ಭಾನುವಾರ, ಜನವರಿ 19, 2020
27 °C

ಸಂಕ್ರಾಂತಿ ಸಂಭ್ರಮಕ್ಕೆ ರಂಗೋಲಿ ಚಿತ್ತಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಸಂಕ್ರಾಂತಿ ಹಬ್ಬದ ಅಂಗವಾಗಿ ಸ್ಥಳೀಯ ಆಂಧ್ರಕಲಾ ಸಮಿತಿಯವರು ನಗರದಲ್ಲಿ ಭಾನುವಾರ ವಿದ್ಯಾರ್ಥಿಗಳು ಮತ್ತು ಗೃಹಿಣಿಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದ್ದರು.ಸರ್ಕಾರಿ (ಮಾಜಿ ಪುರಸಭೆ) ಸಂಯುಕ್ತ ಪಿಯು ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಸ್ಪರ್ಧೆಯು ಗಮನ ಸೆಳೆಯಿತು. ಆವರಣದ ತುಂಬ ರಂಗೋಲಿಯ ರಂಗು ತುಂಬಿಕೊಂಡಿತ್ತು. ಹಬ್ಬದ ಸಂಭ್ರಮ ಮನೆಮಾಡಿತ್ತು.

ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಹಾಗೂ ಗೃಹಿಣಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 11 ಮಂದಿ ಗೃಹಿಣಿಯರೂ ಸೇರಿದಂತೆ ಒಟ್ಟು 400 ಸ್ಪರ್ಧಾಳುಗಳು ಉತ್ಸಾಹದಿಂದ ಸೇರಿದ್ದರು. 140 ಗುಂಪುಗಳನ್ನಾಗಿ ಮಾಡಲಾಗಿತ್ತು. ಪ್ರತಿ ಗುಂಪಿನಲ್ಲಿ ಮೂವರು ಸ್ಪರ್ಧಾಳುಗಳಿದ್ದರು.ರಂಗೋಲಿಯಲ್ಲಿ ವೈವಿಧ್ಯತೆಯಿತ್ತು. ಗೃಹಿಣಿಯೊಬ್ಬರು ಅಣ್ಣಾ ಹಜಾರೆ ಅವರ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸುವ ಮೂಲಕ ಅಭಿಮಾನ ಮೆರೆದರು. ಕೆಲವು ಮಕ್ಕಳು ರಾಷ್ಟ್ರಪಕ್ಷಿ ನವಿಲನ್ನು ರಂಗೋಲಿಯಲ್ಲಿ ಚಿತ್ರಿಸಿದ್ದರು. ಇನ್ನೂ ಕೆಲವರು ಸಾಂಪ್ರದಾಯಿಕ ಶೈಲಿಯ ವಿನ್ಯಾಸಗಳನ್ನು ತಮ್ಮದೇ ರೀತಿಯಲ್ಲಿ ಅರಳಿಸಿದ್ದರು.`ಕಳೆದ 30 ವರ್ಷಗಳಿಂದ ಈ ಸ್ಪರ್ಧೆ ಹಮ್ಮಿಕೊಳ್ಳುತ್ತ ಬಂದಿದ್ದೇವೆ. ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಪ್ರದಾಯದ ಪರಿಚಯವಾಗಬೇಕು ಎನ್ನುವುದು ಇದರ ಉದ್ದೇಶ. ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಸಮಿತಿಯ ಅಧ್ಯಕ್ಷ ಮುಲ್ಲಂಗಿ ಚಂದ್ರಶೇಖರ ಚೌಧರಿ `ಪ್ರಜಾವಾಣಿ~ಗೆ ತಿಳಿಸಿದರು.ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ಸ್ಪರ್ಧೆ ನಡೆಯಿತು. ಕಾಲೇಜು ಪ್ರಾಂಶುಪಾಲ ಕೆ.ಎ. ನಾಗಭೂಷಣ ಕಾರ್ಯಕ್ರಮ ಉದ್ಘಾಟಿಸಿದರು. ಸಮಿತಿ ಉಪಾಧ್ಯಕ್ಷ ಶ್ಯಾಮಸುಂದರ್, ಕಾರ್ಯದರ್ಶಿ ವೈ.ವಿ. ರಮಣಪ್ಪ, ನಾಗೇಶ್, ಭೀಮಪ್ಪ ಶೆಟ್ಟಿ, ನಾಗರಾಜ, ಜಿ.ಆರ್. ವೆಂಕಟೇಶಲು, ಸುರೇಂದ್ರಬಾಬು ಭಾಗವಹಿಸಿದ್ದರು. ಎಂ. ರಾಮಾಂಜಿನೇಯುಲು ಕಾರ್ಯಕ್ರಮ ಸಂಘಟಿಸಿದ್ದರು. ರಾಜೇಶ್ವರಿ, ವಿಜಯಲಕ್ಷ್ಮಿ, ಮಾಲಾ ತೀರ್ಪುಗಾರರಾಗಿದ್ದರು.

ಪ್ರತಿಕ್ರಿಯಿಸಿ (+)