲಿಸುತ್ತಿತ್ತು. ಇದಕ್ಕೆ ಬ್ರೇಕ್‌ ಇರಲಿಲ್ಲ.ಜತೆಗೆ ಹಿಂಬದಿ ಚಲಿಸಲು ರಿವರ್ಸ್‌ ಗೇರ್‌ ಕೂಡಾ ಇರಲಿಲ್ಲ. ಆದರೂ ಫೋರ್ಡ್‌ ಆ ಕ್ವಾಡ್ರಾಸೈಕಲ್‌ ಅನ್ನು ಡೆಟ್ರಾಯ್ಟ್‌ ನಗರದ ಸುತ್ತ ಮೊದಲ ಪ್ರಯಾಣಿಸಿದ್ದರು. 1896ರಲ್ಲಿ ಈ ಕಾರು ಸಂಪೂರ್ಣವಾಗಿ ಅಭಿವೃದ್ಧಿಗೊಂಡಿತು. ಇವರ ಪ್ರಯತ್ನವನ್ನು ಸ್ವತಃ ಥಾಮಸ್‌ ಎಡಿಸನ್‌ ಕೊಂಡಾಡಿದ್ದರಂತೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.