ಗುರುವಾರ , ಏಪ್ರಿಲ್ 15, 2021
31 °C

ಸಂಕಲ್ಪ ಯಾತ್ರೆಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: ತಾಲ್ಲೂಕಿನಲ್ಲಿ ಇದೇ 9ರಂದು ನಡೆಯಲಿರುವ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಬಿ. ಶ್ರೀರಾಮುಲು ಅವರ ಸಂಕಲ್ಪ ಯಾತ್ರೆಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಪಕ್ಷದ ಟಿಕೆಟ್ ಆಕಾಂಕ್ಷಿಗಳು ಯಾತ್ರೆಯ ಯಶಸ್ಸಿಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಪಕ್ಷದ ಮುಖಂಡ ಎಚ್. ಎಂ. ಅಶೋಕ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನ. 9ರಂದು ಬೆಳಿಗ್ಗೆ 9 ಗಂಟೆಗೆ ಅಬಲೂರು ಗ್ರಾಮಕ್ಕೆ ಆಗಮಿಸುವ ಶ್ರೀರಾಮುಲು ಸರ್ವಜ್ಞ ಪ್ರತಿಮೆಗೆ ಮಾಲಾರ್ಪಣೆ ಮಾಡುವರು. ಅಲ್ಲಿಂದ ಹಂಸಭಾವಿ, ಚಿಕ್ಕೇರೂರು ಮೂಲಕ  ಪಟ್ಟಣಕ್ಕೆ ಆಗಮಿಸುವರು.

 

ದುರ್ಗಾದೇವಿ ದೇವಸ್ಥಾನ, ದರ್ಗಾ ಮತ್ತು ಬೀರಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಶಂಕರರಾವ್ ವೃತ್ತದಿಂದ ಬೃಹತ್ ಮೆರವಣಿಗೆ ಆರಂಭವಾಗುವುದು. ಮಿನಿ ವಿಧಾನಸೌಧದ ಹಿಂಭಾಗದ ಬಯಲಿನಲ್ಲಿ ಬಹಿರಂಗ ಸಭೆ ನಡೆಯುವುದು ಎಂದು ಹೇಳಿದರು. ಇನ್ನೊಬ್ಬ ಮುಖಂಡ ಹೈಕೋರ್ಟ್ ಹಿರಿಯ ವಕೀಲ ಎಚ್. ದೇವೇಂದ್ರಪ್ಪ ಪತ್ರಿಕಾ ಹೇಳಿಕೆ ನೀಡಿ, ಸಮಾಜ ಸೇವೆಯ ಉದ್ದೇಶದಿಂದ ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಧ್ಯೇಯ, ಧೋರಣೆಯನ್ನು ಮೆಚ್ಚಿ ಈ ಪಕ್ಷವನ್ನು ಅಪ್ಪಿಕೊಂಡಿದ್ದೇನೆ. ತಾಲ್ಲೂಕಿನಲ್ಲಿ ಶ್ರೀರಾಮುಲು ಪರವಾದ ಅಲೆ ವ್ಯಾಪಕವಾಗಿದೆ. ಸಂಕಲ್ಪ ಯಾತ್ರೆಯ ನಂತರ ಇನ್ನಷ್ಟು ಹೆಚ್ಚಲಿದೆ. ಯಾತ್ರೆಯನ್ನು ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು. ಮಧ್ಯಾಹ್ನ 2 ಗಂಟೆಗೆ ಮಾಸೂರು ಗ್ರಾಮದ ಎಪಿಎಂಸಿ ಎದುರಿನ ಬಯಲಿನಲ್ಲಿ ಸಂಕಲ್ಪ ಯಾತ್ರೆಯ ಬಹಿರಂಗ ಸಭೆ ನಡೆಯಲಿದೆ. ಸಭೆಯಲ್ಲಿ ಪಕ್ಷದ ನೇತಾರ ಬಿ.ಶ್ರೀರಾಮುಲು ಸೇರಿದಂತೆ ಮುಖಂಡರು ಮಾತನಾಡಲಿದ್ದಾರೆ ಎಂದು ಅವರು ತಿಳಿಸಿದರು. ಹಳ್ಳೂರು ಕ್ಷೇತ್ರದ ತಾ.ಪಂ. ಸದಸ್ಯ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ರಾಜ್ಯ ಯುವ ಘಟಕದ ಕಾರ್ಯದರ್ಶಿ ಬಸವರಾಜ ಧೂಳಪ್ಪನವರ ಪತ್ರಿಕಾ ಹೇಳಿಕೆ ನೀಡಿ, ಬರುವ ಚುನಾವಣೆಯಲ್ಲಿ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು. ಈ ಮೂವರೂ ಹಿರೇಕೆರೂರ ವಿಧಾನ ಸಭಾ ಕ್ಷೇತ್ರದಿಂದ ಬಿಎಸ್‌ಆರ್ ಕಾಂಗ್ರೆಸ್ಸಿನ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಅದನ್ನು ಬಹಿರಂಗವಾಗಿ ಹೇಳಿಕೊಂಡು ತಮ್ಮದೇ ರೀತಿಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.ಬಹಿರಂಗ ಸಭೆ

 ತಾಲ್ಲೂಕಿನಲ್ಲಿ ಇದೇ 9ರಂದು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಬಿ.ಶ್ರೀರಾಮುಲು ಅವರ ಸಂಕಲ್ಪ ಯಾತ್ರೆ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಮಾಸೂರು ಗ್ರಾಮದ ಎಪಿಎಂಸಿ ಎದುರಿನ ಬಯಲಿನಲ್ಲಿ ಬಹಿರಂಗ ಸಭೆ ನಡೆಯಲಿದೆ.  ಸಭೆಯಲ್ಲಿ ಪಕ್ಷದ ನೇತಾರ ಬಿ. ಶ್ರೀರಾಮುಲು, ಹಿರಿಯ ವಕೀಲ ಎಚ್. ದೇವೇಂದ್ರಪ್ಪ ಸೇರಿದಂತೆ ಮುಖಂಡರು ಮಾತನಾಡಲಿದ್ದಾರೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಪ್ರಕಟಣೆ ತಿಳಿಸಿದೆ.ಕಂಚಿನೆಗಳೂರು (ಅಕ್ಕಿಆಲೂರ) ವರದಿ: ಅಕ್ಕಿಆಲೂರ ಬಳಿಯ ಕಂಚಿನೆಗಳೂರಿನಲ್ಲಿ ಬುಧವಾರ ಸ್ವಾಭಿಮಾನಿ ಸಂಕಲ್ಪ ಯಾತ್ರೆಯ ನೇತೃತ್ವ ವಹಿಸಿ ಬಿ.ಶ್ರೀರಾಮುಲು ಮಾತನಾಡಿದರು.   ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿ.ಜೆ.ಪಿ.ಯಿಂದ ರಾಜ್ಯದ ಅಭಿವೃದ್ಧಿ ಕನಸಿನ ಮಾತಾಗಿದ್ದು ಜನಪರ ಆಡಳಿತ ಹಾಗೂ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ನೂತನ ಪ್ರಾದೇಶಿಕ ಪಕ್ಷವಾಗಿರುವ ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿದರು.ಬಿ.ಎಸ್.ಆರ್. ಪಕ್ಷದ ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖಾಲೀದಅಹ್ಮದ, ರಾಜ್ಯ ಎಸ್.ಸಿ.ಎಸ್. ಟಿ. ಘಟಕದ ಬಿ. ಶಿವಪ್ಪ, ಡಾ. ಮಹಿಪಾಲ್, ಜಿಲ್ಲಾ ಮುಖಂಡರಾದ ವೀರೇಶ ಜಾಲವಾಡಗಿ, ಸಂಜಯ ಬೆಟಗೇರಿ, ಹಾಶಂಪೀರ್ ಇನಾಮದಾರ, ಸವಿತಾ ರಮೇಶ, ಕೃಷ್ಣ ಬೆಟಗೇರಿ ಪಾಲ್ಗೊಂಡಿದ್ದರು. ಬಳಿಕ ಸ್ವಾಭಿಮಾನಿ ಸಂಕಲ್ಪ ಯಾತ್ರೆ ಆಡೂರು, ಅಕ್ಕಿಆಲೂರ, ತಿಳವಳ್ಳಿ, ಮಕರವಳ್ಳಿ ಮೂಲಕ ಹಾನಗಲ್ಲಿಗೆ ತೆರಳಿತು.ಹಾನಗಲ್ ವರದಿ: `ಕೇಂದ್ರ ಸರಕಾರವನ್ನು ನಡುಗಿಸುವ ಶಕ್ತಿ ಪ್ರಾದೇಶಿಕ ಪಕ್ಷಗಳಿಗಿದೆ. ಈ ಹಿನ್ನೆಲೆಯಲ್ಲಿ ಬಡವರು, ಶ್ರಮಿಕರು ಮತ್ತು ರೈತರ ಮಧ್ಯದಿಂದ ಹುಟ್ಟಿಬಂದ ಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಶತಸ್ಸಿದ್ಧ~ ಎಂದು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಬಿ. ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ಸಂಕಲ್ಪ ಯಾತ್ರೆಯ ಅಂಗವಾಗಿ ಬುಧವಾರ ಹಾನಗಲ್ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಪ್ರವಾಸ ಮಾಡಿದ ಮಾಜಿ ಸಚಿವ ಬಿ. ಶ್ರೀರಾಮುಲು, ಸಂಜೆ ಇಲ್ಲಿನ ಬಳೆ ಬಸ್ ನಿಲ್ದಾಣ ಪ್ರದೇಶದಲ್ಲಿ ನಡೆದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು.ಲೋಕೋಪಯೋಗಿ ಸಚಿವರ ತವರು ಜಿಲ್ಲೆ ಹಾವೇರಿಯಲ್ಲಿನ ರಸ್ತೆಗಳ ಸ್ಥಿತಿ ಹದಗೆಟ್ಟಿದೆ. ಇನ್ನು ರಾಜ್ಯದ ರಸ್ತೆಗಳ ಸ್ಥಿತಿ ಹೇಳತೀರದು. ರಾಜ್ಯದ 146 ತಾಲ್ಲೂಕುಗಳು ಬರಗಾಲ ಪೀಡಿತವಾಗಿವೆ. ರಾಜ್ಯದಾದ್ಯಂತ ಪಾದಯಾತ್ರೆ ಮೂಲಕ ಜನರ ಸಂಕಷ್ಟಗಳನ್ನು ಅರಿತುಕೊಂಡಿದ್ದೇನೆ ಎಂದರು.ಪಕ್ಷದ ಎಸ್.ಸಿ ಎಸ್.ಟಿ ರಾಜ್ಯ ಘಟಕದ ಅಧ್ಯಕ್ಷ ಬಿ. ಶಿವಪ್ಪ  ಮತ್ತು ರಾಜ್ಯ ವಕ್ತಾರ ಡಾ. ಮಹಿಪಾಲ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖಾಲೀದ್ ಅಹ್ಮದ್ ಮಾತನಾಡಿದರು.  ಜಿಲ್ಲಾ ಸಂಚಾಲಕ ವೀರೇಶ ಜಾಲವಾಡಗಿ, ಮಹಿಳಾ ಘಟಕದ ಸವಿತಾ ರಮೇಶ, ಮುಖಂಡರಾದ ಕೆ. ವೆಂಕಟೇಶಗೌಡ, ಕುಮಾರಸ್ವಾಮಿ, ಕರಬಸಪ್ಪ, ಮದನಕುಮಾರ, ಕೃಷ್ಣ ಬೆಟಗೇರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಅವರು, ಬೊಮ್ಮನಹಳ್ಳಿ, ಬೆಳಗಾಲಪೇಟೆ, ಅಕ್ಕಿಆಲೂರ, ತಿಳವಳ್ಳಿ ಸೇರಿದಂತೆ ಗ್ರಾಮಗಳಲ್ಲಿ ತಾಲ್ಲೂಕಿನಾದ್ಯಂತ ಬೆಳಿಗ್ಗೆಯಿಂದಲೇ ಸಂಕಲ್ಪಯಾತ್ರೆ ನಡೆಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.