ಮಂಗಳವಾರ, ಏಪ್ರಿಲ್ 13, 2021
32 °C

ಶುಂಠಿಗೆ ಬಂಪರ್ ಬೆಲೆ

ಕೆ.ಎಂ.ಸಂತೋಷ್ ಕುಮಾರ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಚಿನ್ನಕ್ಕಷ್ಟೇ ಬೆಲೆ ಅಲ್ಲ; ಶುಂಠಿಗೂ ಬಂದಿದೆ ಚಿನ್ನದಂತಹ ಬೆಲೆ. ಕಳೆದೊಂದು ವಾರದಲ್ಲಿ ಶುಂಠಿ ಬೆಲೆ ದಾಖಲೆ ಪ್ರಮಾಣದಲ್ಲಿ ಗಗನಕ್ಕೇರಿದ್ದು, ಬೆಳೆಗಾರರಿಗೆ ಶುಕ್ರದೆಸೆ ತಿರುಗಿದೆ. ಖರೀದಿ ಮಾಡುವ ಗ್ರಾಹಕರಿಗೆ ~ಶುಂಠಿ ಕಸಾಯ~ ಬಲು ತುಟ್ಟಿ ಎನಿಸಿದೆ.60 ಕೆ.ಜಿ.ಯ ಚೀಲ ಶುಂಠಿಯನ್ನು 2100ರಿಂದ 2200 ರೂಪಾಯಿಗೆ ವರ್ತಕರು ರೈತರ ಭೂಮಿಯಲ್ಲೇ ಕೈಮೇಲೆ ನಗದು ನೀಡಿ ಖರೀದಿಸುತ್ತಿದ್ದಾರೆ. ವಾರದ ಹಿಂದೆಯಷ್ಟೇ 900ರಿಂದ 1000 ರೂಪಾಯಿ ಬೆಲೆ ಇದ್ದದ್ದು ಕೇವಲ ಎಂಟೇ ದಿನಗಳಲ್ಲಿ ದ್ವಿಗುಣಗೊಂಡಿದೆ.ಉತ್ತರ ಭಾರತದಲ್ಲಿ ಈಗ ಚಳಿ ಶುರುವಾಗಿರುವುದರಿಂದ ಶುಂಠಿಯ ಕಾಫಿ, ಚಹ ಹಾಗೂ ಕಷಾಯಕ್ಕೆ ಬೇಡಿಕೆ ಉಂಟಾಗಿದೆ. ಜತೆಗೆ ಸಾಲುಸಾಲು ಹಬ್ಬಗಳು ಬಂದಿರುವುದರಿಂದ ಶುಂಠಿಗೆ ಬೇಡಿಕೆ ಹೆಚ್ಚಿದೆ. ಹಾಗಾಗಿ ಬೆಲೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಮೂಡಿದೆ.ಪಕ್ಕದ ಕೇರಳದಲ್ಲಿ ಈ ಬಾರಿ ಅಷ್ಟಾಗಿ ಇಳುವರಿ ಇಲ್ಲದೆ ಶುಂಠಿ ಬೆಳೆ ವಿಫಲವಾಗಿದೆ. ಜತೆಗೆ ರಾಜ್ಯದ ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಶುಂಠಿ ಬಿತ್ತನೆ ಪ್ರಮಾಣ ಕಡಿಮೆಯಾಗಿತ್ತು. ಮಲೆನಾಡು ಮತ್ತು ನೀರಾವರಿ ಸೌಲಭ್ಯ ಇರುವಲ್ಲಿ ಮಾತ್ರ ಬೆಳೆ ಉತ್ತಮವಾಗಿದೆ. ಇಲ್ಲಿ ಬೆಳೆದಿರುವ ಶುಂಠಿಯನ್ನು ದೆಹಲಿ, ಮುಂಬೈ, ಕೋಲ್ಕತ್ತಾ, ಉತ್ತರ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ ಎನ್ನುತ್ತಾರೆ ಸ್ಥಳೀಯ ವರ್ತಕರೊಬ್ಬರು.ಕಳೆದ ವರ್ಷ ಇಳುವರಿ ಇದ್ದರೂ ಸರಿಯಾದ ಬೆಲೆ ಸಿಗಲಿಲ್ಲ. ಕಳೆದ ವರ್ಷ ಆರಂಭಿಕ ಋತುವಿನಲ್ಲಿ ಗರಿಷ್ಠ ಬೆಲೆ 400ರಿಂದ 500 ರೂಪಾಯಿ ಇತ್ತು. ಕೊನೆ ಹಂತದಲ್ಲಿ 300 ರೂಪಾಯಿಗೂ ಕುಸಿದಿತ್ತು. ಸಾಂಪ್ರಾದಾಯಿಕವಾಗಿ ಬತ್ತ, ಕಾಫಿ ಬೆಳೆಯುವವರು ವಾಣಿಜ್ಯ ಬೆಳೆ ಶುಂಠಿಗೆ ಮರುಳಾಗಿ ಹೆಕ್ಟೇರ್‌ಗಟ್ಟಲೆ ಶುಂಠಿ ಬೆಳೆ ಮಾಡಿದ್ದರು. ಮಲೆನಾಡು ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 2500 ಹೆಕ್ಟೇರ್‌ಗೂ ಹೆಚ್ಚು ಭೂಮಿಯಲ್ಲಿ ಶುಂಠಿ ಬೆಳೆದಿದ್ದರು.ಹಾಸನ ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ರೈತರು ಶುಂಠಿ ಬೆಳೆದಿದ್ದರು. ಬಹಳಷ್ಟು ರೈತರಿಗೆ ಹಾಕಿದ ಬಂಡವಾಳವೂ ಕೈಗೆ ಸಿಗದೆ ಕೆಲವರು ಶುಂಠಿ ಕೀಳದೆ ಭೂಮಿಯಲ್ಲೇ ಬಿಟ್ಟಿದ್ದರು. ಇಳುವರಿ ಕುಂಠಿತ ಮತ್ತು ಬೆಲೆ ಕುಸಿತದಿಂದ ತತ್ತರಿಸಿದ ಬಹುತೇಕ ರೈತರು ಈ ಬಾರಿ ಶುಂಠಿ ಬೆಳೆಗೆ ವಿದಾಯ ಹೇಳಿದ್ದರು.ನೀರಾವರಿ ಸೌಲಭ್ಯ ಇದ್ದ ಮತ್ತು ಕಳೆದ ವರ್ಷದ ನಷ್ಟ ತಡೆದುಕೊಳ್ಳುವ ಸಾಮರ್ಥ್ಯವಿದ್ದ ರೈತರಷ್ಟೇ ಈ ಬಾರಿ ಶುಂಠಿ ಹಾಕಿದ್ದರು. ಜತೆಗೆ ಈ ವರ್ಷ ಸಾಧಾರಣ ಮಳೆಯಾದದ್ದೂ ತಗ್ಗಿನ ಗದ್ದೆಗಳಲ್ಲಿ ಶುಂಠಿ ಹಾಕಿದವರಿಗೆ ವರದಾನವಾಯಿತು.

 

ಹೊಲದಲ್ಲಿ ಚೀಲಕ್ಕೆ 8ರಿಂದ 10 ಚೀಲ ಹಾಗೂ ಗದ್ದೆಯಲ್ಲಿ 12ರಿಂದ 15 ಚೀಲದವರೆಗೆ ಇಳುವರಿ ಬೀಳುತ್ತಿದೆ. ಶುಂಠಿ ಬೆಳೆದ ರೈತರು ಲಕ್ಷಲಕ್ಷ ನೋಡುವಂತಾಗಿದೆ. ಕಾಫಿ ಬೆಲೆ ಕುಸಿದು, ಭತ್ತದ ಗದ್ದೆಗಳು ನೀರಲ್ಲದೆ ಒಣಗಿ ಕಂಗಾಲಾಗಿರುವ ಬೆಳೆಗಾರರು, ಶುಂಠಿ ಮೂಲಕ ಕೊಂಚ ನಗು ನೋಡುವಂತಾಗಿದೆ ಎನ್ನುತ್ತಾರೆ ರೈತ ಶಶಿಧರ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.