ಶುಕ್ರವಾರ, ಮಾರ್ಚ್ 5, 2021
30 °C

ಶ್ರೀರಾಂಪುರವೂ ಮಲ್ಲೇಶ್ವರವೂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಾಂಪುರವೂ ಮಲ್ಲೇಶ್ವರವೂ

`ಬೀಟ್~ ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭ. ನಿರ್ಮಾಪಕ ವೈ.ಕೆ.ರಾಜು ಕತೆಯೊಂದನ್ನು ಹೇಳಿದರು. ಮೂಕಿಚಿತ್ರವನ್ನು ನೋಡುತ್ತಿದ್ದ ಅವರ ತಂದೆ ತೆರೆ ಮೇಲೆ ಕುದುರೆ ಧಾವಿಸುತ್ತಿದ್ದಾಗ ಹೆದರಿ ಚಿತ್ರಮಂದಿರ ತೊರೆದಿದ್ದರು. ಅದೇ ರಾಜು `ಗಿರಿಕನ್ಯೆ~ ಚಿತ್ರ ನೋಡುವಾಗ ತೆರೆಯ ಹಿಂದೆ ನಟರು ಇರಬಹುದು ಎಂದು ಭಾವಿಸಿ ಅವಾಕ್ಕಾಗಿದ್ದರು.ಇಂಥ ವಿಸ್ಮಯಗಳೇ ರಾಜು ಸೇರಿದಂತೆ ಅನೇಕರನ್ನು ಚಿತ್ರರಂಗದೆಡೆಗೆ ಕರೆ ತಂದಿವೆ. ಕಾಲ ಬದಲಾಗಿದೆ. ಈಗ ಕೆಟ್ಟ ಕತೆಗಳನ್ನು ಕಂಡು ಜನ ಚಿತ್ರಮಂದಿರ ತೊರೆಯುವ ಕಾಲ! ಆ ಮಾತು ಒತ್ತಟ್ಟಿಗಿರಲಿ. ಅವರ ಪಾಲಿಗೆ ನಿರ್ದೇಶಕ ಘನಶ್ಯಾಂ `ಬೀಟ್~ ಚಿತ್ರದ ಚುಕ್ಕಾಣಿ ಹಿಡಿದ ನಾವಿಕ. ಅಜಿತ್ ಹಾಗೂ ಹರ್ಷಿಕಾ ಪೂಣಚ್ಚ ಪಯಣಿಗರು.ಛಾಯಾಗ್ರಾಹಕ ಸಿನಿಟೆಕ್ ಸೂರಿ ಆ ನಾವೆಯ ವಿನ್ಯಾಸಕ. ತಾನೇನಿದ್ದರೂ ಇಂಧನ ಪೂರೈಸುವವ. ಬೀಟ್ ಪದದ ಬಗ್ಗೆಯೂ ಅವರ ವ್ಯಾಖ್ಯಾನ ಹಲವು ಬಗೆಯದಾಗಿತ್ತು. ಬೀಟ್ ಎಂದರೆ ಪೊಲೀಸ್ ಗಸ್ತು, ಯುವಕರ ಪ್ರೀತಿಯ ಹೊತ್ತು, ಅಷ್ಟೇ ಏಕೆ ಹೃದಯ ಬಡಿತದ ಮಾತು.ಎದೆಯ ಬೀಟ್‌ಗೂ ಚಿತ್ರದ `ಬೀಟ್~ಗೂ ಸಾಕಷ್ಟು ವ್ಯತ್ಯಾಸಗಳಿವೆ ಎಂದರು ನಾಯಕ ನಟ ಅಜಿತ್. ಎಂಥ ವ್ಯತ್ಯಾಸಗಳಿವೆ ಎಂಬುದನ್ನು ಅವರು ವಿವರಿಸುವ ಗೋಜಿಗೆ ಹೋಗಲಿಲ್ಲ. ನಿರ್ಮಾಪಕರು ಅಭಿನಯ ತರಂಗದಲ್ಲಿ ಅಭ್ಯಾಸ ಮಾಡಿರುವುದು ಇವರ ಪಾಲಿಗೆ ವರದಾನವಾಯಿತಂತೆ. ಪ್ರತಿಯೊಂದನ್ನೂ ಆಸಕ್ತಿಯಿಂದ ಕೇಳಿ ಸಹಕರಿಸುತ್ತಿದ್ದ ಅವರನ್ನು ಅಜಿತ್ ಮನಸಾರೆ ಶ್ಲಾಘಿಸಿದರು.ಚಿತ್ರದಲ್ಲಿ ನಾಯಕಿ ಹರ್ಷಿಕಾ ಪೂಣಚ್ಚ ಅವರದು ಮುಗ್ಧ ಹುಡುಗಿಯ ಪಾತ್ರ. ಹರ್ಷಿಕಾ ಈವರೆಗೆ ಅಭಿನಯಿಸಿದ ಬಹುತೇಕ ಪಾತ್ರಗಳಿಗೆ ವಿರುದ್ಧವಾದ ಪಾತ್ರ! ಶ್ರೀರಾಂಪುರದ ಹುಡುಗ ಮಲ್ಲೇಶ್ವರಂ ಹುಡುಗಿ ಎಂಬುದು ಚಿತ್ರದ ಅಡಿಸಾಲು. ನಿಜಜೀವನದಲ್ಲಿಯೂ ಆಕೆ ಮಲ್ಲೇಶ್ವರದ ಹುಡುಗಿ ಎಂಬುದು ನಿಮಗೆ ಗೊತ್ತಿರಲಿ.

 

ಚಿತ್ರದಲ್ಲಿ ಬಹುಪಾಲು ಮೇಕಪ್ ಬಳಸದೆಯೇ ಅವರು ನಟಿಸಿದ್ದಾರೆ. ಅದಕ್ಕಾಗಿ ಮೆಚ್ಚುಗೆಯನ್ನೂ ಪಡೆದಿದ್ದಾರೆ. ಸಂಗೀತ ನಿರ್ದೇಶಕ ಶಕ್ತಿ ಪ್ರಸಾದ್ ಚಿತ್ರರಂಗಕ್ಕೆ ಕಾಲಿಟ್ಟು ಹನ್ನೆರಡು ವರ್ಷ. ಆ ಅನುಭವವನ್ನೆಲ್ಲಾ ಅವರು ಚಿತ್ರಕ್ಕಾಗಿ ಧಾರೆ ಎರೆದಿದ್ದಾರಂತೆ. ಕೇಳುಗರಿಗೆ ಹಿತಕರವಾದ ಹಾಡುಗಳನ್ನು ಹೆಣೆದಿದ್ದಾರಂತೆ.ನಿರ್ದೇಶಕ ಘನಶ್ಯಾಂ ಕನಸೊಂದು ನನಸಾದ ಸಂತಸದಲ್ಲಿದ್ದರು. ಬೀಟ್ ಅವರು ಕಂಡ ಪುಟ್ಟ ಕನಸಂತೆ. ಚಿತ್ರಕ್ಕೊಂದು ವಿಶಿಷ್ಟ ಶಕ್ತಿಯಿದೆ ಅದೇನು ಎಂಬುದನ್ನು ತೆರೆಯ ಮೇಲೆ ಸವಿಯಬೇಕು ಎಂದರವರು. ಸುಂದರ ದೃಶ್ಯಗಳನ್ನು ನೀಡಿದ ಛಾಯಾಗ್ರಾಹಕ ಸೂರಿ ಹಾಗೂ ಚಿತ್ರೀಕರಣದ ವೇಳೆ ನಿಧಾನವೇ ಪ್ರಧಾನ ಎನ್ನುತ್ತಿದ್ದ ನಿರ್ಮಾಪಕರಿಗೆ ಧನ್ಯವಾದ ಸಲ್ಲಿಸಿದರು.ಸ್ವರ್ಣ ಆಡಿಯೊ ಸಂಸ್ಥೆಯ ನವೀನ್ ಯಜಮಾನ್, ಬೌರಿಂಗ್ ಇನ್ಸ್‌ಟಿಟ್ಯೂಟ್‌ನ ಅಧ್ಯಕ್ಷ ಅನೂಪ್ ಬಜಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.