ಗುರುವಾರ , ಮೇ 6, 2021
31 °C
ನಾದದ ಬೆನ್ನೇರಿ...

`ಶ್ರೀಹರಿ' ಪ್ರತಿಭೆಗಳ ಲಹರಿ

-ಉಮಾ ಅನಂತ್ Updated:

ಅಕ್ಷರ ಗಾತ್ರ : | |

ದು ಶ್ರೀಹರಿ ಸಂಗೀತ ಶಾಲೆಯ ವೈಶಿಷ್ಟ್ಯ. ಇಲ್ಲಿ ಕಲಿಯುವ ಅನೇಕ ಮಕ್ಕಳು ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಗಳಲ್ಲಿ ವಿಜೇತರು. ಎಲ್ಲೇ ಸ್ಪರ್ಧೆ ನಡೆದರೂ ಇಲ್ಲಿನ ಮಕ್ಕಳು ಭಾಗವಹಿಸಿ ಬಹುಮಾನ ಪಡೆಯುತ್ತಾರೆ. ಇಲ್ಲಿನ ವಿದ್ಯಾರ್ಥಿನಿ ಅಮೆರಿಕದಲ್ಲಿ ಕಳೆದ ವರ್ಷ ನಡೆದ ಅಕ್ಕ ಸಮ್ಮೇಳನದಲ್ಲಿ ಹಾಡಿದ್ದಾಳೆ. ಹೀಗೆ ಅನನ್ಯ ಸಂಗೀತ ಪ್ರತಿಭೆಗಳನ್ನು ಕೊಡುಗೆಯಾಗಿ ನೀಡುತ್ತಿರುವ ಶ್ರೀಹರಿ ಸಂಗೀತ ಶಾಲೆ ಜೆ.ಪಿ.ನಗರದಲ್ಲಿದೆ.ವಿದ್ವಾನ್ ಕಮಲ್‌ಕುಮಾರ್ ಬಿ.ಇ. ಈ ಸಂಗೀತ ಶಾಲೆಯ ಮುಖ್ಯಸ್ಥರು. ಸುಮಾರು 100ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಕರ್ನಾಟಕ ಸಂಗೀತ ಕಲಿಯುತ್ತಿದ್ದಾರೆ. ಈ ಸಂಗೀತ ಶಾಲೆ ಜೆ.ಪಿ. ನಗರದ ಶಾಮಣ್ಣ ಗಾರ್ಡನ್‌ನಲ್ಲಿ 1995ರಲ್ಲಿ ಆರಂಭವಾಯಿತು. ಇದೇ ಸಂಗೀತ ಶಾಲೆಯ ಶಾಖೆಗಳು ಚಾಮರಾಜಪೇಟೆಯ ಸುಬ್ಬಣ್ಣತೋಟ, ಜಯನಗರ ಎಂಟನೇ ಬ್ಲಾಕ್‌ನಲ್ಲಿರುವ ಜಯರಾಮ ಸೇವಾ ಮಂಡಳಿ ಮತ್ತು ಜೆ.ಪಿ. ನಗರ ಮೊದಲನೇ ಹಂತದಲ್ಲೂ ಕಾರ್ಯನಿರ್ವಹಿಸುತ್ತಿವೆ.ಈ ಸಂಗೀತ ಶಾಲೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ವಿವಿಧ ವೇದಿಕೆಗಳಲ್ಲಿ ಕಛೇರಿ ನೀಡುತ್ತಿದ್ದಾರೆ. ಏಳನೇ ಕ್ಲಾಸ್‌ನ ಬಿ.ಪಿ. ಅದಿತಿ ಅಮೆರಿಕಾದ `ಅಕ್ಕ' ಸಮ್ಮೇಳನದಲ್ಲಿ ಹಾಡಿದ್ದಳು. ಯು. ಭಾವನಾ, ರಮ್ಯಾ, ಎಸ್. ಸೌಮ್ಯ, ಬಿ.ಇ. ಹರಿಚರಣ್, ಎಂ. ರಾಜಪ್ಪ ಮುಂತಾದವರು ಇಂದು ಭರವಸೆಯ ಕಲಾವಿದರಾಗಿ ರೂಪುಗೊಂಡಿದ್ದಾರೆ.
ಗುರು ಸ್ಮರಣೆ

`ಕರ್ನಾಟಕ ಶಾಸ್ತ್ರೀಯ ಸಂಗೀತದ ಎಳೆ ಎಳೆಯೂ ಮಧುರಾತಿ ಮಧುರ. ಗುರುಗಳ ಪ್ರೇರಣೆಯಿಂದ, ಅವರ ಅನುಗ್ರಹದಿಂದ ಸುಮಾರು 12 ವರ್ಷಗಳ ಕಾಲ ಇಲ್ಲಿ ಅಭ್ಯಾಸ ಮಾಡಿದೆ.

ಸದ್ಯ ಶಂಕರ್‌ಮಹದೇವನ್ ಅವರ ಜತೆಗೆ ಸಂಗೀತ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ.ಆಂಧ್ರಪ್ರದೇಶದ ದಂತ್ಲೂರ್ ಎಂಬ ಪುಟ್ಟ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಓದಿದ ನನಗೆ ಶಾಸ್ತ್ರೀಯ ಸಂಗೀತವನ್ನು ಕಲಿಸಿ ಇಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ದ ಗುರುವಿನ ಮೇಲೆ ಅದಮ್ಯ ಗೌರವವಿದೆ ಎನ್ನುತ್ತಾರೆ ಎಂ. ರಾಜಪ್ಪ.`ಈಗಾಗಲೇ ನೂರಾರು ಸಂಗೀತ ಕಛೇರಿಗಳನ್ನು ನೀಡಿರುವುದಲ್ಲದೆ ವಿದುಷಿ ವಸಂತಲಕ್ಷ್ಮಿ ಮತ್ತು ವಿದುಷಿ ಸೌಂದರ್ಯ ಶ್ರೀವತ್ಸ ಅವರ ಬಳಿ ಭರತನಾಟ್ಯವನ್ನೂ ಕಲಿಯುತ್ತಿದ್ದೇನೆ.

ಈ ಶಾಲೆಯ ಶಿಸ್ತು, ಗುಣಮಟ್ಟದ ಸಂಗೀತ ಶಿಕ್ಷಣದಿಂದಾಗಿ ಇಂದು ಹಲವಾರು ಪ್ರತಿಭೆಗಳು ಇಲ್ಲಿ ಅರಳಿವೆ. ಸಂಗೀತ ಕಲಿಕೆಯ ಜತೆಗೆ ಇದಕ್ಕೆ ಪೂರಕವಾದ ಹತ್ತು ಹಲವು ಚಟುವಟಿಕೆಗಳಿಂದಾಗಿ ಈ ಸಂಗೀತ ಶಾಲೆ ವಿಭಿನ್ನವಾಗಿ ನಿಲ್ಲುತ್ತದೆ ಎನ್ನುತ್ತಾರೆ ಅವರು.

ಶಾಸ್ತ್ರೀಯ ಸಂಗೀತಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ಶ್ರೀ ಹರಿ ಸಂಗೀತ ಶಾಲೆ ನಡೆಸುತ್ತಾ ಬಂದಿದೆ. ಜಯರಾಮ ಸೇವಾ ಮಂಡಳಿಯ ಸಹಯೋಗದೊಂದಿಗೆ ಪ್ರತಿ ವರ್ಷ ತ್ಯಾಗರಾಜರ ಆರಾಧನೆ, ಕನಕ ಜಯಂತಿಯ ದಿನ ಈ ಸಂಗೀತ ಶಾಲೆಯ ಮಕ್ಕಳನ್ನು ಕಾಗಿನೆಲೆಗೆ ಕರೆದುಕೊಂಡು ಹೋಗಿ ಗಾಯನ ಕಾರ್ಯಕ್ರಮ ಏರ್ಪಡಿಸುವುದು, ಪುರಂದರ ದಾಸರ ಆರಾಧನೆ, ಶಾಲೆಯ ವಾರ್ಷಿಕ ಸಂಗೀತೋತ್ಸವ, ಸಂಗೀತ ಕಾರ್ಯಾಗಾರ, ವಿಚಾರಸಂಕಿರಣ, ಉಪನ್ಯಾಸ, ಹಿರಿಯ ಕಲಾವಿದರಿಂದ ಸಂಗೀತ ಕಛೇರಿಗಳ ಆಯೋಜನೆ, ರಾಜ್ಯದಾದ್ಯಂತ ನಡೆಯುವ ವಿವಿಧ ಸಂಗೀತ ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸಲು ವಿಶೇಷ ತರಬೇತಿ, ಸರ್ಕಾರ ನಡೆಸುವ ಸಂಗೀತ ಪರೀಕ್ಷೆಗಳನ್ನು ಎದುರಿಸಲು ವಿಶೇಷ ಕೋಚಿಂಗ್... ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಸದಾ ಚಟುವಟಿಕೆಯಿಂದ ಇರುವ ಸಂಗೀತ ತಾಣವಾಗಿ ಈ ಸಂಸ್ಥೆಯನ್ನು ವಿದ್ವಾನ್ ಕಮಲ್‌ಕುಮಾರ್ ಅವರು ಕಟ್ಟಿ ಬೆಳೆಸಿದ್ದಾರೆ.ಹಿರಿಯ ಸಂಗೀತ ವಿದ್ವಾಂಸ ಆರ್.ಕೆ. ಶ್ರೀಕಂಠನ್ ಅವರ ಬಳಿ 14 ವರ್ಷ ಸಂಗೀತ ಕಲಿತಿರುವ ವಿದ್ವಾನ್ ಕಮಲ್‌ಕುಮಾರ್ ಬೆಂಗಳೂರು ವಿವಿಯಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಸಂಸ್ಕೃತ, ಹಿಂದಿ ಭಾಷೆಗಳಲ್ಲೂ ಪರಿಣತಿ ಸಾಧಿಸಿದ್ದಾರೆ.

ಅನಂತಪುರದ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಮೂರು ವರ್ಷ, ಬೆಂಗಳೂರಿನ ವಿಜಯಾ ಸಂಗೀತ ಕಾಲೇಜಿನಲ್ಲಿ ಐದು ವರ್ಷ, ಬಿಬಿಯುಎಲ್ ಜೈನ್ ವಿದ್ಯಾಲಯದಲ್ಲಿ ಐದು ವರ್ಷ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಶ್ರೀಹರಿ ಸಂಗೀತ ಶಾಲೆಯಲ್ಲಿ ಕಳೆದ 18 ವರ್ಷಗಳಿಂದ ಸಂಗೀತ ಶಿಕ್ಷಕರಾಗಿದ್ದಾರೆ.

ಇವರ ಪತ್ನಿ ಸುಜಾತ ಅವರೂ ಇದೇ ಶಾಲೆಯಲ್ಲಿ ಸಂಗೀತ ಶಿಕ್ಷಕಿ. ಉಡುಪಿಯ ಶ್ರೀಕೃಷ್ಣ ಮಠದಿಂದ `ಗಾನ ರತ್ನ' ಬಿರುದು, ಚಿತ್ತೂರಿನ ಗೀತ ಸೇವಾ ಸಮಾಜದಿಂದ `ಗಂಧರ್ವ ಕಲಾನಿಧಿ' ಬಿರುದು ಇವರಿಗೆ ಸಂದಿದೆ. ಹಲವಾರು ಸಿ.ಡಿ.ಗಳನ್ನು ಹೊರತಂದಿದ್ದಾರೆ.`ಅಕ್ಕ' ಸಮ್ಮೇಳನದ ಪುಳಕ

“ಅಮೆರಿಕಾದ ಅಟ್ಲಾಂಟದಲ್ಲಿ 2012ರಲ್ಲಿ ನಡೆದ `ಅಕ್ಕ' ಸಮ್ಮೇಳನದಲ್ಲಿ ಶಾಸ್ತ್ರೀಯ ಸಂಗೀತ ಹಾಡಲು ಅವಕಾಶ ಸಿಕ್ಕಿದ್ದೇ ನನಗೆ ಪುಳಕ ಕೊಡುವ ವಿಚಾರ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಇಲ್ಲಿ ನಾಲ್ಕನೇ ವಯಸ್ಸಿನಿಂದಲೇ ಕಲಿಯಲಾರಂಭಿಸಿದೆ.

ನಮ್ಮ ಗುರು ಕಲಿಸುವ ರೀತಿ, ಮಕ್ಕಳೊಂದಿಗೆ ಮಕ್ಕಳಾಗಿ ಸಂಗೀತ ಪಾಠ ಮಾಡುವುದು ನಿಜಕ್ಕೂ ಹೆಚ್ಚು ಹೆಚ್ಚು ಕಲಿಯುವಂತೆ, ಉನ್ನತ ಸಾಧನೆ ಮಾಡುವಂತೆ ಪ್ರೇರಣೆ ನೀಡುತ್ತದೆ” ಎನ್ನುತ್ತಾಳೆ ಜಯನಗರದ ಸರಸ್ವತಿ ವಿದ್ಯಾಮಂದಿರದಲ್ಲಿ ಆರನೇ ತರಗತಿಯಲ್ಲಿ ಕಲಿಯುತ್ತಿರುವ ಅದಿತಿ ಬಿ.ಪಿ.ಕಳೆದ ಏಳು ವರ್ಷಗಳಿಂದ ವಿದ್ವಾನ್ ಕಮಲ್ ಕುಮಾರ್ ಬಳಿ ಶಾಸ್ತ್ರೀಯ ಸಂಗೀತ ಕಲಿಯುವ ಅದಿತಿ ಇದರ ಜತೆಗೆ ನರಹರಿ ದೀಕ್ಷಿತ್ ಅವರ ಬಳಿ ಸುಗಮ ಸಂಗೀತವನ್ನೂ ಅಭ್ಯಾಸ ಮಾಡುತ್ತಾಳೆ. ಸಂಗೀತ,  ಶಾಲಾ ಕಲಿಕೆ ಎರಡಕ್ಕೂ ತಂದೆ ಬಿ.ಎನ್. ಪ್ರಹ್ಲಾದ್ ಮತ್ತು ತಾಯಿ ಎಸ್. ಅನ್ನಪೂರ್ಣ ಅವರ ಪ್ರೋತ್ಸಾಹವನ್ನು ನೆನೆಯುವ ಅದಿತಿ ಈಗಾಗಲೇ ಸುಮಾರು 50 ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾಳೆ.ಹಂಪಿ ಉತ್ಸವ, ಬೆಂಗಳೂರು ಹಬ್ಬ, ಶೃಂಗೇರಿಯಲ್ಲಿ ಶರನ್ನವರಾತ್ರಿ ಉತ್ಸವ, ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನಗಳಲ್ಲಿ ಬಾಲ ಕಲಾವಿದೆಯಾಗಿ ಸಂಗೀತ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಈಕೆಯದ್ದು.ಗಾಯನ, ಕಾವ್ಯವಾಚನ ಮೆಚ್ಚು

`ಕರ್ನಾಟಕ ಶಾಸ್ತ್ರೀಯ ಸಂಗೀತದ ಜತೆ ಜತೆಗೆ ಸುಗಮ ಸಂಗೀತ, ಜನಪದ ಸಂಗೀತ, ಸಿನಿಮಾ ಸಂಗೀತ ಮತ್ತು ಕಾವ್ಯವಾಚನ (ಗಮಕ)ವನ್ನು ಕೂಡ ಅಭ್ಯಾಸ ಮಾಡುತ್ತೇನೆ. ಶ್ರೀ ಹರಿ ಸಂಗೀತ ಶಾಲೆ ಶಾಸ್ತ್ರೀಯ ಸಂಗೀತದ ಭದ್ರವಾದ ಅಡಿಪಾಯ ಹಾಕಿದ ಕಾರಣ ಜೂನಿಯರ್ ಪರೀಕ್ಷೆಯಲ್ಲಿ ಶೇ 85 ಅಂಕ ಪಡೆಯಲು ಸಾಧ್ಯವಾಯಿತು' ಎನ್ನುತ್ತಾಳೆ ಭಾವನಾ.ಸದ್ಯ ಬನಶಂಕರಿಯ ಶ್ರೀಕೃಷ್ಣ ಇಂಟರ್‌ನ್ಯಾಷನಲ್ ಎಜುಕೇಶನ್ ಸೊಸೈಟಿಯಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಭಾವನಾ, ಶ್ರೀಹರಿ ಸಂಗೀತ ಶಾಲೆಯಲ್ಲಿ ಸಂಗೀತ ಕಲಿಕೆಯ ವಿಧಾನವನ್ನು ಬಹುವಾಗಿ ಮೆಚ್ಚುತ್ತಾಳೆ.ಶಾಸ್ತ್ರೀಯ ಸಂಗೀತ, ಭಾವಗೀತೆ, ಸಿನಿಮಾ ಗೀತೆ, ಕಾವ್ಯವಾಚನ ಸ್ಪರ್ಧೆಗಳಲ್ಲಿ ಹಲವಾರು ಬಹುಮಾನಗಳನ್ನು ಪಡೆದಿರುವ ಭಾವನಾ, ಒಟ್ಟು 15 ಪೂರ್ಣಪ್ರಮಾಣದ ಸಂಗೀತ ಕಛೇರಿಗಳನ್ನೂ ನೀಡಿ ಭರವಸೆಯ ಪ್ರತಿಭೆಯಾಗಿ ರೂಪುಗೊಂಡಿದ್ದಾಳೆ. ಶಾಸ್ತ್ರೀಯ ಸಂಗೀತವನ್ನು ಕಮಲ್‌ಕುಮಾರ್, ಸುಗಮ ಸಂಗೀತವನ್ನು ನರಹರಿ ದೀಕ್ಷಿತ್, ಗಮಕವನ್ನು ವಿದುಷಿ ಸಿ.ವಿ. ಶ್ರೀಮತಿ ಅವರಲ್ಲಿ ಅಭ್ಯಾಸ ಮಾಡುವ ಭಾವನಾಗೆ ದೊಡ್ಡ ಸಂಗೀತಗಾರ್ತಿಯಾಗುವ ಆಸೆಯಿದೆ.ವಿಳಾಸ: ವಿದ್ವಾನ್ ಬಿ.ಇ. ಕಮಲ್‌ಕುಮಾರ್, ಶ್ರೀ ಹರಿ ಸಂಗೀತ ಶಾಲೆ, ನಂ.4, ಮೂರನೇ ಕ್ರಾಸ್, 22ನೇ ಮುಖ್ಯರಸ್ತೆ, ಶಾಮಣ್ಣ ಗಾರ್ಡನ್, ಜೆ.ಪಿ. ನಗರ ಐದನೇ ಹಂತ, ಬೆಂಗಳೂರು-78. ಫೋನ್: 080-26584905/ 94484 31603

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.